Puneeth Rajkumar: ಮೈಸೂರಿನ ಚಿತ್ರನಗರಿಗೆ ಪುನೀತ್ ರಾಜ್‌ಕುಮಾರ್ ಹೆಸರಿಡಲು ಚಿಂತನೆ

By Suvarna NewsFirst Published Nov 10, 2021, 7:41 PM IST
Highlights

* ಮೈಸೂರಿನ ಚಿತ್ರನಗರಿಗೆ ಪುನಿತ್ ರಾಜ್‌ಕುಮಾರ್ ಹೆಸರಿಡಲು ಚಿಂತನೆ
* ಪುನಿತ್ ಹೆಸರು ನಾಮಕರಣಕ್ಕೆ ಸಿ.ಎಂ. ಜೊತೆ ಚರ್ಚೆ
* ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆ

ಮೈಸೂರು, (ನ.10): ಮೈಸೂರಿನಲ್ಲಿ (Mysuru) ನಿರ್ಮಾಣವಾಗಲಿರುವ ಮಹತ್ವಾಕಾಂಕ್ಷೆಯ ಚಿತ್ರನಗರಿಗೆ ಕರ್ನಾಟಕದ ಯುವರತ್ನ ಪುನಿತ್ ರಾಜ್‌ಕುಮಾರ್ (Puneeth Rajkumar) ಅವರ ಹೆಸರಿಡಲು ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ (ST Somashekar) ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ನಮ್ಮನಗಲಿದ ಕನ್ನಡದ ಖ್ಯಾತ ಯುವನಟ ಪುನಿತ್ ರಾಜ್‌ಕುಮಾರ್ ಅವರಿಗೆ ಮೈಸೂರಿನಲ್ಲಿ ದೊಡ್ಡ ವೇದಿಕೆಯಲ್ಲಿ "ನುಡಿನಮನ" ಸಲ್ಲಿಸುವ ಕಾರ್ಯಕ್ರಮ ಆಯೋಜಿಸಲು ನಡೆಸಿದ ಪೂರ್ವಭಾವಿ ಸಭೆಯ ನಂತರ ಜಿಲ್ಲಾ ಉಸ್ತುವಾರಿ ಸಚಿವರು ಈ ವಿಷಯ ಪ್ರಕಟಿಸಿದರು.

Basavashri Award: ಪುನೀತ್ ಕುಟುಂಬಕ್ಕೆ ಮುರಘ ಶ್ರೀ ಆಹ್ವಾನ

ನುಡಿನಮನ ಕಾರ್ಯಕ್ರಮವನ್ನು ಆಯೋಜಿಸಲು ಉಪಸಮಿತಿಗಳನ್ನು ರಚಿಸಲಾಗುವುದು. ಈ ಸಮಿತಿಗಳು ಚರ್ಚಿಸಿ ನೀಡುವ ಸಲಹೆಯಂತೆ ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು. 

ಮೈಸೂರು ವಿಶ್ವವಿದ್ಯಾಲಯದ (Mysuru University) ಮಾನಸಗಂಗೋತ್ರಿಯಲ್ಲಿರುವ ಬಯಲರಂಗ ಮಂದಿರದಲ್ಲಿ ನುಡಿನಮನ ಕಾರ್ಯಕ್ರಮ ಆಯೋಜಿಸಲಾಗುವುದು. ಕಾರ್ಯಕ್ರಮಕ್ಕೆ ಶೀಘ್ರದಲ್ಲೇ ದಿನಾಂಕ ಪ್ರಕಟಿಸಲಾಗುವುದು ಎಂದು ಹೇಳಿದರು.

ಆ ಕಾರ್ಯಕ್ರಮದಲ್ಲಿ ಪುನಿತ್ ರಾಜ್‌ಕುಮಾರ್ ಕುರಿತು ಪುಸ್ತಕ  ಬಿಡುಗಡೆ ಮಾಡಲಾಗುವುದು. ಈ ಪುಸ್ತಕಕ್ಕೆ ಸಾರ್ವಜನಿಕರಿಂದ ಲೇಖನ ಆಹ್ವಾನಿಸಲಾಗುವುದು. ಅಭಿಮಾನಿಗಳು ಲೇಖನ ಕಳುಹಿಸಿಕೊಡಬಹುದು ಎಂದು ತಿಳಿಸಿದರು. 

ನುಡಿನಮನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಸಹ ಆಹ್ವಾನಿಸಲಾಗುವುದು ಎಂದು ಸಚಿವರು ಹೇಳಿದರು. 

ಸಭೆಯಲ್ಲಿ ಶಾಸಕ ಎಲ್. ನಾಗೇಂದ್ರ,ನಿಮಮ ಮಂಡಳಿ ಪ್ರಾಧಿಕಾರದ ಅಧ್ಯಕ್ಷರುಗಳಾದ ಹೆಚ್.ವಿ.ರಾಜೀವ್, ಅಪ್ಪಣ್ಣ, ಎ.ಹೇಮಂತ್ ಕುಮಾರ್ ಗೌಡ, ಎಲ್.ಆರ್.ಮಹದೇವಸ್ವಾಮಿ, ಫಣೀಶ್, ಕೃಷ್ಣಪ್ಪಗೌಡ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಡಾ. ವೈ.ಡಿ.ರಾಜಣ್ಣ, ರಾಜಶೇಖರ್ ಕದಂಬ, ಡಾ. ರಾಜ್‌ಕುಮಾರ್ ಶಿವರಾಜ್‌ಕುಮಾರ್ ಸಂಘದ ಅಧ್ಯಕ್ಷರಾದ ರವಿ, ಮಹದೇವ, ನಟ ಜಯಪ್ರಕಾಶ್, ಬಿ.ಎಂ.ರಾಮಚಂದ್ರ, ಬನ್ನೂರು ರಾಜು, ಭಾನು ಮೋಹನ್, ಮುಳ್ಳೂರು ನಂಜುಂಡಸ್ವಾಮಿ, ಮಡ್ಡಿಕೆರೆ ಗೋಪಾಲ್, ಮತ್ತಿತರರು ಉಪಸ್ಥಿತರಿದ್ದರು.

ಪುನೀತ್​ಗೆ ಪದ್ಮ ಪ್ರಶಸ್ತಿ ನೀಡಲು ಒತ್ತಾಯ
ನಟ ಪುನೀತ್‌ಗೆ ಪದ್ಮ ಪ್ರಶಸ್ತಿ ನೀಡುವಂತೆ ಒತ್ತಾಯ ಬಂದಿದೆ. ಈ ಹಿನ್ನೆಲೆಯಲ್ಲಿ, ಸರ್ಕಾರ ಅಗತ್ಯ ಕ್ರಮಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಸದ್ಯದಲ್ಲೇ ಕೇಂದ್ರಕ್ಕೆ ನಟ ಪುನೀತ್ ಹೆಸರಿನ ಶಿಫಾರಸು ಪತ್ರ ಕಳಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಈ ಕುರಿತು ನವೆಂಬರ್ 16ರ ಬಳಿಕ ಸರ್ಕಾರದ ಮಟ್ಟದಲ್ಲಿ ಹಾಗೂ ಪುನೀತ್ ಕುಟುಂಬದ ಜತೆ ಚರ್ಚಿಸಿ ಹೆಸರು ಶಿಫಾರಸು ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅಭಿಮಾನಿಗಳು ಪುನೀತ್ ಅವರಿಗೆ ಪದ್ಮಶ್ರೀ ಪ್ರಶಸ್ತಿಗೆ ಒತ್ತಾಯಿಸಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಇತ್ತೀಚೆಗೆ ಸಿಎಂ ಕೂಡ ಪುನೀತ್​ಗೆ ಪದ್ಮಶ್ರೀ ನೀಡುವ ವಿಚಾರಕ್ಕೆ ಸಮ್ಮತವಿದೆ ಎಂಬ ಸುಳಿವು ಬಿಟ್ಟುಕೊಟ್ಟಿದ್ದರು. 

ಅನುಮತಿ ಪಡೆಯುವಂತೆ ಬಿಬಿಎಂಪಿ ಕೋರಿಕೆ
ಬೆಂಗಳೂರಿನಲ್ಲಿ ನಟ ಪುನೀತ್ ಪುತ್ಥಳಿ ಪ್ರತಿಷ್ಠಾಪನೆಗೆ ಸಿದ್ಧತೆ ಅಭಿಮಾನಿಗಳು ಸಿದ್ಧತೆ ನಡೆಸಿದ್ದು, ಪುತ್ಥಳಿ ಪ್ರತಿಷ್ಠಾಪನೆಗೆ ಸ್ಥಳ ಗುರುತು ಮಾಡಿದ್ದಾರೆ. ಈ ನಡುವೆ ಬಿಬಿಎಂಪಿ ಫ್ಯಾನ್ಸ್ ಬಳಿ ಮನವಿ ಮಾಡಿಕೊಂಡಿದ್ದು, ಅನಧಿಕೃತವಾಗಿ ಪುತ್ಥಳಿ ಪ್ರತಿಷ್ಠಾಪಿಸದಂತೆ ಕೋರಿಕೊಂಡಿದೆ. ಅನಧಿಕೃತ ಪುತ್ಥಳಿ ತೆರವಿಗೆ ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ , ಅನುಮತಿ ಪಡೆಯದೆ ಯಾವುದೇ ಪುತ್ಥಳಿ ಸ್ಥಾಪಿಸುವಂತಿಲ್ಲ. ಹೀಗಾಗಿ ಬಿಬಿಎಂಪಿ ಅನುಮತಿ ಪಡೆಯುವಂತೆ ಸೂಚನೆ ನೀಡಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಪುತ್ಥಳಿ ಇಡದಂತೆ ಸೂಚನೆ ನೀಡಲಾಗಿದ್ದು, ಫುಟ್ ಪಾತ್, ಸಾರ್ವಜನಿಕರು ಓಡಾಡೋ ಸ್ಥಳ, ವಾಹನ ಸಂಚಾರಕ್ಕೆ ಅಡ್ಡಿಯಾಗದಂತಹ ಸ್ಥಳ ಗುರುತಿಸಲು ಸೂಚನೆ ನೀಡಲಾಗಿದೆ.

click me!