ಡಿಕೆ ಸುರೇಶ್ ವಿರುದ್ಧ ಡಾ.ಮಂಜುನಾಥ್‌ ಮೈತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಬಿಜೆಪಿ ಪ್ಲಾನ್!

By Kannadaprabha News  |  First Published Mar 12, 2024, 5:34 AM IST

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಜಯದೇವ ಹೃದ್ರೋಗ ಸಂಸ್ಥೆಯ ನಿವೃತ್ತ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ಅವರು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ನಿಶ್ಚಿತವಾಗಿದೆ.


ಬೆಂಗಳೂರು (ಮಾ.12) : ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಜಯದೇವ ಹೃದ್ರೋಗ ಸಂಸ್ಥೆಯ ನಿವೃತ್ತ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ಅವರು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ನಿಶ್ಚಿತವಾಗಿದೆ.

‘ಮಂಜುನಾಥ್ ಅವರನ್ನೇ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕು ಎಂಬುದು ಬಿಜೆಪಿ ಹೈಕಮಾಂಡ್‌ ಮತ್ತು ರಾಜ್ಯ ಬಿಜೆಪಿ ನಾಯಕರ ಒತ್ತಾಸೆಯಾಗಿದೆ. ಆ ನಾಯಕರ ಭಾವನೆಗಳನ್ನು ನಾವು ಗೌರವಿಸಬೇಕಿದೆ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

Tap to resize

Latest Videos

undefined

ಬೆಂಗಳೂರು ಗ್ರಾಮಾಂತರ: ಹ್ಯಾಟ್ರಿಕ್ ಸಂಸದ ಡಿ.ಕೆ.ಸುರೇಶ್ 4ನೇ ಬಾರಿ ಸ್ಪರ್ಧೆ..!

‘ಈ ಸಂಬಂಧ ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ಜತೆ ಭಾನುವಾರ ಎರಡು ತಾಸುಗಳ ಕಾಲ ಸಮಾಲೋಚನೆ ನಡೆಸಿ ಡಾ.ಮಂಜುನಾಥ್‌ ಸ್ಪರ್ಧೆ ವಿಚಾರವನ್ನು ಮನವರಿಕೆ ಮಾಡಿಕೊಡಲಾಗಿದೆ’ ಎಂದೂ ಅವರು ಹೇಳಿದ್ದಾರೆ.ಸೋಮವಾರ ತಮ್ಮ ನಿವಾಸದಲ್ಲಿ ನಡೆದ ರಾಮನಗರ ವಿಧಾನಸಭಾ ಕ್ಷೇತ್ರದ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನನ್ನ ಸಹೋದರಿ ಮನೆಯಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ನಮ್ಮನ್ನು ಯಾಕೆ ರಾಜಕೀಯಕ್ಕೆ ಎಳೆಯುತ್ತೀರಿ, ನೆಮ್ಮದಿಯಿಂದ ಇದ್ದೇವೆ, ನಮಗೆ ರಾಜಕೀಯ ಬೇಡ ಅಂತ ಅಳುತ್ತಾ ಕೂತಿದ್ದಾರೆ. ಇದು ನಮ್ಮ ಮನೆಯ ಪರಿಸ್ಥಿತಿ. ನನ್ನ ನೋವು ನನಗೇ ಗೊತ್ತು. ಆದರೆ, ಆ ಕಿರಾತಕರನ್ನು ಮಣಿಸಲೇಬೇಕು. ಇದು ನನ್ನ ಗುರಿ ಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಸಹೋದರರ ವಿರುದ್ಧ ಹರಿಹಾಯ್ದರು.

ಡಾ.ಮಂಜುನಾಥ್‌ ಅವರು ಎನ್‌ಡಿಎ ಮೈತ್ರಿಕೂಟದ ಒಮ್ಮತ ಅಭ್ಯರ್ಥಿಯಾಗಬೇಕು ಎಂಬುದನ್ನು ಉಭಯ ಪಕ್ಷಗಳು ಬಯಸಿವೆ. ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಎನ್‌ಡಿಎ ಅಭ್ಯರ್ಥಿಯಾಗಬೇಕು ಎಂಬುದಾಗಿ ನಾನು ತಿಳಿಸಿದ್ದೇನೆ. ಸ್ವತಃ ಯೋಗೇಶ್ವರ್ ಅವರಿಗೂ ಈ ಕುರಿತು ಹೇಳಿದ್ದೇನೆ. ಆದರೆ, ಯೋಗೇಶ್ವರ್ ಸಹ ಡಾ.ಮಂಜುನಾಥ್ ಅವರೇ ಸ್ಪರ್ಧಿಸಬೇಕು ಎಂದು ಒತ್ತಡ ಹಾಕುತ್ತಿದ್ದಾರೆ ಎಂದರು.ರಾಮನಗರ ಜನತೆ ನಿಖಿಲ್‌ ಅವರನ್ನು ಸೋಲಿಸಿದ್ದಾರೆ ಎಂದು ನಾನು ದೋಷ ಹೊರಿಸುವುದಿಲ್ಲ. ನಮ್ಮದೇ ತಪ್ಪುಗಳಿಂದ ನಿಖಿಲ್‌ ಸೋತಿದ್ದಾರೆ. ಆ ತಪ್ಪುಗಳನ್ನು ಸರಿ ಮಾಡಿಕೊಂಡು ಕೆಲಸ ಮಾಡಬೇಕಿದೆ. ಈ ಚುನಾವಣೆಯನ್ನು ಸವಾಲಾಗಿ ಸ್ವೀಕಾರ ಮಾಡಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಬೇಕಿದೆ ಎಂದು ಹೇಳಿದರು. 

ಡಾ.ಮಂಜುನಾಥ್‌ ರಾಜಕೀಯಕ್ಕೆ ಬರ್ತಾರಾ? ಶಿವರಾತ್ರಿ ಕಾರ್ಯಕ್ರಮದಲ್ಲಿ ಬಿಜೆಪಿಗೆ ಆಹ್ವಾನ ನೀಡಿದ ವಿಜಯೇಂದ್ರ !

ಹರಕೆ ಕುರಿ ಮಾಡುತ್ತಿಲ್ಲ- ಬಾಲಕೃಷ್ಣಗೆ ತಿರುಗೇಟು:

ಇದೇ ವೇಳೆ ಗೌಡರ ಮನೆಯಲ್ಲಿ ಅಳಿಯನನ್ನೇ ಹರಕೆಯ ಕುರಿ ಮಾಡಲು ಹೊರಟಿದ್ದಾರೆ ಎಂಬ ಮಾಗಡಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಬಾಲಕೃಷ್ಣ ಹೇಳಿಕೆ ಪ್ರಸ್ತಾಪಿಸಿದ ಕುಮಾರಸ್ವಾಮಿ, ಆ ವ್ಯಕ್ತಿಗೆ ಸತ್ಯ ಗೊತ್ತಿಲ್ಲ. ಮಂಜುನಾಥ್ ಅವರು ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಲಕ್ಷಾಂತರ ಬಡ ಜನರ ಹೃದಯ ಕಾಪಾಡಿದ್ದಾರೆ. ದೇಶದಲ್ಲಿಯೇ ಅವರ ಸೇವೆಯನ್ನು ಕೊಂಡಾಡುತ್ತಾರೆ. ಅಂತಹ ವ್ಯಕ್ತಿ ದೆಹಲಿಗೆ ಹೋದರೆ ಇಡೀ ದೇಶಕ್ಕೆ ಸೇವೆ ಮಾಡಬಹುದು. ಅವರನ್ನು ಹರಕೆಯ ಕುರಿ ಮಾಡುತ್ತಿಲ್ಲ ನಾವು ಎಂದು ತಿರುಗೇಟು ನೀಡಿದರು. ಜೆಡಿಎಸ್‌ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಮಾತನಾಡಿ, ಕಳೆದ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸಿದ್ದು ನಾವು ಮಾಡಿದ ದೊಡ್ಡ ತಪ್ಪು. ಅದನ್ನು ಸರಿ ಮಾಡಿಕೊಳ್ಳುವ ಕಾಲ ಸನ್ನಿಹಿತವಾಗಿದೆ, ಈ ಚುನಾವಣೆ ನಿರ್ಣಾಯಕ. ಇನ್ನು 45 ದಿನಗಳ ಕಾಲ ಪಕ್ಷದ ಪರವಾಗಿ ಪ್ರಚಾರ, ಕೆಲಸ ಮಾಡುತ್ತೇನೆ. ಮೈತ್ರಿಕೂಟದ ಪರವಾಗಿ ಕೆಲಸ ಮಾಡಲಾಗುವುದು ಎಂದರು. ಸಭೆಯಲ್ಲಿ ರಾಮನಗರ ಜಿಲ್ಲಾಧ್ಯಕ್ಷ ಎ.ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

click me!