
ಬೆಂಗಳೂರು (ಜ.17): ರಾಜ್ಯ ಸರ್ಕಾರದ 'ಶಕ್ತಿ' ಯೋಜನೆಯಿಂದಾಗಿ ಬಸ್‌ಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದು, ಬಸ್‌ಗಳು ಸದಾ ರಶ್ ಇರುತ್ತಿವೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಕಿಡಿಗೇಡಿ ಪ್ರಯಾಣಿಕರು ಟಿಕೆಟ್ ಪಡೆಯದೆ ನಿಗಮಕ್ಕೆ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ.
ಕೇವಲ ಡಿಸೆಂಬರ್ ತಿಂಗಳೊಂದರಲ್ಲೇ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಟಿಕೆಟ್ ಪಡೆಯದೆ ಸಂಚರಿಸುತ್ತಿದ್ದ ಬರೋಬ್ಬರಿ 4,353 ಪ್ರಯಾಣಿಕರನ್ನು ತಪಾಸಣಾಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬಸ್‌ಗಳಲ್ಲಿ ತಪಾಸಣೆ ತೀವ್ರಗೊಳಿಸಿದ ಹಿನ್ನೆಲೆಯಲ್ಲಿ ಈ ವಂಚನೆ ಬೆಳಕಿಗೆ ಬಂದಿದೆ.
ಟಿಕೆಟ್ ರಹಿತ ಪ್ರಯಾಣಿಕರಿಗೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದವರಿಂದ ಒಟ್ಟು 8 ಲಕ್ಷ ರೂಪಾಯಿಗಳಷ್ಟು ದಂಡವನ್ನು ವಸೂಲಿ ಮಾಡಲಾಗಿದೆ. ಈ ಮೂಲಕ ನಿಗಮದ ಆದಾಯಕ್ಕೆ ಕನ್ನ ಹಾಕುತ್ತಿದ್ದವರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಸಿಬ್ಬಂದಿ ವಿರುದ್ಧವೂ ಇಲಾಖೆ ಗರಂ
ಕೇವಲ ಪ್ರಯಾಣಿಕರಷ್ಟೇ ಅಲ್ಲದೆ, ನಿಗಮದ ಹಣ ಸೋರಿಕೆಯಾಗಲು ಕಾರಣರಾದ ನಿರ್ವಾಹಕರ ಮೇಲೂ ಕ್ರಮ ಕೈಗೊಳ್ಳಲಾಗಿದೆ. ತಪಾಸಣೆ ವೇಳೆ ನಿಗಮದ ಹಣದಲ್ಲಿ ಸೋರಿಕೆಯಾಗುತ್ತಿದ್ದ ಸುಮಾರು 1 ಲಕ್ಷದ 14 ಸಾವಿರ ರೂಪಾಯಿಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಕರ್ತವ್ಯ ಲೋಪ ಎಸಗಿದ ಮತ್ತು ಹಣಕಾಸಿನ ಅವ್ಯವಹಾರ ನಡೆಸಿದ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಇಲಾಖಾ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
ಫೋನ್ ಪೇ ಹೆಸರಲ್ಲಿ ಚಾಲಕ-ನಿರ್ವಾಹಕರಿಗೆ ವಂಚನೆ
ಇನ್ನು ಬಿಎಂಟಿಸಿ ಬಸ್‌ಗಳಲ್ಲಿ ಇತ್ತೀಚೆಗೆ ಡಿಜಿಟಲ್ ಪಾವತಿ ಹೆಚ್ಚಾಗಿದೆ. ಆದರೆ, ಬಸ್‌ನ ರಶ್ ಬಳಸಿಕೊಳ್ಳುವ ಕೆಲವು ಪ್ರಯಾಣಿಕರು ಫೋನ್ ಪೇ ಸ್ಕ್ಯಾನ್ ಮಾಡಿದಂತೆ ನಟಿಸಿ, ಹಳೆಯ ಪಾವತಿಯ ಸ್ಕ್ರೀನ್‌ಶಾಟ್ ತೋರಿಸಿ ಅಥವಾ ದುಡ್ಡು ಹಾಕಿದ್ದೇನೆ ಎಂದು ಸುಳ್ಳು ಹೇಳಿ ಚಾಲಕ ಮತ್ತು ನಿರ್ವಾಹಕರನ್ನು ಯಾಮಾರಿಸುತ್ತಿದ್ದಾರೆ. ಇಂತಹ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ