ಸರ್ಕಾರಿ ನೌಕರರಿಗೆ ಸಂಕಷ್ಟ ತಂದಿಟ್ಟ ಚುನಾವಣಾ ಆಯೋಗ: ಎಫ್‌ಐಆರ್‌ ದಾಖಲಿಸಲು ತೀರ್ಮಾನ

By Sathish Kumar KHFirst Published Apr 24, 2023, 12:09 PM IST
Highlights

ಚುನಾವಣಾ ಕರ್ತವ್ಯಕ್ಕೆ ಹಾಗೂ ತರಬೇತಿಗೆ ಗೈರು ಹಾಜರಾಗುವ ಅಧಿಕಾರಿಗಳ ಮೇಲೆ ಎಫ್‌ಐಆರ್‌ ದಾಖಲಿಸುವುದಾಗಿ ಚುನಾವಣಾ ಆಯೋಗ ಖಡಕ್‌ ಸೂಚನೆ ರವಾನಿಸಿದೆ.

ಬೆಂಗಳೂರು (ಏ.24): ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಚುನಾವಣಾ ಕರ್ತವ್ಯಕ್ಕೆ ಎಲ್ಲ ಇಲಾಖೆಗಳ ಸರ್ಕಾರಿ ಅಧಿಕಾರಿಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆದರೆ, ಚುನಾವಣಾ ಕರ್ತವ್ಯಕ್ಕೆ ಹಾಗೂ ತರಬೇತಿಗೆ ಗೈರು ಹಾಜರಾಗುವ ಅಧಿಕಾರಿಗಳ ಮೇಲೆ ಎಫ್‌ಐಆರ್‌ ದಾಖಲಿಸುವುದಾಗಿ ಚುನಾವಣಾ ಆಯೋಗ ಖಡಕ್‌ ಸೂಚನೆ ರವಾನಿಸಿದೆ.

ರಾಜ್ಯದಲ್ಲಿ ಪ್ರತಿಬಾರಿ ಚುನಾವಣೆ ಬಂದ ಸಂದರ್ಭದಲ್ಲಿ ಸರ್ಕಾರಿ ನೌಕರರನ್ನು ಚುನಾವಣಾ ಕರ್ತವ್ಯದ ಕಾರ್ಯಗಳಿಗೆ ನಿಯೋಜನೆ ಮಾಡುವುದು ಸಾಮಾನ್ಯವಾಗಿದೆ. ಚುನಾವಣಾ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳುವುದಕ್ಕೆ ಅವಕಾಶವೂ ಕೂಡ ಇದೆ. ಆದರೆ, ಸರ್ಕಾರಿ ಅಧಿಕಾರಿಗಳು ವಿವಿಧ ನೆಪಗಳನ್ನು ಹೇಳಿಕೊಂಡು ಚುನಾವಣಾ ಕರ್ತವ್ಯಕ್ಕೆ ಹಾಜರಾಗದೇ ಗೈರು ಹಾಜರಾಗುತ್ತಾರೆ. ಇದರಿಂದ ಚುನಾವಣಾ ಕಾರ್ಯಗಳನ್ನು ನಡೆಸಲು ಆಯೋಗವು ಪರದಾಡಬೇಕಾಗುತ್ತದೆ. ಆದರೆ, ಕಳೆದ ಏ.20ರಂದು ಚುನಾವಣಾ ತರಬೇತಿಗೆ ಹಾಜರಾಗದ ಸರ್ಕಾರಿ ನೌಕರರಿಗೆ ಈಗಾಗಲೇ ನೋಟಿಸ್‌ ಜಾರಿಗೊಳಿಸಲಾಗಿದೆ. ಈಗ ಗೈರಾಗಿದ್ದ ಸರ್ಕಾರಿ ನೌಕರರಿಗೆ ಇನ್ನೊಂದು ಅವಕಾಶವನ್ನು ನೀಡಲಾಗುತ್ತಿದ್ದು, ಏ.25ರಂದು ನಡೆಸಲಾಗುವ ತರಬೇತಿಗೆ ಹಾಜರಾಗದಿದ್ದರೆ ಎಫ್‌ಐಆರ್‌ ದಾಖಲಿಸುವುದಾಗಿ ಖಡಕ್‌ ಎಚ್ಚರಿಕೆಯನ್ನು ರವಾನಿಸಲಾಗಿದೆ.

ನನ್ನ ವೋಟು ನನ್ನ ಮಾತು :ಚಾಮುಂಡೇಶ್ವರಿ ಹೊಟಗಳ್ಳಿ ಕ್ಷೇತ್ರದ ಮಂದಿ ಏನ್ ಹೇಳ್ದ್ರು ?

ಚುನಾವಣಾ ಆಯೋಗದಿಂದ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ತರಾಟೆ ತೆಗೆದುಕೊಳ್ಳಲಾಗಿದೆ. ಆದ್ದರಿಂದ ಚುನಾವಣಾ ಕೆಲಸದಿಂದ ತಪ್ಪಿಸಿಕೊಳ್ಳುತ್ತಿರುವ ಸರ್ಕಾರಿ ನೌಕರರಿಗೆ ಜಿಲ್ಲಾ ಚುನಾವಣಾಧಿಕಾರಿಗಳ ಖಡಕ್ ಎಚ್ಚರಿಕೆ ನೀಡಲಾಗಿದೆ. ಈಗಾಗಲೇ 20.04.2023ರಂದು ಚುನಾವಣೆ ಹಿನ್ನೆಲೆಯಲ್ಲಿ ನಡೆದ ತರಬೇತಿ ಕಾರ್ಯಾಗಾರಕ್ಕೆ ಹಲವು ಸರ್ಕಾರಿ ಅಧಿಕಾರಿ/ ಸಿಬ್ಬಂದಿಗಳು ಗೈರಾಗಿದ್ದರು.  ಹೀಗಾಗಿ, ಚುನಾವಣಾ ಆಯೋಗವು ಗರಂ ಆಗಿ, ಎಲ್ಲ ಜಿಲ್ಲಾಧಿಕಾರಿಗಳಿಗೆ ತರಾಟೆ ತೆಗೆದುಕೊಳ್ಳಲಾಗಿತ್ತು. ಜೊತೆಗೆ, 20.04.2023ರಂದು ಗೈರು ಹಾಜರಾದ ಸಿಬ್ಬಂದಿಗೆ ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಅನ್ವಯ ಕಾರಣ ಕೇಳಿ ನೋಟೀಸ್ ನೀಡಲಾಗಿದೆ.

ಈಗ ಮತ್ತೊಮ್ಮೆ ಆಯೋಜನೆ ಮಾಡಲಾಗುತ್ತಿರುವ ಚುನಾವಣಾ ತರಬೇತಿ ಕಾರ್ಯಾಗಾರಕ್ಕೆ ನಿಯೋಜಿತ ಸರ್ಕಾರಿ ನೌಕರರು ಮತ್ತು ಸಿಬ್ಬಂದಿ ಗೈರು ಹಾಜರಾದರೆ, ಅಂತಹವರ ವಿರುದ್ದ ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಕಲಂ 134ರಂತೆ ಕೂಡಲೇ FIR ದಾಖಲಿಸುವಂತೆ ಸೂಚನೆ ನೀಡಲಾಗಿದೆ.

ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿ ಸೇರಿದಂತೆ ಈಗಾಗಲೇ ಚುನಾವಣೆಗೆ ಸಂಬಂಧಿಸಿದಂತೆ ಪ್ರತಿ ಕಚೇರಿಯಿಂದ ಸಿಬ್ಬಂದಿಯನ್ನು ನಿಯೋಜಿಸಲು ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸದರಿ ನೋಡಲ್‌ ಅಧಿಕಾರಿಗಳು, ತಮ್ಮ ಕಚೇರಿಯ ಸಿಬ್ಬಂದಿಗೆ ಚುನಾವಣಾ ಕರ್ತವ್ಯದ ಆದೇಶಗಳನ್ನು ಹಾಗೂ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿದ್ದಾರೆ. ಚುನಾವಣಾ ತರಬೇತಿಗೆ ಹಾಗೂ ಚುನಾವನಾ ಕರ್ತವ್ಯಕ್ಕೆ ಗೈರು ಹಾಜರಾದವರಿಗೆ ಸ್ವತಃ ನೋಡಲ್‌ ಅಧಿಕಾರಿಗಳೇ ಚುನಾವಣೆಗೆ ಸಿಬ್ಬಂದಿಯನ್ನು ಕಳುಹಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು. ಈ ಮೇಲಿನ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ನಿರ್ಲಕ್ಷ್ಯ ತೋರಿದಲ್ಲಿ ಸಂಬಂಧಿಸಿದ ನೋಡಲ್‌ ಅಧಿಕಾರಿಗಳ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆ 1951ರ, 134ರಂ ನಿಯಮದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಸತ್ಯಮಾರ್ಗದಲ್ಲಿ ಸಾಗಲು ಬಸವಣ್ಣ ಹೇಳಿಕೊಟ್ಟಿದ್ದಾರೆ: ರಾಹುಲ್‌ ಗಾಂಧಿ

ಮತಗಟ್ಟೆ ಅಧಿಕಾರಿಗಳು ಪ್ರಿಸೈಡಿಂಗ್‌ ಆಫೀಸರ್‌ ಕೈಪಿಡಿಯನ್ನು https://eci.gov.in ಗೆ ಭೇಟಿ ನೀಡಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಇನ್ನು ಈಗಾಗಲೇ ಗೈರಾದ ಸರ್ಕಾರಿ ನೌಕರರು 25.04.2023ರಂದು ಬೆಳಗ್ಗೆ 9.30ರಿಂದ ಆರಂಭವಾಗುವ ತರಬೇತಿಗೆ ಹಾಜರಾಗುವಂತೆ ಜಿಲ್ಲಾ ಚುನಾವಣಾಧಿಕಾರಿ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರ ಸೂಚನೆ ನೀಡಿದ್ದಾರೆ.

ಏಪ್ರಿಲ್‌ 13 ರಿಂದ ಆರಂಭವಾಗಿದ್ದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಏಪ್ರಿಲ್‌ 21ರವರೆಗೆ ಪೂರ್ಣಗೊಂಡಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್‌ 24 ಕೊನೆಯ ದಿನವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

click me!