ವಿಜಯನಗರ ಭವ್ಯ ಚರಿತ್ರೆಗೆ ಜಿ-20 ಪ್ರತಿನಿಧಿಗಳು ಫಿದಾ!

By Kannadaprabha News  |  First Published Jul 12, 2023, 3:01 PM IST

ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯಲ್ಲಿ ನಡೆಯುತ್ತಿರುವ ಜಿ- 20 ರಾಷ್ಟ್ರಗಳ ಸಾಂಸ್ಕೃತಿಕ ಕಾರ್ಯಪಡೆ ಶೃಂಗಸಭೆಯಲ್ಲಿ ಭಾಗವಹಿಸಿರುವ ವಿದೇಶಿ ಪ್ರತಿನಿಧಿಗಳು, ಈ ನೆಲದ ಚರಿತ್ರೆಯಿಂದ ಪ್ರಭಾವಿತರಾಗಿದ್ದಾರೆ.


ಕೃಷ್ಣ ಎನ್‌. ಲಮಾಣಿ

ಹೊಸಪೇಟೆ (ಜು.12): ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯಲ್ಲಿ ನಡೆಯುತ್ತಿರುವ ಜಿ- 20 ರಾಷ್ಟ್ರಗಳ ಸಾಂಸ್ಕೃತಿಕ ಕಾರ್ಯಪಡೆ ಶೃಂಗಸಭೆಯಲ್ಲಿ ಭಾಗವಹಿಸಿರುವ ವಿದೇಶಿ ಪ್ರತಿನಿಧಿಗಳು, ಈ ನೆಲದ ಚರಿತ್ರೆಯಿಂದ ಪ್ರಭಾವಿತರಾಗಿದ್ದಾರೆ. ಸ್ಮಾರಕಗಳನ್ನು ಕಂಡು ಪುಳಕಿತರಾಗಿದ್ದಾರೆ. ಈ ಪ್ರತಿನಿಧಿಗಳಿಗೆ ಹಂಪಿಯ 25 ಗೈಡ್‌ಗಳು ಮಾರ್ಗದರ್ಶನ ಮಾಡುತ್ತಿದ್ದಾರೆ. ಹಂಪಿಯ ಚರಿತ್ರೆ ಹಾಗೂ ಸ್ಮಾರಕಗಳ ಬಗ್ಗೆ ತಿಳಿಯಪಡಿಸಲು ವಿದೇಶಿ ಪ್ರತಿನಿಧಿಗಳಿಗೆ 25 ಗೈಡ್‌ಗಳನ್ನು ನಿಯೋಜನೆ ಮಾಡಲಾಗಿದೆ. ಈ ಪ್ರವಾಸಿ ಮಾರ್ಗದರ್ಶಿಗಳು ಹಂಪಿ ನೆಲದ ಚರಿತ್ರೆಯನ್ನು ಪ್ರತಿನಿಧಿಗಳಿಗೆ ತಿಳಿಯಪಡಿಸುತ್ತಿದ್ದಾರೆ. ಹಂಪಿಯ ಸ್ಮಾರಕಗಳು, ದೇವಾಲಯ, ಮಂಟಪಗಳನ್ನು ವೀಕ್ಷಣೆ ಮಾಡಿರುವ ವಿದೇಶಿ ಪ್ರತಿನಿಧಿಗಳು, ವಿಜಯನಗರ ಶೈಲಿಯ ವಾಸ್ತುಶಿಲ್ಪಗಳನ್ನು ಕಂಡು ಖುಷಿಯಾಗಿದ್ದಾರೆ.

Latest Videos

undefined

ಕಲ್ಲಿನತೇರು, ಸಪ್ತಸ್ವರ ಮಂಟಪ ವೀಕ್ಷಣೆ: ಹಂಪಿಯ ವಿಜಯ ವಿಠ್ಠಲ ದೇವಾಲಯದ ಆವರಣದಲ್ಲಿರುವ ಕಲ್ಲಿನತೇರು, ಸಪ್ತಸ್ವರ ಮಂಟಪ, ಕಲ್ಯಾಣ ಮಂಟಪ, ಸರಸ್ವತಿ ಮಂಟಪಗಳನ್ನು ವೀಕ್ಷಿಸಿದ ಪ್ರತಿನಿಧಿಗಳು, ಈ ಸ್ಮಾರಕಗಳನ್ನು ಕಂಡು ಪುಳಕಿತರಾದರು. ಸಪ್ತಸ್ವರ ಸಂಗೀತ ಮಂಟಪದ ನಾದವನ್ನೂ ಆಲಿಸಿದರು. ಕಲ್ಲಿನತೇರು ಮಂಟಪ ವೀಕ್ಷಣೆ ವೇಳೆ ಪ್ರತಿನಿಧಿಗಳು ತಮ್ಮ ಮೊಬೈಲ್‌ ಕ್ಯಾಮೆರಾಗಳಲ್ಲಿ ಮಂಟಪದ ಚಿತ್ರಗಳನ್ನು ಸೆರೆ ಹಿಡಿದರು. ಕಲ್ಲಿನತೇರಿನ ಸ್ಮಾರಕದ ಮಹತ್ವವನ್ನು ಪ್ರವಾಸಿ ಮಾರ್ಗದರ್ಶಿಗಳಿಂದ ವಿವರಣೆ ಪಡೆದ ಪ್ರತಿನಿಧಿಗಳು, ಇದೊಂದು ಭವ್ಯ ಸ್ಮಾರಕ ಎಂದು ಉದ್ಗಾರ ತೆಗೆದರು. ಈ ಸ್ಮಾರಕದ ಬಳಿ ಫೋಟೊಗಳನ್ನು ತೆಗೆಸಿಕೊಂಡರು.

ರಾಜ್ಯದಲ್ಲಿ ಮಳೆ ಕೊರತೆ: ಮೋಡ ಬಿತ್ತನೆಗೆ ಸರ್ಕಾರದಿಂದ ಅನುಮತಿ

ಕಲ್ಲಿನತೇರು, ಸಪ್ತಸ್ವರ ಮಂಟಪಕ್ಕೆ ವಿದ್ಯುದೀಪಾಲಂಕಾರ ಮಾಡಲಾಗಿತ್ತು. ಈ ಸ್ಮಾರಕಗಳ ಜತೆಗೆ ಇನ್ನುಳಿದ ಸ್ಮಾರಕಗಳನ್ನು ಕೂಡ ಪ್ರತಿನಿಧಿಗಳು ವೀಕ್ಷಣೆ ಮಾಡಿದರು. ಬಳಿಕ ವಿಜಯ ವಿಠ್ಠಲ ದೇವಾಲಯದ ಬಳಿ ಸಂಗೀತ, ನೃತ್ಯವನ್ನು ವೀಕ್ಷಿಸಿದರು. ಭಾರತೀಯ ಸಂಗೀತ, ನೃತ್ಯ ವೀಕ್ಷಣೆ ಮಾಡಿದ ಪ್ರತಿನಿಧಿಗಳು, ದೇಸಿ ಕಲೆಗೆ ಮಾರು ಹೋದರು. ಹಂಪಿಯ ಕಮಲ ಮಹಲ್‌, ರಾಣಿ ಸ್ನಾನಗೃಹ ಸೇರಿದಂತೆ ವಿವಿಧ ಸ್ಮಾರಕಗಳನ್ನು ಕೂಡ ವೀಕ್ಷಣೆ ಮಾಡಿದ ಪ್ರತಿನಿಧಿಗಳಿಗೆ ಪ್ರವಾಸಿ ಗೈಡ್‌ಗಳು ಮಾರ್ಗದರ್ಶನ ಮಾಡಿದರು. ವಿಜಯನಗರ ಸಾಮ್ರಾಜ್ಯದ ವೈಭವ, ಶ್ರೀಕೃಷ್ಣದೇವರಾಯರ ಆಳ್ವಿಕೆ, ಸುವರ್ಣಯುಗದ ಬಗ್ಗೆ ಪ್ರವಾಸಿ ಮಾರ್ಗದರ್ಶಿಗಳು ಜಿ- 20 ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ.

ವಿಶ್ವ ಪರಂಪರೆ ತಾಣವಾಗಿರುವ ಹಂಪಿಯ ಸ್ಮಾರಕಗಳ ಸಂರಕ್ಷಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಮಾಹಿತಿ ಈ ತಂಡ ಮಾಹಿತಿ ಪಡೆದಿದೆ. ಭಾರತೀಯ ಪರಂಪರೆಗೆ ಜೀವಂತ ಸಾಕ್ಷಿಯಾಗಿರುವ ಹಂಪಿಯ ಸ್ಮಾರಕಗಳನ್ನು ಕಂಡು ಸಂತಸಗೊಂಡಿರುವ ಈ ಪ್ರತಿನಿಧಿಗಳು, ಇವೋಲ್‌ ಬ್ಯಾಕ್‌ ಹೋಟೆಲ್‌ನಲ್ಲಿ ಸಾಂಸ್ಕೃತಿಕ ವಿನಿಮಯ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮ್ಯಾರಥಾನ್‌ ಮೀಟಿಂಗ್‌ ಕೂಡ ಮಾಡಿದೆ. ಕಲೆ, ವಾಸ್ತುಶಿಲ್ಪ, ಪರಂಪರೆಗೆ ತನ್ನದೇ ಆದ ಕೊಡುಗೆ ನೀಡಿರುವ ವಿಜಯನಗರ ಸಾಮ್ರಾಜ್ಯದ ಸ್ಮಾರಕಗಳನ್ನು ವೀಕ್ಷಣೆ ಮಾಡಿರುವ ಜಿ- 20 ರಾಷ್ಟ್ರಗಳ ಪ್ರತಿನಿಧಿಗಳು ಈ ನೆಲದ ಭವ್ಯ ಇತಿಹಾಸದಿಂದ ಪ್ರಭಾವಿತರಾಗಿದ್ದು, ಭಾರತದ ಐತಿಹಾಸಿಕತೆಗೆ ಮಾರು ಹೋಗಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಪ್ರವಾಸಿ ಮಾರ್ಗದರ್ಶಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

30 ಕಡೆ ಇರಿದು ಹಿಂದೂ ಕಾರ್ಯಕರ್ತನ ಕೊಲೆ: ಸಿ.ಟಿ.ರವಿ

ಪ್ರವಾಸಿಗರಿಗೂ ಖುಷಿ: ಜಿ- 20 ಶೃಂಗಸಭೆ ಹಿನ್ನೆಲೆಯಲ್ಲಿ ಹಂಪಿಯನ್ನು ಶೃಂಗಾರ ಮಾಡಲಾಗಿದೆ. ಶ್ರೀವಿರೂಪಾಕ್ಷೇಶ್ವರ ರಥಬೀದಿಯನ್ನು ಸುಂದರಗೊಳಿಸಲಾಗಿದೆ. ದೇವಾಲಯ, ಮಂಟಪಗಳಿಗೆ ವಿದ್ಯುದೀಪಾಲಂಕಾರ ಮಾಡಲಾಗಿದೆ. ಇಡೀ ಹಂಪಿ ನವವಧುವಿನಂತೆ ಸಿಂಗಾರಗೊಂಡಿರುವುದರಿಂದ ಪ್ರವಾಸಿಗರು ಕೂಡ ಖುಷಿಯಾಗಿದ್ದಾರೆ. ಹಂಪಿಯ ವೀಕ್ಷಣೆಗೆ ಪ್ರವಾಸಿಗರಿಗೂ ಯಾವುದೇ ನಿರ್ಬಂಧ ವಿಧಿಸಲಾಗಿಲ್ಲ. ಹಾಗಾಗಿ ಪ್ರವಾಸಿಗರು ಕೂಡ ಖುಷಿಯಾಗಿ ಹಂಪಿಯ ಸ್ಮಾರಕಗಳನ್ನು ವೀಕ್ಷಿಸುತ್ತಿದ್ದಾರೆ.

click me!