
ಬೆಂಗಳೂರು(ಆ.10): ರಾಜ್ಯದಲ್ಲಿ ಕಳೆದೈದು ದಿನಗಳಿಂದ ಆವರಿಸಿದ್ದ ಮಳೆಯಬ್ಬರ ಭಾನುವಾರದಂದು ಹಲವೆಡೆ ಇಳಿಮುಖವಾಗಿದ್ದು ಬೆಳಗಾವಿ, ಕೊಡಗು ಸೇರಿದಂತೆ 8 ಜಿಲ್ಲೆಗಳಲ್ಲಿ ಪ್ರವಾಹವೂ ಕೊಂಚಮಟ್ಟಿಗೆ ತಗ್ಗಿದೆ. ಆದರೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಗ್ಗುಪ್ರದೇಶದ ಹಲವು ಪ್ರದೇಶಗಳಿಗೆ ನೀರು ನುಗ್ಗಿದೆ.
ಏತನ್ಮಧ್ಯೆ ಮಳೆ ಸಂಬಂಧಿ ಅನಾಹುತಕ್ಕೆ ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕು ಇನಾಂಲಕಮಾಪುರದ ಬಳಿ ಶನಿವಾರ ಸಂಜೆ ಚಂದ್ರಶೇಖರ ದಳವಾಯಿ (25) ಯುವಕನೊಬ್ಬ ವರದಾ ನದಿ ನೀರಿನ ಸೆಳವಿಗೆ ಕೊಚ್ಚಿಹೋಗಿದ್ದಾನೆ. ಇದೇ ವೇಳೆ ಚಿಕ್ಕಮಗಳೂರಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದಲ್ಲಿ ಸೋಮಾವತಿ ನದಿ ಪ್ರವಾಹದಲ್ಲಿ 2 ದಿನಗಳ ಹಿಂದೆ ನಾಪತ್ತೆಯಾಗಿದ್ದ ವೃದ್ಧೆ ರತ್ನಮ್ಮ (73) ಅವರ ಮೃತ ದೇಹ ಸೋಮವಾರ ಪತ್ತೆಯಾಗಿದೆ.
ಬ್ರಹ್ಮಗಿರಿ ಬೆಟ್ಟಕುಸಿತ: ರಕ್ಷಣಾ ಕಾರ್ಯಕ್ಕೆ ಭಾರತೀಯ ಸೇನೆ!
ಕರಾವಳಿ ಜಿಲ್ಲೆಗಳಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿರುಸಿನ ಮಳೆಯಾಗುತ್ತಿದ್ದರೆ ಉತ್ತರ ಕನ್ನಡದಲ್ಲಿ ಸಾಧಾರಣ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ, ಕುಮಾರಧಾರ, ಫಲ್ಗುಣಿ ನದಿಗಳಲ್ಲಿ ನೀರು ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು ಆಸುಪಾಸಿನ ಹಲವು ಮನೆಗಳಿಗೆ ನೀರು ನುಗ್ಗಿದ್ದು ಹಲವು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಸೌಪರ್ಣಿಕಾ ನದಿ ಮತ್ತು ಉಡುಪಿ ತಾಲೂಕಿನಲ್ಲಿ ಸ್ವರ್ಣಾ ನದಿಗಳು ಮೇರೆ ಮೀರಿ ಹರಿಯುತ್ತಿದ್ದು, ಬೈಂದೂರಲ್ಲಿ ನೂರಾರು ಮನೆಗಳು ಜಲಾವೃತಗೊಂಡಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಮಳೆ ಇಳಿಮುಖವಾಗಿದ್ದು, ಗಂಗಾವಳಿ, ಶರಾವತಿ ಸೇರಿದಂತೆ ಪ್ರಮುಖ ನದಿಗಳಲ್ಲಿ ಪ್ರವಾಹಮಟ್ಟತಗ್ಗಿದೆ.
ಚಿಕ್ಕಮಗಳೂರಲ್ಲಿ ಉಕ್ಕಿ ಹರಿಯುತ್ತಿದ್ದ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳ ಪ್ರವಾಹ ಕೊಂಚ ಕಡಿಮೆಯಾಗಿದೆ. ತುಂಗಾ ನದಿ ಪ್ರವಾಹದಿಂದಾಗಿ ಮುಳುಗಿದ್ದ ಶೃಂಗೇರಿಯಿಂದ ಮಂಗಳೂರು, ಕೊಪ್ಪ, ಜಯಪುರ, ಮೆಣಸೆ ಸಂಪರ್ಕಿಸುವ ರಸ್ತೆಗಳಲ್ಲಿ ವಾಹನಗಳ ಸಂಚಾರ ಪುನಾರಂಭಗೊಂಡಿದೆ. ಭದ್ರಾ ನದಿಯಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ಹೆಬ್ಬಾಳ ಸೇತುವೆ, ಹೊರನಾಡು ಮತ್ತು ಕಳಸದ ನಡುವೆ ಮತ್ತೆ ವಾಹನ ಸಂಚಾರ ಆರಂಭವಾಗಿದೆ.
ಶಿವಮೊಗ್ಗದ ಘಟ್ಟಭಾಗದಲ್ಲಿ ಮಳೆ ಮತ್ತಷ್ಟುಚುರುಕಾಗಿದೆ. ಆಗುಂಬೆ ಸುತ್ತಮುತ್ತ ಉತ್ತಮ ಮಳೆಯಾಗುತ್ತಿದ್ದು, ಲಿಂಗನಮಕ್ಕಿ ಹಾಗೂ ಭದ್ರಾ ಜಲಾಶಯದ ನೀರಿನ ಮಟ್ಟಏರಿಕೆಯಾಗುತ್ತಿದೆ. ತೀವ್ರ ಭೂಕುಸಿತಕ್ಕೊಳಗಾಗಿರುವ ಕೊಡಗು ಜಿಲ್ಲೆಯ ಬಹುತೇಕ ಭಾಗದಲ್ಲಿ ಮಳೆ ಪ್ರಮಾಣ ಇಳಿಕೆಯಾಗಿದೆ. ಕಾವೇರಿ ನದಿಯಂಚಿನ ಗ್ರಾಮಗಳಲ್ಲಿ ಪ್ರವಾಹ ಕ್ಷೀಣಿಸಿದ್ದು ಜನಜೀವನ ಸಹಜ ಸ್ಥಿತಿಯತ್ತ ಮುಖಮಾಡುತ್ತಿದೆ.
ಇಡುಕ್ಕಿ ಗುಡ್ಡ ಕುಸಿತ: ಮೃತರ ಸಂಖ್ಯೆ 26ಕ್ಕೇರಿಕೆ!
ಪಶ್ಚಿಮವಾಹಿನಿ ಭಾಗಶಃ ಜಲಾವೃತ: ಕೊಡಗಿನ ಮಳೆಯಿಂದ ಕೆಆರ್‌ಎಸ್ ಜಲಾಶಯಕ್ಕೆ ಭಾರೀ ಪ್ರಮಾಣದ ನೀರು ಹರಿದುಬರುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಯಿಂದಲೂ ನದಿಗೆ ನೀರು ಹರಿಯಬಿಡಲಾಗುತ್ತಿದೆ. ಇದರಿಂದ ನದಿ ಪಾತ್ರಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಮಂಡ್ಯಜಿಲ್ಲೆಯ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿ ಭಾಗಶಃ ಜಲಾವೃತವಾಗಿದೆ. ಮಹಾರಾಜರ ಕಾಲದ ಸ್ಮಾರಕಗಳು, ಮೂರು ದೇವಾಲಯಗಳು, ಎರಡು ಮನೆಗಳಿಗೆ ನೀರು ನುಗ್ಗಿದೆ. ಮಂಡ್ಯದ ಗೌತಮ ಕ್ಷೇತ್ರ ಮಠವು ಜಲಾವೃತವಾಗಿದ್ದು, ಸಂಪರ್ಕ ಕಳೆದುಕೊಂಡಿದೆ.
ಬೆಳಗಾವಿ ಕೊಂಚ ನಿರಾಳ:
ಮಹಾರಾಷ್ಟ್ರದಲ್ಲಿ ಮಳೆ ಪ್ರಮಾಣ ಕೊಂಚ ಇಳಿಕೆಯಾಗಿದ್ದು, ಕೃಷ್ಣಾ, ಮಲಪ್ರಭಾ, ಘಟಪ್ರಭಾ ಸೇರಿ ಮತ್ತಿತರ ಉತ್ತರ ಕರ್ನಾಟಕದ ಪ್ರಮುಖ ಜೀವನದಿಗಳಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣಕೊಂಚಮಟ್ಟಿಗೆ ಕಡಿಮೆಯಾಗಿದೆ. ಇದರಿಂದ ನದಿ ತಟದ ಗ್ರಾಮಗಳಿಗಿದ್ದ ಪ್ರವಾಹದ ಆತಂಕ ಸ್ವಲ್ಪ ಕಡಿಮೆಯಾಗಿದೆ. ಆದರೂ ಬೆಳಗಾವಿ ಜಿಲ್ಲೆಯ 16, ಬಾಗಲಕೋಟೆ ಜಿಲ್ಲೆಯ 11 ಸೇರಿ ಒಟ್ಟು 27 ಕೆಳಮಟ್ಟದ ಸೇತುವೆಗಳ ಮೇಲೆ ಇನ್ನೂ ನೀರು ಹರಿಯುತ್ತಿದ್ದು, ವಾಹನಗಳ ಸಂಚಾರಕ್ಕೆ ಮುಕ್ತವಾಗಿಲ್ಲ. ಇದೇ ವೇಳೆ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲೂ ಕೃಷ್ಣಾ ನದಿಮಟ್ಟಕೊಂಚ ಇಳಿಕೆಯಾಗಿದೆ.
ಬೆಂಗಳೂರಲ್ಲಿ ವಾಡಿಕೆಗಿಂತ ಶೇ.73 ರಷ್ಟು ಹೆಚ್ಚು ಮಳೆ..!
ಗದಗದಲ್ಲಿ ತಗ್ಗದ ಆತಂಕ:
ಮಲಪ್ರಭಾ, ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಗದಗ ಜಿಲ್ಲೆಯಾದ್ಯಂತ 27 ಗ್ರಾಮಗಳಲ್ಲಿ ಪ್ರವಾಹದ ಭೀತಿ ಮುಂದುವರಿದಿದೆ. ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ನವಿಲು ತೀರ್ಥ ಜಲಾಶಯ ಭರ್ತಿಯಾಗಲು ಇನ್ನು ಕೇವಲ 9 ಅಡಿ ಮಾತ್ರ ಬಾಕಿ ಉಳಿದಿದೆ. ಈಗಾಗಲೇ ನದಿ ಪಾತ್ರಕ್ಕೆ 8 ಸಾವಿರ ಕ್ಯುಸೆಕ್‌ನಷ್ಟುನೀರು ಹರಿಸುತ್ತಿದ್ದು, ಯಾವುದೇ ಕ್ಷಣದಲ್ಲಾದರೂ ನದಿಗೆ ಹೆಚ್ಚಿನ ನೀರನ್ನು ಹರಿಸುವ ಸಾಧ್ಯತೆ ಇರುವುದರಿಂದ ಗದಗ ಜಿಲ್ಲೆಯ ಮಲಪ್ರಭಾ ನದಿ ದಂಡೆಯ 16 ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಬಳ್ಳಾರಿ, ಹಾವೇರಿಯಲ್ಲಿ ಕೆಲಕಾಲ ಉತ್ತಮ ಮಳೆ ಸುರಿದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ