ರಾತ್ರಿ ಗಸ್ತು ನಡೆಸಿ: ಎಸ್ಪಿ, ಡಿಸಿಪಿಗಳಿಗೆ ಡಿಜಿಪಿ ಅಲೋಕ್‌ ಮೋಹನ್‌ ಸೂಚನೆ

By Kannadaprabha News  |  First Published Jun 22, 2023, 12:35 PM IST

ಪ್ರತಿ ದಿನ ಒಂದು ಪೊಲೀಸ್‌ ಠಾಣೆಗೆ ಭೇಟಿ ನೀಡಬೇಕು ಹಾಗೂ ವಾರದಲ್ಲಿ ಒಂದು ದಿನ ರಾತ್ರಿ ಗಸ್ತು ನಡೆಸಿ ಸಿಬ್ಬಂದಿ ಕಾರ್ಯನಿರ್ವಹಣೆ ಪರಿಶೀಲಿಸುವಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌ ಅವರು ಡಿಸಿಪಿ ಹಾಗೂ ಎಸ್‌ಪಿಗಳಿಗೆ ಸೂಚನೆ ನೀಡಿದ್ದಾರೆ.


ಬೆಂಗಳೂರು (ಜೂ.22): ಪ್ರತಿ ದಿನ ಒಂದು ಪೊಲೀಸ್‌ ಠಾಣೆಗೆ ಭೇಟಿ ನೀಡಬೇಕು ಹಾಗೂ ವಾರದಲ್ಲಿ ಒಂದು ದಿನ ರಾತ್ರಿ ಗಸ್ತು ನಡೆಸಿ ಸಿಬ್ಬಂದಿ ಕಾರ್ಯನಿರ್ವಹಣೆ ಪರಿಶೀಲಿಸುವಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌ ಅವರು ಡಿಸಿಪಿ ಹಾಗೂ ಎಸ್‌ಪಿಗಳಿಗೆ ಸೂಚನೆ ನೀಡಿದ್ದಾರೆ. ಈ ಸಂಬಂಧ ಸಂದೇಶ ರವಾನಿಸಿರುವ ಡಿಜಿಪಿ, ಪೊಲೀಸ್‌ ಠಾಣೆಗಳ ಭೇಟಿ ಹಾಗೂ ರಾತ್ರಿ ಗಸ್ತಿನ ಬಗ್ಗೆ ತಮ್ಮ ಕಚೇರಿಗೆ ವರದಿ ಸಲ್ಲಿಸುವಂತೆ ಹೇಳಿದ್ದಾರೆ. ಬಂದೋಬಸ್ತ್‌ ಸೇರಿದಂತೆ ಕೆಲವು ತುರ್ತು ಸಂದರ್ಭಗಳ ಹೊರತುಪಡಿಸಿ ಪ್ರತಿ ದಿನ ಒಂದು ಠಾಣೆಗೆ ಭೇಟಿ ನೀಡಿ ಆ ಠಾಣೆಯ ಕಾರ್ಯನಿರ್ವಹಣೆ ಬಗ್ಗೆ ನಗರ ವ್ಯಾಪ್ತಿ ಡಿಸಿಪಿಗಳು ಹಾಗೂ ಜಿಲ್ಲೆಗಳಲ್ಲಿ ಎಸ್‌ಪಿಗಳು ಪರಿಶೀಲಿಸಬೇಕು. 

ಆ ವೇಳೆ ಅಲ್ಲಿನ ಕಾನ್‌ಸ್ಟೇಬಲ್‌, ಹೆಡ್‌ ಕಾನ್‌ಸ್ಟೇಬಲ್‌ ಮಾತ್ರವಲ್ಲದೆ ನಾಗರಿಕರ ಜತೆ ಸಂವಾದ ನಡೆಸಿ ಆಹವಾಲು ಆಲಿಸಬೇಕು ಎಂದು ಡಿಜಿಪಿ ಅಲೋಕ್‌ ಮೋಹನ್‌ ನಿರ್ದೇಶಿಸಿದ್ದಾರೆ. ಅದೇ ರೀತಿ ವಾರದಲ್ಲಿ ಒಂದು ದಿನ ಡಿಸಿಪಿ ಹಾಗೂ ಎಸ್‌ಪಿಗಳು ಅನಿರೀಕ್ಷಿತವಾಗಿ ರಾತ್ರಿ ಸಂಚಾರ ಕೈಗೊಂಡು ರಾತ್ರಿ ಗಸ್ತು ಸಿಬ್ಬಂದಿ ಕಾರ್ಯನಿರ್ವಹಣೆ ಬಗ್ಗೆ ಪರಿಶೀಲಿಸಬೇಕು. ಆ ವೇಳೆ ಇ-ಬೀಟ್‌ ಆ್ಯಪ್‌ನಲ್ಲಿ ಗಸ್ತು ಸಿಬ್ಬಂದಿ ಕಾರ್ಯವೈಖರಿ ಬಗ್ಗೆ ಆಪ್‌ಡೇಟ್‌ ದಾಖಲಿಸುವಂತೆ ಅಧಿಕಾರಿಗಳಿಗೆ ಡಿಜಿಪಿ ಆದೇಶಿಸಿದ್ದಾರೆ.

Tap to resize

Latest Videos

ಬಜೆಟ್‌ನಲ್ಲಿ ಹೆಚ್ಚಿನ ಬದಲಾವಣೆ ಮಾಡದೇ ಹೊಸ ರೂಪ: ಡಿ.ಕೆ.ಶಿವಕುಮಾರ್‌

ಠಾಣೆಗಳಲ್ಲಿ ಹಿರಿಯ ಅಧಿಕಾರಿಗಳ ನಂಬರ್‌ ಹಾಕಿ: ರಾಜ್ಯದ ಎಲ್ಲ ಪೊಲೀಸ್‌ ಠಾಣೆಗಳಲ್ಲಿ ಜನರಿಗೆ ಕಾಣುವಂತೆ ಹಿರಿಯ ಅಧಿಕಾರಿಗಳ ಮೊಬೈಲ್‌ ಸಂಖ್ಯೆಗಳಿರುವ ಫಲಕವನ್ನು ಕಡ್ಡಾಯವಾಗಿ ಹಾಕುವಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕ (ಪ್ರಭಾರ) ಅಲೋಕ್‌ ಮೋಹನ್‌ ಸುತ್ತೋಲೆ ಹೊರಡಿಸಿದ್ದಾರೆ. ರಾಜಕೀಯ ಕಾರಣಗಳಿಗೆ ಸಾರ್ವಜನಿಕರ ದೂರಗಳಿಗೆ ಪೊಲೀಸರು ಸೂಕ್ತವಾಗಿ ಕಾನೂನಾತ್ಮಕ ಕ್ರಮ ಜರುಗಿಸುತ್ತಿಲ್ಲ ಎಂಬ ಟೀಕೆಗಳ ಹಿನ್ನಲೆಯಲ್ಲಿ ಎಚ್ಚೆತ್ತಿರುವ ಡಿಜಿಪಿ ಅವರು, ಈಗ ಠಾಣೆಗಳಲ್ಲಿ ದೂರು ಸ್ವೀಕರಿಸದೆ ಹೋದರೆ ತಕ್ಷಣವೇ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಲು ಅನುಕೂಲವಾಗುವಂತೆ ದೂರವಾಣಿ ಸಂಖ್ಯೆಗಳಿರುವ ಫಲಕ ಅಳವಡಿಕೆಗೆ ಸೂಚಿಸಿದ್ದಾರೆ. 

‘ಪೊಲೀಸ್‌ ಠಾಣೆಯಲ್ಲಿ ನಿಮ್ಮ ಯಾವುದೇ ದೂರಿಗೆ ಸ್ಪಂದಿಸದಿದ್ದರೆ ಪೊಲೀಸ್‌ ಕಮೀಷನರೇಟ್‌ನಲ್ಲಿ ಡಿಸಿಪಿ, ಎಸಿಪಿ ಹಾಗೂ ಜಿಲ್ಲೆಗಳಲ್ಲಿ ಎಸ್ಪಿ ಹಾಗೂ ಡಿವೈಎಸ್ಪಿ ಅವರನ್ನು ಸಂಪರ್ಕಿಸಿ’ ಎಂದು ಕನ್ನಡ ಮತ್ತು ಇಂಗ್ಲೀಷ್‌ ಎರಡೂ ಭಾಷೆಗಳಲ್ಲಿ ಬರೆದು ದೂರವಾಣಿ ಸಮೇತ ಫಲಕಗಳನ್ನು ಹಾಕಬೇಕು. ಈ ಫಲಕ ಅಳವಡಿಕೆ ಪ್ರಕ್ರಿಯೆ ಜೂ.20 ರೊಳಗೆ ಪೂರ್ಣಗೊಳಿಸಿ ಡಿಜಿಪಿ ಕಚೇರಿಗೆ ಅಧಿಕಾರಿಗಳು ವರದಿ ಕಳುಹಿಸಬೇಕು’ ಎಂದು ಅಲೋಕ್‌ ಮೋಹನ್‌ ಹೇಳಿದ್ದಾರೆ.

ಸಂಚಾರ ನಿರ್ವಹಣಾ ಕೇಂದ್ರಕ್ಕೆ ಡಿಜಿ ಭೇಟಿ: ನೂತನ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌ ಮಂಗಳವಾರ ನಗರ ಸಂಚಾರ ಪೊಲೀಸ್‌ ವಿಭಾಗದ ‘ಸಂಚಾರ ನಿರ್ವಹಣಾ ಕೇಂದ್ರ’(ಟಿಎಂಸಿ)ಕ್ಕೆ ಭೇಟಿ ನೀಡಿ ಸಂಚಾರ ಸುವ್ಯವಸ್ಥೆ ಬಗ್ಗೆ ಪರಿಶೀಲಿಸಿದರು. ರಾಜ್ಯ ಪೊಲೀಸ್‌ ಮಹಾನಿರ್ದೇಶಕರಾದ ಬಳಿಕ ಮೊದಲ ಬಾರಿಗೆ ಟಿಎಂಸಿ ಕೇಂದ್ರಕ್ಕೆ ಭೇಟಿ ನೀಡಿದ್ದ ಅಲೋಕ್‌ ಮೋಹನ್‌ ಅವರನ್ನು ಹಿರಿಯ ಅಧಿಕಾರಿಗಳು ಸ್ವಾಗತಿಸಿದರು. 

ಪೊಲೀಸ್‌ ಠಾಣೆಗಳು ರಾಜಿ ಸಂಧಾನ ಕೇಂದ್ರಗಳಾಗಲು ಬಿಡಲ್ಲ: ಸಚಿವ ಪರಮೇಶ್ವರ್‌

ಟಿಎಂಸಿ ಕೇಂದ್ರದಲ್ಲಿ ಅಳವಡಿಸಿಕೊಂಡಿರುವ ತಂತ್ರಜ್ಞಾನ, ನಗರದ ವಿವಿಧೆಡೆ ಅಳವಡಿಸಿರುವ ಹೈ ಡೆಫಿನಷನ್‌ ಕ್ಯಾಮರಾಗಳು, ಸಂಚಾರ ನಿಯಮ ಉಲ್ಲಂಘನೆಗೆ ದಂಡ ವಿಧಿಸಲು ಅನುಸರಿಸುತ್ತಿರುವ ಕ್ರಮಗಳು ಸೇರಿದಂತೆ ಸಂಚಾರ ವ್ಯವಸ್ಥೆಯಲ್ಲಿ ಹೊಸದಾಗಿ ಮಾಡಲಾದ ಬದಲಾವಣೆಗಳ ಬಗ್ಗೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು. ಪಿಪಿಟಿ ಪ್ರಾತ್ಯಕ್ಷಿಕೆ ಮುಖಾಂತರ ನಗರದ ಟಿಎಂಸಿ ಕೇಂದ್ರ ಕಾರ್ಯ ನಿರ್ವಹಣೆ ಬಗ್ಗೆ ವಿವರಿಸಿದರು. ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ, ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಎಂ.ಎನ್‌.ಅನುಚೇತ್‌, ಸಂಚಾರ ವಿಭಾಗದ ಡಿಸಿಪಿಗಳು ಇದ್ದರು.

click me!