ಆ ಒಂದು ಯೋಜನೆಯ ಅನುಷ್ಠಾನಕ್ಕಾಗಿ ಕಳೆದ ನಾಲ್ಕು ದಶಕದಿಂದ ನ್ಯಾಯಾಲಯದಲ್ಲಿ ಹೋರಾಟ ನಡೆಯುತ್ತಿತ್ತು. ಈ ಕುರಿತ ಅಂತಿಮ ತೀರ್ಪಿಗಾಗಿ ಎದುರು ನೋಡುತ್ತಿದ್ದ ಯೋಜನಾ ಪರ ಹೋರಾಟಗಾರರು ಹಾಗೂ ಕರಾವಳಿ ಜನರಿಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಹೈಕೋರ್ಟ್ ನೀಡಿದ ಆದೇಶ ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ.
ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಕಾರವಾರ (ಜೂ.08): ಆ ಒಂದು ಯೋಜನೆಯ ಅನುಷ್ಠಾನಕ್ಕಾಗಿ ಕಳೆದ ನಾಲ್ಕು ದಶಕದಿಂದ ನ್ಯಾಯಾಲಯದಲ್ಲಿ ಹೋರಾಟ ನಡೆಯುತ್ತಿತ್ತು. ಈ ಕುರಿತ ಅಂತಿಮ ತೀರ್ಪಿಗಾಗಿ ಎದುರು ನೋಡುತ್ತಿದ್ದ ಯೋಜನಾ ಪರ ಹೋರಾಟಗಾರರು ಹಾಗೂ ಕರಾವಳಿ ಜನರಿಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಹೈಕೋರ್ಟ್ ನೀಡಿದ ಆದೇಶ ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ. ಯಾಕಂದ್ರೆ, ಯೋಜನೆ ಸಂಬಂಧಿಸಿದ ತೀರ್ಪು ಕೊನೆಯ ಹಂತಕ್ಕೆ ಬಂದು ನಿಂತಿದ್ದು, ನ್ಯಾಯಾಲಯದ ಮುಂದಿನ ತೀರ್ಪು ಜನಪರವಾಗಿ ಬರಲಿದೆ ಎಂದು ಹೋರಾಟಗಾರರು ಆಶಾವಾದ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಕ್ಕೂ ಅದ್ಯಾವ ಯೋಜನೆ ಅಂತೀರಾ. ಈ ಸ್ಟೋರಿ ನೋಡಿ.
ಹೌದು! ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿ ಜಿಲ್ಲೆಗಳ ಜನರ ಬಹುನಿರೀಕ್ಷಿತ ಯೋಜನೆಯಾಗಿರುವ ಅಂಕೋಲಾ-ಹುಬ್ಬಳಿ ರೈಲ್ವೇ ಮಾರ್ಗಕ್ಕಾಗಿ ಕಳೆದ ನಾಲ್ಕು ದಶಕದಿಂದ ನಿರಂತರವಾಗಿ ನಡೆಯುತ್ತಾ ಬಂದಿದ್ದ ಹೋರಾಟ, ಇದೀಗ ತಾರ್ಕಿಕ ಅಂತ್ಯ ಕಾಣುವ ಲಕ್ಷಣಗಳು ಗೋಚರಿಸುತ್ತಿದೆ. ಯೋಜನೆಯ ಸಾಧಕ-ಬಾಧಕಗಳ ಕುರಿತು ಅಧ್ಯಯನ ನಡೆಸಲು ಪರಿಸರ ಹಾಗೂ ವನ್ಯಜೀವಿ ತಜ್ಞರನ್ನೊಳಗೊಂಡ ಸಮಿತಿ 10 ವಾರಗಳೊಳಗೆ ಕೆಲಸ ಪೂರ್ಣಗೊಳಿಸಿ ಎನ್‌ಡಬ್ಲ್ಯುಬಿಗೆ ವರದಿ ಸಲ್ಲಿಸಬೇಕಿದ್ದು, ಆ ವರದಿಯ ಆಧಾರದಲ್ಲಿ ರಾಷ್ಟ್ಮ್ರೀಯ ವನ್ಯಜೀವಿ ಮಂಡಳಿ ನಿರ್ಧಾರ ಕೈಗೊಂಡು ಮುಂದಿನ ವಿಚಾರಣೆ ವೇಳೆ ಹೈ ಕೋರ್ಟ್‌ಗೆ ಸಲ್ಲಿಸಬೇಕಿದೆ.
ಉತ್ತರ ಕನ್ನಡ: ಆಂಗ್ಲರ ಮನಗೆದ್ದ ಅಂಕೋಲಾದ ಸಿಗಡಿ ಉಪ್ಪಿನಕಾಯಿ..!
ಅಂದಹಾಗೆ, ಹುಬ್ಬಳ್ಳಿ- ಅಂಕೋಲಾ ರೈಲ್ವೇ ಮಾರ್ಗದ ಯೋಜನೆಯಿಂದ ಅಪರೂಪದ ವನ್ಯಜೀವಿಗಳಿಗೆ ತೊಂದರೆಯಾಗಲಿದೆ ಎಂದು ವೃಕ್ಷ ಫೌಂಡೇಶನ್ ಹಾಗೂ ಕೆಲವು ಪರಿಸರವಾದಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. 2020ರ ಮಾ.20ರಂದು ರಾಜ್ಯ ವನ್ಯಜೀವಿ ಮಂಡಳಿ ಕೈಗೊಂಡಿರುವ ನಿರ್ಣಯ ಆಧರಿಸಿ ಅಂಕೋಲಾ- ಹುಬ್ಬಳ್ಳಿ ರೈಲು ಮಾರ್ಗ ಯೋಜನೆ ಸಂಬಂಧ ಮುಂದಿನ ಕ್ರಮ ಜರುಗಿಸಬಾರದು ಎಂದು ಸರಕಾರಕ್ಕೆ ಸೂಚಿಸಿ ಜೂ.18ರಂದು ಹೈಕೋರ್ಟ್ ಮಧ್ಯಂತರ ಆದೇಶ ಮಾಡಿತ್ತು. ನಂತರ ಅರಣ್ಯ ಹಾಗೂ ವನ್ಯಜೀವಿಗಳ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಸಮೀಕ್ಷೆ ನಡೆಸುವಂತೆ 2021ರ ಡಿ.1ರಂದು ಹೈಕೋರ್ಟ್ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಆದೇಶಿಸಿತ್ತು.
ಆದ್ರೆ, ಈವರೆಗೆ ಸಮೀಕ್ಷೆ ಪೂರ್ಣಗೊಳಿಸದೆ ಕೇಂದ್ರ ಸರಕಾರ ಸಮಯಾವಕಾಶವನ್ನು ಪಡೆಯುತ್ತಲೇ ಬಂದಿದೆ. ಈ ಕಾರಣದಿಂದ ಯೋಜನೆಯ ಸಾಧಕ - ಬಾಧಕಗಳ ಕುರಿತು ಅಧ್ಯಯನ ನಡೆಸಲು ರಚಿಸಲಾಗಿರುವ ಪರಿಸರ ಹಾಗೂ ವನ್ಯಜೀವಿ ತಜ್ಞರ ಸಮಿತಿ10 ವಾರದೊಳಗೆ ತನ್ನ ಕೆಲಸ ಪೂರ್ಣಗೊಳಿಸಿ, ಎನ್‌ಡಬ್ಲ್ಯೂಬಿಗೆ ವರದಿ ಸಲ್ಲಿಸಬೇಕಿದೆ ಎಂದು ನ್ಯಾಯಪೀಠ ಆದೇಶಿಸಿದೆ. ಈ ಪರಿಸರ ಮತ್ತು ವನ್ಯಜೀವಿಗಳ ಮೇಲೆ ಉಂಟಾಗುವ ಪರಿಣಾಮ ಕುರಿತು ತಜ್ಞರ ಸಮಿತಿ ನೀಡುವ ವರದಿ ಆಧರಿಸಿ ರಾಷ್ಟ್ರೀಯ ವನ್ಯಜೀವಿ ಮಂಡಳಿ ನಿರ್ಧಾರ ಕೈಗೊಳ್ಳಬೇಕಿದೆ. ಮುಂದಿನ ವಿಚಾರಣೆ ವೇಳೆ ಇದನ್ನು ಕೋರ್ಟ್‌ಗೆ ಸಲ್ಲಿಸಬೇಕೆಂದು ಹೈಕೋರ್ಟ್ ನಿರ್ದೇಶನ ನೀಡಿದೆ.
ಇನ್ನು ಅಂಕೋಲಾ ಹಾಗೂ ಹುಬ್ಬಳ್ಳಿ ನಡುವೆ 164.44 ಕಿ.ಮೀ. ಉದ್ದದ ಬ್ರಾಡ್‌ಗೇಜ್ ರೈಲು ಮಾರ್ಗ ಯೋಜನೆ ಪ್ರಶ್ನಿಸಿ ಪ್ರಾಜೆಕ್ಟ್ ವೃಕ್ಷ ಫೌಂಡೇಷನ್ ಹಾಗೂ ಮತ್ತಿತರರು ಪಿಐಎಲ್ ಸಲ್ಲಿಸಿದ್ದರು. ಈ ಪಿಐಎಲ್ ಸಿಜೆ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಅಶೋಕ್ ಎಸ್ . ಕಿಣಗಿ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಕೂಡಾ ಬಂದಿತ್ತು. ಕೇಂದ್ರ ಸರಕಾರದ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂ.ಬಿ. ನರಗುಂದ್ , ರೈಲು ಮಾರ್ಗ ಯೋಜನೆಯ ಸಾಧಕ - ಬಾಧಕಗಳ ಕುರಿತು ಅಧ್ಯಯನ ನಡೆಸಲು ಪರಿಸರ ಸಚಿವಾಲಯ ತಜ್ಞರ ಸಮಿತಿಯನ್ನು ರಚಿಸಿದೆ.
ಆ ಸಮಿತಿಯು ಯೋಜನೆಯನ್ನು ಪರಿಶೀಲಿಸಲಿದ್ದು , ಯೋಜನೆ ಸಂಬಂಧದ ನಾನಾ ವರದಿಗಳು ಹಾಗೂ ಪರಿಸರ ಮತ್ತು ವನ್ಯಜೀವಿಗಳ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಅಧ್ಯಯನ ನಡೆಸಲಿದೆ. ಅಲ್ಲದೇ, ಸಾರ್ವಜನಿಕರು ಹಾಗೂ ಸರಕಾರೇತರ ಸಂಸ್ಥೆಗಳ ಅಹವಾಲುಗಳನ್ನೂ ಆಲಿಸಿ, ಅಂತಿಮ ವರದಿ ನೀಡಲಿದೆ. ಅದನ್ನು ಆಧರಿಸಿ ರಾಷ್ಟ್ರೀಯ ವನ್ಯಜೀವಿ ಮಂಡಳಿ ನಿರ್ಧಾರ ಕೈಗೊಳ್ಳಲಿದೆ ಎಂದಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಆಲಿಸಿರುವ ನ್ಯಾಯಾಲಯ ಅಂತಿಮವಾಗಿ 10 ವಾರಗಳ ಕಾಲ ವಿಚಾರಣೆಯನ್ನು ಮುಂದೂಡಿದೆ. ನ್ಯಾಯಾಲಯದ ಮುಂದಿನ ತೀರ್ಪು ಯೋಜನೆ ಪರವಾಗಿ, ಕರಾವಳಿ ಜನರ ಪರವಾಗಿ ಬರಲಿದೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಶಿರಸಿ ಬಾಲೆ
ಇದರಿಂದ ಉತ್ತರಕನ್ನಡ ಜಿಲ್ಲೆಯಲ್ಲಿ ಮಾತ್ರವಲ್ಲದೇ, ಕರಾವಳಿಯ ಜಿಲ್ಲೆಗಳಲ್ಲಿ ಉದ್ಯಮ, ಪ್ರವಾಸೋದ್ಯಮ ಹಾಗೂ ರಕ್ಷಣಾ ಕ್ಷೇತ್ರಕ್ಕೂ ಇದು ಸಹಾಯಕವಾಗಲಿದೆ ಅಂತಾರೆ ಅಂಕೋಲಾ-ಹುಬ್ಬಳ್ಳಿ ರೈಲ್ವೇ ಪರ ಹೋರಾಟಗಾರರು. ಒಟ್ಟಿನಲ್ಲಿ ಎಲ್ಲವೂ ಅಂದುಕೊಂಡಂತೆ ಆದಲ್ಲಿ ರೈಲು ಪರ ಹೋರಾಟಗಾರರ ನಾಲ್ಕು ದಶಕದ ಹೋರಾಟಕ್ಕೆ ಜಯ ಸಿಕ್ಕಂತಾಗಲಿದೆ. ಅಲ್ಲದೇ, ಕರಾವಳಿ ಜಿಲ್ಲೆಗಳು ಹಾಗೂ ಉತ್ತರ ಕರ್ನಾಟಕ ಭಾಗದ ಸಂಪರ್ಕಕೊಂಡಿ ಇನ್ನಷ್ಟು ಗಟ್ಟಿಯಾಗಲಿದೆ. ಈ ಕಾರಣದಿಂದ ಶೀಘ್ರದಲ್ಲಿ ಯೋಜನೆಗೆ ಗ್ರೀನ್ ಸಿಗ್ನಲ್ ದೊರೆಯಲಿ ಅನ್ನೋದು ಜನರ ಅಭಿಪ್ರಾಯ.