
ಬೆಂಗಳೂರು(ಜೂ.09): ಸರ್ಕಾರದಿಂದ ಗೋಶಾಲೆಗಳ ಸ್ಥಾಪನೆ ಪ್ರಕ್ರಿಯೆ ವೇಗ ಪಡೆದುಕೊಂಡಿದ್ದು, ಜುಲೈನೊಳಗೆ ರಾಜ್ಯದ ಐದು ಜಿಲ್ಲೆಗಳಲ್ಲಿ ಗೋಶಾಲೆ ಲೋಕಾರ್ಪಣೆ ಮಾಡಲು ಸಿದ್ಧತೆ ನಡೆಯುತ್ತಿದೆ.
ಗೋಹತ್ಯೆ ನಿಷೇಧದ ಮುಂದುವರೆದ ಭಾಗವಾಗಿ ಅನುಪಯುಕ್ತ ಗೋವುಗಳನ್ನು ರಕ್ಷಿಸಲು ಪ್ರತಿ ಜಿಲ್ಲೆಯಲ್ಲಿ ಗೋಶಾಲೆ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಬಹುತೇಕ ಜಿಲ್ಲೆಗಳಲ್ಲಿ ಜಮೀನು ಅಂತಿಮವಾಗಿದೆ. ಪ್ರಸ್ತುತ ಚಿಕ್ಕಮಗಳೂರು, ಹಾವೇರಿ, ವಿಜಯಪುರ, ಮೈಸೂರು ಮತ್ತು ತುಮಕೂರು ಜಿಲ್ಲೆಯಲ್ಲಿ ಜಮೀನನ್ನು ಪಶು ಸಂಗೋಪನಾ ಇಲಾಖೆಯಿಂದ ಪಡೆದುಕೊಳ್ಳಲಾಗಿದೆ. ಅಲ್ಲದೆ, ಗೋಶಾಲೆಗಳ ನಿರ್ಮಾಣಕ್ಕೆ ಸಿವಿಲ್ ಕಾಮಗಾರಿಗಳು ಪೂರ್ಣಗೊಂಡಿದ್ದು, ಲೋಕಾರ್ಪಣೆಗೆ ಸಿದ್ಧತೆ ನಡೆಯುತ್ತಿದೆ.
ಪ್ರತಿ ಗೋಶಾಲೆಯಲ್ಲಿ ಕೊಳವೆ ಬಾವಿಗಳನ್ನು ಕೊರೆದು ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಕೊಟ್ಟಿಗೆಗಳನ್ನು ನಿರ್ಮಾಣ ಮಾಡಲಾಗಿದೆ. ಗೋವುಗಳ ಆರೋಗ್ಯ ನೋಡಿಕೊಳ್ಳಲು ಪಶುವೈದ್ಯಾಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಪಶು ತ್ಯಾಜ್ಯದ ಸಂಗ್ರಹಣೆ ಮತ್ತು ಅದರ ಉಪ ಉತ್ಪನ್ನಗಳನ್ನು ಸಿದ್ಧಪಡಿಸಲು ಹೊರ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಳ್ಳಲಾಗುತ್ತಿದೆ ಎಂದು ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
150 ಪಶುಗಳ ಪೋಷಣೆಗೆ ವ್ಯವಸ್ಥೆ:
ಪ್ರತಿಯೊಂದು ಗೋಶಾಲೆ ಪ್ರಾರಂಭ ಮತ್ತು ನಿರ್ವಹಣೆಗೆ 50 ಲಕ್ಷ ರು.ಗಳನ್ನು ಸರ್ಕಾರ ನಿಗದಿ ಪಡಿಸಿದೆ. ಅದಕ್ಕೆ ಅನುಗುಣವಾಗಿ ಪ್ರಾರಂಭಿಕ ಹಂತದಲ್ಲಿ ಪ್ರತಿಯೊಂದು ಗೋಶಾಲೆಗೆ 100 ರಿಂದ 150 ಗೋವುಗಳ ಪೋಷಣೆಗೆ ಅಗತ್ಯವಿರುವಂತೆ ಮೂಲಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಗೋವುಗಳ ಸಂಖ್ಯೆ ಹೆಚ್ಚಾದಂತೆ ಸೌಲಭ್ಯಗಳನ್ನು ಹೆಚ್ಚಳ ಮಾಡಲಾಗುವುದು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಪ್ರತಿ ಗೋವು ನಿರ್ವಹಣೆಗೆ 70 ರು.:
ಸರ್ಕಾರ ನಡೆಸುವ ಗೋಶಾಲೆಗಳಲ್ಲಿ ಅನುಪಯುಕ್ತ ಗೋವುಗಳಿರಲಿವೆ. ಜತೆಗೆ, ಅಕ್ರಮ ಸಾಗಣೆಯಲ್ಲಿ ವಶಪಡಿಸಿಕೊಂಡಿರುವ, ನ್ಯಾಯಾಲಯಗಳ ಸೂಚನೆಯಿಂದ ಬರುವ ಗೋವುಗಳು, ರೈತರಿಂದ ಪೋಷಣೆಗೆ ಸಾಧ್ಯವಾಗದ ಮತ್ತು ಗಂಡು ಕರುಗಳನ್ನು ಸಾಕಲಾಗುತ್ತದೆ. ಇವುಗಳಿಂದ ಯಾವುದೇ ರೀತಿಯಲ್ಲಿ ಲಾಭ ಇರುವುದಿಲ್ಲ. ಇವುಗಳ ಪೋಷಣೆಗೆ ಸರ್ಕಾರವೇ ಹಣ ಬಿಡುಗಡೆ ಮಾಡುತ್ತಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸೂಚನೆಯಂತೆ ಪ್ರತಿ ಗೋವಿಗೆ 70 ರು.ಗಳನ್ನು ನಿಗದಿಪಡಿಸಲಾಗಿದೆ. ಸರ್ಕಾರ ಗೋಶಾಲೆಗಳಲ್ಲಿನ ಗೋವುಗಳ ಆಧಾರದಲ್ಲಿ ಹಣ ಬಿಡುಗಡೆ ಮಾಡಲಿದೆ ಎಂದು ಮಾಹಿತಿ ನೀಡಿದ್ದಾರೆ.
ಸ್ಥಳ ವ್ಯಾಪ್ತಿ ಪ್ರದೇಶ(ಎಕರೆ)
ಚಿಕ್ಕಮಗಳೂರು 11
ಹಾವೇರಿ 25
ವಿಜಯಪುರ 10
ಮೈಸೂರು 7.2
ತುಮಕೂರು 9.2
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಗೋಶಾಲೆ ನಿರ್ಮಾಣಕ್ಕೆ ಸ್ಥಳ ಗುರುತಿಸಿದ್ದು, ಅಂತಮ ಹಂತದಲ್ಲಿದೆ. ಪ್ರಸ್ತುತ ಐದು ಜಿಲ್ಲೆಗಳಲ್ಲಿ ಲೋಕಾರ್ಪಣೆಗೆ ಸಿದ್ಧತೆ ಮಾಡಿಕೊಂಡಿದ್ದು, ಜುಲೈ ಎರಡನೇ ಅಥವಾ ನಾಲ್ಕನೇ ವಾರದಲ್ಲಿ ಲೋಕಾರ್ಪಣೆ ಮಾಡಲಾಗುವುದು ಅಂತ ಪಶುಸಂಗೋಪನೆ ಇಲಾಖೆ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಸಿ.ಕೆ.ವಸುಧಾ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ