
ಧಾರವಾಡ: ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಜಿಪಂ ಮಾಜಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಪೊಲೀಸ್ ಇನ್ಸ್‌ಪೆಕ್ಟರ್ ಆಗಿದ್ದ ಚನ್ನಕೇಶವ ಟಿಂಗರೀಕರ್ ಸೇರಿದಂತೆ ಒಟ್ಟು 17 ಆರೋಪಿಗಳನ್ನು ನ್ಯಾಯಾಲಯ ದೋಷಿಗಳೆಂದು ಘೋಷಿಸಿದೆ. ಇದೇ ವೇಳೆ ಮೊದಲನೇ ಆರೋಪಿ ಬಸವರಾಜ್ ಮುತ್ತಗಿ ಮತ್ತು 17ನೇ ಆರೋಪಿ ಶಿವಾನಂದ್ ಅವರನ್ನು ಮಾಫಿ ಸಾಕ್ಷಿಗಳಾಗಿ ಪರಿಗಣಿಸಲಾಗಿದೆ. ಇನ್ನೊಂದೆಡೆ, 20ನೇ ಆರೋಪಿ ವಾಸುದೇವ್ ರಾಮ ನೀಲೆಕಣಿ ಮತ್ತು 21ನೇ ಆರೋಪಿ ಸೋಮಶೇಖರ್ ಬಸಪ್ಪ ನ್ಯಾಮಗೌಡರನ್ನು ನ್ಯಾಯಾಲಯ ಖುಲಾಸೆ ಮಾಡಿದೆ.
ಈ ತೀರ್ಪು ಹೊರಬಿದ್ದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಸವರಾಜ್ ಮುತ್ತಗಿ, ನ್ಯಾಯಾಲಯದ ತೀರ್ಪು ತನ್ನಿಗೆ ಖುಷಿ ತಂದಿದೆ ಎಂದು ಹೇಳಿದ್ದು, ನ್ಯಾಯ ವ್ಯವಸ್ಥೆಯ ಮೇಲಿನ ಗೌರವ ಮತ್ತಷ್ಟು ಹೆಚ್ಚಾಗಿದೆ ಎಂದರು. ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ತಾನು ಭಾಗಿಯಾಗಿದ್ದ ಬಗ್ಗೆ ತೀವ್ರ ಪಶ್ಚಾತ್ತಾಪವಿದ್ದು, ಆ ಪಾಪಪ್ರಜ್ಞೆಯೇ ಸತ್ಯ ಹೇಳಲು ಕಾರಣವಾಯಿತು ಎಂದು ಮನವಿ ಮಾಡಿದರು. ನಾನು ಈ ತಪ್ಪು ಮಾಡಬಾರದಿತ್ತು. ಈ ಘಟನೆ ನನ್ನ ಜೀವನದಲ್ಲಿ ದೊಡ್ಡ ಪಾಠವಾಗಿದೆ. ನನ್ನ ತಂದೆ-ತಾಯಿ ನನ್ನನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆ. ಇದರಿಂದ ನಾನು ತುಂಬಾ ನೋವು ಅನುಭವಿಸಿದ್ದೇನೆ. ಹೀಗಾಗಿ ಕೋರ್ಟ್ ಮುಂದೆ ನಿಜ ಹೇಳಲು ಮುಂದಾದೆ ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ, ಕಾನೂನು ಎಲ್ಲರಿಗೂ ಒಂದೇ ಎಂಬುದು ಈ ತೀರ್ಪಿನಿಂದ ಸಾಬೀತಾಗಿದೆ ಎಂದು ಹೇಳಿದ ಮುತ್ತಗಿ, ಯಾವುದೇ ಯುವಕರು ರಾಜಕೀಯ ಪ್ರಭಾವಕ್ಕೆ ಒಳಗಾಗಿ ಇಂತಹ ಗಂಭೀರ ಅಪರಾಧಗಳಲ್ಲಿ ಭಾಗಿಯಾಗಬಾರದು ಎಂದು ಎಚ್ಚರಿಸಿದರು. ಯಾರನ್ನಾದರೂ ನಂಬಿ ಕೊಲೆ ಪ್ರಕರಣಗಳಲ್ಲಿ ತೊಡಗಿಕೊಳ್ಳುವುದು ಜೀವನವನ್ನು ಹಾಳುಮಾಡುತ್ತದೆ. ಇದು ಎಲ್ಲರಿಗೂ ಪಾಠವಾಗಬೇಕು ಎಂದು ಹೇಳಿದ್ದಾರೆ.
ತೀರ್ಪಿನ ಹಿನ್ನೆಲೆ ತನ್ನ ಮತ್ತು ಕುಟುಂಬಕ್ಕೆ ಜೀವಕ್ಕೆ ಭಯವಿರುವುದಾಗಿ ಆತಂಕ ವ್ಯಕ್ತಪಡಿಸಿದ ಮುತ್ತಗಿ, ಸರ್ಕಾರದಿಂದ ಹೆಚ್ಚಿನ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ನನಗೆ ಹಾಗೂ ನನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು ಎಂದು ಅವರು ಕೇಳಿಕೊಂಡಿದ್ದಾರೆ.
ಇದಕ್ಕೂ ಮುನ್ನ ದೇವಸ್ಥಾನಕ್ಕೆ ಭೇಟಿ ನೀಡಿದ ಬಸವರಾಜ್ ಮುತ್ತಗಿ, ನಗರದ ಕೆಸಿಡಿ ವೃತ್ತದ ಗಣೇಶ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಿಗಿ ಭದ್ರತೆಯೊಂದಿಗೆ ಸಿಆರ್‌ಪಿಎಫ್ ಸಿಬ್ಬಂದಿಯ ನೆರವಿನಲ್ಲಿ ದೇವಸ್ಥಾನಕ್ಕೆ ಆಗಮಿಸಿದ ಅವರು, ನಿಜವಾದ ಹೋರಾಟ ಇಂದು ಆರಂಭವಾಗಿದೆ. ದೇವರು ನಮಗೆ ಇನ್ನಷ್ಟು ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದೆ ಎಂದು ಹೇಳಿದರು.
ಕೊಲೆ ನಡೆದ ಸಂದರ್ಭದಲ್ಲಿಯೇ ತಾವು ಇದೇ ವೃತ್ತದ ಬಳಿ ಇದ್ದದ್ದರಿಂದ ಪಾಪಪ್ರಜ್ಞೆ ಕಾಡುತ್ತಿತ್ತು ಎಂದು ಹೇಳಿದ ಮುತ್ತಗಿ, ಈ ಸ್ಥಳವೇ ನನಗೆ ಸದಾ ನೆನಪಾಗುತ್ತಿತ್ತು. ಅದಕ್ಕಾಗಿಯೇ ಇಲ್ಲಿ ಬಂದು ದೇವರ ದರ್ಶನ ಪಡೆದೆ ಎಂದು ತಿಳಿಸಿದರು. ಘಟನೆ ಬಳಿಕ ನನ್ನ ಅಪ್ಪ ಅಮ್ಮ ಒಂದು ರೂ ಮೆಡಿಸಿನ್ ಗೆ ಕೂಡ ನನ್ನಿಂದ ಪಡೆದಿಲ್ಲ. ತೀರ್ಪಿನ ನಂತರ ತಾವು ತಮ್ಮ ತಂದೆ-ತಾಯಿಯನ್ನು ಭೇಟಿ ಮಾಡುವುದಾಗಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ