ಚುನಾವಣೆ ವ್ಯವಸ್ಥೆ ಸುಧಾರಿಸಬೇಕು: ಸ್ಪೀಕರ್‌ ಕಾಗೇರಿ

Kannadaprabha News   | Asianet News
Published : Jan 30, 2022, 05:59 AM ISTUpdated : Jan 30, 2022, 06:03 AM IST
ಚುನಾವಣೆ ವ್ಯವಸ್ಥೆ ಸುಧಾರಿಸಬೇಕು: ಸ್ಪೀಕರ್‌ ಕಾಗೇರಿ

ಸಾರಾಂಶ

*  ಜಾತಿ ಬಲ, ಹಣ ಬಲ, ತೋಳ್ಬಲ, ಪಕ್ಷಾಂತರದಿಂದ ಪ್ರಜಾಸತ್ತೆ ಕುಸಿತ *  ಸುಧಾರಣೆ ಕೋರಿ ಸರ್ಕಾರಕ್ಕೆ ಶೀಘ್ರ ಪತ್ರ: ವಿಧಾನಸಭೆ ಅಧ್ಯಕ್ಷ *  ಸುದೀರ್ಘ ಚರ್ಚೆಗಳು ನಡೆದರೆ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ  

ಬೆಂಗಳೂರು(ಜ.30):  ಜಾತಿ ಬಲ, ಹಣ ಬಲ, ತೋಳ್ಬಲ ಹಾಗೂ ಪಕ್ಷಾಂತರ ಬಲಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆ(Democratic System)ಕುಸಿತಗೊಳ್ಳುತ್ತಿರುವುದನ್ನು ತಡೆಯಲು ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಅಗತ್ಯವಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ(Vishweshwar Hegde Kageri) ಪ್ರತಿಪಾದಿಸಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸದೃಢಗೊಳಿಸಲು ಎಲ್ಲೆಡೆ ವ್ಯಾಪಕ ಸಮಾಲೋಚನಾ ಸಭೆ ಮತ್ತು ಚರ್ಚೆಗಳು ಪ್ರಾರಂಭವಾಗಬೇಕಿದೆ. 17 ಲೋಕಸಭಾ ಚುನಾವಣೆಗಳನ್ನು(Lok Sabha Elections) ನೋಡಿದ್ದೇವೆ ಮತ್ತು ರಾಜ್ಯದಲ್ಲಿ(Karnataka) 15 ವಿಧಾನಸಭಾ ಚುನಾವಣೆಗಳನ್ನು(Assembly Elections) ನೋಡಿದ್ದೇವೆ. ಇತ್ತೀಚೆಗೆ ನಡೆದ ವಿಧಾನಪರಿಷತ್‌ ಚುನಾವಣೆ ನಮ್ಮ ಕಣ್ಣಮುಂದೆ ಇದೆ. ಮುಂದೆ ಬೇರೆ ಬೇರೆ ಚುನಾವಣೆಗಳು ಸಹ ಎದುರಾಗಲಿವೆ. ಪ್ರಜಾಪ್ರಭುತ್ವ ವ್ಯವಸ್ಥೆ ಸುಧಾರಣೆಗಳ ಅಗತ್ಯತೆ ಬಗ್ಗೆ ಹಿರಿಯರು ಹೇಳಿದ್ದಾರೆ. ಸುಧಾರಣೆ ನಿಟ್ಟಿನಲ್ಲಿ ಚರ್ಚೆ ಶುರುವಾಗುವ ವಿಚಾರ ಸಂಬಂಧ ಸರ್ಕಾರಕ್ಕೆ(Government of Karnataka) ಪತ್ರ ಬರೆಯುತ್ತೇನೆ’ ಎಂದು ಹೇಳಿದರು.

Anti Conversion Bill: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಗೃಹ ಸಚಿವ ಜ್ಞಾನೇಂದ್ರ ವಿರುದ್ಧ ದೂರು ದಾಖಲು

ನೈತಿಕ ಅಧಃಪತನ:

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ನೈತಿಕ ಅಧಃಪತನ ಕುರಿತು ಕೇವಲ ರಾಜಕಾರಣಿಗಳ(Politicians) ವಿರುದ್ಧ ಬೊಟ್ಟು ಮಾಡುವ ಸಂಸ್ಕೃತಿ ದೂರವಾಗಬೇಕು. ರಾಜಕೀಯದ ವಿವಿಧ ಮಜಲುಗಳಲ್ಲಿ ಅಧಿ​ಕಾರವನ್ನು ಅನುಭವಿಸಿ ಉತ್ತುಂಗದಲ್ಲಿರುವ ಸಮಾಜದ ಹಿರಿಯರು ಮೌನ ಮುರಿಯಬೇಕು. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಮಾತ್ರವಲ್ಲದೇ ಸಾಹಿತ್ಯ ಹಾಗೂ ಮಾಧ್ಯಮ ಕ್ಷೇತ್ರದ ಗಣ್ಯರೂ ಕೂಡಾ ನೈತಿಕ ಹೊಣೆಗಾರರಾಗಿ ಚುನಾವಣಾ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಮಾರ್ಗದರ್ಶನ ಹಾಗೂ ಸಲಹೆಗಳನ್ನು ದೊರಕಿಸಿಕೊಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಚುನಾವಣಾ ಪ್ರಕ್ರಿಯೆಗಳಲ್ಲಿನ ಲೋಪದೋಷಗಳು ಅರಾಜಕತೆಗೆ ಕಾರಣವಾಗುತ್ತವೆ. ಇದರ ವಿರುದ್ಧ ಜನಾಭಿಪ್ರಾಯ ರೂಪಿಸುವುದು ಹಾಗೂ ಪಾಲ್ಗೊಳ್ಳುವುದು ಯುವಜನರ ಕರ್ತವ್ಯ ಮತ್ತು ಜವಾಬ್ದಾರಿ. ಇಂದಿನ ಯುವ ಪೀಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಕಾವಲುಗಾರರಾಗದಿದ್ದಲ್ಲಿ ಇಡೀ ವ್ಯವಸ್ಥೆಯೇ ಕುಸಿತಕ್ಕೊಳಗಾಗುವ ಎಲ್ಲಾ ಲಕ್ಷಣಗಳು ಇವೆ ಎಂದು ಆತಂಕ ವ್ಯಕ್ತಪಡಿಸಿದ ಸಭಾಧ್ಯಕ್ಷರು(Speaker), ಪ್ರಜಾಪ್ರಭುತ್ವವನ್ನು ಸದೃಢಗೊಳಿಸಲು ಸವಾಲುಗಳನ್ನು ಪಟ್ಟಿಮಾಡಿ, ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಈಗಲೇ ಕ್ರಮ ವಹಿಸಬೇಕು. ಹಾಗಿದ್ದಲ್ಲಿ ಮಾತ್ರ ಸ್ವಾತಂತ್ರ್ಯದ ಶತಮಾನೋತ್ಸವ ಸಂಭ್ರಮದ ವೇಳೆಗೆ ದೇಶವು ಅತ್ಯುತ್ತಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ ರಾಷ್ಟ್ರವಾಗಲಿದೆ. ಇಲ್ಲವಾದಲ್ಲಿ, ನಾವೆಲ್ಲರೂ ವಿಷವರ್ತುಲದ ಭಾಗವಾಗಿ ಸಮಸ್ಯೆಗಳ ಸುಳಿಯಲ್ಲಿ ಬದುಕುಳಿಯುವ ಪ್ರಯತ್ನ ಮಾಡಬೇಕಾದೀತು ಎಂದರು.

Belagavi Assembly Session : 'ರೇಪ್‌ ತಪ್ಪಿಸಿಕೊಳ್ಳಲು ಅಸಾಧ್ಯ ಎಂದಾಗ ಎಂಜಾಯ್ ಮಾಡ್ಬೇಕು'!

ಕಾಲೋಚಿತವಾಗಿ ಹಾಗೂ ಯಾಂತ್ರಿಕವಾಗಿ ಚುನಾವಣೆಗಳನ್ನು ನಡೆಸುತ್ತಿರುವ ಚುನಾವಣಾ ಆಯೋಗವು ಕೂಡಾ ಮತ್ತಷ್ಟು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಿ, ಜವಾಬ್ದಾರಿಯನ್ನು ಹೆಚ್ಚಿಸಿಕೊಳ್ಳುವ ಅವಶ್ಯಕತೆ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಸುಧಾರಣೆಗೆ ಸ್ವಯಂ ಪ್ರೇರಿತವಾಗಿ ಮತ್ತಷ್ಟು ಶ್ರಮಿಸಿ, ಮುನ್ನಡೆಯುವತ್ತ ದಾಪುಗಾಲು ಹಾಕಬೇಕಿದೆ. ಸರ್ಕಾರದ ನೀತಿ ನಿರೂಪಣೆ ಮತ್ತು ವಿವೇಚನಾ​ಧಿಕಾರವನ್ನು ಪ್ರಶ್ನಿಸುವ ಹಾಗೂ ಚುನಾವಣಾ ಆಯೋಗದ ಕಾರ್ಯಚಟುವಟಿಕೆ ಮತ್ತು ಕಾರ್ಯವ್ಯಾಪ್ತಿಯನ್ನು ವಿಮರ್ಶಿಸುವ ಹಕ್ಕು ಈ ದೇಶದ ಎಲ್ಲಾ ನಾಗರಿಕರಿಗೆ(citizens) ಇದೆ. ಚುನಾವಣಾ ಸಂದರ್ಭದಲ್ಲಿ ಮತ ಚಲಾಯಿಸದೆ ಅಥವಾ ಯಾವುದೇ ಒಂದು ಪಕ್ಷಕ್ಕೆ ಸ್ವಷ್ಟ ಬಹುಮತ ನೀಡದಿದ್ದರೆ, ಅದು ಮತದಾರರ ಕರ್ತವ್ಯ ಲೋಪವೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಸಮೀಪಿಸುತ್ತಿದೆ. ಸದನದ ಒಳಗೆ ಮತ್ತು ಹೊರಗೆ ಎಲ್ಲಾ ಹಂತಗಳಲ್ಲೂ ಇಂತಹ ವಿಷಯಗಳ ಕುರಿತು ಸುದೀರ್ಘ ಚರ್ಚೆಗಳು ನಡೆದರೆ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: Bengaluru - ಬೆಂಗಳೂರಿನಲ್ಲಿ 7ನೇ ಕ್ಲಾಸ್ ವಿದ್ಯಾರ್ಥಿ ಕಪಾಳಕ್ಕೆ ಹೊಡೆದ ಶಿಕ್ಷಕನ ಬಂಧನ