ಸೈಬರ್ ವಂಚಕರ ಬಂಧನಕ್ಕೆ ಹೋದ ಕರ್ನಾಟಕ ಪೊಲೀಸರು ಕೇರಳದಲ್ಲಿ 3.96 ಲಕ್ಷ ರು. ಲಂಚಕ್ಕೆ ಸಿಕ್ಕಿಬಿದ್ದ ಘಟನೆ ನಡೆದಿದ್ದು, ನಾಲ್ಕು ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ.
ಬೆಂಗಳೂರು (ಆ.4): ಕೇರಳ ಪೊಲೀಸರಿಂದ ವೈಟ್ ಫೀಲ್ಡ್ ಸಿಇಎನ್ ಪೊಲೀಸರ ಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್ ಪೆಕ್ಟರ್ ಸಹಿತ ನಾಲ್ವರು ಪೊಲೀಸರನ್ನು ಸಸ್ಪೆಂಡ್ ಮಾಡಲಾಗಿದೆ. ಎಸಿಪಿ ವರದಿ ಆಧರಿಸಿ ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ್ ಅವರು ಈ ಆದೇಶ ಹೊರಡಿಸಿದ್ದಾರೆ. ಇನ್ಸ್ ಪೆಕ್ಟರ್ ಶಿವಪ್ರಕಾಶ್, ಹೆಡ್ ಕಾನ್ಸ್ ಟೇಬಲ್ ಗಳಾದ ವಿಜಯ್ ಕುಮಾರ್, ಶಿವಾನಿ, ಕಾನ್ಸ್ ಟೇಬಲ್ ಸಂದೇಶ್ ವಜಾಗೊಂಡಿರುವ ಪೊಲೀಸರಾಗಿದ್ದಾರೆ.
ಘಟನೆ ಹಿನ್ನೆಲೆ: ಆನ್‌ಲೈನ್ ವಂಚನೆ ಪ್ರಕರಣದ ಆರೋಪಿಯಿಂದ 3.96 ಲಕ್ಷ ರು. ಲಂಚ ಸ್ವೀಕರಿಸಿದ ಆರೋಪದ ಮೇರೆಗೆ ಬೆಂಗಳೂರಿನ ವೈಟ್‌ಫೀಲ್ಡ್ ವಿಭಾಗದ ಸಿಇಎನ್ ಠಾಣೆ ಇನ್ಸ್‌ಪೆಕ್ಟರ್ ಹಾಗೂ ನಾಲ್ವರು ಪೊಲೀಸರನ್ನು ಕೇರಳದ ಕೊಚ್ಚಿ ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಟ್ಟು ಕಳುಹಿಸಿದ ಘಟನೆ ನಡೆದಿತ್ತು.
ಹೊರ ರಾಜ್ಯದಲ್ಲಿನ ರಾಜ್ಯ ಪೊಲೀಸರ ಈ ಭ್ರಷ್ಟಾಚಾರ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಲಂಚ ಸ್ವೀಕರಿಸಿದ ಕಳಂಕಕ್ಕೆ ಗುರಿಯಾದ ಇನ್‌ಸ್ಪೆಕ್ಟರ್ ಶಿವಪ್ರಕಾಶ್, ಹೆಡ್ ಕಾನ್‌ಸ್ಟೇಬಲ್‌ಗಳಾದ ವಿಜಯ್‌ಕುಮಾರ್, ಶಿವಾನಿ ಹಾಗೂ ಕಾನ್‌ಸ್ಟೇಬಲ್ ಸಂದೇಶ್‌ರನ್ನು ಗುರುವಾರ ಅಮಾನತುಗೊಳಿಸಿದ್ದಾರೆ. ಈ ಪ್ರಕರಣ ಸಂಬಂಧ ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಎಸ್.ಗಿರೀಶ್ ಅವರನ್ನು ಬುಧವಾರ ರಾತ್ರಿಯೇ ಸಂಪರ್ಕಿಸಿದ್ದ ಕೊಚ್ಚಿ ಡಿಸಿಪಿ ಮಾಹಿತಿ ನೀಡಿದರು ಎನ್ನಲಾಗಿದೆ.
Bengaluru City Police: ಸೈಬರ್ ವಂಚಕನಿಂದ 3 ಲಕ್ಷಕ್ಕೆ ಕೈಯೊಡ್ಡಿ, ಕೇರಳ ಪೊಲೀಸರಿಗೆ ಸಿಕ್ಕಿಬಿದ್ದರು
ಏನಿದು ಪ್ರಕರಣ?: ಉದ್ಯೋಗ ಕೊಡಿಸುವ ನೆಪದಲ್ಲಿ ಸಾಫ್‌್ಟವೇರ್ ಎಂಜಿನಿಯರ್ ಚಂದಕ್ ಶ್ರೀಕಾಂತ್ ಅವರಿಂದ 26 ಲಕ್ಷ ರು. ವಸೂಲಿ ಮಾಡಿ ಆನ್‌ಲೈನ್ ವಂಚಕರು ಮೋಸ ಮಾಡಿದ್ದರು. ಈ ಬಗ್ಗೆ ಜೂ.14 ರಂದು ವೈಟ್‌ಫೀಲ್ಡ್ ವಿಭಾಗದ ಸಿಇಎನ್ ಠಾಣೆಯಲ್ಲಿ ಟೆಕ್ಕಿ ಶ್ರೀಕಾಂತ್ ದೂರು ದಾಖಲಿಸಿದ್ದರು. ಅದರನ್ವಯ ತನಿಖೆ ಆರಂಭಿಸಿದ ಇನ್ಸ್‌ಪೆಕ್ಟರ್ ಶಿವಪ್ರಕಾಶ್ ತಂಡವು, ಹಣ ವರ್ಗಾವಣೆ ಜಾಡು ಹಿಡಿದಾಗ ಮಡಿಕೇರಿ ಜಿಲ್ಲೆಯ ಐಸಾಕ್ ಎಂಬಾತನ ಐಸಿಐಸಿಐ ಬ್ಯಾಂಕ್ ಖಾತೆಗೆ 10 ಸಾವಿರ ರು. ವರ್ಗಾವಣೆಯಾಗಿರುವ ಸಂಗತಿ ಗೊತ್ತಾಯಿತು. ಕೂಡಲೇ ಆತನನ್ನು ವಶಕ್ಕೆ ಪಡೆದು ಪೊಲೀಸರು ಪ್ರಶ್ನಿಸಿದಾಗ ರಾಜೇಶ್ ಎಂಬಾತನ ಪರವಾಗಿ ತಾನು ಬ್ಯಾಂಕ್ ಖಾತೆ ತೆರೆದಿದ್ದಾಗಿ ಹೇಳಿಕೆ ನೀಡಿದ್ದ. ಬಳಿಕ ರಾಜೇಶ್‌ನನ್ನು ಪೊಲೀಸರು ಗ್ರಿಲ್ ಮಾಡಿದಾಗ ಆತ ಕೇರಳ ಮೂಲದ ಪರೇಶ್ ಹಾಗೂ ನಿಶಾಂತ್ ಹೆಸರು ಬಾಯ್ಬಿಟ್ಟ. ಹೀಗೆ ವಂಚನೆ ಜಾಲ ಬಿಚ್ಚಿಕೊಳ್ಳುತ್ತ ಸಾಗಿದೆ. ಈ ಮಾಹಿತಿ ಆಧರಿಸಿ ಕೇರಳಕ್ಕೆ ತೆರಳಿದ ಪೊಲೀಸರು, ಅಲ್ಲಿ ಪರೇಶ್ ಹಾಗೂ ನಿಶಾಂತ್‌ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಇಡೀ ವಂಚನೆ ಜಾಲದ ಸೂತ್ರಧಾರ ಮಲ್ಲಪ್ಪುರಂ ಜಿಲ್ಲೆಯ ನೌಶಾದ್ ಎಂಬುದು ಗೊತ್ತಾಗಿದೆ.
ಸಿಂಧು ಸೂರ್ಯಕುಮಾರ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್, ಕೋರ್ಟ್‌ಗೆ ಶರಣಾದ ಮಾಜಿ ಜಡ್ಜ್!
ಈ ಸುಳಿವು ಬೆನ್ನತ್ತಿ ಕೇರಳಕ್ಕೆ ತೆರಳಿದ ಪಿಐ ಶಿವಪ್ರಕಾಶ್ ನೇತೃತ್ವದ ತಂಡವು, ಜು.31 ರಂದು ಸೋಮವಾರ ನೌಶಾದ್ ಹಾಗೂ ಆತನ ಸಹಚರರಾದ ನಿಖಿಲ್ ಮತ್ತು ಅಖಿಲ್‌ನನ್ನು ಎರ್ನಾಕುಲಂನ ಪಲ್ಲುರ್ತಿಯಲ್ಲಿ ಸೆರೆ ಹಿಡಿಯಿತು. ಆದರೆ ಆಪಾದಿತ ಅಖಿಲ್‌ನನ್ನು ಬಿಡುಗಡೆಗೊಳಿಸಲು 3.96 ಲಕ್ಷ ರು. ಅನ್ನು ಇನ್ಸ್‌ಪೆಕ್ಟರ್ ಶಿವಪ್ರಕಾಶ್ ತಂಡ ವಸೂಲಿ ಮಾಡಿತ್ತು ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಕಲಂಶ್ಮೇರಿ ಠಾಣೆಗೆ ಅಖಿಲ್ ಪರ ವಕೀಲರು ದೂರು ನೀಡಿದ್ದಾರೆ. ಅಲ್ಲದೆ ಪೊಲೀಸರ ಕಾರಿನಲ್ಲಿ 3 ಲಕ್ಷ ರು. ಹಣ ಕೂಡ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
5 ಸಾವಿರ ರು.ಗೆ ಕಾಯುವಾಗ ಸಿಕ್ಕಿಬಿದ್ರು: ಅಖಿಲ್‌ನಿಂದ ವೈಟ್‌ಫೀಲ್ಡ್ ಪೊಲೀಸರು 4 ಲಕ್ಷ ರು. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಆಗ ಒಬ್ಬ ಆರೋಪಿ ಮೂರು ಲಕ್ಷ ರು. ನೀಡಿದ್ದ. ಇದನ್ನು ಆರೋಪಿ ಕೊಟ್ಟಬಳಿಕ ಅವರಿಂದ ಕೆಲವು ಪತ್ರಗಳಿಗೆ ಸಹಿ ಹಾಕಿಸಿಕೊಂಡು ಬಿಡುಗಡೆ ಮಾಡಿದ್ದರು. ಆದರೆ ಇನ್ನೊಬ್ಬ ಆರೋಪಿಗೆ ಒಂದು ಲಕ್ಷ ರು. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಆತ 95 ಸಾವಿರ ರು. ಮೊದಲು ನೀಡಿದ. ಉಳಿದ 5 ಸಾವಿರ ರು. ಹಣಕ್ಕೆ ಪೊಲೀಸರು ಕಾಯುತ್ತಿದ್ದಾಗ ಸ್ಥಳೀಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎಸಿಪಿ ಕಳುಹಿಸಿದ್ದ ಡಿಸಿಪಿ ಗಿರೀಶ್: ಕೊಚ್ಚಿಯಲ್ಲಿ ಸಿಇಎನ್ ಠಾಣೆ ಪೊಲೀಸರು ಸಿಕ್ಕಿಬಿದ್ದಿರುವ ವಿಚಾರ ತಿಳಿದ ಕೂಡಲೇ ಡಿಸಿಪಿ ಎಸ್.ಗಿರೀಶ್ ಅವರು, ಅಲ್ಲಿನ ಬೆಳವಣಿಗೆಗಳ ನಿರ್ವಹಿಸಲು ಎಸಿಪಿ ಅವರನ್ನು ಕಳುಹಿಸಿದರು. ಕೊಚ್ಚಿ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ವೈಟ್‌ಫೀಲ್ಡ್ ಉಪ ವಿಭಾಗದ ಎಸಿಪಿ ಮಾಹಿತಿ ಪಡೆದರು. ನಂತರ ವಶಕ್ಕೆ ಪಡೆದಿದ್ದ ಪೊಲೀಸರಿಗೆ ಮುಂದಿನ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿ ಕೊಚ್ಚಿ ಪೊಲೀಸರು ಬಿಟ್ಟು ಕಳುಹಿಸಿದ್ದಾರೆ.
ರಾಜ್ಯಕ್ಕೆ ಅಗೌರವ:-ಆಯುಕ್ತರು ಕೆಂಡ: ಕೊಚ್ಚಿಯಲ್ಲಿ ಸಿಇಎನ್ ಪೊಲೀಸರು ಲಂಚ ಸ್ವೀಕರಿಸಿದ ಆರೋಪ ಪ್ರಕರಣದಿಂದ ತೀವ್ರ ಮುಜುಗರಕ್ಕೊಳಗಾದ ಆಯುಕ್ತ ಬಿ.ದಯಾನಂದ್ ಅವರು, ರಾಜ್ಯದ ಪೊಲೀಸ್ ಇಲಾಖೆಗೆ ಅಗೌರವ ತಂದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಳಿಕ ಪ್ರಕರಣದ ಪ್ರಾಥಮಿಕ ಮಾಹಿತಿ ಪಡೆದ ಆಯುಕ್ತರು, ಕರ್ತವ್ಯಲೋಪದವೆಸಗಿದ ಆರೋಪದ ಮೇರೆಗೆ ಸಿಇಎನ್ ಠಾಣೆ ಪಿಐ ಹಾಗೂ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಿ ಬಳಿಕ ಇಲಾಖಾ ಮಟ್ಟದ ವಿಚಾರಣೆಗೆ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.
ಆನ್‌ಲೈನ್ ವಂಚನೆ ಪ್ರಕರಣ ಸಂಬಂಧ ಕೇರಳ ರಾಜ್ಯದಲ್ಲಿ ಬಂಧಿಸುವ ವೇಳೆ ಆರೋಪಿತನಿಂದ ಲಂಚ ಸ್ವೀಕರಿಸಿದ ಆರೋಪದ ಮೇರೆಗೆ ವೈಟ್‌ಫೀಲ್ಡ್ ವಿಭಾಗದ ಸಿಇಎನ್ ಠಾಣೆ ಇನ್ಸ್‌ಪೆಕ್ಟರ್ ಹಾಗೂ ನಾಲ್ವರು ಪೊಲೀಸರನ್ನು ಆಯುಕ್ತರು ಅಮಾನತುಗೊಳಿಸಿದ್ದಾರೆ. ಈ ಪ್ರಕರಣದ ಬಗ್ಗೆ ಕೊಚ್ಚಿ ಪೊಲೀಸರಿಂದ ವರದಿ ಪಡೆದು ಸತ್ಯಾಸತ್ಯತೆ ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತದೆ.
-ರಮಣ ಗುಪ್ತ, ಹೆಚ್ಚುವರಿ ಆಯುಕ್ತ (ಪೂರ್ವ), ಬೆಂಗಳೂರು