ಅಕ್ರಮ ಗಣಿಗಾರಿಕೆ ಪ್ರಕರಣ: ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಸರ್ಕಾರ ಸಮ್ಮತಿ

By Kannadaprabha NewsFirst Published Jan 13, 2023, 6:18 AM IST
Highlights

19 ಕೋಟಿ ಮೌಲ್ಯದ 219 ಆಸ್ತಿ ಜಪ್ತಿಗೆ ಸಿಬಿಐ ಕೋರಿಕೆ, ಒಪ್ಪಿಗೆ ನೀಡಿದ ಸರ್ಕಾರ, ಅಕ್ರಮ ಗಣಿಗಾರಿಕೆ ಪ್ರಕರಣ, 7 ವರ್ಷದಿಂದ ಆಸ್ತಿ ಜಪ್ತಿ ಮಾಡದೆ ಸುಮ್ಮನಿದ್ದ ಸಿಬಿಐ. 

ಬೆಂಗಳೂರು(ಜ.13):  ಅಕ್ರಮ ಗಣಿಗಾರಿಕೆ ಪ್ರಕರಣದ ಸಂಬಂಧ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತು ಅವರ ಕುಟುಂಬ ಸದಸ್ಯರಿಗೆ ಸೇರಿದ 19 ಕೋಟಿ ರು. ಮೌಲ್ಯದ 219 ಹೆಚ್ಚುವರಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಆರಂಭಕ್ಕಾಗಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಸಿಬಿಐಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಜನಾರ್ದನ ರೆಡ್ಡಿ ಅವರಿಗೆ ಸೇರಿದ ಹೆಚ್ಚುವರಿ ಆಸ್ತಿಗಳ ಜಪ್ತಿಗೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಅನುಮತಿ ಕೋರಿ ಸಲ್ಲಿಸಿರುವ ಮನವಿ ಪತ್ರವನ್ನು ತುರ್ತಾಗಿ ಪರಿಗಣಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಿಬಿಐ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ, ಜನಾರ್ದನ ರೆಡ್ಡಿ ಮತ್ತವರ ಕುಟುಂಬ ಸದಸ್ಯರ ಆಸ್ತಿ ಜಪ್ತಿ ಪ್ರಕ್ರಿಯೆ ಆರಂಭಿಸಲು ಸರ್ಕಾರ ಅನುಮತಿ ನೀಡಿ ಗುರುವಾರ ಆದೇಶಿಸಿದೆ ಎಂದು ತಿಳಿಸಿ ಆದೇಶ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಅದನ್ನು ಪರಿಗಣಿಸಿದ ನ್ಯಾಯಪೀಠ, ಸಿಬಿಐನ ಈ ಅರ್ಜಿ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ತಿಳಿಸಿ ಅರ್ಜಿ ಇತ್ಯರ್ಥಪಡಿಸಿತು.

ಗಣಿಧಣಿ ಜನಾರ್ದನ ರೆಡ್ಡಿ ರಕ್ಷಣೆಗೆ ಮುಂದಾಯ್ತಾ ಕರ್ನಾಟಕ ಸರ್ಕಾರ..?

ಸಿಬಿಐಗೆ ಚಾಟಿ:

2015ರಲ್ಲಿ ರಾಜ್ಯ ಸರ್ಕಾರ ರೆಡ್ಡಿಗೆ ಸೇರಿದ 65 ಕೋಟಿ ರು. ಮೌಲ್ಯದ ಆಸ್ತಿಯ ಜಪ್ತಿ ಪ್ರಕ್ರಿಯೆ ಆರಂಭಿಸಲು ಸಿಬಿಐಗೆ ಅನುಮತಿ ನೀಡಿ ಏಳು ವರ್ಷಗಳಾದರೂ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣವನ್ನು ಮುಂದುವರಿಸಿಲ್ಲ. ಇದೀಗ 19 ಕೋಟಿ ರು. ಮೌಲ್ಯದ ಹೆಚ್ಚುವರಿ ಆಸ್ತಿಯ ಜಪ್ತಿಗೆ ಅನುಮತಿ ಕೋರಿ 2022ರ ಆ.30ರಂದು ಸಲ್ಲಿಸಿದ ಮನವಿಯನ್ನು ನಾಲ್ಕು ತಿಂಗಳಾದರೂ ಸರ್ಕಾರ ಪರಿಗಣಿಸಿಲ್ಲ ಮತ್ತು ಆರೋಪಿಯನ್ನು ರಕ್ಷಿಸುತ್ತಿದೆ ಎಂದು ಸಿಬಿಐ ಆರೋಪಿಸಿದೆ. ಸಿಬಿಐ ಪ್ರಕರಣವನ್ನು ಮುಂದುವರಿಸಿ ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕೆ ಹೊರತು ಏಳು ವರ್ಷಗಳ ನಂತರ ನಿದ್ರೆಯಿಂದ ಎದ್ದು ಅರ್ಜಿ ಸಲ್ಲಿಸಬಾರದು ಎಂದು ಕಟುವಾಗಿ ನುಡಿಯಿತು.

ಇದಕ್ಕೂ ಮುನ್ನ ಸರ್ಕಾರದ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌, ರೆಡ್ಡಿಗೆ ಸೇರಿದ 65 ಕೋಟಿ ರು. ಮೌಲ್ಯದ ಆಸ್ತಿ ಜಪ್ತಿಗೆ ಪ್ರಕ್ರಿಯೆ ಆರಂಭಿಸಲು 2015ರಲ್ಲಿ ರಾಜ್ಯ ಸರ್ಕಾರವು ಸಿಬಿಐಗೆ ಅನುಮತಿ ನೀಡಿತ್ತು. ಆದರೆ, 2021ರವರೆಗೆ ಆ ಅರ್ಜಿಯ ಕುರಿತು ಯಾವುದೇ ಕ್ರಮವನ್ನು ಸಿಬಿಐ ಕೈಗೊಂಡಿಲ್ಲ. ಆಸ್ತಿ ಜಪ್ತಿಗೆ ಆದೇಶವಾಗಿಲ್ಲ. ಜನಾರ್ದನ ರೆಡ್ಡಿ ಆಸ್ತಿಗಳೆಲ್ಲವನ್ನೂ ಮಾರಾಟ ಮಾಡುತ್ತಿದ್ದಾರೆ ಎಂದು ಸಿಬಿಐ ತನ್ನ ಅರ್ಜಿಯಲ್ಲೇ ಹೇಳಿದೆ. ಹೀಗಿರುವಾಗ ಏಳು ವರ್ಷಗಳಲ್ಲಿ ಯಾವ ಆಸ್ತಿ ಉಳಿದಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಹೊಸ ವರ್ಷದ ಮೊದಲ ದಿನವೇ ಜನಾರ್ದನ ರೆಡ್ಡಿ ಹೊಸ ಆಟ: ಬಳ್ಳಾರಿಯಲ್ಲಿ ಕಣಕ್ಕಿಳೀತಾರಾ ರೆಡ್ಡಿ ಪತ್ನಿ..?

ಅದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿ, ಏಳು ವರ್ಷ ತಡವಾಗಿರುವುದನ್ನು ಸಿಬಿಐ ಹೇಗೆ ಸಮರ್ಥಿಸಿಕೊಳ್ಳುತ್ತದೆ? ರಾಜ್ಯ ಸರ್ಕಾರದ ಮೇಲೆ ತಡವಾಗಿದೆ ಎಂದು ದೂರು ಹೇಳುವ ಸಿಬಿಐ, ರೆಡ್ಡಿಯ 65 ಕೋಟಿ ರು. ಮೌಲ್ಯದ ಆಸ್ತಿಯನ್ನು ಏಕೆ ಜಪ್ತಿ ಮಾಡಿಲ್ಲ, ತಡವಾಗಿರುವುದರ ಹಿಂದಿನ ಉದ್ದೇಶವೇನು, ಎಲ್ಲ ಅರ್ಜಿಗಳು ಸಂಬಂಧ ಹೀಗೆ ಆಗುತ್ತದೆಯೇ, ಅಥವಾ ಈ ಅರ್ಜಿಯಲ್ಲಿ ಮಾತ್ರ ಹೀಗಾಗಿದೆಯೇ ಎಂದು ಪ್ರಶ್ನಿಸುವ ಮೂಲಕ ಸಿಬಿಐಗೆ ಚಾಟಿ ಬೀಸಿತು.

ಸಿಬಿಐಗೆ ಕೋರ್ಟ್‌ ಚಾಟಿ

- 2015ರಲ್ಲೇ ಜನಾರ್ದನ ರೆಡ್ಡಿಯ 65 ಕೋಟಿ ರು. ಆಸ್ತಿ ಜಪ್ತಿಗೆ ಒಪ್ಪಿಗೆ ನೀಡಿದ್ದ ರಾಜ್ಯ ಸರ್ಕಾರ
- 7 ವರ್ಷ ಕಳೆದರೂ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ಮುಂದುವರೆಸದ ಸಿಬಿಐ ಅಧಿಕಾರಿಗಳು
- ಈಗ ದಿಢೀರನೆ 19 ಕೋಟಿ ರು. ಮೌಲ್ಯದ ಆಸ್ತಿ ಜಪ್ತಿಗೆ ಸರ್ಕಾರದ ಬಳಿ ಅನುಮತಿ ಕೇಳಿದ ಸಿಬಿಐ
- ನಾಲ್ಕು ತಿಂಗಳಾದರೂ ಸರ್ಕಾರ ಅನುಮತಿ ನೀಡಿಲ್ಲ ಎಂದು ಹೈಕೋರ್ಟ್‌ ತಕರಾರು ಅರ್ಜಿ ಸಲ್ಲಿಕೆ
- ಇಷ್ಟುದಿನ ನಿದ್ದೆಯಲ್ಲಿದ್ದು ಈಗ ಏಕಾಏಕಿ ಜಪ್ತಿಗೆ ಹೊರಟಿದ್ದೀರಿ: ಸಿಬಿಐಗೆ ಚಾಟಿ ಬೀಸಿದ ಕೋರ್ಟ್‌

click me!