
ಬೆಂಗಳೂರು, (ಅ.02): ಬೆಳೆಗಾರ- ಖರೀದಿದಾರ- ಸಂಸ್ಕರಣೆದಾರ- ಬಳಕೆದಾರ ಇವರೆಲ್ಲರನ್ನು ತಂತ್ರಜ್ಞಾನ ಬಳಸಿ ಪರಸ್ಪರ ಸಂಪರ್ಕಕ್ಕೆ ಲಭ್ಯವಾಗಿಸುವ ಕೆಲಸ ಸಹಕಾರ ವಲಯದಲ್ಲಿ ಹೆಚ್ಚಾಗಿ ನಡೆಯಬೇಕು ಎಂದು ಐಟಿ/ಬಿಟಿ ಸಚಿವರೂ ಆದ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.
ಸುಭಿಕ್ಷಾ ಆರ್ಗ್ಯಾನಿಕ್ ಫಾರ್ಮರ್ಸ್ ಮಲ್ಟಿಸ್ಟೇಟ್ ಕೋ ಆಪರೇಟಿವ್ ಸೊಸೈಟಿಯ ‘ಸಂಹಿತಾ’ ಮೊಬೈಲ್ ಆ್ಯಪ್ ಅನ್ನು ಇಂದು (ಅ.02) ಲೋಕಾರ್ಪಣೆ ಮಾಡಿದರು. ಬಳಿಕ ಮಾತನಾಡಿದ ಅವರು, ಬೆಳೆಗಾರರಿಂದ ಹಿಡಿದು ಬಳಕೆದಾರರವರೆಗಿನ ಬೇರೆ ಬೇರೆ ಕೊಂಡಿಗಳನ್ನು ಸೇರಿಸುವ ಕೆಲಸ ಖಾಸಗಿ ಕ್ಷೇತ್ರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ನಡೆಯುತ್ತಿದೆ. ಆದರೆ ಈ ಕೆಲಸ ಸಹಕಾರ ವಲಯಕ್ಕೂ ವಿಸ್ತರಣೆಯಾಗಬೇಕು ಎಂದರು.
ವಿದ್ಯಾರ್ಥಿಗಳ ಕೌಶಲ ಕಲಿಕೆಗೆ ಇನ್ಫೊಸಿಸ್ ಜತೆ 3 ಒಡಂಬಡಿಕೆ: ಅಶ್ವತ್ಥನಾರಾಯಣ ಮಾಹಿತಿ
ತಂತ್ರಜ್ಞಾನದಲ್ಲಿ, ಅದರಲ್ಲೂ ಕೃಷಿ ತಾಂತ್ರಿಕತೆಯಲ್ಲಿ ಕರ್ನಾಟಕವು ಬಹಳ ಮುಂದೆ ಇದೆ. ಬ್ಲಾಕ್ ಚೈನ್ ಸೇರಿದಂತೆ ತಂತ್ರಜ್ಞಾನ ಮಾರ್ಗೋಪಾಯಗಳನ್ನು ಬಳಸಿ ವ್ಯವಸಾಯವನ್ನು ಉತ್ತಮ ವೃತ್ತಿ ಎನ್ನುವಂತಹ ಹಾಗೂ ಯಾರೇ ಆಗಲಿ ಇಷ್ಟಪಟ್ಟು ರೈತನಾಗಬೇಕು ಎಂದು ಹಂಬಲಿಸುವಂತಹ ವಾತಾವರಣ ಸೃಷ್ಟಿಸಬೇಕು ಎಂದು ಅಭಿಪ್ರಾಯಪಟ್ಟರು.
ವ್ಯವಸಾಯವನ್ನು ಪ್ರಕೃತಿಗೆ ಅನುಸಾರವಾಗಿ ಮಾಡಬೇಕು. ಪ್ರಕೃತಿಯನ್ನು ನಾಶ ಮಾಡಿಕೊಂಡು ಸಾಧಿಸುವ ಅಭಿವೃದ್ಧಿ ಕೇವಲ ತಾತ್ಕಾಲಿಕ. ಕೊನೆಗೆ, ಅದು ನಮ್ಮನ್ನೇ ನಾಶ ಮಾಡುತ್ತದೆ. ಹೀಗಾಗಿ ಸುಸ್ಥಿರತೆಯನ್ನು ಗಮನದಲ್ಲಿರಿಸಿಕೊಂಡು ಕೃಷಿ ಮಾಡುವುದು ಮುಖ್ಯ. ಇದನ್ನು ಮನಗಂಡು, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸುಸ್ಥಿರ ಅಭಿವೃದ್ಧಿ ಬಗ್ಗೆ ಜಾಗೃತಿ ಮೂಡಿಸಲು ಒತ್ತು ಕೊಡಲಾಗಿದೆ ಎಂದು ಸಚಿವರು ತಿಳಿಸಿದರು.
ಅರ್ ಎಸ್ ಎಸ್ ಕ್ಷೇತ್ರಿಯ ಕಾರ್ಯವಾಹ ತಿಪ್ಪೇಸ್ವಾಮಿ ಮಾತನಾಡಿ, ಸಾವಯವ ಕೃಷಿಗೆ ಒತ್ತು ನೀಡುವ ಮತ್ತು ಜಾಗೃತಿ ಮೂಡಿಸುವ ಸಲುವಾಗಿ ಈ ಆಪ್ ಅಭಿವೃದ್ಧಿಪಡಿಸಲಾಗಿದೆ. ಇದು ಸಾವಯವ ಉತ್ಪನ್ನಗಳನ್ನು ಬೆಳೆದವರು ಹಾಗೂ ಆಸಕ್ತ ಖರೀದಿದಾರರ ನಡುವೆ ಸಂಪರ್ಕ ಏರ್ಪಡಲು ಅನುವು ಮಾಡಿಕೊಡುತ್ತದೆ.. ರೈತರ ಮಾರುಕಟ್ಟೆ ಹಾಗೂ ಇನ್ನಿತರ ಕೆಲವು ಸಮಸ್ಯೆಗಳಿಗೆ ಈ ಆ್ಯಪ್ ಒಂದು ದೊಡ್ಡ ಪರಿಹಾರವಾಗಿದೆ ವಿಶ್ವಾಸ ವ್ಯಕ್ತಪಡಿಸಿದರು.
“ಸುಸ್ಥಿರ ಕೃಷಿಗಾಗಿ ಮೂರು ದಶಕಗಳ ಹೋರಾಟದಲ್ಲಿ ಭೂಮಿಗೆ ವಿಷ ಹಾಕದೆ ಬೆಳೆಯುವುದು ಮುಖ್ಯ ಎನ್ನುವ ಬಗ್ಗೆ ಅರಿವು ಮೂಡಿಸೆದೆವು. ಆದರೆ ಹಾಗೆ ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡುವುದು ಹೇಗೆ ಎನ್ನುವುದನ್ನು ನಾವು ಹೇಳಿಕೊಡಲು ಆಗಲಿಲ್ಲ. ಈ ಕೊರತೆ ತುಂಬುವುದಕ್ಕಾಗಿ ಈ ಸಂಸ್ಥೆ ಹುಟ್ಟು ಹಾಕಲಾಯಿತು. ಆದರೆ ಕೊರೋನಾದಿಂದಾಗಿ ಈ ಕಾರ್ಯ ಸ್ವಲ್ಪ ತಡವಾಯಿತು” ಎಂದು ಸಾವಯವ ಕೃಷಿ ಮಿಷನ್ ಅಧ್ಯಕ್ಷ ಆನಂದ ವಿವರಿಸಿದರು.
ಈ ಆಪ್ ನ ಮೂಲಕ ಯಾವ ಕೃಷಿ ಉತ್ಪನ್ನ ಯಾವ ಹಳ್ಳಿಯ ಯಾವ ಜಮೀನಿನಲ್ಲಿ ಬೆಳೆದದ್ದು ಎನ್ನುವುದನ್ನೂ ತಿಳಿಯಬಹುದಾಗಿದೆ. ಇಲ್ಲಿ ಮಾಹಿತಿಯು ಅಷ್ಟರಮಟ್ಟಿಗೆ ಪಾರದರ್ಶಕವಾಗಿರುತ್ತದೆ. ಇಲ್ಲಿ ಕೃಷಿ ವಸ್ತುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಕೊಡಲು ಅವಕಾಶ ಇರುವುದಿಲ್ಲ. ಈಗ 3500 ಕೃಷಿಕರು ತಲಾ ಹತ್ತು ಸಾವಿರ ರೂಪಾಯಿ ಕೊಟ್ಟು ಸೊಸೈಟಿಗೆ ಷೇರುದಾರರಾಗಿದ್ದಾರೆ. ಇನ್ನೂ ಒಂದು ಲಕ್ಷ ರೈತರು ಇದರ ಷೇರುದಾರರಾಗಿ 100 ಕೋಟಿ. ಬಂಡವಾಳ ಸಂಗ್ರಹವಾಗಬೇಕು ಎಂದರು.
ಸಾವಯವ ಪರಿವಾರದ ನಂಜುಂಡಪ್ಪ ಅವರು ಮಾತನಾಡಿ, ಈ ಆ್ಯಪ್ ಯಾವ ಕೃಷಿ ಉತ್ಪನ್ನವನ್ನು ಎಲ್ಲಿ ಬೆಳೆಯಲಾಗಿದೆ, ಅದನ್ನು ಯಾರಿಗೆ ಮಾರಾಟ ಮಾಡಬಹುದು ಎಂಬುದನ್ನು ತಿಳಿಸುವ ಜೊತೆಗೆ ರೈತಾಪಿ ಮಾಹಿತಿಗಳ ಆಗರವೂ ಆಗಿದೆ ಎಂದು ತಿಳಿಸಿದರು.
ಸಿನೆರ್ಜಿ ಸ್ಟ್ರಾಟೆಜಿಕ್ ಸೆಲ್ಯೂಷನ್ಸ್ ಇಂಟೆಲಿಬಾಟ್ ಟೆಕ್ನಾಲಜೀಸ್ ಸಂಸ್ಥೆ ನಿರ್ದೇಶಕ ದೀಲೀಪ ಸತ್ಯ, ಸುಭಿಕ್ಷಾ ಸಂಸ್ಥೆ ನಿರ್ದೇಶಕರಾದ ಮಲ್ಲಿಕಾರ್ಜುನ ಪಾಟೀಲ್ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ