
ಮಯೂರ್ ಹೆಗಡೆ
ಬೆಂಗಳೂರು (ಸೆ.17): ಮುಂದಿನ ಐದು ವರ್ಷಗಳ ಕಾಲ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ಬರೋಬ್ಬರಿ ₹13 ಸಾವಿರ ಕೋಟಿಗೂ ಅಧಿಕ ವಿದೇಶಿ ಸಾಲ-ಬಡ್ಡಿಯನ್ನು ತೀರಿಸುವ ಹೊಣೆಗಾರಿಕೆಯಿದೆ. ಮೆಟ್ರೋದ 1ನೇ ಹಂತವೂ ಸೇರಿ 2ನೇ ಹಂತಗಳಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ನೀಲಿ, ಕಾಳೇನ ಅಗ್ರಹಾರ - ನಾಗವಾರ ಸಂಪರ್ಕಿಸುವ ಗುಲಾಬಿ ಮಾರ್ಗಗಳ ನಿರ್ಮಾಣಕ್ಕೆ ಪಡೆದ ಸಾಲ ಇದಾಗಿದೆ. ಭಾರತ ಸರ್ಕಾರ ಅಂತಾರಾಷ್ಟ್ರೀಯ, ಬಹುಪಕ್ಷೀಯ ಹಣಕಾಸು ಸಂಸ್ಥೆಗಳಾದ ಎಡಿಬಿ, ಎಎಫ್‌ಡಿ, ಜೈಕಾ, ಎಐಐಬಿ, ಇಐಬಿ ಹಾಗೂ ಕೆಎಫ್‌ಡಬ್ಲೂ ಮೂಲಕ ಸಾಲ ಪಡೆದು ಬಿಎಂಆರ್‌ಸಿಎಲ್‌ಗೆ ನೀಡಿದೆ.
ಅಂತಾರಾಷ್ಟ್ರೀಯ ವಿನಿಮಯ ದರದ ಏರಿಳಿಕೆ ಆಧಾರದಲ್ಲಿ ಬಿಎಂಆರ್‌ಸಿಎಲ್ ಈ ಸಾಲ ತೀರಿಸುವ ಹೊಣೆಗಾರಿಕೆ ಹೊಂದಿದೆ. 2017-18 ರಿಂದಲೇ ಬಿಎಂಆರ್‌ಸಿಎಲ್ ಸಾಲ ಮರುಪಾವತಿ ಆರಂಭಿಸಿದೆ. ಕಳೆದ ಆರ್ಥಿಕ ವರ್ಷ 2024ರಿಂದ ಮುಂದಿನ 2030ರವರೆಗೆ ಎಡಿಬಿ, ಎಎಫ್‌ಡಿ, ಜೈಕಾ ಸೇರಿ ವಿದೇಶಿ ಸಾಲ-ಬಡ್ಡಿ ಸೇರಿ ₹10422.2 ಕೋಟಿ ವಿದೇಶಿ ಸಾಲ ತೀರಿಸಬೇಕಿದೆ. ಇದನ್ನು ಒಳಗೊಂಡಂತೆ ₹13106.65 ಕೋಟಿ ಸಾಲ ತೀರಿಸಬೇಕಿರುವುದಾಗಿ ಬಿಎಂಆರ್‌ಸಿಎಲ್ ಯೋಜಿಸಿಕೊಂಡಿದೆ. ಜತೆಗೆ ₹21,521.23 ಕೋಟಿ ಅಧೀನ ಸಾಲ (ಹೆಚ್ಚುವರಿ ಸಾಲ) ಹೊಂದಿದೆ.
ವಾರ್ಷಿಕ ಬಡ್ಡಿ ಹೊಣೆಗಾರಿಕೆಯೇ ₹128 ಕೋಟಿಯಷ್ಟಿದೆ. ಅಸಲು ಪಾವತಿ ₹463 ಕೋಟಿಯಷ್ಟಿದೆ. ಇದಲ್ಲದೆ ಮೂರನೇ ಹಂತದ ಯೋಜನೆಗೆ ಜೈಕಾ ಸೇರಿ ಇತರೆ ಸಂಸ್ಥೆಗಳಿಂದ ₹7000 ಕೋಟಿ ಸಾಲ ಎತ್ತುವಳಿಗೆ ಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 2028ರ ಹೊತ್ತಿಗೆ ಮೆಟ್ರೋ 176 ಕಿಮೀವರೆಗೆ ವಿಸ್ತರಣೆ ಆದಾಗ ಕಾರ್ಯಾಚರಣೆಯ ಆದಾಯವು ಶೇ.10ರಷ್ಟು ಹೆಚ್ಚಬಹುದು ಎಂದು ಪರಿಷ್ಕರಣ ಸಮಿತಿ ಅಂದಾಜಿಸಿದೆ. ಜತೆಗೆ ಪ್ರಯಾಣಿಕರ ಸಂಖ್ಯೆ ಸರಾಸರಿ 15.76 ಲಕ್ಷ ತಲುಪಬಹುದು ಎಂದು ಹೇಳಿದೆ.
ನಷ್ಟ-ಲಾಭ: ಸತತ ನಷ್ಟವನ್ನೇ ಎದುರಿಸುತ್ತಿದ್ದ ಬಿಎಂಆರ್‌ಸಿಎಲ್ ಕಳೆದ ವರ್ಷ ಕಾರ್ಯಾಚರಣೆಯಿಂದ ಲಾಭ ಕಂಡಿತ್ತು. 2017-18 ರಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಸಂಸ್ಥೆ ₹262.94 ಕೋಟಿ ವ್ಯಯಿಸಿದ್ದರೆ, 2023 - 24ರಲ್ಲಿ ₹613.51 ಕೋಟಿ ವ್ಯಯಿಸಿದೆ. ಮೆಟ್ರೋ 43 ಕಿಮೀ ನಿಂದ 76 ಕಿಮೀಗೆ ವಿಸ್ತರಣೆ ಆಗಿರುವುದು, ಕಾರ್ಯಾಚರಣೆ ವಿಧಾನ ಹೆಚ್ಚಿಸಿಕೊಂಡಿದ್ದು ಖರ್ಚು ಹೆಚ್ಚಲು ಕಾರಣವಾಗಿದೆ. 2023-2024ರಲ್ಲಿ ಬಿಎಂಆರ್‌ಸಿಎಲ್ ಕಾರ್ಯಾಚರಣೆಯಿಂದ ₹573.90, ಹೊರತುಪಡಿಸಿ ₹50.73 ಹಾಗೂ ಇತರೆ ಮೂಲದಿಂದ 20.05 ಕೋಟಿ ಆದಾಯ ಗಳಿಸಿತ್ತು. ಈ ಮೂಲಕ ಮೊದಲ ಬಾರಿ ಬಿಎಂಆರ್‌ಸಿಎಲ್ 31.25 ಕೋಟಿ ಲಾಭ ಗಳಿಸಿತ್ತು. ಅದು ಬಿಟ್ಟರೆ ಹಿಂದಿನ ನಾಲ್ಕು ವರ್ಷ ₹11 ಕೋಟಿಯಿಂದ - ₹ 214 ಕೋಟಿವರೆಗೆ ನಷ್ಟ ಅನುಭವಿಸಿದೆ.
ಇದರ ಜತೆಗೆ 2017ರಲ್ಲಿ ದರ ಪರಿಷ್ಕರಣೆ ಮಾಡಿ ಏಳೂವರೆ ವರ್ಷ ಪರಿಷ್ಕರಣೆ ಮಾಡದಿರುವುದು, ಮೆಟ್ರೋ ಕಾರ್ಯಾಚರಣೆ ವೆಚ್ಚ, ಸಿಬ್ಬಂದಿ ವೆಚ್ಚ, ನಿರ್ವಹಣೆ ವೆಚ್ಚ, ವಿದ್ಯುತ್ ವೆಚ್ಚ ಏರಿಕೆ ಆಗಿರುವುದನ್ನು ಮನಗಂಡು ದರ ಹೆಚ್ಚಳ ಮಾಡುವುದು ಬಿಎಂಆರ್‌ಸಿಎಲ್‌ಗೆ ಅನಿವಾರ್ಯವಾಯಿತು ಎಂದು ಹೇಳಲಾಗಿದೆ. ಬಿಎಂಟಿಸಿ ದರ, ಆಟೋರಿಕ್ಷಾ ದರ, ಕ್ಯಾಬ್ ದರವನ್ನು ಮೆಟ್ರೋಕ್ಕೆ ದರಕ್ಕೆ ಹೋಲಿಸಲಾಗಿದೆ. ಇದೇ ಅವಧಿಯಲ್ಲಿ ಮುಂದಿನ ಐದು ವರ್ಷಗಳಲ್ಲಿ ಬಿಎಂಆರ್‌ಸಿಎಲ್ ಮೇಲಿರುವ ಸಾಲ ಮರುಪಾವತಿ ಹೊಣೆಗಾರಿಕೆ, ಆರ್ಥಿಕ ಸವಕಳಿಗಳನ್ನು ಅಂದಾಜಿಸಿ ದರ ಹೆಚ್ಚಳದ ಅನಿವಾರ್ಯತೆ ಎಂದು ದರ ಪರಿಷ್ಕರಣ ಸಮಿತಿ ವರದಿಯಲ್ಲಿ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ