Kamal Haasan: ಕ್ಷಮೆಯಾಚನೆಗೆ ಇಂದು ಮಧ್ಯಾಹ್ನದವರೆಗೆ ಡೆಡ್‌ಲೈನ್‌ | ಕನ್ನಡಿಗರ ವಿರುದ್ಧವೇ ಕಮಲ್‌ ಹೈಕೋರ್ಟ್‌ಗೆ

Kannadaprabha News   | Kannada Prabha
Published : Jun 03, 2025, 06:43 AM ISTUpdated : Jun 03, 2025, 10:30 AM IST
kamal hassan, vikram, indian2

ಸಾರಾಂಶ

ಕಮಲ್ ಹಾಸನ್ ಅವರ 'ಥಗ್ ಲೈಫ್' ಚಿತ್ರ ಬಿಡುಗಡೆಗೆ ಕರ್ನಾಟಕದಲ್ಲಿ ವಿರೋಧ ವ್ಯಕ್ತವಾಗಿದ್ದು, ನಿರ್ಮಾಣ ಸಂಸ್ಥೆ ಹೈಕೋರ್ಟ್ ಮೊರೆ ಹೋಗಿದೆ. ಕಮಲ್ ಹಾಸನ್ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಕ್ಷಮೆಯಾಚನೆಗೆ ಗಡುವು ನೀಡಲಾಗಿದೆ.

ಬೆಂಗಳೂರು (ಜೂ.3) : ‘ಕನ್ನಡ ಭಾಷೆ ತಮಿಳು ಭಾಷೆಯಿಂದ ಜನ್ಮ ತಾಳಿದೆ’ ಎಂದು ವಿವಾದ್ಮಾತಕ ಹೇಳಿಕೆ ನೀಡಿದ ನಟ ಕಮಲ್‌ ಹಾಸನ್‌ ನಟನೆಯ ‘ಥಗ್ ಲೈಫ್’ ಸಿನಿಮಾವನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲು ಭಾರೀ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪ್ರದರ್ಶನ ತಡೆಯದಂತೆ ಕಮಲ್‌ ಅವರ ಚಿತ್ರ ನಿರ್ಮಾಣ ಸಂಸ್ಥೆ ‘ರಾಜ್‌ಕಮಲ್‌ ಫಿಲ್ಮ್ಸ್‌ ಇಂಟರ್ ನ್ಯಾಷನಲ್‌’ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.

ಜೂನ್‌ 5ರಂದು ಥಗ್ ಲೈಫ್ ಚಿತ್ರದ ಬಿಡುಗಡೆಯಾಗುತ್ತಿರುವುದರಿಂದ ಸಿನಿಮಾ ಹಂಚಿಕೆ ಮತ್ತು ಬಿಡುಗಡೆ, ಪ್ರದರ್ಶನ ತಡೆಯದಂತೆ ಕರ್ನಾಟಕ ಸರ್ಕಾರ, ಪೊಲೀಸ್ ಇಲಾಖೆ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಿರ್ಬಂಧಿಸಬೇಕು. ಸಿನಿಮಾ ಪ್ರದರ್ಶನ, ಥಿಯೇಟರ್‌, ಸಿನಿಮಾ ಪ್ರೇಕ್ಷಕರು, ನಿರ್ದೇಶಕರು, ನಿರ್ಮಾಪಕರು, ಕಲಾವಿದರು, ಹಂಚಿಕೆದಾರರಿಗೆ ಸೂಕ್ತ ಭದ್ರತೆ ಒದಗಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸಂಸ್ಥೆ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದೆ.

ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ.ನಾರಾಯಣ್‌ ಸಲ್ಲಿಸಿರುವ ಅರ್ಜಿಯಲ್ಲಿ ರಾಜ್ಯ ಗೃಹ ಇಲಾಖೆ, ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರು, ನಗರ ಪೊಲೀಸ್‌ ಆಯುಕ್ತರು, ಸೆಂಟ್ರಲ್‌ ಬೋರ್ಡ್‌ ಆಫ್‌ ಫಿಲ್ಮ್‌ ಸರ್ಟಿಫಿಕೇಷನ್‌, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಪ್ರತಿವಾದಿ ಮಾಡಲಾಗಿದೆ.

300 ಕೋಟಿ ರು. ವೆಚ್ಚದಲ್ಲಿ ಥಗ್ ಲೈಫ್ ಸಿನಿಮಾವನ್ನು ಬಹುತಾರಾಗಣದೊಂದಿಗೆ ನಿರ್ಮಿಸಲಾಗಿದೆ. ಆದರೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಈ ಸಿನಿಮಾವನ್ನು ರಾಜ್ಯದಲ್ಲಿ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂಬುದಾಗಿ ಹೇಳಿದ್ದಾರೆ. ಮಂಡಳಿಯ ನಡೆಯು ಸಂವಿಧಾನ ಬಾಹಿರವಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ. ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ನಟ ಕಮಲ್ ಹಾಸನ್ ನೀಡಿರುವ ಹೇಳಿಕೆ ಕನ್ನಡ ಮತ್ತು ತಮಿಳು ಭಾಷಿಕರ ನಡುವಿನ ಸಾಂಸ್ಕೃತಿಕ ಒಗ್ಗಟ್ಟು ಮತ್ತು ವಾತ್ಸಲ್ಯವನ್ನು ಬೆಸೆಯುವಂತಹದ್ದಾಗಿದೆ. ಆದರೆ, ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಈ ಚಲನ ಚಿತ್ರದಲ್ಲಿ ಯಾವುದೇ ನಟರ ಸಂಭಾಷಣೆಯಲ್ಲಿ ತಮಿಳು ಮತ್ತು ಕನ್ನಡ ಭಾಷೆಗಳಿಗೆ ಸಂಬಂಧಿಸಿದಂತೆ ಉಲ್ಲೇಖವಿಲ್ಲ. ಮೇಲಾಗಿ ಕಮಲ್ ಹಾಸನ್ ಕ್ಷಮೆ ಕೇಳಿದರೂ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂಬುದಾಗಿ ಮಂಡಳಿ ತಿಳಿಸಿರುವುದು ಕಾನೂನು ಬಾಹಿರ ಕ್ರಮ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಚಿತ್ರ ಬಿಡುಗಡೆಗೆ ತೊಂದರೆಯಾಗದಂತೆ ಕ್ರಮ ಜರುಗಿಸಲು ಕೋರಿ ಕರ್ನಾಟಕ ಪೊಲೀಸ್ ಇಲಾಖೆಗೆ ರಿಜಿಸ್ಟರ್‌ ಪೋಸ್ಟ್‌ ಮತ್ತು ಇ-ಮೇಲ್ ಮೂಲಕ ಮೇ 31ರಂದು ಮನವಿ ಮಾಡಲಾಗಿತ್ತು. ಆದರೆ, ನಮ್ಮ ಮನವಿಗೆ ಕರ್ನಾಟಕ ಪೊಲೀಸ್‌ ಇಲಾಖೆ ಈವರೆಗೂ ಪ್ರತಿಕ್ರಿಯೆ ಬಂದಿಲ್ಲ. ಸೆಂಟ್ರಲ್‌ ಬೋರ್ಡ್‌ ಆಫ್‌ ಫಿಲ್ಮ್‌ ಸರ್ಟಿಫಿಕೇಷನ್‌ ವತಿಯಿಂದ ಚಿತ್ರ ಪ್ರದರ್ಶನಕ್ಕೆ ಪ್ರಮಾಣ ಪತ್ರ ಸಹ ಪಡೆಯಲಾಗಿದೆ. ಪ್ರಮಾಣ ಪತ್ರ ಪಡೆದ ನಂತರ ಚಿತ್ರ ಪ್ರದರ್ಶನಕ್ಕೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಅಡ್ಡಿಪಡಿಸುವುದು ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಚಿತ್ರ ಪ್ರದರ್ಶನಕ್ಕೆ ಅಡ್ಡಿಪಡಿಸಿದರೆ, ತನಗೆ ಕೋಟ್ಯಂತರ ಹಣ ನಷ್ಟವಾಗಲಿದೆ. ಚಲನಚಿತ್ರ ಪ್ರದರ್ಶನದ ಹಕ್ಕು ಮತ್ತು ವೀಕ್ಷಿಸುವವರ ಹಕ್ಕಿನ ಉಲ್ಲಂಘನೆಯಾಗಲಿದೆ. ಹಾಗಾಗಿ ಸಿನಿಮಾ ಹಂಚಿಕೆ ಮತ್ತು ಬಿಡುಗಡೆ, ಪ್ರದರ್ಶನ ತಡೆಯದಂತೆ ಕರ್ನಾಟಕ ಸರ್ಕಾರ, ಪೊಲೀಸ್ ಇಲಾಖೆ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಿರ್ಬಂಧಿಸಬೇಕು ಎಂದು ಹೈಕೋರ್ಟ್‌ಗೆ ಸಂಸ್ಥೆ ಮನವಿ ಮಾಡಿದೆ.

ಕಮಲ್‌ ಕ್ಷಮೆಯಾಚನೆಗೆ ಇಂದು ಮಧ್ಯಾಹ್ನದವರೆಗೆ ಡೆಡ್‌ಲೈನ್‌

ಕನ್ನಡಿಗರನ್ನು ಕೆಣಕಿರುವ ನಟ ಕಮಲ್‌ ಹಾಸನ್‌ ಅವರಿಂದ ಕ್ಷಮೆ ಕೇಳಿಸುವುದಕ್ಕೆ ಮಂಗಳವಾರ ಮಧ್ಯಾಹ್ನದವರೆಗೂ ಕಾಯುವ ನಿರ್ಧಾರಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬಂದಿದೆ ಎಂದು ತಿಳಿದು ಬಂದಿದೆ.

ಸೋಮವಾರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆದಿದ್ದು, ಈ ಸಭೆಯಲ್ಲಿ ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಮೊದಲು ಸೋಮವಾರದವರೆಗೂ ಡೆಡ್‌ಲೈನ್‌ ನೀಡಿದ್ದ ವಾಣಿಜ್ಯ ಮಂಡಳಿ ಸೇರಿದಂತೆ ಚಿತ್ರರಂಗದ ಪ್ರಮುಖ ಅಂಗಸಂಸ್ಥೆಗಳು, ಈಗ ಮತ್ತೊಂದು ದಿನಕ್ಕೆ ಡೆಡ್‌ಲೈನ್‌ ಅನ್ನು ವಿಸ್ತರಣೆ ಮಾಡಿದೆ.

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಈ ಕುರಿತು ಮಾತನಾಡಿ, ‘ಕಮಲ್‌ ಹಾಸನ್‌ ವಿಚಾರದಲ್ಲಿ ಕನ್ನಡಪರ ಸಂಘಟನೆಗಳು ಯಾವುದೇ ಹೋರಾಟ ಮಾಡಿದರೂ ನಾವು ಅವರ ಜತೆಗೆ ಇರುತ್ತೇವೆ. ಸರ್ಕಾರ ಕೂಡ ಈ ವಿಚಾರವನ್ನು ಗಮನಿಸಿದ್ದು, ಸರ್ಕಾರದ ನಿರ್ಧಾರಕ್ಕೆ ವಾಣಿಜ್ಯ ಮಂಡಳಿ ಬದ್ಧವಾಗಿದೆ. ಕಾನೂನು ಬಾಹಿರವಾಗಿ ನಾವು ಯಾವುದೇ ರೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಕೋರ್ಟ್‌ಗೆ ಹೋದರೂ ಕೂಡ ಕಮಹಲ್‌ ಹಾಸನ್‌ ‘ಥಗ್‌ ಲೈಫ್‌’ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಬಿಡಲ್ಲ ಎಂದು ನಾನು ಎಲ್ಲೂ ಹೇಳಿಲ್ಲ. ವಿತರಕರು ಹಾಗೂ ಪ್ರದರ್ಶಕರೇ ಈ ಚಿತ್ರವನ್ನು ಪ್ರದರ್ಶಿಸಲು ರೆಡಿ ಇಲ್ಲ. ಅವರ ಜತೆಗೆ ನಾವು ನಿಲ್ಲುತ್ತೇವೆ ಎಂದು ಹೇಳಿದ್ದೇನೆ’ ಎಂದು ಹೇಳಿದ್ದಾರೆ.

ಮಂಗಳವಾರ ಮಧ್ಯಾಹ್ನ 12 ಗಂಟೆಗೆ ದುಬೈನಿಂದ ಕಮಲ್‌ ಹಾಸನ್‌ ಚೆನ್ನೈಗೆ ಬರಲಿದ್ದಾರೆ. ಚೆನ್ನೈನಲ್ಲಿ ‘ಥಗ್‌ ಲೈಫ್‌’ ಚಿತ್ರಕ್ಕೆ ಸಂಬಂಧಪಟ್ಟ ವಿತರಕರ ಜತೆಗೆ ಸಭೆ ನಡೆಯಲಿದೆ. ಹೀಗಾಗಿ ಮಂಗಳವಾರ ಮಧ್ಯಾಹ್ನದ ನಂತರ ಕಮಲ್‌ ಹಾಸನ್‌ ನಿರ್ಧಾರ ಗೊತ್ತಾಗಲಿದೆ.

- ಉಮೇಶ್‌ ಬಣಕಾರ್‌, ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!
ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್