Young Woman Threatened: ಮದುವೆಗೆ ಒಪ್ಪದ ಯುವತಿಗೆ ಯುವಕನಿಂದ ಯುವತಿಗೆ ಪ್ರಾಣ ಬೆದರಿಕೆ!

Published : Jun 03, 2025, 06:55 AM ISTUpdated : Jun 03, 2025, 10:22 AM IST
Mandya incident

ಸಾರಾಂಶ

ಮಂಡ್ಯದಲ್ಲಿ ವಿವಾಹ ರದ್ದುಗೊಂಡ ಯುವಕನೊಬ್ಬ ಯುವತಿಗೆ ಕೊಲೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಯುವಕ ಸೆಲ್ಫಿ ಫೋಟೋಗಳನ್ನು ಬಳಸಿ ಯುವತಿಯ ಮದುವೆ ಪ್ರಸ್ತಾಪಗಳನ್ನು ನಿಲ್ಲಿಸುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ಯುವತಿ ಕೆರಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಂಡ್ಯ (ಜೂ.3) : ವಿವಾಹ ರದ್ದುಗೊಂಡ ಯುವಕನೊಬ್ಬ ನನ್ನನ್ನು ಮದುವೆಯಾಗದಿದ್ದರೆ ಕೊಲೆ ಮಾಡುವುದಾಗಿ ಯುವತಿಯೊಬ್ಬಳಿಗೆ ಬೆದರಿಕೆ ಹಾಕಿರುವ ಘಟನೆ ತಾಲೂಕಿನ ಕೆರಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.

ಮಂಡ್ಯ ತಾಲೂಕಿನ ಚಿಕ್ಕಬಳ್ಳಿ ಗ್ರಾಮದ ಬಾಲಕೃಷ್ಣ ಅಲಿಯಾಸ್ ಯಜಮಾನ್ ದೊಡ್ಡೋನು ಎಂಬಾತನೇ ಕೊಲೆ ಬೆದರಿಕೆ ಹಾಕಿರುವ ಆರೋಪಿ. ಯುವತಿ ನೀಡಿದ ದೂರಿನನ್ವಯ ಈತನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳ ಹಿಂದೆ ಯುವತಿಯ ತಂದೆ-ತಾಯಿ ಬಾಲಕೃಷ್ಣನೊಂದಿಗೆ ವಿವಾಹ ಮಾಡಿಕೊಡುವುದಾಗಿ ಒಪ್ಪಿದ್ದು ನಿಜ. ಆ ನಂತರ ಮದ್ದೂರು ತಾಲೂಕು ಹನುಮಂತನಗದ ಶ್ರೀಆತ್ಮಲಿಂಗೇಶ್ವರ ದೇವಸ್ಥಾನಕ್ಕೆ ಹೋಗಿದ್ದ ವೇಳೆ ಬಾಲಕೃಷ್ಣ ಯುವತಿಯೊಂದಿಗೆ ಸೆಲ್ಫಿ ಫೋಟೋ ತೆಗೆದುಕೊಂಡಿದ್ದನು ಎಂದು ದೂರಿನಲ್ಲಿ ದಾಖಲಿಸಿದ್ದಾರೆ.

ಬಾಲಕೃಷ್ಣನ ನಡತೆ ಬಗ್ಗೆ ಯುವತಿಯ ಕುಟುಂಬದವರು ವಿಚಾರಣೆ ಮಾಡಿದಾಗ ಆತನ ನಡವಳಿಕೆ ಸರಿಯಿಲ್ಲದ ಕಾರಣ ವಿವಾಹ ಪ್ರಸ್ತಾಪವು ರದ್ದುಗೊಂಡಿತ್ತು. ನಂತರ ಯುವತಿಯ ಕುಟುಂಬದವರ ವಿರುದ್ಧ ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವುದಾಗಿ ಯುವತಿ ತಿಳಿಸಿದ್ದಾಳೆ.

ಹನುಮಂತನಗರದಲ್ಲಿ ತೆಗೆದ ಸೆಲ್ಫಿ ಫೋಟೋವನ್ನೇ ಮುಂದಿಟ್ಟುಕೊಂಡು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಾ ವಿವಾಹ ನಿಶ್ಚಯ ಮಾಡಿಕೊಳ್ಳಲು ಬರುವವರ ಬಳಿ ನನ್ನ ನಡತೆ ಬಗ್ಗೆ ಸಂಶಯ ಬರುವಂತೆ ಮಾಡುತ್ತಿದ್ದಾನೆ ಎಂದು ಯುವತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾಳೆ.

ಮೇ 5 ರಂದು ಯುವತಿಯ ತಂದೆ-ತಾಯಿ ಮದ್ದೂರು ತಾಲೂಕು ಆಬಲವಾಡಿ ಗ್ರಾಮದ ಯುವಕನ್ನೊಂದಿಗೆ ವಿವಾಹ ಮಾತುಕತೆಗೆಂದು ಹೋಗಿದ್ದು, ಮೇ 12 ರಂದು ಹೆಣ್ಣು ನೋಡುವ ಶಾಸ್ತ್ರಕ್ಕೆ ಬರುವುದಾಗಿ ಒಪ್ಪಿದ್ದರು. ಆದರೆ, ಬಾಲಕೃಷ್ಣ ಯುವತಿಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ಫೋಟೋವನ್ನು ಮದುವೆ ನಿಶ್ಚಯವಾಗಿದ್ದ ಯುವಕನ ಮೊಬೈಲ್‌ಗೆ ಕಳುಹಿಸಿ ಸಲ್ಲದ ಅಪಪ್ರಚಾರ ಮಾಡಿ ಯುವತಿಯ ನಡತೆಯ ಬಗ್ಗೆ ಯುವಕನ ಕುಟುಂಬದವರಿಗೆ ಸಂಶಯ ಬರುವಂತೆ ಮಾಡಿದ್ದಾನೆ. ವಿವಾಹಕ್ಕೆ ಸಂಬಂಧಿಸಿದಂತೆ ಯುವತಿಯನ್ನು ನೋಡಲು ಬರುವ ವರಗಳಿಗೆ ಯುವತಿಯ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡುತ್ತಿದ್ದಾನೆ. ನನ್ನನ್ನು ಬ್ಲಾಕ್‌ಮೇಲೆ ಮಾಡುತ್ತಿರುವುದಾಗಿ ದೂರಿದ್ದಾಳೆ.

ಮೇ 7 ರಂದು ಸಂಜೆ 5.30ರ ಸಮಯದಲ್ಲಿ ಯುವತಿ ಹಲ್ಲೇಗೆರೆ ಗ್ರಾಮದ ಸಂತೆಯಲ್ಲಿ ಮನೆಗೆ ತರಕಾರಿ ಮತ್ತು ಸಾಮಾನು ತರಲು ಹೋಗಿದ್ದ ವೇಳೆ ಬಾಲಕೃಷ್ಣ ಯುವತಿಯನ್ನು ಅಡ್ಡಹಾಕಿದನು. ಅವಾಚ್ಯಶಬ್ಧಗಳಿಂದ ನಿಂದಿಸುತ್ತಾ ನೀನು ನನ್ನನ್ನೇ ಮದುವೆಯಾಗಬೇಕು. ಬೇರೆಯವರನ್ನು ಮದುವೆಯಾಗಲು ಬಿಡುವುದಿಲ್ಲ. ನಿನ್ನ ಮದುವೆ ಎಲ್ಲೇ ನಿಶ್ಚಯವಾದರೂ ಅಲ್ಲಿಗೆ ಬಂದು ನಿನ್ನ ಮದುವೆ ನಿಲ್ಲಿಸುವುದಾಗಿ ಬೆದರಿಕೆ ಹಾಕುವುದಲ್ಲದೇ, ಅಲ್ಲೇ ನಿನ್ನನ್ನೂ ಕೊಲೆ ಮಾಡುವುದಾಗಿ ಹೆದರಿಸಿದ್ದಾನೆ. ಸಾರ್ವಜನಿಕವಾಗಿ ಯುವತಿಯನ್ನು ಬೈದು ಹೀಯಾಳಿಸಿರುವುದಾಗಿ ಆರೋಪಿಸಿದ್ದಾಳೆ.

ಈ ಸಂಬಂಧ ಯುವತಿಯು ಮುಂದಿನ ದಿನಗಳಲ್ಲಿ ನನ್ನ ಪ್ರಾಣಕ್ಕೆ ಅಪಾಯ ಎದುರಾದರೆ ಅದಕ್ಕೆ ಬಾಲಕೃಷ್ಣ ಸಂಪೂರ್ಣ ಕಾರಣರಾಗಿರುತ್ತಾರೆ ಎಂದು ಸ್ಪಷ್ಟಪಡಿಸಿ ಆತನ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

ದೌರ್ಜನ್ಯ ಸಹಿಸೋಲ್ಲ

ಯುವತಿಯೊಬ್ಬಳ ಮೇಲೆ ಆರೋಪಿ ನಡೆಸಿರುವ ದೌರ್ಜನ್ಯವನ್ನು ಸಹಿಸುವುದಿಲ್ಲ. ಯುವತಿ ನೀಡಿದ ದೂರನ್ನು ಆಧರಿಸಿ ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸ್‌ಪಿ ಅವರೊಂದಿಗೆ ಮಾತನಾಡಿದ್ದೇನೆ. ಆ್ಯಸಿಡ್ ಹಾಕುವುದರ ಜೊತೆಗೆ ಪ್ರಾಣ ಬೆದರಿಕೆಯೊಡ್ಡಿರುವವನ ವಿರುದ್ಧ ಕ್ರಮ ಕೈಗೊಳ್ಳಲು ತಿಳಿಸಿದ್ದೇನೆ.

- ಪಿ.ರವಿಕುಮಾರ್, ಶಾಸಕರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌