ಬೆಂಗಳೂರಿನ ಸಿಂಧಿ ಶಾಲೆಯಲ್ಲಿ ಕನ್ನಡ ಮಾತಾಡಿದರೆ ದಂಡ: ಶಿಕ್ಷಣ ಇಲಾಖೆ ವಿಚಾರಣೆಯಲ್ಲಿ ದೃಢ

Published : Sep 17, 2025, 09:38 AM IST
Sindhi High School Bengaluru

ಸಾರಾಂಶ

ನಗರದ ಕುಮಾರ ಕೃಪಾ ರಸ್ತೆಯಲ್ಲಿರುವ ಪ್ರತಿಷ್ಠಿತ ಸಿಂಧಿ ಪ್ರೌಢ ಶಾಲೆಯಲ್ಲಿ ಕನ್ನಡದಲ್ಲಿ ಮಾತನಾಡಿದ ವಿದ್ಯಾರ್ಥಿಗಳಿಗೆ ದಂಡ ವಿಧಿಸುವಂತಹ ಕನ್ನಡ ವಿರೋಧಿ ನಡೆ ಅನುಸರಿಸುತ್ತಿರುವುದು ಶಿಕ್ಷಣ ಇಲಾಖೆ ವಿಚಾರಣೆಯಲ್ಲಿ ಸಾಬೀತಾಗಿದೆ.

ಬೆಂಗಳೂರು (ಸೆ.17): ನಗರದ ಕುಮಾರ ಕೃಪಾ ರಸ್ತೆಯಲ್ಲಿರುವ ಪ್ರತಿಷ್ಠಿತ ಸಿಂಧಿ ಪ್ರೌಢ ಶಾಲೆಯಲ್ಲಿ ಕನ್ನಡದಲ್ಲಿ ಮಾತನಾಡಿದ ವಿದ್ಯಾರ್ಥಿಗಳಿಗೆ ದಂಡ ವಿಧಿಸುವಂತಹ ಕನ್ನಡ ವಿರೋಧಿ ನಡೆ ಅನುಸರಿಸುತ್ತಿರುವುದು ಶಿಕ್ಷಣ ಇಲಾಖೆ ವಿಚಾರಣೆಯಲ್ಲಿ ಸಾಬೀತಾಗಿದ್ದು, ಆಡಳಿತ ಮಂಡಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಇದರ ಬೆನ್ನಲ್ಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಈ ಶಾಲೆಗೆ ಸರ್ಕಾರ ನೀಡಿರುವ ನಿರಾಕ್ಷೇಪಣಾ ಪತ್ರ ಹಿಂಪಡೆಯಲು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಪತ್ರ ಬರೆದಿದೆ.

ಸಿಂಧಿ ಶಾಲೆಯಲ್ಲಿ ವಿದ್ಯಾರ್ಥಿಗಳು ಕನ್ನಡ ಮಾತನಾಡಿದರೆ ದಂಢ ವಿಧಿಸುತ್ತಿರುವ ಬಗ್ಗೆ ತಮಗೆ ದೂರು ಬಂದ ಹಿನ್ನೆಲೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಶಿಕ್ಷಣ ಇಲಾಖೆಯ ಬೆಂಗಳೂರು ಉತ್ತರ ವಲಯ ಉಪನಿರ್ದೇಶಕರಿಗೆ (ಡಿಡಿಪಿಐ) ಪತ್ರ ಬರೆದು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಲು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಡಿಡಿಪಿಐ ನೇತೃತ್ವದಲ್ಲಿ ಇಲಾಖೆಯ ಇನ್ನಿತರೆ ಅಧಿಕಾರಿಗಳ ತಂಡ ಸಿಂಧಿ ಶಾಲೆಗೆ ಭೇಟಿ ನೀಡಿದಾಗ ಶಾಲೆಯಲ್ಲಿ ಕನ್ನಡ ವಿರೋಧಿ ಧೋರಣೆ ಅನುಸರಿಸುತ್ತಿರುವುದು ಸಾಬೀತಾಗಿದೆ.

ಶಾಲೆ ವಿದ್ಯಾರ್ಥಿಗಳು ಹಾಗೂ ಕೆಲ ಶಿಕ್ಷಕರೇ ಕನ್ನಡ ಮಾತನಾಡಿದರೆ ದಂಡ ವಿಧಿಸುತ್ತಿರುವ ವಿಷಯವನ್ನು ಬಹಿರಂಗಪಡಿಸಿ ಲಿಖಿತವಾಗಿಯೂ ಮಾಹಿತಿ ನೀಡಿದ್ದಾರೆ. ಅಲ್ಲದೆ, ದಂಡ ವಿಧಿಸುತ್ತಿರುವುದು ನಿಜ ಎಂಬುದನ್ನು ಶಾಲೆಯ ಪ್ರಾಂಶುಪಾಲರೂ ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ. ಹಾಗಾಗಿ ಈ ಸಂಬಂಧ ಸುದೀರ್ಘ ವರದಿಯನ್ನು ಡಿಡಿಪಿಐ ಅವರು ಪ್ರಾಧಿಕಾರಕ್ಕೆ ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ. ಈ ವರದಿ ಆಧರಿಸಿ ಪ್ರಾಧಿಕಾರವು ಶಾಲೆಯ ಎನ್‌ಒಸಿ ರದ್ದುಪಡಿಸಲು ಸರ್ಕಾರಕ್ಕೆ ಇತ್ತೀಚೆಗೆ ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ.

ಕನ್ನಡಕ್ಕೆ ಅಗೌರವ: ಶಾಲೆಗೆ ಡಿಡಿಪಿಐ ನೋಟಿಸ್‌

ಸಿಂಧಿ ಶಾಲೆಯಲ್ಲಿ ಕನ್ನಡ ಮಾತನಾಡಿದ ವಿದ್ಯಾರ್ಥಿಗಳಿಗೆ ದಂಡ ವಿಧಿಸುತ್ತಿರುವುದು ಶಾಲೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ ವೇಳೆ ಸಾಬೀತಾಗಿರುವುದರಿಂದ ಬೆಂಗಳೂರು ಉತ್ತರ ವಲಯ ಡಿಡಿಪಿಐ ಶಾಲಾ ಆಡಳಿತ ಮಂಡಳಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಿರುವುದಾಗಿ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಾಗಿರುತ್ತದೆ. ಹಾಗೂ ಈ ರಾಜ್ಯದಲ್ಲಿ ನಡೆಯುತ್ತಿರುವ ಶಾಲೆಯಲ್ಲಿ ವಿದ್ಯಾರ್ಥಿಗಳು ಕನ್ನಡದಲ್ಲಿ ವ್ಯವಹರಿಸಿರುವ ಕಾರಣ ದಂಡ ವಿಧಿಸಿರುವುದರಿಂದ ಕನ್ನಡ ಭಾಷೆಗೆ ಅಗೌರವ ತೋರಿರುವುದು ಕಂಡು ಬಂದಿರುತ್ತದೆ. ಹಾಗೂ ಇದು ಕನ್ನಡವನ್ನು ಮಾತೃ ಭಾಷೆಯಾಗಿ ಹೊಂದಿರುವ ವಿದ್ಯಾರ್ಥಿಗಳ ಆತ್ಮವಿಶ್ವಾಸಕ್ಕೂ ಧಕ್ಕೆ ಉಂಟು ಮಾಡಿದೆ. ಈ ಸಂಬಂಧ ಶಾಲೆಯಿಂದ ಆಗಿರುವ ಲೋಪಕ್ಕೆ ಉತ್ತರ ನೀಡುವಂತೆ ಡಿಡಿಪಿಐ ಅವರು ನೋಟಿಸ್‌ ಜಾರಿ ಮಾಡಿದ್ದಾರೆ. ನೋಟಿಸ್‌ಗೆ ಆಡಳಿತ ಮಂಡಳಿ ಉತ್ತರ ನೀಡಿದ ಬಳಿಕ ಸರ್ಕಾರದ ಗಮನಕ್ಕೆ ತಂದು ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

112 ಹುದ್ದೆ ನೇಮಕಾತಿ ಮುಂದುವರಿಕೆಗೆ ಕೆಪಿಎಸ್ಸಿಗೆ ನೀಡಿದ್ದ ಅನುಮತಿ ವಾಪಸ್!
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌