Bengaluru: ಫಲಪುಷ್ಪ ಪ್ರದರ್ಶನಕ್ಕೆ 3.30 ಲಕ್ಷ ಪ್ರೇಕ್ಷಕರ ಭೇಟಿ ದಾಖಲೆ!

By Kannadaprabha NewsFirst Published Jan 31, 2023, 10:20 AM IST
Highlights

ಲಾಲ್‌ಬಾಗ್‌ನಲ್ಲಿ ಕಳೆದ ಹನ್ನೊಂದು ದಿನಗಳಿಂದ ನಡೆಯುತ್ತಿದ್ದ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಸೋಮವಾರ ತೆರೆಬಿತ್ತು. ಇದೇ ಮೊದಲ ಬಾರಿಗೆ ತೋಟಗಾರಿಕೆ ಇಲಾಖೆ ಸ್ವತಂತ್ರವಾಗಿ ಆಯೋಜಿಸಿದ್ದ ಫಲಪುಪ್ಪ ಪ್ರದರ್ಶನ ಯಶಸ್ವಿಯಾಗಿದೆ.

ಬೆಂಗಳೂರು (ಜ.31) : ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಕಳೆದ ಹನ್ನೊಂದು ದಿನಗಳಿಂದ ನಡೆಯುತ್ತಿದ್ದ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಸೋಮವಾರ ತೆರೆಬಿತ್ತು.

ಇದೇ ಮೊದಲ ಬಾರಿಗೆ ತೋಟಗಾರಿಕೆ ಇಲಾಖೆ ಸ್ವತಂತ್ರವಾಗಿ ಆಯೋಜಿಸಿದ್ದ ಫಲಪುಪ್ಪ ಪ್ರದರ್ಶನ(Flowers show) ಯಶಸ್ವಿಯಾಗಿದೆ. 3.30 ಲಕ್ಷ ಜನರು ಭೇಟಿ ನೀಡಿದ್ದು, ಟಿಕೆಟ್‌ ಮಾರಾಟದಿಂದ .1.97 ಕೋಟಿಗೂ ಅಧಿಕ ಆದಾಯದ ದಾಖಲೆ ಸೃಷ್ಟಿಸಿದೆ.

ರಾಜಧಾನಿಯಲ್ಲಿ ಫಲಪುಷ್ಪ ಪ್ರದರ್ಶನ ಆರಂಭ: ಬೆಂಗಳೂರಿನ ಇತಿಹಾಸ ಪ್ರದರ್ಶನ

2022 ಆಗಸ್ಟ್‌ನಲ್ಲಿ ಸ್ವಾತಂತ್ರ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನವನ್ನು ದಿವಂಗತ ಯುವ ನಟ ಪುನೀತ್‌ ರಾಜ್‌ಕುಮಾರ್‌ ಹಾಗೂ ಡಾ ರಾಜ್‌ಕುಮಾರ್‌ ಅವರ ವಿಷಯಾಧಾರಿತವಾಗಿ ರಚಿಸಲಾಗಿತ್ತು. ಅಂದು ದಾಖಲೆ ಪ್ರಮಾಣದಲ್ಲಿ ಜನರು ಆಗಮಿಸಿದ್ದು, ಅತ್ಯಧಿಕ ಲಾಭಾಂಶವನ್ನು ತಂದಿತ್ತು. ಹತ್ತು ದಿನದಲ್ಲಿ ಸುಮಾರು 9 ಲಕ್ಷಕ್ಕೂ ಹೆಚ್ಚು ಮಂದಿ ಆಗಮಿಸಿದ್ದು, .3.36 ಕೋಟಿ ಹಣ ಸಂಗ್ರಹವಾಗಿತ್ತು.

ಆದರೆ, ಈ ಬಾರಿ ತೋಟಗಾರಿಕೆ ಇಲಾಖೆ ಎಂಎಚ್‌ಎಸ್ಸನ್ನು ಹೊರಗಿಟ್ಟು ಬೆಂಗಳೂರು ಇತಿಹಾಸ ಕುರಿತು ಮೊದಲ ಬಾರಿಗೆ ಪ್ರದರ್ಶನ ಆಯೋಜಿಸಿತ್ತು. ಸುಮಾರು 10ರಿಂದ 12 ಲಕ್ಷ ಜನರು ಪುಷ್ಪ ಪ್ರದರ್ಶನಕ್ಕೆ ಆಗಮಿಸುವ ನಿರೀಕ್ಷೆಯನ್ನು ತೋಟಗಾರಿಕೆ ಸಚಿವ ಮುನಿರತ್ನ ಅವರು ವ್ಯಕ್ತಪಡಿಸಿದ್ದರು. ಆದರೆ, ನಿರೀಕ್ಷಿತ ಮಟ್ಟದಲ್ಲಿ ವೀಕ್ಷಕರು ಆಗಮಿಸಿರಲಿಲ್ಲ. ಆದರೂ, ಈ ಬಾರಿಯ ಗಣರಾಜ್ಯೋತ್ಸವದ ಪುಷ್ಪ ಪ್ರದರ್ಶನಕ್ಕೆ ಇತಿಹಾಸದಲ್ಲೇ ಅತೀ ಹೆಚ್ಚು ಜನರು ಆಗಮಿಸಿದ್ದಾರೆ.

ಜ.20ರಿಂದ 30ರವರೆಗೆ ನಡೆದ ಪ್ರದರ್ಶನಕ್ಕೆ 2.24 ಲಕ್ಷ ಮಂದಿ ವಯಸ್ಕರು, 25,174 ಮಕ್ಕಳು ಭೇಟಿ ನೀಡಿದ್ದರು. ನಾನಾ ಶಾಲೆಗಳಿಂದ 49,380 ವಿದ್ಯಾರ್ಥಿಗಳು ಉಚಿತವಾಗಿ ಆಗಮಿಸಿ ಫಲಪುಷ್ಪ ಪ್ರದರ್ಶನ ವೀಕ್ಷಿಸಿದ್ದರು. ಪಾಸುದಾರರು, ಮಳಿಗೆಗಳ ಪ್ರತಿನಿಧಿಗಳು, ಸ್ವಯಂ ಸೇವಕರು ಮತ್ತಿತರರು ಸೇರಿ 30,921 ಆಗಮಿಸಿದ್ದಾರೆ. ಒಟ್ಟಾರೆ 3,30,257 ಮಂದಿ ಭೇಟಿ ನೀಡಿದ್ದಾರೆ. ಅದೇ ರೀತಿ ವಾಣಿಜ್ಯ ಮಳಿಗೆಗಳು ಮತ್ತು ಇತರೆ ಮಾರಾಟ ಮಳಿಗೆಗಳಿಂದ .25.06 ಲಕ್ಷ ಹಣ ಸಂಗ್ರಹವಾದರೆ, ಪ್ರವೇಶ ಶುಲ್ಕದಿಂದ .1,72,49,635 ಹಣ ಸಂಗ್ರಹವಾಗಿದೆ. ಎಲ್ಲ ಮೂಲಗಳಿಂದ ಒಟ್ಟಾರೆ .1,97,55,6754 ಹಣ ಸಂಗ್ರಹವಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದರು.

ವೀಕ್ಷಣೆ, ಗಳಿಕೆಯಲ್ಲೂ ರೆಕಾರ್ಡ್‌!

ಎಂಎಚ್‌ಎಸ್‌ ಮತ್ತು ತೋಟಗಾರಿಕೆ ಇಲಾಖೆ(Department of Horticulture) ಜಂಟಿಯಾಗಿ ಪ್ರತಿ ಜನವರಿಯಲ್ಲಿ ಆಯೋಜಿಸುತ್ತಿದ್ದ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಗಳ ಪೈಕಿ ಈ ಬಾರಿ ನಡೆದ ಪ್ರದರ್ಶನ ಸಂಪೂರ್ಣ ಯಶಸ್ವಿಯಾಗಿದೆ. 2020 ಜನವರಿಯಲ್ಲಿ ನಡೆದ ಪ್ರದರ್ಶನದಲ್ಲಿ 3 ಲಕ್ಷ ಜನರು ಭೇಟಿ ನೀಡಿದ್ದು .1.7 ಕೋಟಿ ಸಂಗ್ರಹವಾಗಿದ್ದು ದಾಖಲೆಯಾಗಿತ್ತು. ಈ ಬಾರಿ 3.30 ಲಕ್ಷ ಜನರು ಭೇಟಿ ನೀಡಿ .1.97 ಕೋಟಿ ಸಂಗ್ರಹವಾಗಿ ಹೊಸ ದಾಖಲೆ ನಿರ್ಮಾಣವಾಗಿದೆ.

ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ನಾಲ್ಕುನಾಡು ಅರಮನೆ ಆಕರ್ಷಣೆ

ಅಲ್ಲದೇ ಈ ಬಾರಿ ಕಸ ರಹಿತ ಪ್ರದರ್ಶನ ನಡೆದಿದೆ. ಪ್ರತಿ ಬಾರಿ 8ರಿಂದ 10 ಟನ್‌ನಷ್ಟುಕಸ ಸಂಗ್ರಹವಾಗುತ್ತಿತ್ತು. ಈ ಬಾರಿ ಕಸ ಸಂಗ್ರಹಣೆ ಶೂನ್ಯವೆನ್ನಬಹುದು. ಜೊತೆಗೆ ಲಾಲ್‌ಬಾಗ್‌ ಒಳಗೆ ವಾಹನ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಿದ್ದು ವಿಶೇಷ. ಇಲಾಖೆಯ ಎಲ್ಲ ಅಧಿಕಾರಿಗಳ ಶ್ರಮದಿಂದ ಈ ಪ್ರದರ್ಶನ ಯಶಸ್ವಿಯಾಗಿದೆ ಎಂದು ಲಾಲ್‌ಬಾಗ್‌ ಜಂಟಿ ನಿರ್ದೇಶಕ (ಪಾರ್ಕ್ಸ್ ಆ್ಯಂಡ್‌ ಗಾರ್ಡನ್ಸ್‌) ಎಂ.ಜಗದೀಶ್‌ ಅವರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

click me!