ದಾಖಲೆ ಪ್ರಮಾಣದ ಆಹಾರಧಾನ್ಯ ಉತ್ಪಾದನೆ : ನಿರೀಕ್ಷೆಗಿಂತ ಭಾರೀ ಅಧಿಕ

By Kannadaprabha NewsFirst Published Mar 22, 2021, 7:51 AM IST
Highlights

ಬೆಳಹಾನಿಯಂತಹ ಘಟನೆಗಳ ನಡುವೆಯೂ 2020-21ನೇ ಸಾಲಿನಲ್ಲಿ ದಾಖಲೆ ಪ್ರಮಾಣದಲ್ಲಿ ಆಹಾರ ಧಾನ್ಯ ಉತ್ಪಾದನೆಯಾಗಿದೆ. 7 ಪಟ್ಟು ಅಧಿಕ ಉತ್ಪಾದನೆಯಾಗಿದೆ. 

ವರದಿ : ಸಂಪತ್‌ ತರೀಕೆರೆ
ಬೆಂಗಳೂರು (ಮಾ.22):
 ರಾಜ್ಯದಲ್ಲಿ ಭಾರೀ ಮಳೆ, ಪ್ರವಾಹದಿಂದ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳಹಾನಿಯಂತಹ ಘಟನೆಗಳ ನಡುವೆಯೂ 2020-21ನೇ ಸಾಲಿನಲ್ಲಿ ದಾಖಲೆ ಪ್ರಮಾಣದಲ್ಲಿ ಆಹಾರ ಧಾನ್ಯ ಉತ್ಪಾದನೆಯಾಗಿದೆ.

ಈ ಬಾರಿ 140.66 ಲಕ್ಷ ಮೆಟ್ರಿಕ್‌ ಟನ್‌ ಆಹಾರ ಧಾನ್ಯ ಉತ್ಪಾದನೆಯಾಗಿದ್ದು, ನಿರೀಕ್ಷಿತ ಗುರಿ 133.05 ಲಕ್ಷ ಮೆಟ್ರಿಕ್‌ ಟನ್‌ಗಿಂತ ಸುಮಾರು 7 ಲಕ್ಷ ಮೆಟ್ರಿಕ್‌ ಟನ್‌ನಷ್ಟುಉತ್ಪಾದನೆ ಜಾಸ್ತಿಯಾಗಿದೆ ಎಂದು ರಾಜ್ಯ ಆರ್ಥಿಕ ಮತ್ತು ಅಂಕಿ ಅಂಶಗಳ ನಿರ್ದೇಶನಾಲಯದ ವರದಿ ತಿಳಿಸಿದೆ. ಇನ್ನೂ ಕೂಡ ಬೇಸಿಗೆ ಹಂಗಾಮು ಮುಗಿಯಲು ಎರಡು ತಿಂಗಳು ಬಾಕಿ ಇದ್ದು ಒಟ್ಟಾರೆ ಉತ್ಪಾದನೆ 145 ಲಕ್ಷ ಮೆಟ್ರಿಕ್‌ ಟನ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ ರಾಜ್ಯ ಕೃಷಿ ಇಲಾಖೆ ಅಂದಾಜಿಸಿದೆ.

ಕೃಷಿ ಇಲಾಖೆ 2020-21ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ 73 ಲಕ್ಷ ಹೆಕ್ಟೆರ್‌, ಹಿಂಗಾರು ಹಂಗಾಮಿನಲ್ಲಿ 32 ಲಕ್ಷ ಹೆಕ್ಟೆರ್‌ ಮತ್ತು ಬೇಸಿಗೆಯಲ್ಲಿ 5 ಲಕ್ಷ ಹೆಕ್ಟೇರ್‌ ಒಟ್ಟು 110 ಹೆಕ್ಟೇರ್‌ನಲ್ಲಿ 133.05 ಲಕ್ಷ ಮೆಟ್ರಿಕ್‌ ಟನ್‌ ಆಹಾರ ಧಾನ್ಯ ಮತ್ತು 13.05 ಲಕ್ಷ ಟನ್‌ ಎಣ್ಣೆಕಾಳುಗಳನ್ನು ಉತ್ಪಾದಿಸುವ ಗುರಿ ಹೊಂದಿತ್ತು. ವಿವಿಧ ಕಾರಣಗಳಿಂದ ರಾಜ್ಯದಲ್ಲಿ 110 ಹೆಕ್ಟೇರ್‌ಗಳ ಗುರಿಯಲ್ಲಿ ಕೇವಲ 75.18 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಕೈಗೊಳ್ಳಲಾಗಿತ್ತು. ಮುಂಗಾರಿನಲ್ಲಿ 112.56 ಮೆಟ್ರಿಕ್‌ ಟನ್‌, ಹಿಂಗಾರು ಹಂಗಾಮಿನಲ್ಲಿ 16.01 ಮತ್ತು ಬೇಸಿಗೆಯಲ್ಲಿ 12.09 ಲಕ್ಷ ಮೆಟ್ರಿಕ್‌ ಟನ್‌ ಆಹಾರ ಧಾನ್ಯ ಉತ್ಪಾದನೆ ಮಾಡಲಾಗಿದೆ.

'ಪಡಿತರಕ್ಕೆ ಬೇಕಾದ ಆಹಾರ ಧಾನ್ಯ ರಾಜ್ಯ ರೈತರಿಂದಲೇ ಖರೀದಿಸಿ' ...

ಹಾಗೆಯೇ ಪ್ರಸಕ್ತ ಸಾಲಿನಲ್ಲಿ 11.46 ಲಕ್ಷ ಮೆಟ್ರಿಕ್‌ ಟನ್‌ ಎಣ್ಣೆಕಾಳುಗಳು ಮತ್ತು ವಾಣಿಜ್ಯ ಬೆಳೆಗಳಾದ ಹತ್ತಿ 19.11 ಲಕ್ಷ ಮೆಟ್ರಿಕ್‌ ಟನ್‌, ಕಬ್ಬು 410.40 ಲಕ್ಷ ಮೆಟ್ರಿಕ್‌ ಟನ್‌ ಉತ್ಪಾದನೆ ಮಾಡಲಾಗಿದೆ ಎಂದು ರಾಜ್ಯ ಆರ್ಥಿಕ ಮತ್ತು ಅಂಕಿ ಅಂಶಗಳ ನಿರ್ದೇಶನಾಲಯ ವರದಿ ಮಾಹಿತಿ ನೀಡಿದೆ.

ಉತ್ಪಾದನೆ ಹೆಚ್ಚಲಿದೆ:  ಕೃಷಿ ಬೆಳೆಗಳ ಕುರಿತು ರಾಜ್ಯ ಆರ್ಥಿಕ ಮತ್ತು ಅಂಕಿ ಅಂಶಗಳ ನಿರ್ದೇಶನಾಲಯಕ್ಕೆ ಕೇವಲ 2ನೇ ಮುಂಗಡ ಅಂದಾಜು ವರದಿಯಷ್ಟೇ ಸಲ್ಲಿಕೆಯಾಗಿದೆ. ಬೇಸಿಗೆ ಹಂಗಾಮು ಮುಕ್ತಾಯಕ್ಕೆ ಬಾಕಿ ಇದ್ದು, ಇನ್ನೂ ಎರಡು ಹಂತದಲ್ಲಿ ವರದಿ ಸಿದ್ಧಗೊಳ್ಳಬೇಕಿದೆ. ಹೀಗಾಗಿ ಆಹಾರ ಧಾನ್ಯಗಳ ಉತ್ಪಾದನೆ 140ರಿಂದ 145 ಲಕ್ಷ ಮೆಟ್ರಿಕ್‌ ಟನ್‌ ತಲುಪುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ಕೃಷಿ ಇಲಾಖೆ 2018-19ನೇ ಸಾಲಿನಲ್ಲಿ 135 ಲಕ್ಷ ಮೆಟ್ರಿಕ್‌ ಟನ್‌ ಆಹಾರ ಧಾನ್ಯ ಉತ್ಪಾದನೆ ಗುರಿ ಹೊಂದಿದ್ದರು ಕೇವಲ 110.46 ಲಕ್ಷ ಮೆಟ್ರಿಕ್‌ ಟನ್‌ ಉತ್ಪಾದನೆಯಾಗಿತ್ತು. 2019-20ರಲ್ಲಿ 138.67 ಲಕ್ಷ ಮೆಟ್ರಿಕ್‌ ಟನ್‌ ಉತ್ಪಾದನೆ ಗುರಿ ಇದ್ದರೂ 136.41 ಲಕ್ಷ ಮೆಟ್ರಿಕ್‌ ಟನ್‌ ಆಹಾರ ಧಾನ್ಯ ಉತ್ಪಾದನೆಯಾಗಿತ್ತು.

ಸಕಾಲದಲ್ಲಿ ಸಮರ್ಪಕವಾಗಿ ಮಳೆ ಬಂದ ಹಿನ್ನೆಲೆ ಹಾಗೂ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ಇಲಾಖೆ ವತಿಯಿಂದ ನೀಡಲಾಯಿತು. ಜತೆಗೆ ಹೊಸ ತಳಿಯ ಬಳಕೆಯಿಂದಾಗಿ ಈ ಬಾರಿ ಉತ್ತಮವಾದ ಇಳುವರಿ ಪಡೆಯಲು ಸಾಧ್ಯವಾಯಿತು. ಉತ್ಪಾದನೆಯಲ್ಲೂ ಸಹ ಗಣನೀಯವಾಗಿ ಏರಿಕೆಯಾಗಿದೆ. ಕೋವಿಡ್‌ ಸಂಕಷ್ಟದಲ್ಲೂ ರಾಜ್ಯ ರೈತರ ಶ್ರಮ ಮೆಚ್ಚುವಂಥದ್ದು.

- ಡಾ.ಶ್ರೀನಿವಾಸ್‌, ನಿರ್ದೇಶಕರು, ಕೃಷಿ ಇಲಾಖೆ

click me!