
ಚಿಕ್ಕೋಡಿ (ಅ.11): ಮಹಾರಾಷ್ಟ್ರದಲ್ಲಿರುವ ಕನ್ಹೇರಿ ಮಠಕ್ಕೆ ಕರ್ನಾಟಕದಲ್ಲಿಯೂ ಅಪಾರ ಸಂಖ್ಯೆಯ ಭಕ್ತರಿದ್ದಾರೆ. ಹೀಗಾಗಿ, ಕರ್ನಾಟಕದಲ್ಲಿಯೂ ಕನ್ಹೇರಿ ಮಠದ ಶಾಖೆಯನ್ನು ಸ್ಥಾಪನೆ ಮಾಡಿ. ಅದಕ್ಕೆ ಕರ್ನಾಟಕ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದ್ದು, ಸರ್ಕಾರದ ವತಿಯಿಂದ ಜಾಗ ನೀಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಸೋಮವಾರ ಮಹಾರಾಷ್ಟ್ರದ ಕೊಲ್ಲಾಪುರ ಬಳಿಯ ಕನ್ಹೇರಿ ಸಿದ್ಧಗಿರಿ ಮಠದಲ್ಲಿ ಆಯೋಜಿಸಿದ್ದ ಸಂತ ಸಮಾವೇಶ ಉದ್ಘಾಟನೆ ಹಾಗೂ ಕರ್ನಾಟಕ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೇರವೇರಿಸಿ ಅವರು ಮಾತನಾಡಿದರು. ಕನ್ಹೇರಿ ಮಠದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ .3 ಕೋಟಿ ಅನುದಾನ ನೀಡಿದ್ದು, ಅಗತ್ಯ ಬಿದ್ದರೆ ಇನ್ನೂ .2 ಕೋಟಿ ನೀಡುತ್ತೇವೆ ಎಂದು ಭರವಸೆ ನೀಡಿದರು.
ಮೀಸಲಾತಿ ಹೆಚ್ಚಿಸಿದ್ದಕ್ಕೆ ಸಿಎಂ ಬೊಮ್ಮಾಯಿಗೆ ವಿವಿಧ ಮಠಾಧೀಶರಿಂದ ಅಭಿನಂದನೆ
‘ತಮ್ಮದೇ ಆದ ಆದರ್ಶಗಳ ಮೂಲಕ ಭಕ್ತರಲ್ಲಿ ಜಾಗೃತಿ ಮೂಡಿಸಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ಕ್ರಾಂತಿ ನಡೆಸಿರುವ ಸಿದ್ಧಗಿರಿ ಕನ್ಹೇರಿ ಮಠದ ಪರಮಪೂಜ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರ ಸಾಧನೆ ಶ್ಲಾಘನೀಯ. ಇಲ್ಲಿ ನಡೆಯುತ್ತಿರುವ ಸಹೃದಯಿ ಸಂತರ ಸಮಾವೇಶ ನನಗೆ ಸಂತಸ ತಂದಿದೆ. ನಾನು ಮೊದಲ ಬಾರಿ ಕನ್ಹೇರಿ ಮಠಕ್ಕೆ ಬಂದಿದ್ದು, ಇಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಹಾಗೂ ಮಠದ ಸೇವೆ ನೋಡಿದಾಗ ಇದೊಂದು ಆದರ್ಶ ಮಠ ಎಂದು ನಿಸ್ಸಂಶಯವಾಗಿ ಹೇಳಬಹುದು. ಎಕಾನಾಮಿ ಅಂದ್ರೆ ಬರೀ ದುಡ್ಡಲ್ಲ, ದುಡಿಮೆ. ದುಡ್ಡೇ ದೊಡ್ಡಪ್ಪ ಅಲ್ಲ, ದುಡಿಮೆಯೇ ದೊಡ್ಡಪ್ಪ ಎನ್ನುವುದು ಈ ಮಠದಲ್ಲಿ ಕಾರ್ಯಗತವಾಗಿದೆ’ ಎಂದರು.
ಒಂದು ಲಕ್ಷ ಗೋವುಗಳ ರಕ್ಷಣೆ: ಕನ್ಹೇರಿ ಮಠದ ಗೋಸೇವೆಯನ್ನು ವಿಶೇಷವಾಗಿ ಪ್ರಶಂಸಿಸಿದ ಬೊಮ್ಮಾಯಿ, ಕರ್ನಾಟಕದಲ್ಲಿ ಪುಣ್ಯಕೋಟಿ ಯೋಜನೆ ರೂಪಿಸಲಾಗಿದೆ. ಈ ಯೋಜನೆಯಡಿ ನೂರು ಕೋಟಿ ರು. ಸಂಗ್ರಹವಾಗುತ್ತಿದ್ದು, ಒಂದು ಲಕ್ಷ ಗೋವುಗಳನ್ನು ಜನರ ಹಣದಿಂದಲೇ ರಕ್ಷಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಕನ್ಹೇರಿ ಮಠದ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಮಠದಲ್ಲಿ ಆಯೋಜಿಸಿರುವ ಸಂತ ಸಮಾವೇಶದಲ್ಲಿ 500ಕ್ಕೂ ಹೆಚ್ಚು ಸ್ವಾಮೀಜಿಗಳು ಪಾಲ್ಗೊಂಡಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸ್ವಾಮೀಜಿಗಳು ಆಗಮಿಸುತ್ತಿದ್ದಾರೆ. ಇದು ಭಕ್ತರು ಹಾಗೂ ಸ್ವಾಮೀಜಿಗಳ ಸಮ್ಮಿಲನ ಕಾರ್ಯಕ್ರಮವಾಗಿದೆ. ಭಕ್ತರ ದೇಣಿಗೆ, ಕಾಣಿಕೆಯಿಂದ ಮಠಗಳು ನಿರ್ಮಾಣವಾಗಿದ್ದು, ಸ್ವಾಮೀಜಿಗಳು ಮಠಗಳ ಮಾಲೀಕರಲ್ಲ. ಅವರು ಬರೀ ವ್ಯವಸ್ಥಾಪಕರು. ಭಕ್ತರಿಗೆ, ಸಮಾಜಕ್ಕೆ ಸಂಸ್ಕಾರ ಕೊಡುವ ಕೆಲಸವನ್ನು ಸ್ವಾಮೀಜಿಗಳು ಮಾಡಬೇಕು ಎಂದರು.
ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವರಾದ ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಸಿ.ಸಿ.ಪಾಟೀಲ, ಮುರುಗೇಶ ನಿರಾಣಿ, ವಿ.ಸೋಮಣ್ಣ, ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಉಪಸ್ಥಿತರಿದ್ದರು.
ಶೀಘ್ರ ಗೆಜೆಟ್ ಅಧಿಸೂಚನೆ ಹೊರಡಿಸಲು ಸಂಪುಟದಲ್ಲಿ ತೀರ್ಮಾನ: ಸಿಎಂ ಬೊಮ್ಮಾಯಿ
ಆಲಮಟ್ಟಿಅಣೆಕಟ್ಟು ಎತ್ತರಿಸದಂತೆ ಮಹಾ ರೈತರ ಮನವಿ: ಈ ಮಧ್ಯೆ, ಕೊಲ್ಲಾಪುರದ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಮಹಾರಾಷ್ಟ್ರ ಶೇತಕರಿ ಸಂಘಟನೆ (ರೈತ ಸಂಘಟನೆ) ಹಾಗೂ ವಿವಿಧ ಹೋರಾಟ ಸಂಘಟನೆಗಳ ಪದಾಧಿಕಾರಿಗಳು, ಆಲಮಟ್ಟಿಅಣೆಕಟ್ಟಿನ ಎತ್ತರವನ್ನು ಹೆಚ್ಚಿಸದಂತೆ ಮನವಿ ಮಾಡಿದರು. ಆಲಮಟ್ಟಿಅಣೆಕಟ್ಟಿನ ಎತ್ತರ ಹೆಚ್ಚಿಸುವ ನಿರ್ಧಾರವನ್ನು ಕರ್ನಾಟಕ ಸರ್ಕಾರ ಹಿಂದಕ್ಕೆ ಪಡೆಯಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ