* ಏರೋಸ್ಪೇಸ್ ಉದ್ಯಮಕ್ಕೆ ಬೇಕಿದೆ ಹೆಚ್ಚಿನ ಗಮನ
* ಬೆಂಗಳೂರು ವಿಮಾನಯಾನ ಕ್ಷೇತ್ರಕ್ಕೆ ಬೇಕಿದೆ ಉತ್ತೇಜನ
* ವಿಮಾನ ಕ್ಷೇತ್ರಕ್ಕೆ ಬೇಕಿದೆ ಅನುಕೂಲಕರ ಪರಿಸರ ವ್ಯವಸ್ಥೆ
ಗಿರೀಶ್ ಲಿಂಗಣ್ಣ
ನವದೆಹಲಿ(ನ.10): ಆತ್ಮನಿರ್ಭರ್ ಭಾರತ್ ಮಿಷನ್ ಮತ್ತು ಮೇಕ್ ಇನ್ ಇಂಡಿಯಾ ಉಪಕ್ರಮಗಳ ಉತ್ಸಾಹಕ್ಕೆ ಕರ್ನಾಟಕವು ಬದ್ಧವಾಗಿದ್ದರೆ, ಇಲ್ಲೊಂದು ಸುವರ್ಣಾವಕಾಶವಿದೆ. ಏರೋಸ್ಪೇಸ್ ಉದ್ಯಮ ಹೆಚ್ಚಿನ ಗಮನವನ್ನು ಬಯಸುತ್ತಿದ್ದು, ಪ್ರಚೋದನೆಯನ್ನು ಒದಗಿಸಬೇಕಾಗಿದೆ. ವೇಗವಾಗಿ ಬೆಳೆಯುತ್ತಿರುವ ಈ ಉದ್ಯಮದಲ್ಲಿ ಹೊಸತನಕ್ಕೆ ಬೆಂಗಳೂರಿಗಿಂತ ಉತ್ತಮವಾದ ಸ್ಥಳ ಮತ್ತೊಂದಿಲ್ಲ. ಅಧಿಕಾರಸ್ಥರು ಅನುಕೂಲಕರ ಪರಿಸರ ವ್ಯವಸ್ಥೆಯನ್ನು ಒದಗಿಸಿದರೆ ಈ ವಲಯವು ವೇಗವಾಗಿ ಬೆಳೆಯಬಲ್ಲದು.
ಮತ್ತೆ ಮತ್ತೆ ಜಗತ್ತಿನೆದುರು ಬೆತ್ತಲಾಗುತ್ತಿದೆ ಪಾಕಿಸ್ತಾನ!
ಏರೋಸ್ಪೇಸ್ ರಫ್ತಿನ ವಿಚಾರಕ್ಕೆ ಬಂದಾಗ, ಭಾರತವು ಟಾಪ್ 10 ದೇಶಗಳಲ್ಲಿ ಸ್ಥಾನ ಪಡೆದಿಲ್ಲ. ರಕ್ಷಣೆ ಮತ್ತು ಏರೋಸ್ಪೇಸ್ ಎರಡೂ ಈ ದೇಶದಲ್ಲಿ ಇನ್ನೂ ನಿರ್ಣಾಯಕ ಕ್ಷೇತ್ರಗಳಾಗಿವೆ. ಇದಿನ್ನೂ ಕಣ್ಣು ಬಿಡುತ್ತಿದೆ ಅಷ್ಟೇ. ಭಾರತವು ಅತಿ ದೊಡ್ಡ ಆಮದುದಾರನ ಸ್ಥಾನದಿಂದ ರಫ್ತುದಾರನಾಗಿ ಬದಲಾಗುವ ಸಮಯ ಬಂದಿದೆ. ಎರಡನೆಯ ಮಹಾಯುದ್ಧದ ಬಳಿಕ ಭಾರತದ ಪ್ರಮುಖ ಏರೋಸ್ಪೇಸ್ ತಯಾರಕ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್), ತನ್ನ ಬೇರುಗಳನ್ನು ಹೊಂದಿರುವ ಬೆಂಗಳೂರಿಗೆ ಇದರಲ್ಲಿ ಪ್ರಮುಖ ಪಾತ್ರವಿದೆ. ಭಾರತೀಯ ವಾಯುಪಡೆಯೂ ನಾಲ್ಕು ಏರೋಡ್ರೋಮ್‌ಗಳೊಂದಿಗೆ ಇಲ್ಲಿ ಪ್ರಬಲ ನೆಲೆಯನ್ನು ಹೊಂದಿದೆ. ಜತೆಗೆ, ದೇವನಹಳ್ಳಿಯಲ್ಲಿ ಏರೋಸ್ಪೇಸ್ ಪಾರ್ಕ್ ಇದೆ. ಅದರ ಜಮೀನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ವ್ಯಾಪ್ತಿಯಲ್ಲಿದೆ, ನೀತಿಗಳನ್ನು ಕರ್ನಾಟಕ ಉದ್ಯೋಗ ಮಿತ್ರ ನಿಯಂತ್ರಿಸುತ್ತದೆ. ಉದ್ಯಮದ ಬೆಳವಣಿಗೆಗೆ ಉತ್ತೇಜನ ನೀಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಆರೋಗ್ಯಕರ ಉದ್ಯಮವನ್ನು ನೀತಿಗಳು ಮತ್ತು ಕಾರ್ಯಗತಗೊಳಿಸುವಿಕೆಯಿಂದ ವ್ಯಾಖ್ಯಾನಿಸಲಾಗಿದೆ.
ಏರೋಸ್ಪೇಸ್ ಉದ್ಯಮವು ಹೆಚ್ಚು ಸ್ಪರ್ಧಾತ್ಮಕವಾಗಿದೆ ಮತ್ತು ತಂತ್ರಜ್ಞಾನದ ಉತ್ತುಂಗದಲ್ಲಿದೆ. ಈ ಕ್ಷೇತ್ರ ಬೆಳೆಯಬೇಕಾದರೆ ಖಾಸಗಿ ವಲಯ ರಚನಾತ್ಮಕ ಪಾತ್ರ ವಹಿಸಬೇಕಿದೆ. ಭಾರತವು ಯಂತ್ರೋಪಕರಣಗಳ ಬಿಡಿ ಭಾಗಗಳನ್ನು ಹಾಗೂ ಏರೋಸ್ಟ್ರಕ್ಟರ್ ಜೋಡಣೆಯ ಘಟಕಗಳನ್ನು ಸಾಕಷ್ಟು ಪ್ರಮಾಣದಲ್ಲಿ ಉತ್ಪಾದಿಸುವುದೆಂದು ನಿರೀಕ್ಷಿಸಲಾಗಿದೆ. ಇದು ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಬದ್ಧವಾಗಿದೆ. ಒಂದು ಅಂದಾಜಿನ ಪ್ರಕಾರ, ಏರೋಸ್ಪೇಸ್ ಉದ್ಯಮವು ವಿಮಾನ, ಕ್ಷಿಪಣಿಗಳು ಮತ್ತು ಯುಎವಿಗಳ ಅಭಿವೃದ್ಧಿ, ಉತ್ಪಾದನೆ ಮತ್ತು ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ವಾಯುಗಾಮಿ ರಕ್ಷಣಾ ಎಲೆಕ್ಟ್ರಾನಿಕ್ಸ್, ಸಿಮ್ಯುಲೇಶನ್, ಗ್ರೌಂಡ್ ಸಪ್ಲೈ ಎಂಜಿನಿಯರಿಂಗ್ ಮತ್ತು ನಿರ್ವಹಣೆ, ದುರಸ್ತಿ ಮತ್ತು ಕೂಲಂಕಷ ಪರೀಕ್ಷೆಯನ್ನು (ಎಂಆರ್‌ಒ) ಒಳಗೊಂಡಿರುತ್ತದೆ. ಎಲ್ಲ ಏರೋಸ್ಪೇಸ್ ತಯಾರಿಕೆಯಲ್ಲಿ ವಿಮಾನ ವ್ಯವಸ್ಥೆಗಳು ಮತ್ತು ಘಟಕ ತಯಾರಕರು 26% ರಷ್ಟಿದ್ದರೆ, ನಾಗರಿಕ ಮತ್ತು ಮಿಲಿಟರಿ ಎಂಆರ್‌ಒ 27% ರಷ್ಟಿದೆ. ವಿಮಾನ ಮತ್ತು ಇತರ ಎಂಜಿನ್‌ಗಳು - 28%, ಉಪಗ್ರಹಗಳು, ಕ್ಷಿಪಣಿಗಳು ಮತ್ತು ಯುಎವಿಗಳು ಸುಮಾರು ಏಳು ಪ್ರತಿಶತವನ್ನು ಹೊಂದಿವೆ.
ತೇಜಸ್ ಯುದ್ಧ ವಿಮಾನಕ್ಕೆ ಶಕ್ತಿ, ಜಿಇ ಇಂಜಿನ್ ಯೋಜನೆ!
2030ರ ವೇಳೆಗೆ ಭಾರತದಲ್ಲಿ ಏರೋಸ್ಪೇಸ್ ಮತ್ತು ಡಿಫೆನ್ಸ್ (ಎ&ಡಿ) ಮಾರುಕಟ್ಟೆಯು ಸುಮಾರು $ 70 ಶತಕೋಟಿಯನ್ನು ತಲುಪುವ ನಿರೀಕ್ಷೆಯಿದೆ. ಮೂಲಸೌಕರ್ಯ ಸುಧಾರಿಸಿದರೆ ಮತ್ತು ಸರ್ಕಾರವು ಸಾಕಷ್ಟು ಒತ್ತು ನೀಡಿದರೆ ಇದು ಸಾಕಷ್ಟು ಎತ್ತರಕ್ಕೆ ಸಾಗುತ್ತದೆ. ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ವಿಮಾನಯಾನ ಮತ್ತು ಪ್ರಯಾಣಿಕರ ದಟ್ಟಣೆಯ ಬೆಳವಣಿಗೆಯು ವಾರ್ಷಿಕ 15% ರಷ್ಟು ಹೆಚ್ಚಾಗಿದೆ. ವಿಮಾನಯಾನ ಸಂಸ್ಥೆಗಳು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ತಮ್ಮ ವಿಮಾನಗಳನ್ನು ನಿಲುಗಡೆ ಮಾಡಲು ಜಾಗಕ್ಕಾಗಿ ಸ್ಪರ್ಧಿಸುತ್ತಿವೆ. ಆರ್ಥಿಕ ಬೆಳವಣಿಗೆಯು ಸಣ್ಣ ವಿಮಾನಗಳು, ವ್ಯಾಪಾರ ಜೆಟ್‌ಗಳು ಮತ್ತು ಹೆಲಿಕಾಪ್ಟರ್‌ಗಳಿಗೆ ಬೇಡಿಕೆಯನ್ನು ಹೆಚ್ಚಿಸುತ್ತಿದೆ. 2038ರ ವೇಳೆಗೆ ದೇಶೀಯ ವಲಯವೊಂದರಲ್ಲೇ 2,380 ವಿಮಾನಗಳಿಗೆ ಬೇಡಿಕೆ ಬರಲಿದೆ ಎಂದು ಅಂದಾಜಿಸಲಾಗಿದೆ.
ಇಂತಹ ಬೆಳವಣಿಗೆಯು ಈ ಕ್ಷೇತ್ರದಲ್ಲಿ ಏರೋಸ್ಪೇಸ್ ಘಟಕಗಳು ಮತ್ತು ಭಾಗಗಳ ಉತ್ಪಾದನಾ ವಲಯವು ಅಭಿವೃದ್ಧಿ ಹೊಂದಲು ಸಾಕಷ್ಟು ಅವಕಾಶಗಳನ್ನು ಮಾಡಿಕೊಡುತ್ತದೆ. ಭಾರತದಲ್ಲಿ ಕಾರ್ಮಿಕರು ಹಾಗೂ ಕೌಶಲವಂತ ತಾಂತ್ರಿಕ ಮಾನವಶಕ್ತಿ ಕಡಿಮೆ ವೆಚ್ಚದಲ್ಲಿ ಹಾಗೂ ಯಥೇಚ್ಛವಾಗಿ ಲಭ್ಯವಿರುವುದರಿಂದ, ದೇಶವೀಗ ಉತ್ಪಾದನೆಯತ್ತ ಗಮನ ಹರಿಸಬೇಕಾಗಿದೆ. ಅದರಲ್ಲಿ ಖಾಸಗಿ ಪಾಲುದಾರರ ಪಾತ್ರವು ನಿರ್ಣಾಯಕವಾಗಿದೆ. ಏರೋಸ್ಪೇಸ್ ಮತ್ತು ಘಟಕಗಳ ಜಾಗತಿಕ ಪೂರೈಕೆ ಸರಪಳಿಯಲ್ಲಿ, ಭಾರತವು ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಬೇಕು. ಈ ಪ್ರಕ್ರಿಯೆಯಲ್ಲಿ, ಭಾರತದ ಏವಿಯೇಷನ್ ಹಬ್ ಎಂದು ಪ್ರಸಿದ್ಧವಾಗಿರುವ ಬೆಂಗಳೂರು ಪ್ರಮುಖ ಪಾತ್ರವನ್ನು ವಹಿಸಲು ಎಲ್ಲ ಕಾರಣಗಳನ್ನು ಹೊಂದಿದೆ. ಬೋಯಿಂಗ್, ರೋಲ್ಸ್ ರಾಯ್ಸ್, ಯುನಿಮೆಕ್, ಕಾಲಿನ್ಸ್ ಏರೋಸ್ಪೇಸ್ ಮತ್ತು ಜಿಕೆಎನ್ ಏರೋಸ್ಪೇಸ್ ಮುಂತಾದ ಬೃಹತ್ ಪ್ರಮಾಣದ ಕಂಪನಿಗಳು ಬೆಂಗಳೂರಿನಲ್ಲಿ ತಮ್ಮ ಉದ್ಯಮಗಳನ್ನು ಆರಂಭಿಸಿವೆ. ಈ ಮೂಲಕ ಒಇಎಂಗಳಿಗೆ ಸೇವೆ ಒದಗಿಸುವಲ್ಲಿ ಕ್ಷಿಪ್ರವಾಗಿ ದಾಪುಗಾಲು ಹಾಕುವ ಎಲ್ಲ ಅವಕಾಶಗಳನ್ನು ಬೆಂಗಳೂರು ಹೊಂದಿದೆ ಎಂಬುದು ಸ್ಪಷ್ಟವಾಗಿದೆ. ಆದರೆ ಕರ್ನಾಟಕವು ಈ ವಲಯದಲ್ಲಿ ತನ್ನ ಭವಿಷ್ಯವನ್ನು ವಿಸ್ತರಿಸುವ ಅವಕಾಶವನ್ನು ಬಳಸಿಕೊಳ್ಳಲು ಸಜ್ಜಾಗಿದೆಯೇ ಎಂಬುದು ಮುಖ್ಯ ಪ್ರಶ್ನೆಯಾಗಿದೆ. ಏರೋಸ್ಪೇಸ್ ಉದ್ಯಮವು ದೇಶದಲ್ಲಿ ಒಂದು ನಿರ್ದಿಷ್ಟ ರೂಪವನ್ನು ಪಡೆದ ಮೊದಲ ಸ್ಥಳ ಬೆಂಗಳೂರೇ ಆಗಿದ್ದರೂ ಈ ಪ್ರಶ್ನೆ ಉದ್ಭವಿಸುತ್ತದೆ.
ರಷ್ಯಾ ನಿರ್ಮಿತ ಫೈಟರ್ ಜೆಟ್‌ಗೆ ಹೊಸ ರೂಪ ಕೊಟ್ಟ HAL: ಇದು ಸ್ವದೇಶೀ ಸುಖೋಯ್ ಕಥೆ!
ವಾಸ್ತವಾಂಶದಿಂದ ನಾವು ನೋಡುವಂತೆ, ವಿಮಾನಯಾನ ಕ್ಷೇತ್ರದಲ್ಲಿ ಕನಿಷ್ಠ 3-4 ನಗರಗಳು ಬೆಂಗಳೂರನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿವೆ. ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ, ದೇಶವು ಕನಿಷ್ಠ ನಾಲ್ಕು ವಾಯುಯಾನ ಕೇಂದ್ರಗಳನ್ನು ಹೊಂದಲಿದೆ ಎಂದು ಕಳೆದ ಫೆಬ್ರವರಿಯಲ್ಲಿ ಘೋಷಿಸಿದರು. ದೆಹಲಿ, ಹೈದರಾಬಾದ್, ಮುಂಬೈ, ಕೋಲ್ಕತ್ತಾ ಮತ್ತು ಬೆಂಗಳೂರು ಅವರ ಪಟ್ಟಿಯಲ್ಲಿದ್ದವು. ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಕೈಗಾರಿಕಾ ಉತ್ತೇಜನ ಇಲಾಖೆಯು ಬಿಡುಗಡೆ ಮಾಡಿರುವ ಇತ್ತೀಚಿನ ರಾಜ್ಯ ವ್ಯವಹಾರ ಸುಧಾರಣಾ ಕ್ರಿಯಾ ಯೋಜನೆ (ಸ್ಟೇಟ್ BRAP) 2019 ರ ಶ್ರೇಯಾಂಕಗಳ ಪ್ರಕಾರ, ಕರ್ನಾಟಕವು ಸುಲಭ ವ್ಯಾಪಾರ (EDB) ಸೂಚ್ಯಂಕದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಆಂಧ್ರಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, ಉತ್ತರ ಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಛತ್ತೀಸ್‌ಗಢ ಅನಂತರದ ಸ್ಥಾನದಲ್ಲಿವೆ. ಕರ್ನಾಟಕ ಮೊದಲ ಐದರಲ್ಲಿಯೂ ಸ್ಥಾನ ಪಡೆಯದೆ, 17ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಿದೆ. ಅಂತಹ ಶ್ರೇಯಾಂಕಗಳನ್ನು ತಳ್ಳಿಹಾಕಬಹುದು. ಆದರೆ, ಅದನ್ನು ಸಾಬೀತುಪಡಿಸಲು ನಮಗೆ ಆಧಾರಗಳು ಬೇಕಾಗುತ್ತವೆ.
ಏರೋಸ್ಪೇಸ್ ಉದ್ಯಮದಲ್ಲಿ ಬೆಂಗಳೂರು ತನ್ನ ಗಡಿಯನ್ನು ವಿಸ್ತರಿಸಲು ಸಮರ್ಥವಾಗಿದೆ. ಸರ್ಕಾರ ಈ ಬೆಳವಣಿಗೆಗೆ ಈಗಲಾದಲೂ ಉತ್ತೇಜನ ನೀಡಲಿ ಎಂದು ನಾವು ಬಯಸುತ್ತೇವೆ.
- ಲೇಖಕರು- ಗಿರೀಶ್ ಲಿಂಗಣ್ಣ, ನಿರ್ದೇಶಕರು, ಎಡಿಡಿ ಎಂಜಿನಿಯರಿಂಗ್ ಇಂಡಿಯಾ ಲಿಮಿಟೆಡ್.