'ನಾಳೆ ಮಂಗ್ಳೂರಿನಲ್ಲಿ ಹೂತಿದ್ದೇನೆ ಎಂದ್ರೆ ಎಸ್‌ಐಟಿ ಅಲ್ಲಿಗೂ ಹೋಗಬೇಕಾ?' ಧರ್ಮಸ್ಥಳ ಷಡ್ಯಂತ್ರದ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಹೇಳಿದ್ದೇನು?

Published : Aug 17, 2025, 01:33 PM ISTUpdated : Aug 17, 2025, 01:50 PM IST
Chakravarthy sulibele

ಸಾರಾಂಶ

ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್‌ಐಟಿ ತನಿಖೆ ರಾಜಕೀಯ ಚರ್ಚೆಗೆ ಗ್ರಾಸವಾಗಿದ್ದು, ಚಿಂತಕ ಚಕ್ರವರ್ತಿ ಸೂಲಿಬೆಲೆ ಷಡ್ಯಂತ್ರದ ಬಗ್ಗೆ ಪ್ರಶ್ನಿಸಿದ್ದಾರೆ. ತನಿಖೆಯ ಹಿಂದಿನ ಒತ್ತಡ ಮತ್ತು ಉದ್ದೇಶದ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.

ಧಾರವಾಡ (ಆ.17): ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್‌ಐಟಿ ತನಿಖೆ ಕುರಿತಂತೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಆರೋಪ-ಪ್ರತ್ಯಾರೋಪಗಳ ಬಗ್ಗೆ ಧಾರವಾಡದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ ಮುಂಚೆಯಿಂದಲೂ ಹಿಂದುತ್ವದ ಪರ ಇದೆ. ಹೀಗಾಗಿ ಬಿಜೆಪಿ ಇಲ್ಲಿ ಅನ್ಯಾಯ ನಡೆಯುತ್ತಿದೆ ಎಂದು ಹೇಳಿದೆ. ಇನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಧರ್ಮಸ್ಥಳದ ವಿಚಾರದಲ್ಲಿ 'ಭಯಾನಕ ಷಡ್ಯಂತ್ರ ನಡೆಯುತ್ತಿದೆ. ಅದು ನನಗೂ ಗೊತ್ತಿದೆ. ಸಂದರ್ಭ ಬಂದಾಗ ಅದನ್ನು ಹೊರಗೆ ಹಾಕುವೆ' ಅಂದಿದ್ದಾರೆ. ಇದನ್ನು ನೋಡಿದರೆ ಬಯಲಿಗೆ ಎಳೆಯೋ ಅಗತ್ಯವಿದೆ ಎಂದರು.

ಸುಮಾರು 13 ವರ್ಷಗಳ ಕಾಲ ನಿರಂತರವಾಗಿ ಹೆಸರು ಹಾಳು ಮಾಡಲು ಯತ್ನ ನಡೆದಿದೆ. ಧರ್ಮಸ್ಥಳ ಪುಣ್ಯಕ್ಷೇತ್ರಕ್ಕೆ ಕಪ್ಪುಚುಕ್ಕೆ ಬರುವಂತೆ ಮಾತನಾಡಲಾಗುತ್ತಿದೆ. ಬಾಯಿ ತೆಗೆದರೆ ಅವಾಚ್ಯ ಶಬ್ದ ಮಾತನಾಡೋ ಜನರೆಲ್ಲ ಸೇರಿ ಇದನ್ನು ಮಾಡುತ್ತಿದ್ದಾರೆ. ಹಿಂದೂ ಧರ್ಮಿಯರ ಶ್ರದ್ಧೆಯನ್ನ ನಾಶ ಮಾಡಲು ಯತ್ನಿಸುತ್ತಿದ್ದಾರೆ. ಈ ಪ್ರಯತ್ನ ಮಾಡ್ತಿರೋದನ್ನು ಕಾಂಗ್ರೆಸ್ ಕೂಡ ಒಪ್ಪಿಕೊಂಡಿದೆ. ಕೆಲ ಮಂತ್ರಿಗಳು ಎಡಪಂಥೀಯರ ಒತ್ತಡಕ್ಕೆ ಬಿದ್ದು ಎಸ್‌ಐಟಿ ಕೊಡಬೇಕಾಗಿ ಬಂತು ಎಂದಿದ್ದಾರೆ. ಹಾಗಾದರೆ ಇಲ್ಲಿ ಯಾರ ಒತ್ತಡವಿತ್ತು? ಹಿಂದೆ ಸಿದ್ದರಾಮಯ್ಯ ಯಾರ ಒತ್ತಡಕ್ಕೂ ಒಳಗಾಗುವುದಿಲ್ಲ ಎಂದಿದ್ದರು. ಹೀಗಾಗಿ ಯಾರ ಒತ್ತಡದಿಂದ ಎಸ್‌ಐಟಿ ರಚಿಸಲಾಗಿದೆ ಎಂಬುದನ್ನು ಸಿಎಂ ಅವರೇ ಉತ್ತರಿಸಬೇಕು ಎಂದು ಆಗ್ರಹಿಸಿದರು.

ಧರ್ಮಸ್ಥಳದ ಪ್ರಕರಣದ ಹಿಂದೆ ಷಡ್ಯಂತ್ರವಿದೆ ಅಂತಾ ಡಿಸಿಎಂ ಅವರೇ ಹೇಳಿದ್ದಾರೆ. ಧರ್ಮಸ್ಥಳ ಕ್ಷೇತ್ರದಲ್ಲಿ ಎಷ್ಟೊಂದು ಗುಂಡಿಗಳನ್ನು ಅಲ್ಲಿ ಅಗೆದಿದ್ದಾರೆ. ಎಸ್‌ಐಟಿ ತನಿಖೆಯಲ್ಲಿ ಇದುವರೆಗೆ 18 ಕಡೆಗಳಲ್ಲಿ ಉತ್ಖನನ ನಡೆದಿದ್ದು, ತಂತ್ರಜ್ಞಾನ ಬಳಸಿ ಕೆಲಸ ಮಾಡಿದ್ದಾರೆ. ಇಷ್ಟಾದರೂ ಅವರಿಗೆ ಏನೂ ಸಿಕ್ಕಿಲ್ಲ. ಹೀಗಾಗಿ ಈ ಸುಳ್ಳು ಆರೋಪ ಮಾಡಿದವರನ್ನು ವಿಚಾರಣೆಗೆ ಒಳಪಡಿಸಬೇಕು, ಈ ಷಡ್ಯಂತ್ರದ ಹಿಂದೆ ಯಾರಿದ್ದಾರೋ ಎಲ್ಲದರ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಇನ್ನು ಎಸ್‌ಐಟಿ ರದ್ದು ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸೂಲಿಬೆಲೆ ಅವರು, ಎಸ್ ಐ ಟಿ ಮುಂದುವರೆಸೋದ್ರಲ್ಲಿ ಅರ್ಥವಿಲ್ಲ. ಏಕೆಂದರೆ ಈಗಾಗಲೇ ಅದರ ಉದ್ದೇಶ ಮುಗಿದಿದೆ. ಶವವನ್ನು ಹೂಳಿದ್ದಾಗಿ ಹೇಳಿದ ವ್ಯಕ್ತಿ ಬೇರೆ ಸ್ಥಳ ಹೇಳಬಹುದು. ಶವವನ್ನು ಮಂಗಳೂರಿನಲ್ಲಿ ಹೂತಿದ್ದೇನೆ ಎಂದು ಹೇಳಿದರೆ, ನದಿಯ ಮಧ್ಯಭಾಗವೆಂದರೆ ಎಸ್ ಐ ಟಿ ಅಲ್ಲಿಗೆ ಹೋಗಬೇಕಾ? ಹೇಳಿದಂತೆಲ್ಲ ಎಸ್‌ಐಟಿ ಪ್ರತಿಬಾರಿ ಅಗೆಯುತ್ತದೆಯೇ? ಇದಕ್ಕೆ ತೆರಿಗೆದಾರರ ಹಣವನ್ನು ವ್ಯರ್ಥ ಮಾಡಬೇಕೇ? ಈ ಪ್ರಶ್ನೆಗೆ ಉತ್ತರ ಬೇಕಾಗಿದೆ ಎಂದರು.

ಮೊದಲು 13 ಜಾಗ ಅಂತಾ ಮೊದಲು ಹೇಳಲಾಯಿತು. ಇದೀಗ 18 ಕಡೆಗಳಲ್ಲಿ ಅಗೆಯಲಾಗಿದೆ. ಇದು ಎಷ್ಟು ದಿನಗಳ ಕಾಲ ನಡೆಯಬೇಕು? ನಾವು ಕಟ್ಟಿದ ತೆರಿಗೆ ಹಣವನ್ನು ಸುಳ್ಳು ಆರೋಪ ಮಾಡೋರಿಗೆ ಖರ್ಚು ಮಾಡಬೇಕಾ? ಎಸ್ ಐ ಟಿ ಮಾಡುತ್ತಿರೋದು ನೋಡಿದರೆ ಇಡೀ ಧರ್ಮಸ್ಥಳವನ್ನು ಅಗೆಯೋ ಹಾಗಿದೆ. ಎಲ್ಲ ಕಡೆ ಅಗೆದು ಒಂದಾದರೂ ಹೆಣ ಹುಡುಕೋಣ ಅನ್ನುವಂತಿದೆ. ಸರಕಾರ ತಕ್ಷಣವೇ ಇದನ್ನು ನಿಲ್ಲಿಸಬೇಕು. ಒಂದು ವೇಳೆ ಸರಕಾರ ಎಸ್ ಐ ಟಿ ರದ್ದು ಮಾಡದಿದ್ದರೆ ದೊಡ್ಡ ಹೋರಾಟವಾಗಬಹುದು. ಏಕೆಂದರೆ ಹಿಂದೂ, ಹಿಂದೂ ಮಹಾಪುರುಷರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಲಾಗುತ್ತಿದೆ. ಇದರಿಂದಾಗಿ ಜನರು ಬೀದಿಗಳಲ್ಲಿ ದಂಗೆ ಏಳುವ ಸ್ಥಿತಿ ನಿರ್ಮಾಣವಾಗಬಹುದು. ಹಾಗೇನಾದ್ರೂ ಆದರೆ ಅದಕ್ಕೆ ಸಿಎಂ ಸಿದ್ದರಾಮಯ್ಯ ಅವರೇ ಕಾರಣರಾಗ್ತಾರೆ. ಹೀಗಾಗಿ ಎಸ್‌ಐಟಿ ವಿಚಾರವಾಗಿ ಕೂಡಲೇ ನಿರ್ಧರಿಸಬೇಕು. ಇಂಥ ವಿಚಾರಗಳಿಗೆ ಮೀನಮೇಷ ಎಣಿಸಬಾರದು ಎಂದು ಎಚ್ಚರಿಸಿದರು.

ಅನೇಕ ರಾಜಕೀಯ ನಾಯಕರು ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸೂಲಿಬೆಲೆ ಅವರು, ಇದು ಒಳ್ಳೆಯ ನಡೆ. ಈ ಹಿಂದೆಯೇ ಇದೆಲ್ಲ ಆಗಬೇಕಿತ್ತು. ತಡವಾದರೂ ಇದೀಗ ಆಗಿದೆ. ಹೀಗಾಗಿ ಇದೊಂದು ಸಂತೋಷದ ಸಂಗತಿ ಕಳೆದೊಂದು ದಶಕದಿಂದಲೂ ಈ ಹೋರಾಟದಲ್ಲಿದ್ದೇನೆ. ಅದನ್ನು ಹತ್ತಿರದಿಂದ ನೋಡುತ್ತಾ ಬಂದಿದ್ದೇನೆ. ಯಾವತ್ತೋ ವ್ಯಾಪಕ ಬೆಂಬಲ ಸಿಗಬೇಕಿತ್ತು. ಇದೀಗ ಸಿಗುತ್ತಿದೆ. ಇಂದು ಹುಬ್ಬಳ್ಳಿಯಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಸಮಾವೇಶ ನಡೆಯಲಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಕಡೆಗಳಲ್ಲಿ ಇಂತಹ ಕಾರ್ಯಕ್ರಮಗಳು ನಡೆಯಲಿವೆ ಎಂದು ಸೂಲಿಬೆಲೆ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌