ಉಡುಪಿ ಗರ್ಭಗುಡಿ ಗೋಪುರಕ್ಕೆ ಚಿನ್ನದ ಹೊದಿಕೆ!

By Web DeskFirst Published Nov 29, 2018, 9:42 AM IST
Highlights

ಉಡುಪಿ ಗೋಪುರಕ್ಕೆ ಚಿನ್ನ ಹೊದಿಸುವುದಕ್ಕೆ ಚಾಲನೆ ನೀಡಲಾಗಿದ್ದು, ಚಿನ್ನಕ್ಕೆ ಸುತ್ತಿಗೆಯಿಂದ ಬಡಿದು ಶರವಣ ನಿಶಾನೆ ನೀಡಿದ್ದರೆ. ಒಟ್ಟು 100 ಕೇಜಿ ಚಿನ್ನ ಹೊದಿಸುವ ಯೋಜನೆ ಇದಾಗಿದೆ.

ಉಡುಪಿ[ನ.29]: ಉಡುಪಿ ಕೃಷ್ಣಮಠದಲ್ಲಿ ಗರ್ಭಗುಡಿ ಗೋಪುರಕ್ಕೆ ಚಿನ್ನ ಹೊದಿಸುವ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರ ಮಹಾತ್ವಾಕಾಂಕ್ಷಿ ಯೋಜನೆಗೆ ಗುರುವಾರ ಚಾಲನೆ ನೀಡಲಾಯಿತು.

ಶ್ರೀ ವಿದ್ಯಾಧೀಶ ತೀರ್ಥರು ಮತ್ತು ಸೋಸಲೆ ವಾದಿರಾಜ ಮಠದ ಶ್ರೀ ವಿದ್ಯಾಧೀಶ ತೀರ್ಥರ ಉಪಸ್ಥಿತಿಯಲ್ಲಿ ವಿಧಾನ ಪರಿಷತ್‌ ಸದಸ್ಯ, ಕರ್ನಾಟಕ ಜ್ಯುವೆಲ್ಲರಿ ಅಸೋಸಿಯೇಶನ್‌ ಅಧ್ಯಕ್ಷ ಟಿ.ಎ. ಶರವಣ ಅವರು ಎರಕ ಹೊಯ್ದ ಚಿನ್ನಕ್ಕೆ ಸುತ್ತಿಗೆಯಿಂದ ಬಡಿದು ಕಾಮಗಾರಿಗೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಶ್ರೀ ವಿದ್ಯಾಧೀಶ ತೀರ್ಥರು, ಯೋಜನೆಗೆ ಸಾಕಷ್ಟುಪರ-ವಿರೋಧಗಳು ವ್ಯಕ್ತವಾಗಿವೆ. ಆದರೆ ಈ ಯೋಜನೆಗೆ ಆಚಾರ್ಯ ಮಧ್ವರು ಮತ್ತು ಕೃಷ್ಣನೇ ಪ್ರೇರಣೆ. ತಾನು ನಿಮಿತ್ತ ಮಾತ್ರ ಎಂದರು.

ಭಕ್ತರು ದೇವಾಲಯಕ್ಕೆ ಪ್ರದರ್ಶನದ ಭಕ್ತಿಯಿಂದ ಬಾರದೆ ಸಮರ್ಪಣಾ ಭಾವದಿಂದ ಆಗಮಿಸಬೇಕು. ಚಂಚಲವಾದ ಮನಸ್ಸು ಚಿನ್ನದಂಥ ಬೆಲೆಬಾಳುವ ವಸ್ತುಗಳ ಮೇಲಿರುವ ಕಾರಣ ಚಿನ್ನವನ್ನೇ ದೇವರಿಗೆ ಸಮರ್ಪಿಸಿದಲ್ಲಿ ನಮ್ಮ ಮನಸ್ಸನ್ನೇ ದೇವರಿಗೆ ಅರ್ಪಿಸಿದಂತಾಗುತ್ತದೆ. ಆದ್ದರಿಂದ ಲೋಕಕಲ್ಯಾಣವನ್ನು ಪ್ರಾರ್ಥಿಸಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಶ್ರೀಗಳು ಹೇಳಿದರು.

ರಾಮನವಮಿಯಂದು ಕೃಷ್ಣನಿಗರ್ಪಣೆ:

ಒಟ್ಟು 2500 ಚದರಡಿ ಇರುವ ಗರ್ಭಗುಡಿಯ ಗೋಪುರವನ್ನು ಮುಚ್ಚುವುದಕ್ಕೆ 100 ಕೆಜಿ ಚಿನ್ನ ಮತ್ತು 500 ಕೆಜಿ ಬೆಳ್ಳಿಯ ಅಗತ್ಯ ಇದೆ. ಈಗಾಗಲೇ 60 ಕೆಜಿಯಷ್ಟುಚಿನ್ನ ಭಕ್ತರಿಂದ, ದಾನಿಗಳಿಂದ ಸಂಗ್ರಹವಾಗಿದೆ. ಮೊದಲು ಗೋಪುರಕ್ಕೆ ಮರದ ಮಾಡು ನಿರ್ಮಿಸಿ, ಅದರ ಮೇಲೆ ಬೆಳ್ಳಿಯ ಹೊದಿಕೆ ಅಳವಡಿಸಲಾಗುತ್ತದೆ. ಅದರ ಮೇಲೆ ಚಿನ್ನದ ತಗಡುಗಳನ್ನು ಹೊದಿಸಲಾಗುತ್ತದೆ. ಈ ಚಿನ್ನದ ಹೊದಿಕೆ ಮೇಲೆ ಆಚಾರ್ಯ ಮಧ್ವರ ಸರ್ವಮೂಲ ಗ್ರಂಥಗಳನ್ನು ಲಿಪಿಬದ್ಧಗೊಳಿಸಲಾಗುತ್ತದೆ. ವಿಶ್ವಕರ್ಮ ಸಮುದಾಯದವರು ಮರದ ಕೆಲಸವನ್ನು ವಹಿಸಿಕೊಂಡಿದ್ದರೆ, ದೈವಜ್ಞ ಸಮುದಾಯದವರು ಚಿನ್ನ-ಬೆಳ್ಳಿಯ ಕೆಲಸವನ್ನು ನಿರ್ವಹಿಸಲಿದ್ದಾರೆ. 4 ತಿಂಗಳಲ್ಲಿ ಕೆಲಸ ಪೂರ್ಣಗೊಂಡು, ಮುಂದಿನ ರಾಮನವಮಿಯ ಸಂದರ್ಭದಲ್ಲಿ ಈ ಭವ್ಯ ಚಿನ್ನದ ಗೋಪುರವನ್ನು ಕೃಷ್ಣನಿಗೆ ಅರ್ಪಿಸುವ ಇರಾದೆಯನ್ನು ಶ್ರೀ ವಿದ್ಯಾಧೀಶ ತೀರ್ಥರು ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ಗೋ.ಮಧುಸೂದನ, ಹೊಸಪೇಟೆ ಉದ್ಯಮಿ ಪತ್ತಿಗೊಂಡ ಪ್ರಭಾಕರ್‌, ಐಬಿಎಂ ಇಂಡಿಯಾದ ಕಾರ್ಯನಿರ್ವಾಹಕ ಉಪಾಧ್ಯಕ್ಷ ನಟರಾಜ್‌ ರಾಧಾಕೃಷ್ಣನ್‌, ಬೆಂಗಳೂರು ಸಮರ್ಪಣಾ ಸಮೂಹ ಸಂಸ್ಥೆಗಳ ಸಿಇಒ ದಿಲೀಪ್‌ ಸತ್ಯ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸ್ಥಳದಲ್ಲೇ 8 ಕೆಜಿ ಚಿನ್ನ ಸಂಗ್ರಹ

ನಾವು ಬಳಸಿದ ಬಟ್ಟೆ, ಹೂವು, ಹಣ್ಣುಗಳನ್ನು ದೇವರಿಗೆ ಅರ್ಪಿಸಬಾರದು, ಆದರೆ ಬಳಸಿದ ಚಿನ್ನವನ್ನು ಎರಕ ಹೊಯ್ದು ಶುದ್ಧಗೊಳಿಸುವುದರಿಂದ ಚಿನ್ನಾಭರಣಗಳನ್ನು ದೇವರಿಗೆ ಅರ್ಪಿಸಬಹುದು ಎಂದು ಶ್ರೀ ವಿದ್ಯಾಧೀಶ ತೀರ್ಥರು ಹೇಳುತ್ತಿದ್ದಂತೆ, ಉತ್ಸಾಹಿತರಾದ ಭಕ್ತರು ಸ್ಥಳದಲ್ಲೇ ಸುಮಾರು 8 ಕೆಜಿಯಷ್ಟುಚಿನ್ನವನ್ನು ದೇವರಿಗೆ ಸಮರ್ಪಿಸಿದರು. ಭಕ್ತ ಮಹಿಳೆಯೊಬ್ಬರು ತಮ್ಮ ಕೈಯಲ್ಲಿದ್ದ 15 ಗ್ರಾಂ ತೂಕದ ಎರಡು ಬಳೆಗಳನ್ನು, ಇನ್ನೊಬ್ಬರು ಕಿವಿಯ ಓಲೆಯನ್ನೇ ದಾನವಾಗಿ ನೀಡಿದರು. ಗೋ.ಮಧುಸೂದನ ಅವರು ತಮ್ಮ ಕೈಯಲ್ಲಿದ್ದ ಉಂಗುರವನ್ನು ನೀಡಿದರೆ, ಅವರ ಪತ್ನಿ ಕೂಡ ಉಂಗುರವನ್ನು ದಾನ ಮಾಡಿದರು. ವೇದಾವತಿ ಎಂಬವರು 10 ಸಾವಿರ ರುಪಾಯಿ ಮೌಲ್ಯದ ಚಿನ್ನವನ್ನು ಕೊಡುಗೆಯಾಗಿ ನೀಡಿದರು.

ಸ್ವರ್ಣೋದ್ಯಮಿ ಸರವಣ ಅವರು 5 ಲಕ್ಷ ರು. ಮೊತ್ತದ ಚಿನ್ನವನ್ನು, ಹೊಸಪೇಟೆ ಉದ್ಯಮಿ ಪತ್ತಿಗೊಂಡ ಪ್ರಭಾಕರ್‌ 2 ಕೆಜಿ ಚಿನ್ನವನ್ನು ನೀಡಿದರು. ಭಾಸ್ಕರ ಅನಂತ ಸಂಡೂರು, ಶ್ರೀನಿವಾಸ ಪೆಜತ್ತಾಯ- ರಮೇಶ ಪೆಜತ್ತಾಯ ಸಹೋದರರು, ವಿಜಯಾನಂದ ಮುಂಬೈ, ಹೈದರಾಬಾದ್‌ ರಮೇಶ್‌, ಕೆ.ಜಿ. ದೀಲಿಪ್‌ ಸತ್ಯ ತಲಾ 1 ಕೆಜಿ ಚಿನ್ನವನ್ನು ನೀಡುವುದಾಗಿ ಘೋಷಿಸಿದರು. ಇದೇ ರೀತಿ ವಿವಿಧ ಸಂಘಟನೆಗಳು ದೇಣಿಗೆ ಘೋಷಿಸಿದವು.

click me!