Hemavati Canal Protest: ಹೇಮಾವತಿ ನೀರು ವಿವಾದ: ಪ್ರತಿಭಟನಾಕಾರರ ಬಂಧನ, ರೈತರ ಆಕ್ರೋಶ!

Kannadaprabha News   | Kannada Prabha
Published : Jun 03, 2025, 07:33 AM ISTUpdated : Jun 03, 2025, 09:57 AM IST
FIRs registered after Tumakuru farmers protest turns violent over Hemavati canal work

ಸಾರಾಂಶ

ಹೇಮಾವತಿ ಲಿಂಕ್ ಕೆನಾಲ್ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸಿದ ನಾಲ್ವರನ್ನು ಬಂಧಿಸಲಾಗಿದೆ. ರೈತರು ಹೇಮಾವತಿ ನೀರಿಗಾಗಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ. ಸರ್ಕಾರ ಸರ್ವಪಕ್ಷಗಳ ಸಭೆ ನಡೆಸಿ ಸಮಸ್ಯೆ ಬಗೆಹರಿಸಬೇಕೆಂದು ಆರ್. ಅಶೋಕ್ ಒತ್ತಾಯಿಸಿದ್ದಾರೆ.

ತುಮಕೂರು (ಜೂ.3) : ಹೇಮಾವತಿ ಲಿಂಕ್‌ ಕೆನಾಲ್‌ ಎಕ್ಸ್‌ಪ್ರೆಸ್‌ ಕಾಮಗಾರಿ ವಿರೋಧಿಸಿ ಗುಬ್ಬಿಯಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ನಾಲ್ವರನ್ನು ಗುಬ್ಬಿ‌ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಗುಬ್ಬಿ ತಾಲೂಕು ಸಿಎಸ್ ಪುರದ ಯುವ ರೈತ ಚೇತನ್, ಬೊಮ್ಮೇನಹಳ್ಳಿಯ ಯುವ ರೈತ ಆನಂದ್, ಬಾಗೂರು ಗ್ರಾಮದ ಲೋಕೇಶ್ ಹಾಗೂ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ನವಚೇತನ್ ಅವರನ್ನು ಬಂಧಿಸಲಾಗಿದೆ. ಬಂಧಿತರನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಶಾಸಕರ ವಿರುದ್ಧ ಕೇಸ್‌:ರಾಮನಗರಕ್ಕೆ ಹೇಮಾವತಿ ನೀರನ್ನು ಒಯ್ಯುವ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಯೋಜನೆಯ ಕಾಮಗಾರಿ ವಿರೋಧಿಸಿ ಶನಿವಾರ ಗುಬ್ಬಿಯಲ್ಲಿ ನಡೆದ ಪ್ರತಿಭಟನೆ ಸಂಬಂಧ ಬಿಜೆಪಿ ಹಾಗೂ ಜೆಡಿಎಸ್ ಶಾಸಕರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಕಾಮಗಾರಿ ಗುತ್ತಿಗೆ ಪಡೆದ ಕಂಪನಿಯ ಸಿಬ್ಬಂದಿ ದೂರಿನ ಮೇರೆಗೆ ತುರುವೆಕೆರೆ ಜೆಡಿಎಸ್‌ ಶಾಸಕ ಎಂ.ಟಿ.ಕೃಷ್ಣಪ್ಪ, ಬಿಜೆಪಿ ಶಾಸಕರಾದ ಸುರೇಶಗೌಡ, ಜ್ಯೋತಿ ಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಗೋವಿಂದರಾಜು, ಬಿಜೆಪಿ ಮುಖಂಡ ದಿಲೀಪ್ ಕುಮಾರ್, ಚೇತನ್ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಪ್ರತಿಭಟನೆ ವೇಳೆ 34.65 ಲಕ್ಷ ರು.ಮೌಲ್ಯದ ವಸ್ತುಗಳಿಗೆ ಹಾನಿಯಾಗಿದೆ ಎಂದು ಎಫ್ಐಆರ್‌ನಲ್ಲಿ ತಿಳಿಸಲಾಗಿದೆ.

ಹೇಮಾವತಿ ನೀರಿಗಾಗಿ ರೈತರ ಅನಿರ್ದಿಷ್ಟಾವಧಿ ಧರಣಿ ಆರಂಭ

ಚಿಕ್ಕನಾಯಕನಹಳ್ಳಿ: ಹೇಮಾವತಿ ನೀರಿಗಾಗಿ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ರೈತರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ. ತಾಲೂಕಿನ ನವಿಲೆಕೆರೆ ಏರಿಬಳಿಯ ಭೂತಪ್ಪನ ಗುಡಿಬಳಿ ಸೋಮವಾರ ಹೇಮಾವತಿ ನಾಲೆ ಹೋರಾಟ ಸಮಿತಿಯ ನೂರಾರು ಸದಸ್ಯರು ಸಭೆ ನಡೆಸಿದರು. ಸಭೆಯಲ್ಲಿ ನೀರಿಗಾಗಿ ಅನಿರ್ದಿಷ್ಟಾವಧಿ ಧರಣಿ ನಡೆಸಲು ತೀರ್ಮಾನಿಸಲಾಯಿತು. ಈ ವರ್ಷ ನಾಲೆಯಲ್ಲಿ ನೀರು ಹರಿಯದಿದ್ದರೆ ಅಂತರ್ಜಲದ ಕುಸಿತದಿಂದ ನೂರಾರು ಅಡಿಕೆ ಹಾಗೂ ತೆಂಗಿನ ತೋಟಗಳು ನಾಶವಾಗಲಿವೆ. ನಮ್ಮ ಅಸ್ತಿತ್ವದ ಉಳಿವಿಗಾಗಿ ದೀರ್ಘ ಹಾಗೂ ದಿಟ್ಟ ಹೋರಾಟ ಅನಿವಾರ್ಯ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಹೇಮಾವತಿ ನೀರು ಬಗ್ಗೆ ಸರ್ವಪಕ್ಷ ನಾಯಕರ ಸಭೆ ನಡೆಸಿ: ಅಶೋಕ್‌

ಬೆಂಗಳೂರು: ಹೇಮಾವತಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸರ್ಕಾರ ಎಲ್ಲ ರೈತರನ್ನು ಹಾಗೂ ಸರ್ವಪಕ್ಷಗಳ ಪ್ರಮುಖರನ್ನು ಕರೆದು ಸಭೆ ಮಾಡಿ ಚರ್ಚಿಸಬೇಕು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಒತ್ತಾಯಿಸಿದ್ದಾರೆ. ಅಲ್ಲದೆ, ಇದಕ್ಕೆ ಸಂಬಂಧಿಸಿದಂತೆ ರೈತರ ವಿರುದ್ಧ ದಾಖಲಿಸಿದ ಪ್ರಕರಣಗಳನ್ನು ಹಿಂಪಡೆಯಬೇಕು ಎಂದೂ ಅವರು ಆಗ್ರಹಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಾಗಡಿಗೆ ಹೇಮಾವತಿ ನೀರು ನೀಡಲು ತುಮಕೂರಿನ ರೈತರು ಪ್ರತಿಭಟಿಸುತ್ತಿರುವಾಗ ಎರಡೂ ಜಿಲ್ಲೆಗಳ ಪ್ರತಿನಿಧಿಗಳು ಹಾಗೂ ರೈತರ ಜೊತೆ ಸರ್ಕಾರ ಚರ್ಚಿಸಬೇಕಿತ್ತು. ಈ ಕೆಲಸವನ್ನು ಸರ್ಕಾರ ಮಾಡದೆಯೇ ರೈತರ ನಡುವೆಯೇ ಎತ್ತಿ ಕಟ್ಟುವ ಕೆಲಸ ಮಾಡಿದೆ. ರೈತರಿಗೆ ಮನವರಿಕೆ ಮಾಡುವ ಬದಲು ಬೆದರಿಕೆ ಹಾಕುವುದು ಒಳ್ಳೆಯದಲ್ಲ. ಎಲ್ಲ ರೈತರನ್ನು ಸಮಭಾವದಿಂದ ನೋಡಬೇಕೆ ಹೊರತು, ಮಠಾಧೀಶರ ಮೇಲೆ, ಜನಪ್ರತಿನಿಧಿಗಳ ಮೇಲೆ ಕೇಸು ಹಾಕಬಾರದು ಎಂದು ಹೇಳಿದರು.

ರೈತರ ವಿರುದ್ಧ ಪ್ರಕರಣ ದಾಖಲಿಸುವುದು ಅಕ್ಷಮ್ಯ ಅಪರಾಧ. ರೈತರ ಜೊತೆಗೆ ಚರ್ಚಿಸಿ ಸಮನ್ವಯ ಸಾಧಿಸಬೇಕು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಕುರ್ಚಿ ಹೋದರೆ ಅಧಿಕಾರವೇ ಇರುವುದಿಲ್ಲ. ರಾಜ್ಯ ಸರ್ಕಾರ ಎರಡು ಜಿಲ್ಲೆಗಳ ಸರ್ವಪಕ್ಷ ಸಭೆ ಕರೆದು ತೀರ್ಮಾನ ಕೈಗೊಳ್ಳಬೇಕು ಎಂದರು.

ಹೇಮಾವತಿ ಕೆನಾಲ್‌ ಸಮಸ್ಯೆ ಚರ್ಚಿಸಿ ಇತ್ಯರ್ಥ: ಡಾ। ಪರಂ

ತಾಂತ್ರಿಕ ಸಮಿತಿಯು ನೀಡಿದ ವರದಿ ಆಧರಿಸಿ ತುಮಕೂರಿನಲ್ಲಿ ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿ ಆರಂಭಿಸಲಾಗಿದೆ. ಈಗ ಬಿಜೆಪಿ ಶಾಸಕರು ಗಲಾಟೆ ಮಾಡಿಸುತ್ತಿದ್ದಾರೆ. ಈ ಕುರಿತು ಚರ್ಚಿಸಿ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸುವುದಾಗಿ ಎಂದು ಗೃಹ ಸಚಿವ ಡಾ। ಜಿ.ಪರಮೇಶ್ವರ್‌ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಂತ್ರಿಕ ಸಮಿತಿಯು ಯೋಜನೆ ಮಾಡಿ, ಯಾವುದೇ ತೊಂದರೆ ಇಲ್ಲ ಎಂದು ಹೇಳಿತ್ತು. ಕಾಮಗಾರಿ ಆರಂಭವಾದ ನಂತರ ಬಿಜೆಪಿ ಶಾಸಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಅಧಿಕಾರಿಗಳ ಸಭೆ ಕರೆದು ಚರ್ಚೆ ಮಾಡುತ್ತೇನೆ. ಗಲಾಟೆಗೆ ಸಂಬಂಧಿಸಿದಂತೆ ಸ್ವಾಮೀಜಿಯೊಬ್ಬರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಬಗ್ಗೆಯೂ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಯಾವುದೇ ಸಮಸ್ಯೆ ಇಲ್ಲದೇ ಕೆಲಸ ಮುಂದುವರೆಸುತ್ತೇವೆ ಎಂದರು.

ತುಮಕೂರಿನ ತರಕಾರಿ ಮಾಗಡಿಯಲ್ಲಿ ಮಾರಾಟ ಮಾಡಲು ಬಿಡಲ್ಲ ಎಂಬ ಕಾಂಗ್ರೆಸ್ ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಒಬ್ಬೊಬ್ಬ ಶಾಸಕರು ಒಂದೊಂದು ರೀತಿ ಮಾತನಾಡುತ್ತಿದ್ದಾರೆ. ಆ ರೀತಿಯಲ್ಲಿ ಯಾರೂ ಮಾತನಾಡಬಾರದು. ಎಲ್ಲಾ ಶಾಸಕರು ಸಂಯಮದಿಂದ ಹೋಗಬೇಕು ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!
ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್