
ಬೆಂಗಳೂರು(ಜು.28): ವಿಮಾನ ನಿಲ್ದಾಣಕ್ಕೆ ತುಸು ತಡವಾಗಿ ಆಗಮಿಸಿದರು ಎಂಬ ಕಾರಣಕ್ಕೆ ಹೈದರಾಬಾದ್‌ಗೆ ಪ್ರಯಾಣಿಸಬೇಕಿದ್ದ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರನ್ನು ಬಿಟ್ಟು ಏರ್ ಏಷ್ಯಾ ವಿಮಾನವು ಪ್ರಯಾಣ ಬೆಳೆಸಿದ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ)ದಲ್ಲಿ ಗುರುವಾರ ನಡೆದಿದೆ.
ಈ ಘಟನೆಯಿಂದ ತೀವ್ರ ಮುಜುಗರಕ್ಕೊಳಗಾಗಿರುವ ರಾಜ್ಯಪಾಲರು, ಶಿಷ್ಟಾಚಾರ (ಪ್ರೋಟೋಕಾಲ್) ಉಲ್ಲಂಘಿಸಿದ ಆರೋಪದ ಮೇರೆಗೆ ಏರ್ ಏಷ್ಯಾ ವೈಮಾನಿಕ ಸಂಸ್ಥೆ ಹಾಗೂ ಕೆಐಎ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದಾದ ಬಳಿಕ ಏರ್ ಏಷ್ಯಾ ಸಂಸ್ಥೆಗೆ ಸೇರಿದ ಮತ್ತೊಂದು ವಿಮಾನದಲ್ಲಿ ಪೂರ್ವನಿಗದಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೈದರಾಬಾದ್‌ಗೆ ರಾಜ್ಯಪಾಲರು ತೆರಳಿದ್ದಾರೆ ಎಂದು ಉನ್ನತ ಪೊಲೀಸ್ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
25 ವರ್ಷ ಭಾರತಕ್ಕೆ ಅಮೃತ ಕಾಲ: ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್
10 ನಿಮಿಷ ತಡವಾಗಿದ್ದಕ್ಕೆ ಹೊರಟ ವಿಮಾನ:
ಪೂರ್ವನಿಗದಿತ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಹೈದರಾಬಾದ್‌ಗೆ ತೆರಳಲು ಗುರುವಾರ ಮಧ್ಯಾಹ್ನ 2 ಗಂಟೆಗೆ ಹೊರಡುವ ಏರ್ ಏಷ್ಯಾ ವಿಮಾನದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರಿಗೆ ಟಿಕೆಟ್ ಬುಕ್ ಆಗಿತ್ತು. ಆದರೆ ವಿಮಾನ ನಿಲ್ದಾಣಕ್ಕೆ ರಾಜ್ಯಪಾಲರು ತಲುಪುವಷ್ಟರಲ್ಲಿ 10 ನಿಮಿಷ ತಡವಾಗಿದೆ. ಅಷ್ಟರಲ್ಲಿ ರಾಜ್ಯಪಾಲರು ಪ್ರಯಾಣಿಸಬೇಕಿದ್ದ ಏರ್ ಏಷ್ಯಾ ವಿಮಾನವು ಗಗನಕ್ಕೆ ಹಾರಿದೆ.
ಈ ಘಟನೆಯಿಂದ ತೀವ್ರ ಮುಜುಗರಕ್ಕೊಳಗಾದ ರಾಜ್ಯಪಾಲರು, ರಾಜ್ಯದ ಮೊದಲ ಪ್ರಜೆಯಾದ ತಮಗೆ ಅಗೌರವ ಸೂಚಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಶಿಷ್ಟಾಚಾರ ಉಲ್ಲಂಘಿಸಿದ ಏರ್ ಏಷ್ಯಾ ಸಂಸ್ಥೆ ಹಾಗೂ ವಿಮಾನ ನಿಲ್ದಾಣದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ರಾಜಭವನದ ವಿಶೇಷ ಕರ್ತವ್ಯಾಧಿಕಾರಿಗಳಿಗೆ ರಾಜ್ಯಪಾಲರು ಆದೇಶಿಸಿದ್ದಾರೆ. ಇದಾದ ಬಳಿಕ ಮಧ್ಯಾಹ್ನ 3.30ಕ್ಕೆ ಹೈದರಾಬಾದ್‌ಗೆ ಹೊರಟಿದ್ದ ಬೇರೆ ಏರ್ ಏಷ್ಯಾ ವಿಮಾನದಲ್ಲಿ ರಾಜ್ಯಪಾಲರು ಪ್ರಯಾಣ ಬೆಳೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Mysuru: ಉತ್ಪನ್ನಗಳ ಗುಣಮಟ್ಟ ಕಾಪಾಡಿಕೊಳ್ಳಿ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್
ಪೊಲೀಸರಿಗೆ ದೂರು ನೀಡಲು ನಿರ್ಧಾರ
ರಾಜ್ಯಪಾಲರ ಸೂಚನೆ ಮೇರೆಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಪೊಲೀಸರಿಗೆ ದೂರು ನೀಡಲು ಶಿಷ್ಟಾಚಾರ ವಿಭಾಗದ ಅಧಿಕಾರಿಗಳು ಮುಂದಾಗಿದ್ದಾರೆ. ಈ ಸಂಬಂಧ ಗುರುವಾರ ಸಂಜೆ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ಅವರನ್ನು ಭೇಟಿಯಾಗಿ ಅಧಿಕಾರಿಗಳು ಸಮಾಲೋಚಿಸಿದ್ದಾರೆ.
ವಿಮಾನ ನಿಲ್ದಾಣಕ್ಕೆ ತಲುಪುವುದು ವಿಳಂಬವಾಗುತ್ತಿರುವ ಕುರಿತು ಮೊದಲೇ ಮಾಹಿತಿ ನೀಡಿದ್ದರೂ ರಾಜ್ಯಪಾಲರನ್ನು ವಿಮಾನದಲ್ಲಿ ಕರೆದೊಯ್ಯದೆ ಶಿಷ್ಟಾಚಾರ ಉಲ್ಲಂಘಿಸಿದ ಸಂಬಂಧ ಶಿಷ್ಟಾಚಾರ ವಿಭಾಗದ ಅಧಿಕಾರಿಗಳು ಮೌಖಿಕವಾಗಿ ದೂರು ನೀಡಿದ್ದಾರೆ. ಈ ಸಂಬಂಧ ಲಿಖಿತ ದೂರು ನೀಡುವುದಾಗಿ ಅಧಿಕಾರಿಗಳು ಹೇಳಿದ್ದು, ಲಿಖಿತ ದೂರು ಸಲ್ಲಿಕೆ ಬಳಿಕ ಮುಂದಿನ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ