Covid Cases In Karnataka: ಸೋಂಕು ಇಳಿದರೂ ಪಾಸಿಟಿವಿಟಿ ಏರಿಕೆ!

Published : Jan 11, 2022, 04:57 AM IST
Covid Cases In Karnataka: ಸೋಂಕು ಇಳಿದರೂ ಪಾಸಿಟಿವಿಟಿ ಏರಿಕೆ!

ಸಾರಾಂಶ

* ನಿನ್ನೆ 11,968 ಮಂದಿಗೆ ಸೋಂಕು, ಮೊನ್ನೆಗಿಂತ ಕಮ್ಮಿ, ಪಾಸಿಟಿವಿಟಿ ಶೇ.8ರ ಸನಿಹಕ್ಕೆ * ಸಕ್ರಿಯ ಕೇಸು 60 ಸಾವಿರಕ್ಕೆ: 6 ತಿಂಗಳ ಗರಿಷ್ಠ, ಬೆಂಗಳೂರಲ್ಲೇ 9221 ಹೊಸ ಕೇಸ್‌ * ಸೋಂಕು ಇಳಿದರೂ ಪಾಸಿಟಿವಿಟಿ ಏರಿಕೆ

ಬೆಂಗಳೂರು(ಜ.11): ರಾಜ್ಯದಲ್ಲಿ ಕೊರೋನಾ ಸೋಂಕು ಹೊಸ ಪ್ರಕರಣಗಳು ತುಸು ಇಳಿಕೆಯಾದರೂ, ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.8 ಆಸುಪಾಸಿಗೆ ಹೆಚ್ಚಳವಾಗಿವೆ. ಇನ್ನು ಸಕ್ರಿಯ ಕೊರೋನಾ ಸೋಂಕಿತರ ಸಂಖ್ಯೆ ಅರ್ಧ ವರ್ಷದ ಬಳಿಕ ಅರ್ಧಲಕ್ಷದ ಗಡಿದಾಟಿದೆ.

ರಾಜ್ಯದಲ್ಲಿ ಸೋಮವಾರ 11,698 ಮಂದಿ ಸೋಂಕಿತರಾಗಿದ್ದು, ನಾಲ್ವರು ಸಾವಿಗೀಡಾಗಿದ್ದಾರೆ. 1,148 ಮಂದಿ ಗುಣಮುಖರಾಗಿದ್ದು, 60,148 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಭಾನುವಾರ 1.89 ಲಕ್ಷ ಇದ್ದ ಸೋಂಕು ಪರೀಕ್ಷೆಗಳು ಸೋಮವಾರ 1.51 ಲಕ್ಷಕ್ಕೆ ಇಳಿಕೆಯಾಗಿದೆ. ಹೀಗಾಗಿ, ಸೋಂಕಿತರ ಸಂಖ್ಯೆ 302 (ಭಾನುವಾರ 12,000 ಕೇಸ್‌) ಕಡಿಮೆಯಾಗಿವೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ 9,221 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 201 ಮಂದಿಯಲ್ಲಿ (ಭಾನುವಾರ 9,020) ಸೋಂಕು ಹೆಚ್ಚಳವಾಗಿದೆ.

ಸೋಂಕು ಪರೀಕ್ಷೆಗಳು 28 ಸಾವಿರದಷ್ಟುಇಳಿಕೆಯಾದ ಹಿನ್ನೆಲೆ ಹೊಸ ಪ್ರಕರಣಗಳು ತುಸು ಇಳಿಕೆಯಾಗಿವೆ. ಆದರೆ, ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಹೆಚ್ಚಳವಾಗುತ್ತಾ ಸಾಗಿದ್ದು, ಒಂದೇ ದಿನಕ್ಕೆ ಶೇ.1.5ರಷ್ಟುಹೆಚ್ಚಳವಾಗಿ ಶೇ.7.8ರಷ್ಟುದಾಖಲಾಗಿದೆ. ಅಂದರೆ, ಸೋಂಕು ಪರೀಕ್ಷೆಗೊಳಪಟ್ಟಪ್ರತಿ 100 ಮಂದಿಯಲ್ಲಿ ಎಂಟು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

60 ಸಾವಿರ ಸಕ್ರಿಯ:

ನಿರಂತರವಾಗಿ ಸೋಂಕಿತರ ಸಂಖ್ಯೆ ಹೆಚ್ಚಳವಾಗಿ, ಗುಣಮುಖರ ಸಂಖ್ಯೆ ಕಡಿಮೆ ಇದೆ. ಹೀಗಾಗಿ, ಸಕ್ರಿಯ ಸೋಂಕಿತರ ಸಂಖ್ಯೆ 60 ಸಾವಿರಕ್ಕೆ ಹೆಚ್ಚಿದೆ. ಸಕ್ರಿಯ ಪ್ರಕರಣಗಳು ಜೂನ್‌ ಬಳಿಕ 50 ಸಾವಿರ ಗಡಿದಾಟಿವೆ. ಇನ್ನು ಒಟ್ಟಾರೆ ಕೊರೋನಾ ಪ್ರಕರಣಗಳ ಸಂಖ್ಯೆ 30.62 ಲಕ್ಷಕ್ಕೆ, ಗುಣಮುಖರ ಸಂಖ್ಯೆ 29.65 ಲಕ್ಷಕ್ಕೆ, ಸಾವಿಗೀಡಾದವರ ಸಂಖ್ಯೆ 38,374 ಕ್ಕೆ ತಲುಪಿದೆ.

ಎಲ್ಲಿ ಎಷ್ಟುಮಂದಿಗೆ ಸೋಂಕು?

ಭಾನುವಾರ ಮೈಸೂರು 309,ಮಂಡ್ಯ 306, ಉಡುಪಿ 219, ದಕ್ಷಿಣ ಕನ್ನಡ 176, ಹಾಸನ 171, ಧಾರವಾಡ 144, ಬೆಂಗಳೂರು ಗ್ರಾಮಾಂತರ 143, ತುಮಕೂರು 139, ಬೆಳಗಾವಿ 129, ಬಳ್ಳಾರಿ 107, ಉತ್ತರ ಕನ್ನಡ 100 ಮಂದಿಗೆ ಸೋಂಕು ತಗುಲಿದೆ. ಕೊಪ್ಪಳ, ರಾಯಚೂರು, ರಾಮನಗರ, ಯಾದಗಿರಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಬೆರಳೆಣಿಕೆಯಷ್ಟು, ಹಾವೇರಿಯಲ್ಲಿ ಶೂನ್ಯ, ಉಳಿದಂತೆ 12 ಜಿಲ್ಲೆಗಳಲ್ಲಿ 100ಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗಿದೆ. ಬೆಂಗಳೂರಿನಲ್ಲಿ ಮೂವರು ವಯೋವೃದ್ಧರು, ರಾಮನಗರದಲ್ಲಿ 55 ವರ್ಷದ ಸೋಂಕಿತ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಬುಲಿಟಿನ್‌ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

‘ನೆಕ್ಸ್ಟ್‌ ಸಿಎಂ’ ಬೆಟ್ಟಿಂಗ್‌ ನಿಯಂತ್ರಿಸಿ: ವಿ.ಸುನೀಲ್‌ ಕುಮಾರ್‌ ಆಗ್ರಹ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ಅಗತ್ಯ: ಛಲವಾದಿ ನಾರಾಯಣಸ್ವಾಮಿ