
ವಿಧಾನ ಪರಿಷತ್: ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ ಶೇ. 60ಕ್ಕಿಂತ ಕಡಿಮೆ ಫಲಿತಾಂಶ ಬಂದಿದ್ದರೆ ವಿಷಯ ಶಿಕ್ಷಕರ ವಾರ್ಷಿಕ ವೇತನ, ಬಡ್ತಿ ತಡೆಹಿಡಿಯುವ, ಶಿಕ್ಷಕರ ವೇತನ ಅನುದಾನ ತಡೆಹಿಡಿಯುವ ಕ್ರಮ ಜಾರಿ ಮಾಡುವುದಿಲ್ಲ. ಈ ಸಂಬಂಧ 2019ರಲ್ಲಿ ಹೊರಡಿಸಿದ ಆದೇಶ ವಾಪಸ್ ಪಡೆಯುವ ಬಗ್ಗೆ ಪರಿಶೀಲಿಸುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ.
ಬಿಜೆಪಿಯ ಎಸ್.ವಿ. ಸಂಕನೂರು ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಇದಕ್ಕೂ ಮುನ್ನ ಮಾತನಾಡಿದ ಎಸ್.ವಿ. ಸಂಕನೂರು, ಫಲಿತಾಂಶ ಕಡಿಮೆಯಾಗಲು ಕೇವಲ ಶಿಕ್ಷಕರು ಮಾತ್ರ ಕಾರಣರಾಗುತ್ತಾರೆಯೇ? ಪೋಷಕರು, ವಿದ್ಯಾರ್ಥಿಗಳಿಗೆ ಹೊಣೆ ಇಲ್ಲವೇ? ಪ್ರಸ್ತುತ ಒಂದರಿಂದ ಒಂಬತ್ತನೇ ತರಗತಿವರೆಗೆ ಯಾವುದೇ ಮಕ್ಕಳನ್ನು ಅನುತ್ತೀರ್ಣ ಮಾಡದಂತೆ ನಿಯಮ ಇದೆ. ಕಡಿಮೆ ಅಂಕ ಇದ್ದರೂ ಪಾಸ್ ಮಾಡಬೇಕಾಗಿದೆ. ಹೀಗಿರುವಾಗಿ ಏಕಾಏಕಿ 10ನೇ ತರಗತಿಯಲ್ಲಿ ಫಲಿತಾಂಶ ಕಡಿಮೆ ಬಂದರೆ ಶಿಕ್ಷಕರ ವಾರ್ಷಿಕ ವೇತನ ಬಡ್ತಿ ಕಡಿತ ಸೇರಿದಂತೆ ವಿವಿಧ ಕ್ರಮ ಕೈಗೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಇದಕ್ಕೆ ಪೂರಕವಾಗಿ ಸಭಾಪತಿ ಬಸವರಾಜ ಹೊರಟ್ಟಿ ಅವರು, ಸಮಸ್ಯೆ ಬಗ್ಗೆ ಚರ್ಚಿಸಲು ಸದಸ್ಯರ ಸಭೆ ಕರೆಯುವಂತೆ ಸಲಹೆ ನೀಡಿದರು. ಅದಕ್ಕೆ ಒಪ್ಪಿದ ಸಚಿವರು ಆ. 13 ರಂದು ಸಭೆ ಕರೆದು ಚರ್ಚಿಸುವುದಾಗಿ ತಿಳಿಸಿದರು.
ಸಚಿವರು, ಶೇ. 60ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ವಿಷಯ ಶಿಕ್ಷಕರ ವಾರ್ಷಿಕ ವೇತನ ಕಡಿತ ಸೇರಿದಂತೆ ವಿವಿಧ ಕ್ರಮಕೈಗೊಳ್ಳಲು 2019ರಲ್ಲಿಯೇ ಆದೇಶ ಹೊರಡಿಸಲಾಗಿತ್ತು. ಸರ್ಕಾರ ಹೊಸದಾಗಿ ಯಾವುದೇ ಆದೇಶ ಜಾರಿ ಮಾಡಿಲ್ಲ. ಆದರೂ ಯಾವುದೇ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳದಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಜೊತೆಗೆ ಹೊರಡಿಸಿರುವ ಆದೇಶ ವಾಪಸ್ ಪಡೆಯುವ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ