ಕರುನಾಡಿನ ಹೆಗ್ಗುರುತು ನಾಡಪ್ರಭು ಕೆಂಪೇಗೌಡ: ಡಾ.ಸಿ.ಎನ್‌.ಅಶ್ವತ್ಥನಾರಾಯಣ

Published : Jun 27, 2023, 11:12 AM IST
ಕರುನಾಡಿನ ಹೆಗ್ಗುರುತು ನಾಡಪ್ರಭು ಕೆಂಪೇಗೌಡ: ಡಾ.ಸಿ.ಎನ್‌.ಅಶ್ವತ್ಥನಾರಾಯಣ

ಸಾರಾಂಶ

ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ, ಅತ್ಯಂತ ವಾಸಯೋಗ್ಯ ನಗರ, ನವೋದ್ಯಮಿಗಳ ನೆಚ್ಚಿನ ತಾಣ ಎಂಬೆಲ್ಲ ಶೀರ್ಷಿಕೆಯ ಸುದ್ದಿಯನ್ನು ನಮ್ಮ ಬೆಂಗಳೂರಿನ ಕುರಿತಾಗಿ ಕೇಳುವಾಗ ಅರೆಕ್ಷಣ ಕಣ್ಮುಚ್ಚಿ ನಾಡಪ್ರಭು ಕೆಂಪೇಗೌಡರನ್ನು ಮನಸಾರೆ ಸ್ಮರಿಸುತ್ತೇನೆ: ಡಾ.ಸಿ.ಎನ್‌.ಅಶ್ವತ್ಥನಾರಾಯಣ

ಬೆಂಗಳೂರು(ಜೂ.27):  ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದ ರಕ್ಷಣೆಯ ಜತೆ ಈ ಪ್ರದೇಶವನ್ನು ಪ್ರಗತಿಯ ಪಥದಲ್ಲಿ ಕೊಂಡೊಯ್ಯಲು ಕೆಂಪೇಗೌಡರ ಶ್ರಮಿಸಿದ ಬಗೆ ನಿಜಕ್ಕೂ ರೋಚಕ. ಇಂದು ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸುವ ಪ್ರತಿಯೊಬ್ಬರಿಗೂ 108 ಅಡಿ ಎತ್ತರದ ಕಂಚಿನ ಭವ್ಯ ಪ್ರತಿಮೆ ನಾಡಪ್ರಭು ಕೆಂಪೇಗೌಡರ ಕಥೆಯನ್ನು ಹೇಳುತ್ತದೆ. ಜೊತೆಗೆ ಬ್ರ್ಯಾಂಡ್‌ ಬೆಂಗಳೂರಿನ ಮೂಲಪುರುಷನ ಪರಿಚಯ ಮಾಡಿಕೊಡುತ್ತದೆ
ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ, ಅತ್ಯಂತ ವಾಸಯೋಗ್ಯ ನಗರ, ನವೋದ್ಯಮಿಗಳ ನೆಚ್ಚಿನ ತಾಣ ಎಂಬೆಲ್ಲ ಶೀರ್ಷಿಕೆಯ ಸುದ್ದಿಯನ್ನು ನಮ್ಮ ಬೆಂಗಳೂರಿನ ಕುರಿತಾಗಿ ಕೇಳುವಾಗ ಅರೆಕ್ಷಣ ಕಣ್ಮುಚ್ಚಿ ನಾಡಪ್ರಭು ಕೆಂಪೇಗೌಡರನ್ನು ಮನಸಾರೆ ಸ್ಮರಿಸುತ್ತೇನೆ. ಹೌದು, ನಮ್ಮ ಬೆಂಗಳೂರನ್ನು ನಿರ್ಮಿಸಿದ ನಾಡಪ್ರಭು ಕೆಂಪೇಗೌಡರ ಕುರಿತಾಗಿ ಆಳವಾಗಿ ತಿಳಿದುಕೊಳ್ಳುವ ಹಂಬಲ ಬಾಲ್ಯದಿಂದಲೂ ಮನಸ್ಸಿನಲ್ಲಿ ಹಾಗೆಯೇ ಉಳಿದಿತ್ತು. ಕೆಂಪೇಗೌಡರ ವೀರ ಸಮಾಧಿಯಿರುವ ರಾಮನಗರ ಜಿಲ್ಲೆಯ ಕೆಂಪಾಪುರದ ಸನಿಹದಲ್ಲೇ ಇರುವ ಚಿಕ್ಕಕಲ್ಯಾ ಗ್ರಾಮದಲ್ಲಿ ಜನಿಸಿದ ನನಗೆ ನಾಡಪ್ರಭುಗಳ ಸಾಹಸಗಾಥೆಯ ಕುರಿತು ಕೇಳುವ ಜತೆ ಅವರ ಕಾಲದ ಕೋಟೆ ಕೊತ್ತಲುಗಳು, ಕಲ್ಯಾಣಿಗಳ ಬಗ್ಗೆ ತಿಳಿಯುವ ಸೌಭಾಗ್ಯವೂ ದೊರೆಯಿತು. ರಾಜಕೀಯ ಜೀವನವನ್ನು ಆರಂಭಿಸಿದ ಸಂದರ್ಭದಲ್ಲಿ ನಾಡಪ್ರಭು ಕೆಂಪೇಗೌಡರ ದೂರದೃಷ್ಟಿನನ್ನ ಆಡಳಿತ ವೈಖರಿಯಲ್ಲಿ ಆಳವಾಗಿ ಪ್ರಭಾವ ಬೀರಲಾರಂಭಿಸಿತು.

The Difference Between Politician and Stateman is that a Politician Thinks about the Next Election While the Stateman Think about the Next Generation ಎಂಬ ಮಾತಿದೆ. ಅದರಂತೆಯೇ, ಕೆಂಪೇಗೌಡರು ಬೆಂಗಳೂರನ್ನು ಕಟ್ಟುವಾಗ ಮುಂದಿನ ಹಲವು ತಲೆಮಾರುಗಳ ಮುನ್ನೋಟವನ್ನಿಟ್ಟುಕೊಂಡಿದ್ದರು. ಅವರ ಈ ಮುಂದಾಲೋಚನೆಯನ್ನು ಪ್ರೇರಣೆಯಾಗಿ ಪಡೆದು ಮಲ್ಲೇಶ್ವರದ ಶಾಸಕನಾಗಿ ನಾನು ಶಿಕ್ಷಣ, ಆರೋಗ್ಯ, ಮೂಲಸೌಕರ್ಯ, ಜಲ ಸಂರಕ್ಷಣೆ, ನಾಗರಿಕರ ಹಿತರಕ್ಷಣೆ ಸಹಿತ ಅನೇಕ ಕಾರ್ಯಕ್ರಮಗಳನ್ನು ಯೋಜನಾಬದ್ಧವಾಗಿ ಕಾರ್ಯರೂಪಕ್ಕೆ ತಂದಿದ್ದೇನೆ. ಐಟಿ-ಬಿಟಿ ಸಚಿವನಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ನಮ್ಮ ಬೆಂಗಳೂರಿನ ತಂತ್ರಜ್ಞಾನ ವಲಯವನ್ನು ಸುಧಾರಿಸುವ ಜತೆ ಈ ಪರಿಸರ ವ್ಯವಸ್ಥೆಯನ್ನು ರಾಜ್ಯಾದ್ಯಂತ ವಿಸ್ತರಿಸುವ ದಿಶೆಯಲ್ಲಿ ಬಿಯಾಂಡ್‌ ಬೆಂಗಳೂರು ಎಂಬ ಉಕ್ರಮವನ್ನು ಜಾರಿಗೆ ತರುವ ಮೂಲಕ ಕರುನಾಡನ್ನು ಪ್ರಗತಿಯ ಪಥದಲ್ಲಿ ಕೊಂಡೊಯ್ಯಲು ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ.

ಕೆಂಪೇಗೌಡ ಪ್ರಶಸ್ತಿಗೆ ಜಯದೇವ ಆಸ್ಪತ್ರೆ, ನಿತಿನ್‌ ಕಾಮತ್‌, ಅದಿತಿ ಅಶೋಕ್‌ ಆಯ್ಕೆ: 5 ಲಕ್ಷ ರೂ. ನಗದು ಘೋಷಣೆ

ಕೆಂಪೇಗೌಡರ ಪ್ರತಿಮೆಯ ಕನಸು

ವಿಜಯ ನಗರ ಸಾಮ್ರಾಜ್ಯದ ಸಾಮಂತರಾಗಿ ಇಂತಹ ಅದ್ಭುತ ನಗರವನ್ನು ನಿರ್ಮಿಸಿದ ನಾಡಪ್ರಭುಗಳನ್ನು ಬೆಂಗಳೂರಿಗೆ ಅಥವಾ ಹಳೆ ಮೈಸೂರು ಪ್ರಾಂತ್ಯಕ್ಕೆ ಸೀಮಿತವಾಗಿಸಬಾರದು ಎಂಬುದು ನನ್ನ ಇಂಗಿತವಾಗಿತ್ತು. ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆ ಈ ಕುರಿತು ಚರ್ಚಿಸುವ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ 108 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆಯನ್ನು ನಿರ್ಮಿಸುವ ಆಶಯ ವ್ಯಕ್ತಪಡಿಸಿದೆ. ಈ ಆಲೋಚನೆಯ ಸದುದ್ದೇಶವನ್ನು ಅರಿತ ಅವರು ಕೂಡಲೇ ಒಪ್ಪಿಗೆ ನೀಡಿ, ಪ್ರತಿಮೆ ನಿರ್ಮಾಣದ ಜವಾಬ್ದಾರಿಯನ್ನು ನನಗೇ ವಹಿಸಿದರು. ಪುಣ್ಯಪುರುಷನ ಕುರಿತು ವಿಶ್ವಕ್ಕೇ ತಿಳಿಸುವ ಪುಣ್ಯ ಕಾರ್ಯವನ್ನು ಶ್ರದ್ಧಾ ಭಕ್ತಿಯಿಂದ ಆರಂಭಿಸಿದೆ.

ಆದಿಚುಂಚನಗಿರಿ ಶ್ರೀಗಳ ಸಲಹೆ ಹಾಗೂ ಮಾರ್ಗದರ್ಶನದ ಜತೆ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ಸಂಪೂರ್ಣ ಬೆಂಬಲ ಮತ್ತು ಖ್ಯಾತ ಶಿಲ್ಪಿಗಳಾದ ರಾಮ… ಸುತಾರ್‌ ಅವರ ತಂಡದ 14 ತಿಂಗಳುಗಳ ಪರಿಶ್ರಮದ ಫಲವಾಗಿ ನಿರ್ವಿಘ್ನವಾಗಿ ಮೂರ್ತಿ ನಿರ್ಮಾಣ ಕಾರ್ಯ ಸಂಪನ್ನಗೊಂಡಿತು. ಅಷ್ಟಕ್ಕೇ ಸಮಾಧಾನವಾಗಲಿಲ್ಲ. ನಾಡಪ್ರಭುಗಳಿಗೆ ನಾಡಿನ ಪ್ರತಿ ಜಿಲ್ಲೆಯ ಮೃತ್ತಿಕೆಯನ್ನು ಸಮರ್ಪಿಸಬೇಕೆಂಬ ಸಂಕಲ್ಪ ನನ್ನದಾಗಿತ್ತು. ಇದಕ್ಕಾಗಿಯೇ ವಿಶೇಷ ವಾಹನಗಳನ್ನು ಸಿದ್ಧಪಡಿಸಲಾಯಿತು. ರಾಜ್ಯದ ಮೂಲೆ ಮೂಲೆಗೂ ಸಂಚರಿಸಿ ಪ್ರತಿ ಜಿಲ್ಲೆಯ ಪುಣ್ಯ ಸ್ಥಳಗಳ ಪವಿತ್ರ ಮೃತ್ತಿಕೆಯನ್ನು ಸಂಗ್ರಹಿಸಿ ತಂದು ಪ್ರತಿಮೆಯ ಸುತ್ತ ನಿರ್ಮಿಸಿರುವ ನಾಲ್ಕು ಗೋಪುರಗಳಿಗೆ ಅರ್ಪಿಸಲಾಯಿತು. Statute of Proseperty- ಪ್ರಗತಿಯ ಪ್ರತಿಮೆ’ ಎಂದು ನಾಮಕರಣ ಮಾಡಿರುವ 108 ಅಡಿ ಎತ್ತರದ ಈ ಭವ್ಯ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 2022ರ ನವೆಂಬರ್‌ 11ರಂದು ಅನಾವರಣ ಮಾಡಿದರು.

ಕೆಂಪೇಗೌಡ ಥೀಮ್‌ ಪಾರ್ಕ್

ಈ ಪ್ರತಿಮೆಯ ಸುತ್ತ 23 ಎಕರೆ ಪ್ರದೇಶದಲ್ಲಿ ಥೀಮ್‌ ಪಾರ್ಕ್ ನಿರ್ಮಿಸಲು ನಮ್ಮ ಸರ್ಕಾರದ ಅವಧಿಯಲ್ಲಿಯೇ ಯೋಜನೆ ರೂಪಿಸಲಾಗಿದೆ. ಮುಂದಿನ ತಲೆಮಾರಿಗೆ ಕೆಂಪೇಗೌಡರ ಪರಿಚಯ ಮಾಡಿಕೊಡುವ ಈ ಪರಿಕಲ್ಪನೆಯಲ್ಲಿ ಅವರ ಜೀವನಗಾಥೆಯ ಪಕ್ಷಿನೋಟ ಇರಲಿದೆ. ರಾಜಕೀಯ ಆಸಕ್ತ ವಿದ್ಯಾರ್ಥಿಗಳು ಕೆಂಪೇಗೌಡರ ಕುಟಿಲತೆ ಇಲ್ಲದ ರಾಜನೀತಿ, ವಿಸ್ತರಣಾವಾದವಿಲ್ಲದ ರಣನೀತಿಯ ಬಗ್ಗೆ ಅಧ್ಯಯನ ಮಾಡಬೇಕು, ವಾಸ್ತುಶಿಲ್ಪ ವಿದ್ಯಾರ್ಥಿಗಳು ಅವರ ಅವಧಿಯಲ್ಲಿ ನಿರ್ಮಾಣವಾದ ಗುಡಿ-ಗೋಪುರಗಳು, ಕೋಟೆ ಕೊತ್ತಲೆಗಳ ವಿನ್ಯಾಸದ ಬಗ್ಗೆ ಅಧ್ಯಯನ ಮಾಡಬೇಕು, ನಗರಾಭಿವೃದ್ಧಿಯ ಕುರಿತಾದ ಅವರ ದೂರದೃಷ್ಟಿಯ ಕುರಿತು ಆಳವಾಗಿ ಅಧ್ಯಯನ ಮಾಡಲು ಸಾಧ್ಯವಾಗಬೇಕು. ನಮ್ಮ ಬೆಂಗಳೂರು ಇರುವವರೆಗೂ ನಾಡಪ್ರಭು ಕೆಂಪೇಗೌಡರ ಬಗ್ಗೆ ಮಾತನಾಡಬೇಕು. ಮುಂದಿನ ತಲೆಮಾರುಗಳ ಯುವಜನತೆಗೆ, ದೇಶ ವಿದೇಶದ ಪ್ರಜೆಗಳಿಗೆ ಕೆಂಪೇಗೌಡರ ಅಭಿವೃದ್ಧಿಯ ಮಾದರಿ, ಮೌಲ್ಯಗಳು, ಆರ್ಥಿಕ ಪ್ರಜ್ಞೆ, ಜನಸ್ನೇಹಿ ನೀತಿ, ಪರಿಸರ ಕಾಳಜಿ ಇತ್ಯಾದಿಗಳ ಪರಿಚಯ ಮಾಡಿಕೊಡಬೇಕು. ಇದಕ್ಕೆಲ್ಲ ಈ ಥೀಮ… ಪಾರ್ಕ್ ಸರಿಯಾದ ಮಾರ್ಗದರ್ಶನ ನೀಡಲಿದೆ. ಈ ಎಲ್ಲ ಪ್ರಾಯೋಗಿಕ ದೃಷ್ಟಿಕೋನವನ್ನು ಪರಿಗಣನೆಗೆ ತೆಗೆದುಕೊಂಡೇ ಕೆಂಪೇಗೌಡರ 108 ಅಡಿ ಎತ್ತರದ ಭವ್ಯ ಪ್ರತಿಮೆ ಸ್ಥಾಪಿಸಿದ್ದು, ಅದು ವಲ್ಡ್‌ರ್‍ ಬುಕ್‌ ಆಫ್‌ ರೆಕಾರ್ಡ್ಸ್ಗೆ ಸೇರಿದೆ. ವಿಶ್ವದ ಯಾವುದೇ ನಗರವನ್ನು ಸ್ಥಾಪಿಸಿದವರ ಇಷ್ಟು ಎತ್ತರದ ಪ್ರತಿಮೆ ಬೇರೆಲ್ಲೂ ನೋಡಲು ಸಿಗುವುದಿಲ್ಲ. ನಾಡಿನ ಪ್ರಗತಿಯ ದ್ಯೋತಕವಾಗಿ ಈ ಪ್ರತಿಮೆ ರಾರಾಜಿಸಬೇಕು ಎಂಬ ಆಶಯದೊಂದಿಗೆ ಬಹಳಷ್ಟುಯೋಚನೆ ಮಾಡಿ ಈ ಪ್ರತಿಮೆಗೆ 'ಪ್ರಗತಿಯ ಪ್ರತಿಮೆ’ ಎಂದು ನಾಮಕರಣ ಮಾಡಿದ್ದೇವೆ.

ಪಾರಂಪರಿಕ ತಾಣಗಳ ಅಭಿವೃದ್ಧಿ

ಕೆಂಪಾಪುರದಲ್ಲಿ ಇರುವ ಕೆಂಪೇಗೌಡರ ವೀರಸಮಾಧಿಯ ಅಭಿವೃದ್ಧಿ, ಅವರಿಗೆ ಸಂಬಂಧಪಟ್ಟಪಾರಂಪರಿಕ ತಾಣಗಳ ಅಭಿವೃದ್ಧಿ ಮಾಡುವ ದಿಶೆಯಲ್ಲಿ, ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷನಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನನ್ನ ಅವಧಿಯಲ್ಲಿ ಕೈಲಾದಷ್ಟುಕೆಲಸ ಮಾಡಿದ್ದೇನೆ. ನಾಡಪ್ರಭು ಕೆಂಪೇಗೌಡರ ಅವಧಿಯ ಸುಮಾರು 46 ಪಾರಂಪರಿಕ ತಾಣಗಳನ್ನು ಮೂರು ಸಕ್ರ್ಯೂಟ್‌ಗಳಲ್ಲಿ ಗುರುತಿಸಲಾಗಿದ್ದು, ಇವುಗಳನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗಿದೆ. ಬೆಂಗಳೂರಿನ ಸುತ್ತಮುತ್ತ ಇರುವ ದೇವರಾಯನ ದುರ್ಗ, ಸಾವನದುರ್ಗ, ಹುಲಿಯೂರುದುರ್ಗ, ಭೈರವದುರ್ಗ ಹೀಗೆ ಒಂಬತ್ತು ದುರ್ಗಗಳಿವೆ. ಈ ಎಲ್ಲ ನಿಸರ್ಗ ರಮ್ಯ ತಾಣಗಳನ್ನು ಕೆಂಪೇಗೌಡ ಸಕ್ರ್ಯೂಟ್‌ಗಳ ಜತೆ ಸಂಯೋಜಿಸಿ ಆಕರ್ಷಕ ತಾಣವನ್ನಾಗಿ ಅಭಿವೃದ್ಧಿಪಡಿಸಲು ನಮ್ಮ ಸರ್ಕಾರದ ಅವಧಿಯಲ್ಲಿ ಅಗತ್ಯ ಕ್ರಮವಹಿಸಲಾಗಿದೆ. ಹಾಗೆಯೇ, ಬೆಂಗಳೂರು ವಿವಿ ಆವರಣದಲ್ಲಿ ಕೆಂಪೇಗೌಡ ಅಧ್ಯಯನ ಕೇಂದ್ರ ಸ್ಥಾಪಿಸುವ ಉದ್ದೇಶದೊಂದಿಗೆ ನಮ್ಮ ಸರ್ಕಾರದ ಅವಧಿಯಲ್ಲಿ .50 ಕೋಟಿ ಬಿಡುಗಡೆ ಮಾಡಲಾಗಿದೆ. ಇದನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ಇಂದಿನ ಸರ್ಕಾರದ ಮೇಲಿದೆ.

ಸರಿಸಾಟಿಯಿಲ್ಲದ ಆಡಳಿತಗಾರ

ತಂತ್ರಜ್ಞಾನ, ಆವಿಷ್ಕಾರ ಇರದ ಆ ದಿನಗಳಲ್ಲಿಯೇ ಅವರ ದೂರದೃಷ್ಟಿಯೋಜನೆಗಳು ಈ ಶತಮಾನದ ಯುವಜನತೆಯನ್ನು ಬೆರಗುಗೊಳಿಸುವಂತಿದೆ. ಸುಮಾರು ಐನೂರಕ್ಕೂ ವರ್ಷಗಳ ಹಿಂದೆಯೇ ವ್ಯಾಪಾರ ವಾಣಿಜ್ಯ ಚಟುವಟಿಕೆಗಳನ್ನು ಸುಗಮವಾಗಿಸಲು ಅವರು ನಿರ್ಮಿಸಿದ ಪೇಟೆಗಳು, ನೀರಾವರಿ ಸಮಸ್ಯೆ ನಿವಾರಣೆಗೆ ಕೈಗೊಂಡ ಕ್ರಮಗಳು ಹಾಗೂ ಈ ಭೂಮಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಿರಿಮೆಯ ರಕ್ಷಣೆಗಾಗಿ ನಿರ್ಮಿಸಿದ ಹಾಗೂ ಜೀರ್ಣೋದ್ಧಾರ ಮಾಡಿದ ದೇವಾಲಯಗಳನ್ನು ಇಂದಿಗೂ ನೋಡಬಹುದಾಗಿದೆ. ವಿಜಯನಗರ ಸಾಮ್ರಾಜ್ಯಕ್ಕೆ ನಿಷ್ಠರಾಗಿದ್ದು, ಬೆಂಗಳೂರು ಹಾಗೂ ಇದರ ಸುತ್ತಮುತ್ತಲಿನ ಪ್ರದೇಶದ ರಕ್ಷಣೆಯ ಜತೆ ಈ ಪ್ರದೇಶವನ್ನು ಪ್ರಗತಿಯ ಪಥದಲ್ಲಿ ಕೊಂಡೊಯ್ಯಲು ಶ್ರಮಿಸಿದ ಬಗೆ ನಿಜಕ್ಕೂ ರೋಚಕ.

ತೆರೆ ಮೇಲೆ ತೆರೆದುಕೊಳ್ತಿದೆಯಾ ಕೆಂಪೇಗೌಡರ ಚರಿತ್ರೆ?: ಅಣ್ಣವ್ರ ಮನೆ ಕದ ತಟ್ಟಿದೆ ಈ ಪಾತ್ರ..!

ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸುವ ಪ್ರತಿಯೊಬ್ಬರಿಗೂ 108 ಅಡಿ ಎತ್ತರದ ಕಂಚಿನ ಭವ್ಯ ಪ್ರತಿಮೆ ನಾಡಪ್ರಭು ಕೆಂಪೇಗೌಡರ ಕಥೆಯನ್ನು ಹೇಳುತ್ತದೆ. ದೇಶ-ವಿದೇಶದ ಜನರಿಗೆ ಬ್ರ್ಯಾಂಡ್‌ ಬೆಂಗಳೂರಿನ ಮೂಲ ಪುರುಷನ ಪರಿಚಯ ಮಾಡಿಕೊಡುತ್ತದೆ.

59 ವರ್ಷಗಳ ಸುದೀರ್ಘ ಆಡಳಿತಾವಧಿಯಲ್ಲಿ ಶತ-ಶತಮಾನಗಳ ಕಾಲ ನೆನೆಸಿಕೊಳ್ಳುವ ರೀತಿಯಲ್ಲಿ ನಮ್ಮ ಬೆಂಗಳೂರಿಗೆ ಸುಭದ್ರ ಅಡಿಪಾಯ ಹಾಕಿಕೊಟ್ಟಮಹಾಪುರುಷ ನಾಡಪ್ರಭು ಕೆಂಪೇಗೌಡರ 514ನೇ ಜಯಂತಿಯಂದು ಅವರಿಗೆ ನನ್ನ ಅಕ್ಷರ ನಮನಗಳು. ನಾಡಿನ ಸಮಸ್ತ ಜನತೆಗೆ ಕೆಂಪೇಗೌಡ ಜಯಂತಿಯ ಹಾರ್ದಿಕ ಶುಭಾಶಯಗಳು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ