ಗಾಯಗೊಂಡ ವಿಷಪೂರಿತ ಹಾವಿಗೆ ಶಸ್ತ್ರಚಿಕಿತ್ಸೆ; ಬರೊಬ್ಬರಿ 40 ಕ್ಕೂ ಹೆಚ್ಚು ಹೊಲಿಗೆ ಹಾಕಿ ರಕ್ಷಿಸಿದ ವೈದ್ಯರು!

By Kannadaprabha News  |  First Published Jan 22, 2024, 10:57 PM IST

ಬೆಳಗಾವಿಯ ಹೊರವಲಯದಲ್ಲಿ ಜಮೀನು ಮಣ್ಣು ಅಗೆಯುವ ವೇಳೆ ತೀವ್ರವಾಗಿ ಗಾಯಗೊಂಡಿದ್ದ ನಾಗರ ಹಾವಿಗೆ ಇದೇ ಮೊದಲ ಬಾರಿಗೆ ಅಂಗಾಂಗ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. 


ಬೆಳಗಾವಿ (ಜ.22): ಬೆಳಗಾವಿಯ ಹೊರವಲಯದಲ್ಲಿ ಜಮೀನು ಮಣ್ಣು ಅಗೆಯುವ ವೇಳೆ ತೀವ್ರವಾಗಿ ಗಾಯಗೊಂಡಿದ್ದ ನಾಗರ ಹಾವಿಗೆ ಇದೇ ಮೊದಲ ಬಾರಿಗೆ ಅಂಗಾಂಗ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. 

ಬೆಳಗಾವಿಯ ಮಲ್ಟಿ ಸ್ಪೆಷಾಲಿಟಿ ವೆಟರ್ನರಿ ಆಸ್ಪತ್ರೆಯ ತಜ್ಞ ಪಶುವೈದ್ಯರು, ನಾಗರ ಹಾವನ್ನು ರಕ್ಷಿಸಲು ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಹಾವಿನ ದೇಹವನ್ನು ಪುನಃ ಜೋಡಿಸಲು ವೈದ್ಯರು 40 ಕ್ಕೂ ಹೆಚ್ಚು ಹೊಲಿಗೆಗಳನ್ನು ಹಾಕಿದ್ದಾರೆ.

Tap to resize

Latest Videos

ಸಮುದ್ರದಲ್ಲಿ ಭಾರತದ ಮಾರ್ಕೋಸ್‌ ಕಮಾಂಡೋ 'ಸರ್ಜಿಕಲ್‌ ಸ್ಟ್ರೈಕ್‌', ಎಲ್ಲಾ ಒತ್ತೆಯಾಳುಗಳ ರಕ್ಷಣೆ!

ವೃತ್ತಿಯಲ್ಲಿ ಬೈಕ್ ಮೆಕ್ಯಾನಿಕ್ ಆಗಿರುವ ಕೆದ್ನೂರು ಗ್ರಾಮದ ಉರಗ ರಕ್ಷಕ ಕೇತನ್ ಜಯವಂತ ರಾಜೈ ಅವರು ಕಳೆದ 16 ವರ್ಷಗಳಿಂದ ಹಾವುಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದು, ಹಾವನ್ನು ರಕ್ಷಿಸುವಂತೆ ಬೆಳಗಾವಿ ತಾಲೂಕಿನ ಕೆದ್ನೂರು ಗ್ರಾಮದ ನಿವಾಸಿಯೊಬ್ಬರು ಕರೆ ಮಾಡಿದ್ದರು. ಶುಕ್ರವಾರ ಅವರ ಜಮೀನಿನಲ್ಲಿ ಜೆಸಿಬಿ ಕೆಲಸ ಮಾಡುತ್ತಿದ್ದಾಗ ಈ ಹಾವು ಪತ್ತೆಯಾಗಿದೆ. ಕೂಡಲೇ ಹಾವನ್ನು ರಕ್ಷಿಸಲು ಕೇತನ್ ಧಾವಿಸಿದ್ದಾರೆ. ಆದರೆ, ಜೆಸಿಬಿ ಯಂತ್ರದ ಬಕೆಟ್ ನ ಹಲ್ಲು ಹಾವಿನ ಕತ್ತಿನ ಕೆಳಗೆ ಮತ್ತು ಇತರ ಕಡೆ ಚುಚ್ಚಿದ್ದರಿಂದ ನಾಗರ ಹಾವಿಗೆ ತೀವ್ರ ಪೆಟ್ಟಾಗಿತ್ತು.

ಯಾವುದೇ ಬೆಲೆ ತೆತ್ತಾದರೂ ಹಾವನ್ನು ಉಳಿಸಲು ಬಯಸಿದ ಕೇತನ್, ಬೆಳಗಾವಿಯ ಮಹಾಂತೇಶ ನಗರದಲ್ಲಿರುವ ಮಲ್ಟಿ ಸ್ಪೆಷಾಲಿಟಿ ಪಶುವೈದ್ಯಕೀಯ ಆಸ್ಪತ್ರೆಗೆ ಸುರಕ್ಷಿತ ಪೆಟ್ಟಿಗೆಯಲ್ಲಿ ಸಾಗಿಸಿದ್ದಾರೆ. ಮುಖ್ಯ ಪಶುವೈದ್ಯಾಧಿಕಾರಿ ಡಾ.ಎಚ್.ಬಿ.ಸಣ್ಣಕ್ಕಿ, ಪಶುವೈದ್ಯಾಧಿಕಾರಿ ಡಾ.ಮಹಾದೇವ ಮುಲ್ಲಾಟಿ ಅವರನ್ನೊಳಗೊಂಡ ಪಶುವೈದ್ಯರ ತಂಡ, ಈ ವಿಷಪೂರಿತ ಹಾವಿಗೆ ಅರಿವಳಿಕೆ ನೀಡಿ, ಒಳಾಂಗಗಳ ಹೊರತೆಗೆಯುವಿಕೆ, ಸೀಳುವಿಕೆ ಮತ್ತು ಮರು ಜೋಡಣೆ ಶಸ್ತ್ರಚಿಕಿತ್ಸೆ ನಡೆಸಿದೆ. ಶಸ್ತ್ರ ಚಿಕಿತ್ಸೆ ವೇಳೆ ಹಾವು ಸಾಮಾನ್ಯವಾಗಿ ಉಸಿರಾಡಲು ಆಮ್ಲಜನಕದ ಪೂರೈಕೆಯನ್ನು ಸಹ ನೀಡಲಾಗಿದೆ. ವೈದ್ಯರು ಹಾವಿಗೆ ಐದು ದಿನಗಳ ಚಿಕಿತ್ಸೆ ನೀಡುತ್ತಿದ್ದು, ಗಾಯಗಳು ವಾಸಿಯಾಗುವವರೆಗೆ ಹಾವು ಉರಗ ರಕ್ಷಕರ ನಿಗಾದಲ್ಲಿದೆ.

ಈ ವೇಳೆ ಮಾತನಾಡಿದ ಉರಗ ರಕ್ಷಕ ಕೇತನ್, 'ನಾನು ಹಾವನ್ನು ರಕ್ಷಿಸಲು ಹೋದಾಗ ಗಂಭೀರವಾಗಿ ಗಾಯಗೊಂಡಿತ್ತು. ಅದು ಕೆಲವೇ ಗಂಟೆಗಳಲ್ಲಿ ಸಾಯಬಹುದಿತ್ತು. ನಾನು ಈ ಹಿಂದೆ ಒಂದೆರಡು ಹಾವುಗಳಿಗೆ ಚಿಕಿತ್ಸೆ ನೀಡಿದ್ದ ಮಹಾಂತೇಶ ನಗರದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದೆ. ಸದ್ಯ ಹಾವು ಆಘಾತಕ್ಕೊಳಗಾಗಿದ್ದು, ಉಸಿರಾಟ ಅಸಹಜವಾಗಿದೆ. ಅದಕ್ಕೆ ನೀರು ಕುಡಿಸಿದ್ದೇನೆ. ಚಿಕಿತ್ಸೆ ಪೂರ್ಣಗೊಳಿಸಲು ಇನ್ನೂ ಮೂರು ದಿನ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತೇನೆ' ಎಂದು ಹೇಳಿದ್ದಾರೆ.

 

ಅಮ್ಮನ ಮಡಿಲು ಸ್ವರ್ಗಕ್ಕೂ ಮಿಗಿಲು: ತಪ್ಪಿಸಿಕೊಂಡ ಬಳಿಕ ಮತ್ತೆ ತಾಯಿ ಮಡಿಲು ಸೇರಿ ಸುಖನಿದ್ದೆಗೆ ಜಾರಿದ ಮರಿಯಾನೆ

ಮುಖ್ಯ ವೈದ್ಯಾಧಿಕಾರಿ ಡಾ.ಎಚ್.ಬಿ.ಸಣ್ಣಕ್ಕಿ ಮಾತನಾಡಿ, 'ಮೊದಲ ಬಾರಿಗೆ ವಿಷಪೂರಿತ ಹಾವಿಗೆ ಇಂತಹ ದೊಡ್ಡ ಶಸ್ತ್ರಚಿಕಿತ್ಸೆ ಮಾಡಿದ್ದೇನೆ. ಹೋಲದಲ್ಲಿ ಮಣ್ಣು ಅಗೆಯುವಾಗ ಜೆಸಿಬಿ ಯಂತ್ರದ ಹಲ್ಲುಗಳು ತಗುಲಿ ಹಾವಿನ ಚರ್ಮ, ಮಾಂಸಖಂಡ, ಬೆನ್ನು ಮೂಳೆಗಳು ತುಂಡಾಗಿವೆ. ಸಾಮಾನ್ಯ ಅರಿವಳಿಕೆ ನೀಡಿದ ನಂತರ, ನಾವು ಗಾಯಗಳನ್ನು ತೊಳೆದು, ಪ್ರತಿಜೀವಕಗಳನ್ನು ಹಾಕಿದ್ದೇವೆ ಮತ್ತು ಅದರ ಅಂಗಗಳನ್ನು ಮರು ಜೋಡಿಸಿದ್ದೇವೆ. ಗಾಯವನ್ನು ಮುಚ್ಚಲು ಹಾವಿಗೆ 40ಕ್ಕೂ ಹೆಚ್ಚು ಹೊಲಿಗೆ ಹಾಕಿದ್ದೇವೆ. ಹಾವು ಚೇತರಿಸಿಕೊಳ್ಳಲು ವೀಕ್ಷಣೆ, ನೀರು, ಆಹಾರ, ಮಾಂಸಾಹಾರಿ ದ್ರವ ಮತ್ತು ನಿಯಮಿತ ಡ್ರೆಸ್ಸಿಂಗ್ ಅಗತ್ಯವಿದೆ ಮತ್ತು ಅದು ಬದಕುತ್ತದೆ ಎಂಬ ಭರವಸೆ ನಮಗಿದೆ’ ಎಂದಿದ್ದಾರೆ.

click me!