
ಬೆಂಗಳೂರು(ಜೂ.27): ರಾಜ್ಯದಲ್ಲಿ ಪ್ರತಿ ವರ್ಷದ ವಾಡಿಕೆಯಂತೆ ಈ ವೇಳೆಗೆ 167 ಮಿ.ಮೀ. ಮಳೆ ಆಗಬೇಕಾಗಿತ್ತು. ಆದರೆ 66 ಮಿ.ಮೀ. ಮಾತ್ರ ಆಗಿದ್ದು, ಶೇ.58ರಷ್ಟು ಕಡಿಮೆ ಮಳೆಯಾಗಿದೆ. ಜತೆಗೆ ಶೇ.82ರಷ್ಟು ಬಿತ್ತನೆಯೂ ಕಡಿಮೆ ಆಗಿದೆ ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿದ್ದಾರೆ. ತಜ್ಞರ ಪ್ರಕಾರ, ಜು.5ರವರೆಗೆ ಮುಂಗಾರು ಮಳೆಗೆ ಅವಕಾಶವಿದೆ. ಹೀಗಾಗಿ ಇನ್ನೂ ಒಂದು ವಾರ ಕಾಯುತ್ತೇವೆ. ಮಳೆ ಬಾರದಿದ್ದರೆ ಏನೂ ಮಾಡಲಾಗದು ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಾಡಿಕೆಯಂತೆ ಈ ವೇಳೆಗೆ 82 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಬೇಕಾಗಿತ್ತು. ಆದರೆ 10.20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಚಂಡಮಾರುತ ಇದ್ದರೂ ಮಳೆಯಾಗಿಲ್ಲ. ಮಳೆ ಶುರುವಾಗಿದ್ದರೂ ರಾಜ್ಯಾದ್ಯಂತ ವಿಸ್ತರಣೆಯಾಗಿಲ್ಲ. ರೈತರು ಕಷ್ಟದ ಸ್ಥಿತಿಯಲ್ಲಿದ್ದು, ಮಳೆರಾಯ ಕರುಣೆ ತೋರಿಸುತ್ತಾನಾ ಎಂಬುದನ್ನು ನೋಡಬೇಕು ಎಂದರು.
ಟೊಮೆಟೋ ದರ 125: ಈವರೆಗಿನ ಗರಿಷ್ಠ ದಾಖಲೆ, ಗ್ರಾಹಕರ ಜೇಬಿಗೆ ಕತ್ತರಿ..!
ಕಾಂಗ್ರೆಸ್ ಬಂದಾಗ ಬರಗಾಲ ಎಂದು ಪ್ರತಿಪಕ್ಷಗಳು ಇದರಲ್ಲೂ ರಾಜಕೀಯ ಮಾಡುತ್ತಿವೆ. ಈ ಹಿಂದೆ ಬಿಜೆಪಿ, ಜೆಡಿಎಸ್ ಅಧಿಕಾರದಲ್ಲಿದ್ದಾಗಲೂ ಬರಗಾಲ ಬಂದಿತ್ತು. ಯಾರ ಅವಧಿಯಲ್ಲಿ ಏನಾಯಿತು ಎಂಬುದು ಮುಖ್ಯವಲ್ಲ. ರೈತರಿಗೆ ಸಂಕಷ್ಟಆಗಬಾರದು. ಕಡಿಮೆ ಮಳೆಯಾದರೂ ಕಷ್ಟ, ಹೆಚ್ಚು ಮಳೆಯಾದರೂ ಕಷ್ಟ. ಎಲ್ಲವೂ ಸಮಾನವಾಗಿರಬೇಕು. ಎರಡು-ಮೂರು ದಿನಗಳಲ್ಲಿ ಮಳೆ ಆಗುವ ಸಾಧ್ಯತೆಯಿದೆ. ಬಿತ್ತನೆ ಬೀಜ, ರಸಗೊಬ್ಬರಕ್ಕೆ ಯಾವುದೇ ಸಮಸ್ಯೆಯಿಲ್ಲ. ಮಳೆ ಬಂದರೆ ನಾವು ಬಿತ್ತನೆ ಚಟುವಟಿಕೆಗೆ ಸಂಪೂರ್ಣ ಪ್ರಮಾಣದಲ್ಲಿ ಸಿದ್ಧರಿದ್ದೇವೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ