* ಸಿಎಂರಿಂದಲೇ ಕೋವಿಡ್ ನಿಯಮ ಉಲ್ಲಂಘನೆ: ಡಿಕೆಶಿ
* ಸಿಎಂ, ಬಿಜೆಪಿಗರ ಉಲ್ಲಂಘನೆಯ ದಾಖಲೆ ನಮ್ಮ ಬಳಿ ಇವೆ
* ತಮ್ಮ, 30 ಮಂದಿ ವಿರುದ್ಧ ಕೇಸು ದಾಖಲಿಸಿದ್ದಕ್ಕೆ ಆಕ್ರೋಶ
* ಕುತಂತ್ರ ಬಿಡದಿದ್ದರೆ ಬಿಜೆಪಿ ಸಭಾ ಸ್ಥಳಗಳಲ್ಲಿ ಪ್ರತಿಭಟಿಸುತ್ತೇವೆ
ಕನಕಪುರ(ಜ.11): ಮೇಕೆದಾಟು ಪಾದಯಾತ್ರೆ ವೇಳೆ ಕೊರೋನಾ ಮಾರ್ಗಸೂಚಿ ಉಲ್ಲಂಘಿಸಿದ್ದೇವೆಂದು 30 ಮಂದಿ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ. ಆದರೆ, ಮುಖ್ಯಮಂತ್ರಿ ಸೇರಿದಂತೆ ಬಿಜೆಪಿ ಸಚಿವರೇ ಸತತವಾಗಿ ಮಾರ್ಗಸೂಚಿ ಉಲ್ಲಂಘಿಸುತ್ತಿದ್ದಾರೆ. ಈ ಬಗ್ಗೆ ದಾಖಲೆಗಳು ನಮ್ಮ ಬಳಿ ಇವೆ. ಈ ಕುತಂತ್ರ ಬಿಡದಿದ್ದರೆ, ಬಿಜೆಪಿ ಕಾರ್ಯಕ್ರಮಗಳ ವಿರುದ್ಧ ಸ್ಥಳಕ್ಕೆ ತೆರಳಿ ಪ್ರತಿಭಟನೆ ನಡೆಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಪಾದಯಾತ್ರೆ ನಡುವೆ ಸುದ್ದಿಗೋಷ್ಠಿ ಮಾತನಾಡಿ, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಪಾದಯಾತ್ರೆ ತಡೆಯಲೆಂದು ವಾರಾಂತ್ಯದ ಕಫ್ರ್ಯೂ ಹಾಕಿ ಕಫ್ರ್ಯೂ ಉಲ್ಲಂಘನೆ ನೆಪದಲ್ಲಿ ನನ್ನನ್ನು ಸೇರಿ 30 ಮಂದಿ ಮೇಲೆ ಪ್ರಕರಣ ದಾಖಲಿಸಿದ್ದೀರಿ. ಆದರೆ, ನೀವು ಬಿಬಿಎಂಪಿ ಚುನಾವಣೆ ದೃಷ್ಟಿಯಿಂದ ಕೊರೋನಾ ನಿಯಮ ಉಲ್ಲಂಘಿಸಿ ನಗರ ಪ್ರದಕ್ಷಿಣೆ ಮಾಡುತ್ತಿದ್ದೀರಿ. ನಿಮ್ಮ ಶಾಸಕರು ಸಾವಿರಾರು ಜನರನ್ನು ಸೇರಿಸಿ ಕಾರ್ಯಕ್ರಮ ಮಾಡುತ್ತಾರೆ. ಅವರಿಗೆ ಅನ್ವಯವಾಗದ ಕಾನೂನು ನಮ್ಮ ಮೇಲೆ ಏಕೆ?’ ಎಂದು ಪ್ರಶ್ನಿಸಿದರು.
undefined
‘ನಮಗೆಲ್ಲಾ ನೀತಿ ಬೋಧನೆ ಮಾಡುವ ಗ್ರುಹ ಸಚಿವ ಆರಗ ಜ್ಞಾನೇಂದ್ರ ಅವರು ಜ.3 ರಂದು ತಮ್ಮ ಕ್ಷೇತ್ರದಲ್ಲಿ ಜಾತ್ರೆ ಮಾಡಿದ್ದಾರೆ. ವಾರಾಂತ್ಯದ ಕಫ್ಯೂ ವೇಳೆ ರೇಣುಕಾಚಾರ್ಯ ತಮ್ಮ ಕ್ಷೇತ್ರದಲ್ಲಿ ಸಾವಿರಾರು ಜನರೊಂದಿಗೆ ಕಾರ್ಯಕ್ರಮ ಮಾಡಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಪರಿಷತ್ ಸದಸ್ಯ ಪ್ರಮಾಣ ವಚನ ಕಾರ್ಯಕ್ರಮದ ಮೇಲೆಯೇ ಇನ್ನೂ ಪ್ರಕರಣ ದಾಖಲಾಗಿಲ್ಲ. ಇನ್ನು ವಾರಾಂತ್ಯದ ಕಫ್ರ್ಯೂ ದಿನ ಯಾರೆಲ್ಲಾ ಏನೇನು ಮಾಡಿದ್ದಾರೆ ಎಂಬುದು ಗೊತ್ತಿದೆ. ಎಲ್ಲವನ್ನೂ ದೃಶ್ಯಾವಳಿ ಸಮೇತ ದಾಖಲೆ ಸಂಗ್ರಹಿಸಿದ್ದೇವೆ’ ಎಂದರು.
‘ಇದೀಗ ಮುಖ್ಯಮಂತ್ರಿಗಳು ನಗರ ಪ್ರದಕ್ಷಿಣೆಗಳಿಗೆ ಹೊರಟಿದ್ದಾರೆ. ನಾವು ಸಹ ಬಿಜೆಪಿ ಕಾರ್ಯಕ್ರಮಗಳ ವಿರುದ್ಧ ನಮ್ಮ ಕಾನೂನು ಘಟಕದಿಂದ ಕಾನೂನು ಹೋರಾಟ ಮಾಡುತ್ತೇವೆ. ಜತೆಗೆ ಕಾರ್ಯಕ್ರಮ ನಡೆಯುವ ಸ್ಥಳಕ್ಕೇ ಬಂದು ಪ್ರತಿಭಟನೆ ನಡೆಸುತ್ತೇವೆ. ಜನತಾ ನ್ಯಾಯಾಲಯದಲ್ಲೇ ತೀರ್ಮಾನವಾಗಲಿ’ ಎಂದರು.