ಕಸಾಪ ಖರ್ಚಿನ ಮೇಲೆ ಸರ್ಕಾರ ನಿಗಾ: ಲೆಕ್ಕಪತ್ರ ಪರಿಶೀಲನೆಗೆ ಸೂಚನೆ

By Kannadaprabha NewsFirst Published Jul 28, 2023, 10:27 AM IST
Highlights

ಕಳೆದ ಮೂರು ವರ್ಷಗಳ ಅಂದರೆ 2021-22ನೇ ಸಾಲಿನಿಂದ ಈವರೆಗೆ ರಾಜ್ಯ ಸರ್ಕಾರದಿಂದ ಪಡೆದಿರುವ ಅನುದಾನ, ಅದನ್ನು ಯಾವ ಕಾರ್ಯಕ್ಕಾಗಿ ವ್ಯಯಿಸಲಾಗಿದೆ ಎಂಬಂತಹ ವಿವರ, ಸಾಹಿತ್ಯ ಸಮ್ಮೇಳನಕ್ಕಾಗಿ ನೀಡಲಾಗುತ್ತಿರುವ ಅನುದಾನ, ಸಮ್ಮೇಳನ ಆಯೋಜನೆ ವೇಳೆ ಮಾಡಲಾದ ಖರ್ಚಿನ ವಿವರವನ್ನು ನೀಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರ ಮೂಲಕ ಕನ್ನಡ ಸಾಹಿತ್ಯ ಪರಿಷತ್ತಿಗೆ ಪತ್ರ ಬರೆಯುವಂತೆಯೂ ಸೂಚಿಸಲಾಗಿದೆ.

ಬೆಂಗಳೂರು(ಜು.28): ಕನ್ನಡ ಸಾಹಿತ್ಯ ಪರಿಷತ್ತಿಗೆ ನೀಡಲಾಗಿರುವ ಅನುದಾನ ಸಮರ್ಪಕವಾಗಿ ಬಳಕೆಯಾಗಿದೆಯೇ ಎಂಬುದರ ಲೆಕ್ಕ ತಪಾಸಣೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಅನುದಾನ ಬಳಕೆ ಬಗ್ಗೆ ಮಾಹಿತಿ ನೀಡುವಂತೆ ಪರಿಷತ್ತಿಗೆ ಪತ್ರ ಬರೆಯಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

2022ರಲ್ಲಿ ಹಾವೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯ ಸರ್ಕಾರದಿಂದ 20 ಕೋಟಿ ರು. ಅನುದಾನ ನೀಡಲಾಗಿತ್ತು. ಆದರೆ, ಸರ್ಕಾರ ನೀಡಿದ್ದ ಅನುದಾನಕ್ಕಿಂತ ಹೆಚ್ಚುವರಿಯಾಗಿ 5 ಕೋಟಿ ರು. ವ್ಯಯಿಸಲಾಗಿದೆ. ಅದನ್ನು ನೀಡುವಂತೆ ಕನ್ನಡ ಸಾಹಿತ್ಯ ಪರಿಷತ್‌ನಿಂದ ಪ್ರಸ್ತಾವನೆ ಸಲ್ಲಿಸಲಾಗಿತ್ತು.

Latest Videos

ಕಸಾಪಗೆ ಕರ್ಣಾಟಕ ಬ್ಯಾಂಕ್‌ 20 ಲಕ್ಷ ರು. ದೇಣಿಗೆ ಹಸ್ತಾಂತರ

ಅದನ್ನು ತಿರಸ್ಕರಿಸಿರುವ ಆರ್ಥಿಕ ಇಲಾಖೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹೆಚ್ಚುವರಿ ಅನುದಾನ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಅಲ್ಲದೆ, ಸಾಹಿತ್ಯ ಪರಿಷತ್ತು ಲೆಕ್ಕವಿಲ್ಲದಂತೆ ಖರ್ಚು ಮಾಡುತ್ತಿರುವುದರ ಬಗ್ಗೆ ಅಸಮಾಧಾನಗೊಂಡಿರುವ ರಾಜ್ಯ ಸರ್ಕಾರ ಕಳೆದ ಮೂರು ವರ್ಷಗಳಿಂದ ಸರ್ಕಾರದಿಂದ ನೀಡಲಾಗಿರುವ ಅನುದಾನ ಮತ್ತು ಖರ್ಚಿನ ಕುರಿತ ಲೆಕ್ಕ ಕೇಳಲು ನಿರ್ಧರಿಸಿದೆ.

ರಾಜ್ಯ ಸರ್ಕಾರ ಕನ್ನಡ ಸಾಹಿತ್ಯ ಪರಿಷತ್ತಿಗೆ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗಾಗಿ ಪ್ರತಿವರ್ಷ 10ರಿಂದ 20 ಕೋಟಿ ರು. ಅನುದಾನ ನೀಡುತ್ತದೆ. ಅದರ ಜತೆಗೆ ಪರಿಷತ್ತಿನಲ್ಲಿ ಕೆಲಸ ಮಾಡುವ ಸಿಬ್ಬಂದಿ ವೇತನಕ್ಕಾಗಿ ವಾರ್ಷಿಕ 10ರಿಂದ 12 ಕೋಟಿ ರು. ನೀಡುತ್ತಿದೆ. ಇಷ್ಟು ಅನುದಾನ ನೀಡುತ್ತಿದ್ದರೂ ವೆಚ್ಚದ ಕುರಿತಂತೆ ಸರ್ಕಾರಕ್ಕೆ ಮಾಹಿತಿಯನ್ನು ನೀಡುತ್ತಿಲ್ಲ. ಈ ಕುರಿತಂತೆ ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆದಿವೆ. ಹೀಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಾಡಲಾಗುತ್ತಿರುವ ವೆಚ್ಚಗಳ ಲೆಕ್ಕ ಪಡೆಯಲು ನಿರ್ಧರಿಸಲಾಗಿದೆ.

ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ: ಕಸಾಪ ಅಧ್ಯಕ್ಷ ಮಹೇಶ್‌ ಜೋಶಿ

ಕಳೆದ ಮೂರು ವರ್ಷಗಳ ಅಂದರೆ 2021-22ನೇ ಸಾಲಿನಿಂದ ಈವರೆಗೆ ರಾಜ್ಯ ಸರ್ಕಾರದಿಂದ ಪಡೆದಿರುವ ಅನುದಾನ, ಅದನ್ನು ಯಾವ ಕಾರ್ಯಕ್ಕಾಗಿ ವ್ಯಯಿಸಲಾಗಿದೆ ಎಂಬಂತಹ ವಿವರ, ಸಾಹಿತ್ಯ ಸಮ್ಮೇಳನಕ್ಕಾಗಿ ನೀಡಲಾಗುತ್ತಿರುವ ಅನುದಾನ, ಸಮ್ಮೇಳನ ಆಯೋಜನೆ ವೇಳೆ ಮಾಡಲಾದ ಖರ್ಚಿನ ವಿವರವನ್ನು ನೀಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರ ಮೂಲಕ ಕನ್ನಡ ಸಾಹಿತ್ಯ ಪರಿಷತ್ತಿಗೆ ಪತ್ರ ಬರೆಯುವಂತೆಯೂ ಸೂಚಿಸಲಾಗಿದೆ.

ಸಚಿವರ ಸಭೆಯಲ್ಲೂ ಚರ್ಚೆ

ಕನ್ನಡ ಸಾಹಿತ್ಯ ಪರಿಷತ್ತಿಗೆ ಸರ್ಕಾರ ನೀಡುತ್ತಿರುವ ಅನುದಾನಗಳ ಕುರಿತಂತೆ ಗುರುವಾರ ವಿಧಾನಸೌಧದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ನೇತೃತ್ವದ ಸಭೆಯಲ್ಲೂ ಚರ್ಚಿಸಲಾಗಿದೆ. ಈ ವೇಳೆ 2022ರ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ನೀಡಲಾಗಿರುವ ಅನುದಾನ ಹಾಗೂ ಹೆಚ್ಚುವರಿ ಅನುದಾನಕ್ಕೆ ಪರಿಷತ್ತಿನಿಂದ ಸಲ್ಲಿಕೆಯಾದ ಪ್ರಸ್ತಾವನೆ ಬಗ್ಗೆ ಚರ್ಚಿಸಲಾಗಿದೆ.

click me!