ಬೆಂಗಳೂರು: ಲೈಸನ್ಸ್‌ ಕೊಡಬೇಕಾದ್ರೆ 2.30 ಕೋಟಿ ಲಂಚ, ಹಣ ಪಡೆಯವಾಗಲೇ ಲೋಕಾ ಬಲೆಗೆ ಬಿದ್ದ ಅಬಕಾರಿ ಉಪ ಆಯುಕ್ತ!

Published : Jan 17, 2026, 03:54 PM IST
Bengaluru Lokayukta raid

ಸಾರಾಂಶ

ಬೆಂಗಳೂರಿನಲ್ಲಿ ನಡೆದ ಭಾರೀ ಲೋಕಾಯುಕ್ತ ಕಾರ್ಯಾಚರಣೆಯಲ್ಲಿ, ಸಿಎಲ್–7 ಮತ್ತು ಮೈಕ್ರೋ ಬ್ರೇವರಿ ಲೈಸೆನ್ಸ್ ನೀಡಲು ಕೋಟ್ಯಂತರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಅಬಕಾರಿ ಇಲಾಖೆಯ ಉಪ ಆಯುಕ್ತ ಜಗದೀಶ್ ನಾಯಕ್ ಸೇರಿದಂತೆ ಮೂವರು ಅಧಿಕಾರಿಗಳು ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ.  

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಭಾರೀ ಲೋಕಾಯುಕ್ತ ಕಾರ್ಯಾಚರಣೆಯಲ್ಲಿ ಅಬಕಾರಿ ಇಲಾಖೆಯ ಉಪ ಆಯುಕ್ತ (Deputy Commissioner) ಜಗದೀಶ್ ನಾಯಕ್ ಸೇರಿ ಮೂವರು ಅಧಿಕಾರಿಗಳು ಲಂಚ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಸಿಎಲ್–7 ಮತ್ತು ಮೈಕ್ರೋ ಬ್ರೇವರಿ ಲೈಸೆನ್ಸ್ ನೀಡುವ ನೆಪದಲ್ಲಿ ಕೋಟ್ಯಂತರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಕೇಳಿಬಂದಿದೆ. ಅಬಕಾರಿ ಇಲಾಖೆಯ ಉಪ ಆಯುಕ್ತ ಜಗದೀಶ್ ನಾಯಕ್, ಬ್ಯಾಟರಾಯನಪುರ ವಲಯದ ಅಬಕಾರಿ ಸೂಪರಿಂಟೆಂಡೆಂಟ್ ತಮ್ಮಣ್ಣ, ಹಾಗೂ ಅಬಕಾರಿ ಕಾನ್ಸ್ಟೇಬಲ್ ಲಕ್ಕಪ್ಪ ಮೂವರೂ ಸೇರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಲೈಸೆನ್ಸ್ ನೀಡಲು ಕೋಟಿ ರೂಪಾಯಿ ಲಂಚ ಬೇಡಿಕೆ

ಬೆಂಗಳೂರು ಮೂಲದ ಲಕ್ಷ್ಮೀ ನಾರಾಯಣ್ ಎಂಬ ಉದ್ಯಮಿಯಿಂದ ಸಿಎಲ್–7 ಹಾಗೂ ಮೈಕ್ರೋ ಬ್ರೇವರಿ ಲೈಸೆನ್ಸ್ ನೀಡಲು ಅಧಿಕಾರಿಗಳು ಒಟ್ಟು 2 ಕೋಟಿ 30 ಲಕ್ಷ ರೂಪಾಯಿ ಲಂಚ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ನಂತರ ಮಾತುಕತೆ ನಡೆದು, ಎರಡು ಲೈಸೆನ್ಸ್ ನೀಡಲು 2 ಕೋಟಿ 25 ಲಕ್ಷ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದ್ದರು ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ. ಅದರ ಭಾಗವಾಗಿ, ಅಡ್ವಾನ್ಸ್ ಹಣವಾಗಿ 25 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮೂವರನ್ನೂ ಬಲೆಗೆ ಬೀಳಿಸಿದ್ದಾರೆ.

ಅಬಕಾರಿ ಭವನದಲ್ಲೇ ಲೋಕಾಯುಕ್ತ ಬಲೆ

ಈ ದಾಳಿ ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ಅಬಕಾರಿ ಭವನದಲ್ಲಿ ನಡೆದಿದೆ. ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಉಪ ಆಯುಕ್ತ ಜಗದೀಶ್ ನಾಯಕ್ ಮತ್ತು ಅಬಕಾರಿ ಕಾನ್ಸ್ಟೇಬಲ್ ಲಕ್ಕಪ್ಪರನ್ನು ಸ್ಥಳದಲ್ಲೇ ವಶಕ್ಕೆ ಪಡೆದಿದ್ದಾರೆ. ಇನ್ನೊಂದೆಡೆ, ದಾಳಿ ಸಮಯದಲ್ಲಿ ತಪ್ಪಿಸಿಕೊಂಡಿದ್ದ ಅಬಕಾರಿ ಸೂಪರಿಂಟೆಂಡೆಂಟ್ ತಮ್ಮಣ್ಣ ಅವರನ್ನು ನಂತರ ವೈಯಾಲಿಕಾವಲ್ ಪ್ರದೇಶದ ಬಳಿ ಬಂಧಿಸಿ ಲೋಕಾಯುಕ್ತ ಅಧಿಕಾರಿಗಳು ಅಬಕಾರಿ ಭವನಕ್ಕೆ ಕರೆತಂದಿದ್ದಾರೆ.

ವಿವಿಧ ಲೈಸೆನ್ಸ್‌ಗಳಿಗೆ ಪ್ರತ್ಯೇಕ ಲಂಚ ದರ

ಲೋಕಾಯುಕ್ತ ತನಿಖೆಯಲ್ಲಿ ಹೊರಬಂದ ಮಾಹಿತಿಯಂತೆ, ಸಿಎಲ್–7 ಲೈಸೆನ್ಸ್‌ಗೆ (ಲಿಕ್ಕರ್) ₹75 ಲಕ್ಷ, ಮೈಕ್ರೋ ಬ್ರೇವರಿ ಲೈಸೆನ್ಸ್‌ಗೆ (ಪಾನೀಯಗಳು) ₹1.5 ಕೋಟಿ. ಹೀಗೆ ಒಟ್ಟು ₹2.30 ಕೋಟಿ ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ಕೊನೆಗೆ ₹2.25 ಕೋಟಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಮೂವರ ಮೇಲೂ ವಿಚಾರಣೆ ಮುಂದುವರಿದಿದೆ

ಸದ್ಯ ಲೋಕಾಯುಕ್ತ ಅಧಿಕಾರಿಗಳು ಅಬಕಾರಿ ಭವನದಲ್ಲೇ ಮೂವರು ಅಧಿಕಾರಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣ ಅಬಕಾರಿ ಇಲಾಖೆಯಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಧಿಕಾರಿಗಳ ಪಾತ್ರ ಬಹಿರಂಗವಾಗುವ ಸಾಧ್ಯತೆ ಇದೆ. ಈ ಲೋಕಾಯುಕ್ತ ದಾಳಿ ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಮತ್ತೊಂದು ದೊಡ್ಡ ಉದಾಹರಣೆಯಾಗಿ ಪರಿಗಣಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಿಡ್ನಾಪ್‌ ಆದ 1094 ಮಕ್ಕಳು ಇನ್ನೂ ಪತ್ತೆಯಾಗಿಲ್ಲ!
ಚುನಾವಣೆಯಲ್ಲಿ ಜೆಡಿಎಸ್‌-ಬಿಜೆಪಿ ಮೈತ್ರಿಗೆ ಧಕ್ಕೆ ಆಗದಿರಲಿ:ಎಚ್‌ಡಿಕೆ