
ಬೆಂಗಳೂರು (ಆ.17): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಜಾಮೀನು ರದ್ದಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೂರನೇ ದಿನದ ಸೆರೆವಾಸ ಅನುಭವಿಸುತ್ತಿರುವ ನಟ ದರ್ಶನ್ ತೂಗುದೀಪ ಮತ್ತು ಸಹಚರರ ತಂಡದ ಮೇಲೆ ಜೈಲು ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಸಾಮಾನ್ಯ ವಿಚಾರಣಾಧೀನ ಖೈದಿಯಂತೆಯೇ ದರ್ಶನ್ ಮತ್ತು ತಂಡವು ಜೈಲಿನ ಕಟ್ಟುನಿಟ್ಟಿನ ನಿಯಮಗಳಿಗೆ ಒಳಪಟ್ಟಿದ್ದು, ದಿನದ ಬಹುತೇಕ ಸಮಯವನ್ನು ನಾಲ್ಕು ಗೋಡೆಗಳ ಮಧ್ಯೆ ಕಳೆಯುತ್ತಿದ್ದಾರೆ.
ಇಂದು ದರ್ಶನ್ ಜೈಲಿನ ಮೆನುವಿನಂತೆ ಪಲಾವ್ ಸೇವಿಸಿದ್ದು, ಊಟಕ್ಕೆ ಮುಂಚೆ ಬಿಸಿನೀರು ಕುಡಿದಿದ್ದಾರೆ. ದಿನಪತ್ರಿಕೆಗಳನ್ನು ಓದುವ ಮೂಲಕ ಸಮಯ ಕಳೆಯುತ್ತಿರುವ ದರ್ಶನ್, ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ, ಸಹ ಆರೋಪಿ ಪವಿತ್ರಾ ಗೌಡ ಸಹಖೈದಿಗಳ ಜೊತೆ ಬೆರೆಯುತ್ತಿದ್ದು, ಜೈಲಿನ ಉಪಹಾರವನ್ನು ಸೇವಿಸಿದ್ದಾರೆ. ಆದರೆ ದರ್ಶನ್ ಮತ್ತು ತಂಡವನ್ನು ಇತರ ವಿಚಾರಣಾಧೀನ ಖೈದಿಗಳಿಂದ ದೂರವಿಡಲಾಗಿದೆ. ದರ್ಶನ್ ಇರುವ ಕೋಣೆಯಲ್ಲಿ ಟಿವಿ ಸೌಲಭ್ಯವಿಲ್ಲ, ಕೇವಲ ಪುಸ್ತಕ ಓದಲು ಅಥವಾ ಖಾಲಿ ಕುಳಿತಿರಲು ಮಾತ್ರ ಅವಕಾಶವಿದೆ.
ಜೈಲು ಸಿಬ್ಬಂದಿಗಳಿಗೆ ದರ್ಶನ್ ತಂಡದೊಂದಿಗೆ ಮಾತನಾಡುವ ಅನುಮತಿಯಿಲ್ಲ. ಊಟ-ತಿಂಡಿಯನ್ನು ಕೊಠಡಿಗೆ ಪೂರೈಸಲಾಗುತ್ತಿದ್ದು, ಕಾರಿಡಾರ್‌ನಲ್ಲಿ ಕೇವಲ ಒಂದು ಗಂಟೆ ವಾಕಿಂಗ್‌ಗೆ ಅವಕಾಶವಿದೆ. ಸುಪ್ರೀಂ ಕೋರ್ಟ್‌ನ ಚಾಟಿ ತೀರ್ಪಿನ ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದ್ದು, ದರ್ಶನ್ ಮತ್ತು ಗ್ಯಾಂಗ್ ಮೇಲೆ ನಿರಂತರ ನಿಗಾ ಇಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ