ಬೆಂಗಳೂರಲ್ಲಿ ಮಹಾಮಾರಿ ಕೊರೋನಾ ಸಾವಿನ ಪ್ರಮಾಣ ಇಳಿಮುಖ!

By Kannadaprabha NewsFirst Published Aug 10, 2020, 7:08 AM IST
Highlights

ಕೊರೋನಾ ಪರೀಕ್ಷೆಯ ಪ್ರಮಾಣ ಹೆಚ್ಚಳ| ರೋಗ ಲಕ್ಷಣ ಇರುವವರ ತ್ವರಿತ ಪತ್ತೆ, ಸಕಾಲದಲ್ಲಿ ಚಿಕಿತ್ಸೆ ಹಿನ್ನೆಲೆ ಸಾವಿನ ಪ್ರಮಾಣ ಇಳಿಕೆ| ಜು.13ರ ವೇಳೆಗೆ ಶೇ.4.44 ರಷ್ಟಿದ್ದ ಸಾವಿನ ಪ್ರಮಾಣ ಆ.8ರ ವೇಳೆಗೆ ಶೇ.1.68ಕ್ಕೆ ಕುಸಿತ| ಗುಣಮುಖ ಆಗುವವರ ಸಂಖ್ಯೆಯೂ ಏರಿಕೆ|
 

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಆ.10): ಎರಡು ತಿಂಗಳ ಹಿಂದೆ ಕೊರೋನಾ ಸೋಂಕಿತರ ಸಾವಿನ ದರ ರಾಜ್ಯದ ಸರಾಸರಿಗಿಂತ ದುಪ್ಪಟ್ಟು ಪ್ರಮಾಣದಲ್ಲಿ ದಾಖಲಾಗುವ ಮೂಲಕ ಆತಂಕ ಸೃಷ್ಟಿಸಿದ್ದ ಬೆಂಗಳೂರಿನಲ್ಲಿ ಈಗ ಸೋಂಕಿನಿಂದ ಮೃತಪಡುವರ ಸಂಖ್ಯೆ ರಾಜ್ಯದ ದರಕ್ಕಿಂತ ಕಡಿಮೆಯಾಗಿದೆ.

ಸೋಂಕು ಪರೀಕ್ಷೆಯ ಪ್ರಮಾಣ ಹೆಚ್ಚಳ, ರೋಗ ಲಕ್ಷಣ ಇರುವವರ ತ್ವರಿತ ಪತ್ತೆ ಹಾಗೂ ಚಿಕಿತ್ಸೆ ನೀಡುತ್ತಿರುವುದರಿಂದ ಸಾವಿನ ಪ್ರಮಾಣ ಕಡಿಮೆಯಾಗುತ್ತಿದೆ. ಈ ಪ್ರಕ್ರಿಯೆ ಇನ್ನಷ್ಟು ಹೆಚ್ಚಾದರೆ ಸಾವಿನ ದರ ಇನ್ನಷ್ಟು ಕಡಿಮೆಯಾಗಲಿದೆ ಎಂದು ತಜ್ಞರು ಹೇಳಿದ್ದಾರೆ.

ಶ್ರೀರಾಮುಲುಗೆ ಕೊರೋನಾ: ಕುಚುಕು ಗೆಳೆಯನಿಗೆ ರೆಡ್ಡಿ ಹಾರೈಸಿದ್ದು ಹೀಗೆ

ಪ್ರಸ್ತುತ ರಾಜ್ಯದಲ್ಲಿ ಪತ್ತೆಯಾದ ಸೋಂಕಿತರ ಪೈಕಿ ಶೇ.1.79 ರಷ್ಟು ಮಂದಿ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಆ.8ರ ವೇಳೆಗೆ ಸಾವಿನ ಸಂಖ್ಯೆ ಶೇ.1.68ಕ್ಕೆ ಕುಸಿದಿದೆ. ಜೂ.8ರ ವೇಳೆಗೆ ರಾಜ್ಯದಲ್ಲಿ ಪತ್ತೆಯಾದ ಕೊರೋನಾ ಸೋಂಕಿತರಲ್ಲಿ ಶೇ.1.1ರಷ್ಟು ಮಂದಿ ಮೃತಪಡುತ್ತಿದ್ದರು. ಇದೇ ಅವಧಿಯಲ್ಲಿ ಬೆಂಗಳೂರಿನಲ್ಲಿ ಶೇ.3.65 ರಷ್ಟುಮಂದಿ ಸೋಂಕಿಗೆ ಬಲಿಯಾಗುತ್ತಿದ್ದರು. ಜು.13ರ ವೇಳೆಗೆ ಈ ಪ್ರಮಾಣ ಶೇ.4.44 ರಷ್ಟಕ್ಕೆ ಏರಿಕೆಯಾಗಿತ್ತು. ಜು.18ರ ವೇಳೆ 2.13ಕ್ಕೆ ಇಳಿಕೆಯಾಗಿರುವುದು ಸಮಾಧಾನಕರ ಸಂಗತಿಯಾಗಿದೆ.

ಗುಣಮುಖರ ಸಂಖ್ಯೆಯೂ ಏರಿಕೆ:

ನಗರದಲ್ಲಿ ಸೋಂಕಿತರ ಸಾವಿನ ಪ್ರಮಾಣ ಕುಸಿತದ ಜೊತೆಗೆ ಗುಣಮುಖ ಆಗುವವರ ಪ್ರಮಾಣವೂ ಏರಿಕೆಯಾಗಿದೆ. ಜು.18ರ ವೇಳೆ ಬೆಂಗಳೂರಿನಲ್ಲಿ ಶೇ.22ರಷ್ಟು ಮಂದಿ ಗುಣಮುಖರಾಗಿದ್ದು, ಶೇ.77.78 ರಷ್ಟು ಸಕ್ರಿಯ ಪ್ರಕರಣಗಳಿದ್ದವು. ಆ.8ರ ವೇಳೆ ಗುಣಮುಖ ಸಂಖ್ಯೆ ಶೇ.51.62 ರಷ್ಟಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.46.68 ರಷ್ಟಕ್ಕೆ ಇಳಿಕೆಯಾಗಿದೆ.

3 ಪ್ರಮುಖ ಕಾರಣಗಳು

ಈ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ರಾಜ್ಯ ಮತ್ತು ಬಿಬಿಎಂಪಿ ಕೋವಿಡ್‌ ಕಾರ್ಯಪಡೆಯ ತಜ್ಞರ ಸಮಿತಿ ಸದಸ್ಯ ಗಿರಿಧರ್‌ ಬಾಬು, ಬೆಂಗಳೂರಿನಲ್ಲಿ ಸಾವಿರ ಸಂಖ್ಯೆ ಇಳಿಕೆಗೆ ಪ್ರಮುಖವಾಗಿ ಮೂರು ಕಾರಣಗಳಿವೆ ಎಂದಿದ್ದಾರೆ.

1. ನಗರದಲ್ಲಿ ದಿನನಿತ್ಯ ಸೋಂಕು ಪರೀಕ್ಷೆ ಪ್ರಮಾಣವನ್ನು 9 ಸಾವಿರದಿಂದ 16 ಸಾವಿರಕ್ಕೆ ಏರಿಕೆ ಮಾಡಿರುವುದು.
2. ಉಸಿರಾಟ ಸಮಸ್ಯೆ, ಜ್ವರ, ಕೆಮ್ಮು ಹಾಗೂ ಶೀತದಿಂದ ಬಳುತ್ತಿರುವವರನ್ನು ತ್ವರಿತವಾಗಿ ಪತ್ತೆ ಮಾಡುತ್ತಿರುವುದು.
3. ಸಕಾಲಕ್ಕೆ ಚಿಕಿತ್ಸೆ ನೀಡುತ್ತಿರುವುದು, ಸಾವಿನ ಪ್ರಮಾಣ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ.

ಅಕ್ಟೋಬರ್‌ ಅಂತ್ಯಕ್ಕೆ ಸೋಂಕಿತರ ಸಂಖ್ಯೆ ಕುಸಿತ

ಬೆಂಗಳೂರಿನಲ್ಲಿ ಉಸಿರಾಟ ಸಮಸ್ಯೆ, ಜ್ವರ ಕೆಮ್ಮು ಹಾಗೂ ಶೀತದಿಂದ ಬಳುತ್ತಿರುವವರು ತ್ವರಿತವಾಗಿ ಪತ್ತೆ ಮಾಡುವುದು ಹಾಗೂ ಪರೀಕ್ಷೆ ಸಂಖ್ಯೆಯನ್ನು ಇನ್ನಷ್ಟುಏರಿಕೆ ಮಾಡಿದರೆ ಅಕ್ಟೋಬರ್‌ ಅಂತ್ಯದ ವೇಳೆಗೆ ಸೋಂಕಿತರ ಸಂಖ್ಯೆ ಕನಿಷ್ಠ ಪ್ರಮಾಣಕ್ಕೆ ಇಳಿಕೆಯಾಗಲಿದೆ ಎಂದು ರಾಜ್ಯ ಮತ್ತು ಬಿಬಿಎಂಪಿ ಕೋವಿಡ್‌ ಕಾರ್ಯಪಡೆಯ ತಜ್ಞರ ಸಮಿತಿ ಸದಸ್ಯ ಗಿರಿಧರ್‌ ಬಾಬು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

11 ದಿನದಲ್ಲಿ 1.15 ಲಕ್ಷ ಮಂದಿ ಪರೀಕ್ಷೆ

ನಗರದಲ್ಲಿ ಕಳೆದ 11 ದಿನಗಳಲ್ಲಿ ಬರೋಬ್ಬರಿ 1.15 ಲಕ್ಷ ಮಂದಿಯನ್ನು ಕೊರೋನಾ ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದೆ. ಜು.29ರಿಂದ ಆ.8ರ ವರೆಗೆ ಬೆಂಗಳೂರಿನ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆ, ಮೊಬೈಲ್‌ ವ್ಯಾನ್‌ನಲ್ಲಿ ಒಟ್ಟು 1.15,926 ಮಂದಿಯನ್ನು ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದೆ.

ಈ ಪೈಕಿ ಖಾಸಗಿ ಆಸ್ಪತ್ರೆ ಮತ್ತು ಲ್ಯಾಬ್‌ಗಳಲ್ಲಿ 42,264 ಮಂದಿಯ ಗಂಟಲ ಮತ್ತು ಮೂಗಿನ ದ್ರವದ ಮಾದರಿ ಸಂಗ್ರಹಿಸಲಾಗಿದೆ. ಸರ್ಕಾರ ಮತ್ತು ಬಿಬಿಎಂಪಿಯ ಫೀವರ್‌ ಕ್ಲಿನಿಕ್ಸ್‌, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಂಚಾರಿ ಸೋಂಕು ಪರೀಕ್ಷಾ ಘಟಕದಲ್ಲಿ 73,662 ಮಂದಿ ಪರೀಕ್ಷೆಗೆ ಒಳಗಾಗಿದ್ದಾರೆ. ಅದರಲ್ಲಿ 50,770 ರಾರ‍ಯಪಿಡ್‌ ಆ್ಯಂಟಿಜೆನ್‌ ಪರೀಕ್ಷೆಗೆ ಒಳಗಾಗಿದ್ದು, 5503 ಮಂದಿಗೆ ಸೋಂಕು ದೃಢವಾಗಿದೆ. ಇನ್ನು 22,892 ಮಂದಿ ಆರ್‌ಟಿಪಿಸಿಆರ್‌ ಸೋಂಕು ಪರೀಕ್ಷೆ ನಡೆಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಮಾಹಿತಿ ನೀಡಿದ್ದಾರೆ.

ಪ್ರತಿದಿನ ನಗರದಲ್ಲಿ ಪತ್ತೆಯಾಗುತ್ತಿರುವ ಸೋಂಕಿತರ ಸಂಖ್ಯೆಗಿಂತ 10 ಪಟ್ಟು ಹೆಚ್ಚು ಮಂದಿಯನ್ನು ಕೊರೋನಾ ಸೋಂಕು ಪರೀಕ್ಷೆಗೆ ಒಳಪಡಿಸಬೇಕು. ಆಗ ಸೋಂಕು ಹರಡುವ ಪ್ರಮಾಣ ನಿಯಂತ್ರಣಕ್ಕೆ ಬರಲಿದೆ. ನಗರದಲ್ಲಿ ಕಳೆದ 20 ದಿನದಿಂದ ಸೋಂಕು ಪರೀಕ್ಷೆ ಪ್ರಮಾಣ ಏರಿಕೆಯಿಂದ ಸಾವಿನ ದರ ಸಹ ಕಡಿಮೆಯಾಗಿದೆ ಎಂದು ಮಂಜುನಾಥ ಪ್ರಸಾದ್‌ ಅವರು ತಿಳಿಸಿದ್ದಾರೆ.
 

click me!