* ಇಜೆಪಿ ರಾಜ್ಯಾಧ್ಯಕ್ಷ ನಳೀನ್ ಕಟೀಲ್ ವಿರುದ್ಧದ ಎಫ್‌ಐಆರ್ ರದ್ದು
* ಹೈಕೋರ್ಟ್ ಆದೇಶ: ಮಂಗಳೂರಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ
ಬೆಂಗಳೂರು(ಜ.11): ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಮಂಗಳೂರು ಸಂಸದ ನಳಿನ್‌ಕುಮಾರ್ ಕಟೀಲ್ ವಿರುದ್ಧ ಮಂಗಳೂರು ಕದ್ರಿ ಪೂರ್ವ ಠಾಣೆ ಪೋಲಿಸರು ದಾಖಲಿಸಿದ್ದ ಎಫ್‌ಐಆರ್ ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧದ ಎಫ್‌ಐಆರ್ ಮತ್ತು ಪ್ರಕರಣ ಕುರಿತ ಮಂಗಳೂರಿನ ಎರಡನೇ ಹೆಚ್ಚುವರಿ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ವಿಚಾರಣೆ ರದ್ದು ಪಡಿಸುವಂತೆ ನಳಿನ್ ಕುಮಾರ್ ಕಟೀಲ್ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದ ಕಟೀಲ್ ವಿರುದ್ಧದ ಎಫ್‌ಐಆರ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ವಿಚಾರಣೆ ರದ್ದುಪಡಿಸಿ ಆದೇಶಿಸಿದೆ.
ನಳೀನ್ ಕುಮಾರ್ ಕಟೀಲ್ ಪರ ವಕೀಲ ಪವನಚಂದ್ರ ಶೆಟ್ಟಿವಾದ ಮಂಡಿಸಿ, ಅರ್ಜಿದಾರರ ವಿರುದ್ಧದ ಆರೋಪದಲ್ಲಿ ಸಾಬೀತುಪಡಿಸುವ ಅಂಶಗಳು ಇಲ್ಲ. ಸಂವಿಧಾನದ ಪರಿಚ್ಛೇದ 105 ಪ್ರಕಾರ ಸರ್ಕಾರದ ಆಡಳಿತ ಯಂತ್ರ ಅಥವಾ ಅಧಿಕಾರಿಗಳು ತಪ್ಪು ಮಾಡುತ್ತಿದ್ದಾರೆ ಎಂದು ತಿಳಿದು ಬಂದರೆ ಜನಪ್ರತಿನಿಧಿಗಳು (ಸಂಸದರು) ಮಧ್ಯಪ್ರವೇಶಿಸುವ ಅಧಿಕಾರ ಹೊಂದಿದ್ದಾರೆ. ಆ ಕರ್ತವ್ಯವನ್ನು ಸಂಸದರು ನಿಭಾಯಿಸಿದ್ದಾರೆ. ಜನರನ್ನು ಪ್ರಚೋದಿಸುವ ಅಥವಾ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಉದ್ದೇಶ ಅರ್ಜಿದಾರರದ್ದಾಗಿರಲಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಏನಿದು ಪ್ರಕರಣ?:
ರಾಜ್ಯದಲ್ಲಿ ಕೋಮು ಗಲಭೆ ನಡೆಯುತ್ತಿದೆ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾ ವತಿಯಿಂದ 2017ರಂದು ಸೆ.7ರಂದು ಬೆಂಗಳೂರಿನಿಂದ ಮಂಗಳೂರಿಗೆ ಬೈಕ್ ರಾರಯಲಿ ಹಮ್ಮಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅಂದು ಮಧ್ಯಾಹ್ನ 1 ಗಂಟೆಗೆ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಮೆರವಣಿಗೆ ನಡೆಸಲು ಮುಂದಾಗಿದ್ದ ಬಿಜೆಪಿ ಕಾರ್ಯಕರ್ತರನ್ನು ಮಂಗಳೂರು ಪೂರ್ವ ಠಾಣಾ ಇನ್ಸ್‌ಪೆಕ್ಟರ್ ಬಂಧಿಸಿದ್ದರು.
ಈ ಹಿನ್ನೆಲೆಯಲ್ಲಿ ಕಟೀಲ್, 2017ರ ಸೆ.7ರಂದು ಮಧ್ಯಾಹ್ನ 3ಗಂಟೆಗೆ ಠಾಣೆಗೆ ತೆರಳಿ ಕಾರ್ಯಕರ್ತರ ಬಂಧನದ ಕುರಿತ ಡೈರಿಯನ್ನು ತಮಗೆ ತೋರಿಸುವಂತೆ ಇನ್ಸ್‌ಪೆಕ್ಟರ್ ಅವರನ್ನು ಕೇಳಿದ್ದರು. ಇದರಿಂದ ಪೊಲೀಸ್ ಇನ್ಸ್‌ಪೆಕ್ಟರ್ ಮಾರುತಿ ಜಿ. ನಾಯಕ್ ಅವರು ತಮ್ಮ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪ ಸಂಬಂಧ ಕಟೀಲ್ ವಿರುದ್ಧ ಮಂಗಳೂರು ಕದ್ರಿ ಪೂರ್ವ ಪೊಲೀಸ್ ಠಾಣೆಯ ಠಾಣಾಧಿಕಾರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಠಾಣಾಧಿಕಾರಿ ಎಫ್‌ಐಆರ್ ದಾಖಲಿಸಿದ್ದರು.