ಪಾಳು ಭೂಮಿಗೂ ಬರ ಪರಿಹಾರ: ಯಾದಗಿರಿಯಲ್ಲಿ ಕೋಟ್ಯಂತರ ರುಪಾಯಿ ಅವ್ಯವಹಾರ

By Kannadaprabha News  |  First Published Jul 7, 2024, 6:06 AM IST

ಕೇಂದ್ರ ಸರ್ಕಾರ ನೀಡುವ ಬರ ಪರಿಹಾರ ವಿತರಣೆಯಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ದೋಷಗಳ ಜೊತೆಗೆ, ಕೋಟ್ಯಂತರ ರುಪಾಯಿಗಳ ಅವ್ಯವಹಾರ ನಡೆದ ಬಗ್ಗೆ ದೂರುಗಳು ಕೇಳಿ ಬಂದಿವೆ. 


ಆನಂದ್‌ ಎಂ. ಸೌದಿ

ಯಾದಗಿರಿ (ಜು.07): ಕೇಂದ್ರ ಸರ್ಕಾರ ನೀಡುವ ಬರ ಪರಿಹಾರ ವಿತರಣೆಯಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ದೋಷಗಳ ಜೊತೆಗೆ, ಕೋಟ್ಯಂತರ ರುಪಾಯಿಗಳ ಅವ್ಯವಹಾರ ನಡೆದ ಬಗ್ಗೆ ದೂರುಗಳು ಕೇಳಿ ಬಂದಿವೆ. ಹತ್ತಾರು ವರ್ಷಗಳಿಂದ ಪಾಳು ಬಿದ್ದ ಜಮೀನುಗಳಿಗೆ ಪರಿಹಾರ ಸಿಕ್ಕಿದೆ. ಸಾವಿರಾರು ಅರ್ಹ ಫಲಾನುಭವಿಗಳ ಹೆಸರನ್ನು ಪರಿಹಾರದ ಪಟ್ಟಿಯಿಂದ ಕೈಬಿಡಲಾಗಿದೆ. ನೀರಿನ ಕೊರತೆ ಹಿನ್ನೆಲೆಯಲ್ಲಿ ನಿಷೇಧ ಹೇರಿದ್ದರೂ ಭತ್ತ ಬೆಳೆಯಲಾಗಿತ್ತು. ಆದರೆ ಅಂಥ ಭೂಮಿಯಲ್ಲಿ ‘ಹತ್ತಿ’ ಬೆಳೆಯಲಾಗಿದೆ ಎಂದು ನಮೂದಿಸಿ ಅಂಥವರನ್ನು ಪರಿಹಾರಕ್ಕೆ ಅರ್ಹರನ್ನಾಗಿಸಲಾಗಿದೆ. 

Tap to resize

Latest Videos

undefined

ತೊಗರಿ-ಹತ್ತಿ ಬೆಳೆದ ರೈತರ ಜಮೀನುಗಳಲ್ಲಿ ನಿಷೇಧಿತ ಭತ್ತ ಹಾಗೂ ಮೆಣಸಿನಕಾಯಿ ಬೆಳೆಯಲಾಗಿದೆ ಎಂದು ದಾಖಲೆಗಳಲ್ಲಿ ಸೃಜಿಸಿ, ಪರಿಹಾರ ನೀಡದಿರುವುದು ಕೂಡ ಕಂಡು ಬಂದಿದೆ. ರಾಜ್ಯ ಸಣ್ಣ ಕೈಗಾರಿಕೆ ಖಾತೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರ ತವರು ಕ್ಷೇತ್ರದಲ್ಲೇ ಇಂತಹ ಲೋಪಗಳು ನಡೆದಿವೆ ಎಂಬ ಬಲವಾದ ಆರೋಪಗಳು ಕೇಳಿ ಬರುತ್ತಿವೆ. ಇದಕ್ಕೆ ಪೂರಕ ಎನ್ನುವಂತೆ, ಮದ್ದರಕಿ ಗ್ರಾಮವೊಂದರಲ್ಲೇ ನೂರಾರು ಗೋಲ್ಮಾಲ್‌ ಪ್ರಕರಣಗಳು ಮೇಲ್ನೋಟಕ್ಕೆ ಕಂಡು ಬಂದಿವೆ. ಇಲ್ಲಿ ಪರಿಹಾರಕ್ಕಾಗಿ ಸಮೀಕ್ಷೆ ಮಾಡಲಾಗಿರುವ 2,606 ಜಮೀನುಗಳಲ್ಲಿ 599 ರೈತರಿಗೆ ಪರಿಹಾರ ನೀಡಲಾಗಿದೆ. 

ನಮ್ಮ ಕಾಲದಲ್ಲಿ ಯಾವುದೇ ಹಗರಣಗಳಾಗಿಲ್ಲ, ನಡೆದಿರುವುದು ಬಿಜೆಪಿ ಕಾಲದಲ್ಲೇ: ಡಿ.ಕೆ.ಶಿವಕುಮಾರ್‌

ಅಚ್ಚರಿಯೆಂದರೆ, ಇದರಲ್ಲಿ ನಿಷೇಧಿಸಲಾಗಿದ್ದ ಭತ್ತದ ಬೆಳೆ ಬೆಳೆದವರಿಗೂ ಪರಿಹಾರ ನೀಡಲಾಗಿದೆ. ಇನ್ನೊಂದೆಡೆ, ಪ್ರಾಮಾಣಿಕವಾಗಿ ಹಾನಿಗೊಳಗಾದ ಹತ್ತಿ ಹಾಗೂ ತೊಗರಿ ಬೆಳೆಗಾರರಿಗೆ ಪರಿಹಾರವೇ ಸಿಕ್ಕಿಲ್ಲ. ಅಂಥವರು ನಿಷೇಧಿತ ‘ಭತ್ತ’ ಬೆಳೆದಿದ್ದಾರೆಂದು ದಾಖಲೆಗಳಲ್ಲಿ ತೋರಿಸಿ ಪರಿಹಾರದಿಂದ ಅವರನ್ನು ವಂಚಿತರನ್ನಾಗಿಸಲಾಗಿದೆ. ದುಡ್ಡು ಕೊಟ್ಟವರಿಗೆ ಪರಿಹಾರ ಹಣ ನೀಡಲಾಗಿದೆಯೇ ಎಂಬ ಶಂಕೆ ಮೂಡುವಂತೆ ಇಲ್ಲಿನ ಪ್ರಕರಣಗಳು ಕಂಡು ಬಂದಿವೆ. ಈ ಮಧ್ಯೆ, ರಾಜ್ಯ ರೈತ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ಶರಣು ಮಂದರವಾಡಾ ನೇತೃತ್ವದ ನಿಯೋಗವೊಂದು ಶನಿವಾರ ಜಿಲ್ಲಾಧಿಕಾರಿ ಡಾ.ಸುಶೀಲಾ ಅವರನ್ನು ಭೇಟಿಯಾಗಿ ಈ ಸಂಬಂಧ ಮನವಿ ಸಲ್ಲಿಸಿದೆ.

ಎಫ್‌ಐಡಿ ಮಾಡಿಸಿದ ರೈತನ ಖಾತೆಗೆ ಜಮಾ ಆಗಬೇಕಾದ ಹಣವನ್ನು ಇನ್ನ್ಯಾರದ್ದೋ ಖಾತೆಗೆ ಜಮಾ ಮಾಡಲಾಗಿದೆ. ಕೇಳಿದರೆ, ಬ್ಯಾಂಕಿನವರು ಕೃಷಿ ಇಲಾಖೆಗೆ ಹೋಗಿ ಅಂತಾರೆ, ಕೃಷಿ ಇಲಾಖೆಯವರು ಕಂದಾಯ ಅಧಿಕಾರಿಗಳನ್ನು ಭೇಟಿಯಾಗಿ ಅಂತಾರೆ. ಯಾರ ಖಾತೆಗೆ ಹಣ ಜಮೆಯಾಗಿದೆ ಎಂಬುದರ ಬಗ್ಗೆ ಮಾಹಿತಿಯನ್ನೇ ನೀಡುತ್ತಿಲ್ಲ ಎಂದು ಮಂದರವಾಡಾ ದೂರಿದ್ದಾರೆ. ಈ ನಿಟ್ಟಿನಲ್ಲಿ ತನಿಖೆ ನಡೆಸಿದರೆ ಸತ್ಯ ಬಯಲಾಗಲಿದೆ ಎನ್ನುತ್ತಾರೆ ಮಂದರವಾಡಾ.

ಸಿಡಿ ಫ್ಯಾಕ್ಟರಿ ಬಂದ್ ಆಯ್ತು ಎಂಡಿಎ ಫ್ಯಾಕ್ಟರಿ ಶುರುವಾಯ್ತು: ಡಿಕೆಶಿ ವಿರುದ್ಧ ಎಚ್‌ಡಿಕೆ ಪರೋಕ್ಷ ಆರೋಪ

ಪರಿಹಾರಕ್ಕೆ ಅರ್ಹರಿಲ್ಲದ್ದಿದ್ದರೂ 5 ಸಾವಿರ ರು. ನೀಡಿದವರನ್ನು ಅರ್ಹರನ್ನಾಗಿಸಲಾಗಿದೆ. ಬೇರೆ ಜಾಗದಲ್ಲಿ ತೆಗೆದ ಫೋಟೋಕ್ಕೆ ಜಿಪಿಎಸ್‌ ಫೋಟೋ ಎಂದು ತೋರಿಸಿ ಸರ್ಕಾರಕ್ಕೆ ಕೋಟ್ಯಂತರ ರು.ವಂಚಿಸಲಾಗಿದೆ.
- ಶರಣು ಮಂದರವಾಡಾ, ರಾಜ್ಯ ರೈತ ಸಂಘದ ಜಿಲ್ಲಾ ಸಮಿತಿ ಸಂಘದ ಅಧ್ಯಕ್ಷರು.

click me!