ರಾಯಚೂರು ವೈಟಿಪಿಎಸ್‌ನಿಂದ ದಾಖಲೆ ವಿದ್ಯುತ್‌ ಉತ್ಪಾದನೆ

By Kannadaprabha News  |  First Published Jan 30, 2022, 5:15 AM IST

* ಡಿಸೆಂಬರ್‌ನಲ್ಲಿ ಮೊದಲ ಮತ್ತು ಎರಡನೇ ಘಟಕದಿಂದ 719 ದಶಲಕ್ಷ ಯುನಿಟ್‌ ಸರ್ವಶ್ರೇಷ್ಠ ಸಾಧನೆ
* 50 ದಿನಗಳಿದ ನಿರಂತರ ಕರೆಂಟ್‌ ಉತ್ಪಾದನೆ
* ವೈಟಿಪಿಎಸ್‌ನಿಂದ ದಾಖಲೆ ವಿದ್ಯುತ್‌ ಉತ್ಪಾದನೆ


ರಾಯಚೂರು (ಜ. 29): ಸಮೀಪದ ಯರಮರಸ್‌ ಆತ್ಯಾಧುನಿಕ ಶಾಖೋತ್ಪನ್ನ ವಿದ್ಯುತ್‌ ಸ್ಥಾವರ (Yermarus Thermal Power Station)(ವೈಟಿಪಿಎಸ್‌)ದ ಎರಡೂ ಘಟಕಗಳಿಂದ ದಾಖಲೆ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ಕಳೆದ ಐದು ವರ್ಷಗಳ ಹಿಂದೆ ವೈಟಿಪಿಎಸ್‌ (YTPS) ಕಾರ್ಯಾರಂಭಗೊಂಡಿದ್ದು, ಹೊಸ ತಂತ್ರಜ್ಞಾನ, ಪದೇ ಪದೆ ತಾಂತ್ರಿಕ ದೋಷಗಳಿಂದ ಉತ್ಪಾದನೆಯಲ್ಲಿ ಕುಂಠಿತ ಕಂಡಿದ್ದ ಸ್ಥಾವರವು ಕಳೆದ ಎರಡ್ಮೂರು ತಿಂಗಳಿನಿಂದ ಉತ್ತಮ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದನೆಯಲ್ಲಿ(power generation) ತೊಡಗಿಕೊಂಡಿದೆ. 

ಮೊದಲ ಮತ್ತು ಎರಡನೇ ಘಟಕಗಳಿಂದ ತಲಾ 800 ಮೆಗಾ ವ್ಯಾಟ್‌ರಂತೆ ಒಟ್ಟು 1600 ಮೆಗಾ ವ್ಯಾಟ್‌ (Mega Watr) ಸಾಮರ್ಥ್ಯವನ್ನು ಹೊಂದಿರುವ ವೈಟಿಪಿಎಸ್‌ನಿಂದ ಇದೇ ಮೊದಲ ಬಾರಿಗೆ ಒಟ್ಟಾರೆ ಉತ್ಪಾದನೆಯನ್ನು ಮತ್ತು ಎರಡನೇ ಘಟಕದಿಂದ ಸತತ 50 ದಿನಗಳ ಕಾಲ ವಿದ್ಯುತ್‌ ಉತ್ಪಾದನೆ ಮಾಡಿ ದಾಖಲೆ ನಿರ್ಮಿಸಿರುವುದು ಸ್ಥಾವರದ ಅಧಿಕಾರಿ-ಸಿಬ್ಬಂದಿ ವರ್ಗದಲ್ಲಿ ಹೊಸ ಉತ್ಸಾಹ ಮೂಡಿಸಿದೆ.

ಸರ್ವಶ್ರೇಷ್ಠ ಸಾಧನೆ: ವೈಟಿಪಿಎಸ್‌ ಆರಂಭಗೊಂಡಾಗಿನಿಂದಲೂ ಒಟ್ಟಾರೆ ವಿದ್ಯುತ್‌ ಉತ್ಪಾದನೆಯಲ್ಲಿ ಹೇಳಿಕೊಳ್ಳುವಷ್ಟುಸಾಧನೆ ಮಾಡಿರಲಿಲ್ಲ. ಇದೀಗ ಸ್ಥಾವರದ ಮೊದಲ ಮತ್ತು ಎರಡನೇ ಘಟಕಗಳಿಂದ ನಿಗದಿತ ಗುರಿಯಂತೆಯೇ ಕರೆಂಟ್‌ ಉತ್ಪಾದಿಸಲಾಗುತ್ತಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ವೈಟಿಪಿಎಸ್‌ ಸ್ಥಾವರದಿಂದ 718.085 ದಶ ಲಕ್ಷ ಯುನಿಟ್‌ (Unit) ಕರೆಂಟ್‌ ಉತ್ಪಾದಿಸಲಾಗಿದ್ದು, ಇದೂ ಸರ್ವಕಾಲಿಕ ದಾಖಲೆಯಾಗಿದೆ. ಸ್ಥಾವರ ಕಾರ್ಯಾರಂಭಗೊಂಡು ಐದು ವರ್ಷಗಳು ಗತಿಸಿದ ಮೇಲೆ ಇದೇ ಅತ್ಯಧಿಕ ಮೈಲುಗಲ್ಲಾಗಿದೆ.

ಅರ್ಧ ಶತಕ ಸಿಡಿಸಿದ 2ನೇ ಘಟಕ: ವೈಟಿಪಿಎಸ್‌ನ 800 ಮೆಗಾ ವ್ಯಾಟ್‌ ಸಾಮರ್ಥ್ಯದ 2ನೇ ಘಟಕವು ಸತತವಾಗಿ ವಿದ್ಯುತ್‌ ಉತ್ಪಾದನೆ ಮಾಡಿ ಮೊದಲ ಬಾರಿಗೆ ದಾಖಲೆ ನಿರ್ಮಿಸಿದೆ. ಕಳೆದ 2021 ಡಿ.12ರಿಂದ ಇಲ್ಲಿವರೆಗೆ (2022 ಜ.30) ಸತತ 50 ದಿನಗಳ ಕಾಲ ನಿರಂತರವಾಗಿ ಚಾಲನೆಯಲ್ಲಿರುವ ಘಟಕವು ಅರ್ಧ ಶತಕ ಸಿಡಿಸಿ ಮುನ್ನುಗ್ಗುತ್ತಿದೆ. ವೈಟಿಪಿಎಸ್‌ನ ಎರಡನೇ ಘಟಕವು 2017 ಏಪ್ರಿಲ್‌ನಲ್ಲಿ ಕಾರ್ಯಾರಂಭಗೊಂಡ ಬಳಿಕ ಮೊದಲ ಬಾರಿಗೆ 50 ದಿನ ನಿರಂತರವಾಗಿ ಕರೆಂಟ್‌ ಉತ್ಪಾದಿಸಿ ದಾಖಲೆ ನಿರ್ಮಿಸಿದೆ. ಇನ್ನು ಮೊದಲನೇ ಘಟಕವು ಈಗಾಗಲೇ ಮೂರು ಬಾರಿ ಈ ಸಾಧನೆ ತೋರಿದೆ.

AIR FM Rainbow: ಎಫ್‌ಎಂ ರೇನ್‌ಬೋ ವಿಲೀನಕ್ಕೆ ಕನ್ನಡಿಗರ ಕಿಡಿ
ಶಾಖೋತ್ಪನ್ನ ವಿದ್ಯುತ್‌ ಸ್ಥಾವರಗಳಿಂದ ಉತ್ಪಾದನೆ: ರಾಯಚೂರು ಬಹೃತ್‌ ಶಾಖೋತ್ಪನ್ನ ವಿದ್ಯುತ್‌ ಸ್ಥಾವರ (Raichur Thermal Power Station) (ಆರ್ಟಿಪಿಎಸ್‌)ದ 1720 ಮೆಗಾ ವ್ಯಾಟ್‌ ಸಾಮರ್ಥ್ಯದ ಎಂಟು ಘಟಕಗಳ ಪೈಕಿ ಆರು ಘಟಕಗಳಿಂದ ಕರೆಂಟ್‌ ಉತ್ಪಾದಿಸಲಾಗುತ್ತಿದೆ. 210 ಮೆಗಾ ವ್ಯಾಟ್‌ ಸಾಮರ್ಥ್ಯದ 3ನೇ ಮತ್ತು 4ನೇ ಘಟಕಗಳನ್ನು ತಾಂತ್ರಿಕ ದೋಷದಿಂದ ಬಂದ್‌ ಮಾಡಲಾಗಿದ್ದು, ಉಳಿದಂತೆ 1ನೇ ಘಟಕದಿಂದ 183, 2ನೇ ಘಟಕದಿಂದ 193, 5ನೇ ಘಟಕದಿಂದ 196, 6ನೇ ಘಟಕದಿಂದ 190, 7ನೇ ಘಟಕದಿಂದ 171 ಮತ್ತು 8ನೇ ಘಟಕದಿಂದ 244 ಮೆಗಾ ವ್ಯಾಟ್‌ ಸೇರಿ ಒಟ್ಟಾರೆ 1169 ಮೆಗಾ ವ್ಯಾಟ್‌ ಕರೆಂಟ್‌ ಉತ್ಪಾದಿಸಲಾಗುತ್ತಿದೆ. ಅದೇ ರೀತಿ ಬಿಟಿಪಿಎಸ್‌ನ 3ನೇ ಘಟಕದಿಂದ 365, ವೈಟಿಪಿಎಸ್‌ನ 1ನೇ ಘಟಕದಿಂದ 704 ಮತ್ತು 2ನೇ ಘಟಕದಿಂದ 564 ಮೆಗಾ ವ್ಯಾಟ್‌ ಸೇರಿ ಆರ್ಟಿಪಿಎಸ್‌, ಬಿಟಿಪಿಎಸ್‌ ಮತ್ತು ವೈಟಿಪಿಎಸ್‌ ಶಾಖೋತ್ಪನ್ನ ವಿದ್ಯುತ್‌ ಸ್ಥಾವರಗಳಿಂದ ಒಟ್ಟಾರೆ 2,802 ಮೆಗಾ ವ್ಯಾಟ್‌ ಕರೆಂಟ್‌ ಉತ್ಪಾದಿಸಿ ರಾಜ್ಯ ಜಾಲಕ್ಕೆ ರವಾನಿಸಲಾಗಿದೆ.

ಇಬ್ಬರನ್ನ ಪ್ರೀತಿಸಿ ಜೀವಕ್ಕೆ ಕುತ್ತು ತಂದುಕೊಂಡ, ಲವ್ ಮಾಡುವಂತೆ ಬೆದರಿಕೆ ಹಾಕಿದವ ಜೈಲು ಸೇರಿದ
ವೈಟಿಪಿಎಸ್‌ ವಿದ್ಯುತ್‌ಗೆ ಹೆಚ್ಚಿನ ಬೇಡಿಕೆಯಿದ್ದು ಅದರಂತೆಯೇ ಉತ್ಪಾದನೆ ಮಾಡಲಾಗುತ್ತಿದೆ. ಕಳೆದ ಡಿಸೆಂಬರ್‌ನಲ್ಲಿ ಸ್ಥಾವರದಿಂದ 718.085 ದಶ ಲಕ್ಷ ಯುನಿಟ್‌ ಕರೆಂಟ್‌ ಉತ್ಪಾದಿಸಲಾಗಿದೆ. ಇನ್ನು 2ನೇ ಘಟಕದಿಂದ ಸತತ 50 ದಿನಗಳ ಕಾಲ ನಿರಂತರ ಕರೆಂಟ್‌ ಉತ್ಪಾದಿಸಿರುವುದು ಸಹ ಹೊಸ ದಾಖಲೆಯಾಗಿದೆ.
- ಆಂಜನೇಯ್ಯ ನಾಯಕ, ಯೋಜನಾ ಮುಖ್ಯಸ್ಥ, ವೈಟಿಪಿಎಸ್‌, ರಾಯಚೂರು

ರಾಮಕೃಷ್ಣ ದಾಸರಿ

Latest Videos

click me!