
ಬೆಂಗಳೂರು (ಅ.19): ಹೈಕೋರ್ಟ್ ಸೂಚನೆಯಿಂದ ಕೊನೆಗೂ ಎಚ್ಚೆತ್ತ ಓಲಾ ಆ್ಯಪ್ ಕಂಪನಿಯು ಆಟೋರಿಕ್ಷಾ ಪ್ರಯಾಣ ದರ ಸುಲಿಗೆಯನ್ನು ನಿಲ್ಲಿಸಿದೆ. ಸದ್ಯ ಸರ್ಕಾರ ನಿಗದಿಪಡಿಸಿರುವ ಮೀಟರ್ ದರದ ಜತೆ ಶೇ.10 ಹಾಗೂ ಜಿಎಸ್‌ಟಿ ಒಳಗೊಂಡ ದರವನ್ನು ಪ್ರಯಾಣಿಕರಿಂದ ಪಡೆಯುತ್ತಿದೆ.
ಕಳೆದ ಶುಕ್ರವಾರ (ಅ.14ರಂದು) ಹೈಕೋರ್ಟ್ ನಿರ್ದೇಶನ ಬಳಿಕ ಉಬರ್ ಆ್ಯಪ್ ಎಚ್ಚೆತ್ತುಕೊಂಡು ಶನಿವಾರದಿಂದಲೇ ದರ ಇಳಿಕೆ ಮಾಡಿತ್ತು. ಆದರೆ, ಓಲಾ ಮಾತ್ರ ದರ ಸುಲಿಗೆಯನ್ನು ಮುಂದುವರೆಸಿತ್ತು. ಸೋಮವಾರ ಆ್ಯಪ್ ಕಂಪನಿಗಳಿಗೆ ಹೈಕೋರ್ಟ್ ಆದೇಶ ಪ್ರತಿ ಲಭಿಸಿದ್ದು, ಅದರಂತೆ ಮಂಗಳವಾರದಿಂದ ಕಡಿಮೆ ದರವನ್ನು ಪ್ರಯಾಣಿಕರಿಂದ ಪಡೆಯಲಾರಂಭಿಸಿವೆ. ಸದ್ಯ ಓಲಾ, ಉಬರ್ ಎರಡೂ ಆ್ಯಪ್‌ಗಳಲ್ಲಿಯೂ ಎರಡು ಕಿ.ಮೀ.ಗೆ 40 ರು.ಗಿಂತ ಕಡಿಮೆ ದರವಿದೆ.
ಕೊನೆಗೂ ಹೈಕೋರ್ಟ್ ತೀರ್ಪಿಗೆ ಬಗ್ಗಿದ Ola, uber ಕಂಪೆನಿಗಳು
ಸರ್ಕಾರದಿಂದ ಸೂಚನೆ ಬಂದ ಬಳಿಕ ದರಪಟ್ಟಿನಿಗದಿ: ಅಗ್ರಿಗೇಟರ್ಸ್‌ಗಳಾದ ಓಲಾ, ಉಬರ್‌ಗಳಿಗೆ ಆಟೋರಿಕ್ಷಾ ಅನುಮತಿ ನೀಡುವ ಹಾಗೂ ದರ ನಿಗದಿ ಪಡಿಸುವ ಕುರಿತು ‘ಅಗ್ರಿಗೇಟರ್ಸ್ ಕಂಪನಿಗಳೊಂದಿಗೆ ಚರ್ಚಿಸಿ ಮುಂದಿನ 15 ದಿನಗಳಲ್ಲಿ ಹೊಸದಾಗಿ ದರ ನಿಗದಿಪಡಿಸಬೇಕು. ಅನುಮತಿಗೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಸಾರಿಗೆ ಇಲಾಖೆಗೆ ಹೈಕೋರ್ಟ್ ಸೂಚಿಸಿತ್ತು. ಸೋಮವಾರ ಕೋರ್ಟ್ ಆದೇಶ ಪ್ರತಿಯು ಸಾರಿಗೆ ಇಲಾಖೆಗೆ ಲಭ್ಯವಾಗಿದೆ. ಎರಡು ದಿನಗಳಿಂದ ಬೆಲೆ ನಿಗದಿ ಕುರಿತು ಸಾರಿಗೆ ಇಲಾಖೆ ಯಾವುದೇ ಸಭೆಯನ್ನು ಕಂಪನಿಗಳೊಂದಿಗೆ ನಡೆಸಿಲ್ಲ.
‘ಸರ್ಕಾರದಿಂದ ಸೂಚನೆ ಬಂದ ಬಳಿಕ ಆ್ಯಪ್ ಕಂಪನಿಗಳ ಸಭೆ, ಬೆಲೆ ನಿಗದಿ, ಆಟೋರಿಕ್ಷಾ ಪರವಾನಗಿ ಅರ್ಜಿಯ ಪಡೆದು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೂ ಯಾವುದೇ ಆಟೋರಿಕ್ಷಾ ಜಪ್ತಿ, ದಂಡ ವಸೂಲಿಗೂ ಮುಂದಾಗುವುದಿಲ್ಲ’ ಎಂದು ಸಾರಿಗೆ ಇಲಾಖೆಯ ಆಯುಕ್ತ ಎಚ್‌ಎಂಟಿ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಆಟೋರಿಕ್ಷಾ ಸಕಾಲಕ್ಕೆ ಸಿಗದೆ ಪರದಾಟ: ಮೀಟರ್ ದರಕ್ಕೆ ಆಟೋರಿಕ್ಷಾ ಚಾಲನೆ ಮಾಡಬೇಕಿರುವುದರಿಂದ ಆ್ಯಪ್ ಕಂಪನಿಗಳು ಚಾಲಕರಿಗೆ ಯಾವುದೇ ಹೆಚ್ಚುವರಿ ದರ ಅಥವಾ ಪ್ರೋತ್ಸಾಹ ಧನ ನೀಡುತ್ತಿಲ್ಲ. ಹೀಗಾಗಿ, ಹೆಚ್ಚಿನ ಚಾಲಕರು ಈ ಹಿಂದಿನಂತೆಯೇ ಮೀಟರ್ ಹಾಕಿಕೊಂಡು ಸೇವೆ ನೀಡಲು ಮುಂದಾಗಿದ್ದಾರೆ. ಆ್ಯಪ್‌ಗಳು ನೀಡುವ ಬುಕ್ಕಿಂಗ್‌ಗಳನ್ನು ಅನುಮೋದಿಸಿ ಸೇವೆ ನೀಡುತ್ತಿಲ್ಲ. ಇದರಿಂದ ಉಬರ್ ಮತ್ತು ಓಲಾ ಆಟೋರಿಕ್ಷಾ ಬುಕ್ಕಿಂಗ್‌ನಲ್ಲಿ ಮಂಗಳವಾರವೂ ವ್ಯತ್ಯಯ ಕಂಡು ಬಂದಿತ್ತು. ತ್ವರಿತವಾಗಿ ಆಟೋರಿಕ್ಷಾ ಸಿಗದೇ ಗ್ರಾಹಕರು ಪರದಾಡಿದರು.
ಕೊನೆಗೂ ಉಬರ್ ಆಟೋ ದರ ಇಳಿಕೆ; ಓಲಾ ಸಡ್ಡು..!
ಹೆಚ್ಚು ದರ ಪಡೆದರೆ ದೂರು ನೀಡಿ: ಓಲಾ, ಉಬರ್ ಆ್ಯಪ್‌ಗಳು ಹೆಚ್ಚು ದರ ವಸೂಲಿ ಮಾಡಿದರೆ ಪ್ರಯಾಣಿಕರು ದೂರು ಸಲ್ಲಿಸಬೇಕು ಎಂದು ಸಾರಿಗೆ ಇಲಾಖೆ ಹೇಳಿದೆ. ನ್ಯಾಯಾಲಯದ ಸೂಚನೆಯಂತೆ ಮೀಟರ್‌ಗಿಂತ ಶೇ.10ರಷ್ಟುಹಾಗೂ ಜಿಎಸ್‌ಟಿ (ಶೇ.5) ಸೇರಿ ದರ ಪಡೆಯಬೇಕು. ಒಂದು ವೇಳೆ ಅದಕ್ಕಿಂತ ಹೆಚ್ಚುವರಿ ದರ ಪಡೆದರೆ ಸಾರಿಗೆ ಇಲಾಖೆ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದು. ದೂರುಗಳ ವರದಿಯನ್ನು ನ್ಯಾಯಾಲಕ್ಕೆ ನೀಡಿ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸಹಾಯವಾಣಿ ಸಂಖ್ಯೆ: 9449863429 / 9449863426
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ