
ಗದಗ (ಜ.17): ಕುಡಿದ ಮತ್ತಿನಲ್ಲಿ ಏನು ಮಾಡುತ್ತಿದ್ದೇವೆ ಎಂಬ ಅರಿವಿಲ್ಲದೆ ವ್ಯಕ್ತಿಯೊಬ್ಬ ಬಸ್ ನಿಲ್ದಾಣದಲ್ಲಿ ಭಾರೀ ರಾದ್ಧಾಂತ ಮಾಡಿರುವ ಘಟನೆ ಗದಗ ನಗರದ ಮುಳಗುಂದ ನಾಕಾ ಬಸ್ ಸ್ಟಾಪ್ ಬಳಿ ನಡೆದಿದೆ. ಕುಡುಕನ ಈ ಅವಾಂತರದಿಂದಾಗಿ ಬಸ್ ಪ್ರಯಾಣಿಕರು ಹಾಗೂ ಸಿಬ್ಬಂದಿ ಕೆಲಕಾಲ ಹೈರಾಣಾಗಿದ್ದಾರೆ.
ಬಸ್ ಹತ್ತಲು ಬಂದಿದ್ದ ವ್ಯಕ್ತಿಗೆ ಬಸ್ ರಶ್ ಇದೆ, ಹತ್ತಬೇಡಿ ಎಂದು ನಿರ್ವಾಹಕರು ತಿಳಿಸಿದ್ದಾರೆ. ಇದಕ್ಕೆ ಕೆಂಡಾಮಂಡಲವಾದ ಕುಡುಕ, 'ಬಸ್‌ನಲ್ಲಿ ಕೇವಲ 50 ಜನರಿಗಷ್ಟೇ ಅವಕಾಶವಿದೆ, ನಿಯಮ ಮೀರಿ ಜನರನ್ನು ತುಂಬಿಸಿಕೊಂಡಿದ್ದೀರಿ. ಮೊದಲು ಉಳಿದವರನ್ನು ಕೆಳಗಿಳಿಸಿ' ಎಂದು ಕಾನೂನು ಮಾತನಾಡುತ್ತಾ ಕಿರಿಕ್ ಶುರು ಮಾಡಿದ್ದಾನೆ.
ತನ್ನ ವಾದಕ್ಕೆ ಮಣಿಯದ ಬಸ್ ಸಿಬ್ಬಂದಿ ವಿರುದ್ಧ ಆಕ್ರೋಶಗೊಂಡ ವ್ಯಕ್ತಿ, ಸೀದಾ ಬಸ್‌ನ ಚಕ್ರದ ಮುಂದೆ ಮಲಗಿ ಪ್ರತಿಭಟನೆ ನಡೆಸಿದ್ದಾನೆ. 'ಅಷ್ಟು ಜನರನ್ನು ತುಂಬಿಸಿಕೊಂಡ ಮೇಲೆ ನಾನೊಬ್ಬನೇ ಹೇಗೆ ಹೆಚ್ಚಾಗುತ್ತೇನೆ? ಎಲ್ಲರನ್ನೂ ಇಳಿಸಿ ಇಲ್ಲದಿದ್ದರೆ ಬಸ್ ಬಿಡಲು ಬಿಡುವುದಿಲ್ಲ' ಎಂದು ಹಠ ಹಿಡಿದು ಕುಳಿತಿದ್ದರಿಂದ ಸಂಚಾರಕ್ಕೆ ಅಡ್ಡಿಯಾಯಿತು.
ಕುಡುಕನ ವಿತಂಡವಾದ ಮತ್ತು ಕೂಗಾಟದಿಂದಾಗಿ ಬಸ್‌ನಲ್ಲಿದ್ದ ಪ್ರಯಾಣಿಕರು ಅಕ್ಷರಶಃ ಸುಸ್ತಾಗಿ ಹೋದರು. ಅರ್ಧ ಗಂಟೆಗೂ ಹೆಚ್ಚು ಕಾಲ ನಡೆದ ಈ ಹೈಡ್ರಾಮಾದಿಂದಾಗಿ ಪ್ರಯಾಣಿಕರು ಕೆಲಸ ಕಾರ್ಯಗಳಿಗೆ ಹೋಗಲು ತಡವಾಯಿತು. ಸ್ಥಳದಲ್ಲಿದ್ದವರು ವ್ಯಕ್ತಿಯನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಆತ ಮಾತ್ರ ಬಸ್ ಇಳಿಯುವಂತೆ ಕೂಗಾಡುತ್ತಿದ್ದ.
ಬಹಳ ಹೊತ್ತು ಗಲಾಟೆ ಮಾಡಿ, ಪ್ರಯಾಣಿಕರ ತಾಳ್ಮೆ ಪರೀಕ್ಷಿಸಿದ ಈ ಕುಡುಕ, ಕೊನೆಗೆ ಸ್ಥಳೀಯರ ಗದರಿಕೆ ಮತ್ತು ಪೊಲೀಸರಿಗೆ ದೂರು ನೀಡುವ ಎಚ್ಚರಿಕೆಯ ನಂತರ ಅಲ್ಲಿಂದ ಕಾಲ್ಕಿತ್ತಿದ್ದಾನೆ. ವ್ಯಕ್ತಿ ಹೋದ ನಂತರ ಬಸ್ ಚಾಲಕರು ನಿಟ್ಟುಸಿರು ಬಿಟ್ಟು ಬಸ್ ಚಲಾಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ