
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ತೂಗುದೀಪ ಮತ್ತು ಗೆಳತಿ ಪವಿತ್ರಾ ಗೌಡ ಸೇರಿದಂತೆ 7 ಮಂದಿ ಮತ್ತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿ 3 ದಿನಗಳಾಗಿವೆ. ಈ ಹಿಂದೆ ಐಶಾರಾಮಿ ಜೀವನ ಗಳಿಸಿಕೊಂಡಿದ್ದ ದರ್ಶನ್ ಗೆ ಈ ಬಾರಿ ಅಂತಹ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಹಿಂದೆ ಜೈಲಿನಲ್ಲಿದ್ದಾಗ ಐಶಾರಾಮಿ ಜೀವನ ಸಿಕ್ಕಿತ್ತು. ವಿಲ್ಸನ್ ಗಾರ್ಡನ್ ನಾಗ ಜೊತೆಗಿರುವ ಫೋಟೋ ವೈರಲ್ ಆಗಿತ್ತು. ಇದಾದ ನಂತರ ದರ್ಶನ್ ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಅಂತಹ ಯಾವುದೇ ಸೌಲಭ್ಯವನ್ನು ಬಳಸಿಕೊಳ್ಳದಂತೆ ಜೈಲಾಧಿಕಾರಿಗಳು ಬಹಳ ಎಚ್ಚರಿಕೆ ವಹಿಸಿದ್ದಾರೆ. ಹೀಗಾಗಿ ಎರಡನೇ ಬಾರಿ ಜೈಲು ಸೇರಿರುವ ದರ್ಶನ್ ಹಾಗೂ ತಂಡ ಮೂರನೇ ದಿನವೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಹ ಖೈದಿಗಳಂತೆ ನಾರ್ಮಲ್ ಜೀವನ ನಡೆಸಬೇಕಿದೆ. ಸಾಮಾನ್ಯ ವಿಚಾರಣಾಧೀನ ಕೈದಿಯಂತೆ ಅವರಿಗೆ ಯಾವುದೇ ವಿಶೇಷ ಸೌಲಭ್ಯ ನೀಡಲಾಗದೇ, ಜೈಲಿನ ನಿಯಮಾನುಸಾರ ಕಟ್ಟುನಿಟ್ಟಿನ ಕ್ರಮ ಜಾರಿಯಾಗಿದೆ. ಅಧಿಕಾರಿಗಳು ಕೂಡ ಇಂಚಿಂಚೂ ಅವರ ಚಲನವಲನ ಗಮನಿಸುತ್ತಿದ್ದಾರೆ.
ಬೆಳಿಗ್ಗೆ ದಿನ ಆರಂಭವಾಗುತ್ತಿದ್ದಂತೆಯೇ ಬಿಸಿನೀರನ್ನು ನೀಡಲಾಗುತ್ತಿದೆ. ಅದನ್ನು ಸೇವಿಸಿದ ನಂತರ ಜೈಲಿನ ಮೆನು ಪ್ರಕಾರ ನೀಡಲ್ಪಟ್ಟ ಪಲಾವ್ ಹಾಗೂ ಉಪಹಾರವನ್ನು ದರ್ಶನ್ ಮತ್ತು ಪವಿತ್ರ, ಸಹ ಖೈದಿಗಳಂತೆ ಸ್ವೀಕರಿಸಿದ್ದಾರೆ. ಜೈಲಿನ ಸಿಬ್ಬಂದಿಗಳು ಕೊಠಡಿಗಳಿಗೂ ಊಟ-ತಿಂಡಿಗಳನ್ನು ಪೂರೈಸುತ್ತಿದ್ದು, ದರ್ಶನ್ ಹಾಗೂ ಪವಿತ್ರ ಇತರ ಕೈದಿಗಳ ಜೊತೆ ಬೆರೆಯುತ್ತಿದ್ದಾರೆ. ದರ್ಶನ್ ಮತ್ತು ಪವಿತ್ರ ಕೂಡ ಜೈಲು ವಾತಾವರಣಕ್ಕೆ ಹೊಂದಿಕೊಳ್ಳುತ್ತಿರುವಂತೆ ಕಾಣಿಸುತ್ತಿದ್ದು, ಉಪಹಾರ ಹಾಗೂ ಊಟವನ್ನು ಸಹ ಖೈದಿಗಳ ಜೊತೆಗೆ ಸೇವಿಸುತ್ತಿದ್ದಾರೆ.
ದಿನಪತ್ರಿಕೆಗಳನ್ನು ಓದುತ್ತಾ ಬೆಳಿಗ್ಗೆ ಸಮಯ ಕಳೆಯುವ ದರ್ಶನ್, ದಿನದ ಬಹುತೇಕ ಹೊತ್ತು ನಾಲ್ಕು ಗೋಡೆಗಳ ಮಧ್ಯೆಯೇ ಕಳೆಯುತ್ತಿದ್ದಾರೆ. ಜೈಲು ಕೊಠಡಿಯಲ್ಲಿ ಟೆಲಿವಿಷನ್ ಸೌಲಭ್ಯ ಇಲ್ಲದ ಕಾರಣ, ಅವರಿಗೆ ಖಾಲಿ ಕುಳಿತುಕೊಳ್ಳುವುದು ಅಥವಾ ಪುಸ್ತಕ ಓದುವುದು ಮಾತ್ರ ಆಯ್ಕೆಯಾಗಿದೆ. ಜೈಲು ನಿಯಮಾನುಸಾರ, ದಿನಕ್ಕೆ ಒಂದು ಗಂಟೆ ಮಾತ್ರ ಕಾರಿಡಾರ್‌ನಲ್ಲಿ ವಾಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಉಳಿದ ಹೊತ್ತಿನಲ್ಲೆಲ್ಲಾ ದರ್ಶನ್ ಮತ್ತು ಅವರ ಗ್ಯಾಂಗ್ ಕಠಿಣ ನಿಗಾದಲ್ಲಿ ಇರುತ್ತಿದ್ದಾರೆ.
ಸುಪ್ರೀಂ ಕೋರ್ಟ್ ಸೂಚನೆಗಳ ಹಿನ್ನೆಲೆ, ಜೈಲು ಅಧಿಕಾರಿಗಳು ದರ್ಶನ್ ಮತ್ತು ಅವರ ತಂಡದ ಮೇಲೆ ಹದ್ದಿನ ಕಣ್ಣು ಇಟ್ಟುಕೊಂಡಿದ್ದಾರೆ. ಇತರ ವಿಚಾರಣಾಧೀನ ಇತರ ಖೈದಿಗಳೊಂದಿಗೆ ಅವರಿಗೆ ಬೆರೆತು ಮಾತನಾಡುವಂತಿಲ್ಲದಂತೆ ವಿಶೇಷ ಸೂಚನೆ ನೀಡಲಾಗಿದೆ. ಅಲ್ಲದೆ, ಸಿಬ್ಬಂದಿಗಳಿಗೂ ಅವರೊಂದಿಗೆ ಅನಾವಶ್ಯಕ ಮಾತುಕತೆ ನಡೆಸಬಾರದು ಎಂಬ ನಿಷೇಧವಿದೆ. ದರ್ಶನ್ ಮತ್ತು ಪವಿತ್ರರಿಗೆ ಜೈಲಿನಲ್ಲಿ ಯಾವುದೇ ರೀತಿಯ ವಿಶೇಷ ಸೌಲಭ್ಯ ಕಲ್ಪಿಸಲಾಗಿಲ್ಲ. ಸಾಮಾನ್ಯ ವಿಚಾರಣಾಧೀನ ಕೈದಿಯಂತೆಯೇ ಜೀವನ ಸಾಗಿಸುತ್ತಿರುವ ಅವರು, ನಿಧಾನವಾಗಿ ಜೈಲು ವಾತಾವರಣಕ್ಕೆ ಹೊಂದಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ.
ಇನ್ನು ಕೊಲೆ ಪ್ರಕರಣದ ಒಂದನೇ ಆರೋಪಿಯಾಗಿರುವ ಪವಿತ್ರಾಗೌಡ (7313), ದರ್ಶನ್ (7314), ನಾಗರಾಜ್ (7315), ಲಕ್ಷ್ಮಣ್ (7316), ಪ್ರದೂಷ್ (7317) ಅವರಿಗೆ ಗುರುವಾರ ರಾತ್ರಿ ಯುಟಿ (ವಿಚಾರಣಾಧೀನ ಕೈದಿ) ಸಂಖ್ಯೆಯನ್ನು ಕಾರಾಗೃಹ ಅಧಿಕಾರಿಗಳು ಕೊಟ್ಟಿದ್ದಾರೆ. ಅದೇ ರೀತಿ ಇದೇ ಪ್ರಕರಣದಲ್ಲಿ ಶುಕ್ರವಾರ ಜೈಲಿಗೆ ಬಂದ ದರ್ಶನ್ ಅವರ ಸಹಚರರಾದ ಚಿತ್ರದುರ್ಗದ ಅನುಕುಮಾರ್ (7322) ಹಾಗೂ ಜಗದೀಶ್‌ಗೆ (7323) ಸಹ ಯುಟಿ ನಂಬರ್ ಸಿಕ್ಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ