
ಮಂಗಳೂರು/ ಬೆಳ್ತಂಗಡಿ (ಸೆ.17): ಧರ್ಮಸ್ಥಳ ಗ್ರಾಮದ ತಲೆಬುರುಡೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಚಿನ್ನಯ್ಯನ ಜಾಮೀನು ಅರ್ಜಿಯನ್ನು ಬೆಳ್ತಂಗಡಿ ನ್ಯಾಯಾಲಯ ವಜಾಗೊಳಿಸಿದೆ. ಜಾಮೀನು ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಬೆಳ್ತಂಗಡಿ ತಾಲೂಕು ನ್ಯಾಯಾಲಯದ ಹೆಚ್ಚುವರಿ ವ್ಯಾವಹಾರಿಕ ಮತ್ತು ಪ್ರಥಮ ದರ್ಜೆ ನ್ಯಾಯಾಲಯ ಮಂಗಳವಾರಕ್ಕೆ ತೀರ್ಪನ್ನು ಕಾಯ್ದಿರಿಸಿತ್ತು. ನ್ಯಾಯಾಧೀಶ ವಿಜಯೇಂದ್ರ ಅವರು ಜಾಮೀನು ಅರ್ಜಿಯನ್ನು ವಜಾಗೊಳಿಸಿ, ತೀರ್ಪು ನೀಡಿದರು.
ಸರ್ವೇ ಕೇಳಿದ ಎಸ್‌ಐಟಿ: ‘ಬುರುಡೆ’ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ, ಅಸ್ಥಿಪಂಜರ ಶೋಧ ಮಾಡುವ ಬದಲು ಅರಣ್ಯ ಇಲಾಖೆಯಿಂದ ಸರ್ವೇ ವರದಿ ಕೇಳಿದೆ. ಸ್ಥಳದ ಕಾನೂನು ಹಕ್ಕು ನಿರ್ಧಾರ ಮಾಡಲು ವರದಿ ಕೇಳಿರುವ ಸಾಧ್ಯತೆ ಇದೆ. ಬಂಗ್ಲೆಗುಡ್ಡೆ ಕಾಡಿನ ಮಧ್ಯಭಾಗದಲ್ಲಿ ಶವಗಳ ಶೋಧ ಹಿನ್ನೆಲೆಯಲ್ಲಿ ಕಾನೂನು ತೊಡಕು ಎದುರಾಗುತ್ತದೆ. ಅದು ಮೀಸಲು ಅರಣ್ಯವಾದ ಕಾರಣ ಅಗೆದು ಶೋಧ ಕಾರ್ಯ ನಡೆಸಲು ಅಡ್ಡಿಯಾಗಿದೆ. ಹೀಗಾಗಿ, ಅರಣ್ಯದ ಹಕ್ಕು, ವ್ಯಾಪ್ತಿಯ ಗಡಿ, ಜವಾಬ್ದಾರಿ ಯಾರದು ಎಂಬುದನ್ನು ದಾಖಲೆ ಆಧಾರದ ಮೇಲೆ ದೃಢೀಕರಿಸಲು ಎಸ್‌ಐಟಿ ನಿರ್ಧರಿಸಿದೆ.
‘ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ, ಇದರಿಂದ ನನಗೀಗ ಪಶ್ಚಾತ್ತಾಪವಾಗುತ್ತಿದೆ. ಹೀಗಾಗಿ, ಸತ್ಯ ಬಿಚ್ಚಿಡುತ್ತಿದ್ದೇನೆ’ ಎಂದು ಈ ಹಿಂದೆ ‘ಪಶ್ಚಾತ್ತಾಪ’ದ ಕಥೆ ಕಟ್ಟಿದ್ದ ಬುರುಡೆ ಕೇಸ್‌ನ ಆರೋಪಿ ಚಿನ್ನಯ್ಯ, ಇದೀಗ ತಾನು ಮಾಡಿದ ಸುಳ್ಳು ಆರೋಪಕ್ಕೆ‘ಪಶ್ಚಾತ್ತಾಪ ಪಡುತ್ತಿದ್ದಾನೆ. ಪ್ರಕರಣದ ವಿಚಾರಣೆ ವೇಳೆ ಏನೇ ಪ್ರಶ್ನೆ ಕೇಳಿದರೂ ಕಣ್ಣೀರು ಹಾಕುತ್ತಿದ್ದು, ‘ಇಷ್ಟೆಲ್ಲಾ ಆಗುತ್ತೆ ಅಂತ ನನಗೆ ಗೊತ್ತಿರಲಿಲ್ಲ, ಸರ್ ನನ್ನ ಬಿಟ್ಟು ಬಿಡಿ’ ಎಂದು ಗೋಗರೆಯುತ್ತಿದ್ದಾನೆ.
ಆತನ ಪೊಲೀಸ್ ಕಸ್ಟಡಿ ಮುಗಿದಿತ್ತು. ಹೀಗಾಗಿ, ಆತನನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಆಗ ಕೋರ್ಟ್‌ನಲ್ಲಿಯೂ ಆತ ಕಣ್ಣೀರು ಹಾಕಿದ್ದ ಎಂದು ತಿಳಿದು ಬಂದಿದೆ. ಬಳಿಕ, ಕೋರ್ಟ್ ಹೊರಗೂ ಕಣ್ಣೀರು ಹಾಕಿದ್ದ. ಮತ್ತೆ ಮೂರು ದಿನ ಪೊಲೀಸ್ ಕಸ್ಟಡಿ ಲಭಿಸಿರುವ ಹಿನ್ನೆಲೆಯಲ್ಲಿ ಆರೋಪಿ ಚಿನ್ನಯ್ಯನನ್ನು ಗುರುವಾರ ಎಸ್‌ಐಟಿ ಕಸ್ಟಡಿಯಲ್ಲೇ ಹೆಚ್ಚಿನ ವಿಚಾರಣೆ ನಡೆಸಲಾಯಿತು. ಗುರುವಾರದ ವಿಚಾರಣೆ ವೇಳೆಯೂ ಆತ ಮತ್ತೆ ಕಣ್ಣೀರು ಹಾಕಿದ್ದಾನೆ. ಮಾಡಿದ ತಪ್ಪಿಗೆ ಪಶ್ಚಾತ್ತಾಪವಾಗಿದೆ. ಸೂತ್ರದಾರರು ಹೇಳಿದಂತೆ ತಪ್ಪು ಮಾಡಿದ್ದೇನೆ. ಇನ್ನು ನನಗೆ ಯಾರಿದ್ದಾರೆ ಎಂದು ಅತ್ತಿದ್ದಾನೆ. ಈ ಹಿಂದೆ ನನ್ನೊಂದಿಗೆ ಇದ್ದ ವಕೀಲರ ಮೇಲೆ ಈಗ ನನಗೆ ಭರವಸೆ ಉಳಿದಿಲ್ಲ ಎಂದು ಚಿನ್ನಯ್ಯ ವಿಚಾರಣೆ ವೇಳೆ ಬೇಸರ ವ್ಯಕ್ತಪಡಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ