
ಬೆಂಗಳೂರು (ಫೆ. 20): ನಾನು ದೆಹಲಿ ಪ್ರವಾಸ ಮಾಡಿದ್ದು ಕೇವಲ ಖಾಸಗಿ ಕೆಲಸಗಳ ನಿಮಿತ್ತ. ಯಾವುದೇ ರಾಜಕೀಯದ ಉದ್ದೇಶದ ಚರ್ಚೆ ಅಥವಾ ಕಾರ್ಯಕ್ರಮ ಇಟ್ಟುಕೊಂಡು ಹೋಗಿರಲಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದರು.
ಗುರುವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಾನು ಎಐಸಿಸಿ ಕಚೇರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಗಿರಲಿಲ್ಲ. ಹೊಸ ಕಚೇರಿ ನೋಡಲು ಹೋಗಿದ್ದೆ. ಈ ವೇಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಮಾತನಾಡಿಸಿಕೊಂಡು ಬಂದಿದ್ದೇನೆ. ಅವರನ್ನು ಹೊರತುಪಡಿಸಿ ಬೇರೆ ಯಾರನ್ನು ಭೇಟಿ ಮಾಡಿಲ್ಲ. ರಾಜಕೀಯದ ಅಜೆಂಡಾ ಇಟ್ಟುಕೊಂಡು ದೆಹಲಿಗೆ ಹೋಗಿರಲಿಲ್ಲ. ರಾಜಕೀಯ ವಿಚಾರದ ಬಗ್ಗೆ ಯಾವುದನ್ನು ಅವರೊಂದಿಗೆ ಮಾತನಾಡಿಲ್ಲ. ಇದರಲ್ಲಿ ಮುಚ್ಚಿಡುವಂಥದ್ದು ಏನು ಇಲ್ಲ. ಜನ ಸಮುದಾಯಕ್ಕೆ ಗೊತ್ತಾಗುವಂತಹ ವಿಚಾರಗಳೇ ರಾಜಕೀಯ. ಮುಚ್ಚಿಡುವಂಥ ವಿಚಾರಗಳು ಏನು ಇಲ್ಲ ಎಂದರು.
ನಾನು ಒಂದು ವೇಳೆ ಯಾವುದೇ ರಾಜಕೀಯ ಅಜೆಂಡಾ ಇಟ್ಟುಕೊಂಡು ದೆಹಲಿಗೆ ಹೋಗಿದ್ದರೆ, ಆ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಇರಬಹುದು ಅಥವಾ ಮುಖ್ಯಮಂತ್ರಿ ವಿಚಾರ ಇರಬಹುದು ಯಾವುದನ್ನು ಎಲ್ಲಿಯೂ ಮಾತನಾಡಿಲ್ಲ. ಇದು ನಿಮ್ಮ ಗಮನಕ್ಕೆ ಇರಲಿ. ಶೋಷಿತ ಸಮಾವೇಶದ ಬಗ್ಗೆಯೂ ಮಾತನಾಡಿಲ್ಲ. ಯಾವುದೇ ರಾಜಕೀಯ ವಿಚಾರಗಳನ್ನು ಮಾತನಾಡಿಲ್ಲ. ಆ ರೀತಿ ಅಜೆಂಡಾಗಳಿದ್ದರೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುತ್ತಿದ್ದೆ ಎಂಬುದನ್ನು ಸ್ಪಷ್ಟಿಕರಣ ನೀಡಲು ಬಯಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಅವರನ್ನ ರೆಬೆಲ್ಸ್ ಅಂತ ಕರಿಬೇಡಿ, ಎಲ್ಲರೂ ಒಟ್ಟಾಗಿ ಕೂಡಿ ಹೋರಾಡೋಣ: ವಿಜಯೇಂದ್ರ
ಮುಡಾ ಕೇಸ್‌ನಲ್ಲಿ ಸಿಎಂ ಅವರಿಗೆ ಲೋಕಾಯುಕ್ತ ಕ್ಲೀನ್ ಚಿಟ್ ನೀಡಿರುವ ಬಗ್ಗೆ ಬಿಜೆಪಿ ಆರೋಪಗಳ ಕುರಿತು ಪ್ರತಿಕ್ರಿಯಿಸಿ.... ಮುಡಾ ಪ್ರಕರಣವನ್ನು ಲೋಕಾಯುಕ್ತ ತನಿಖೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಿಬಿಐಗೆ ಕೊಡುವ ಅಗತ್ಯವಿಲ್ಲ. ಒಂದೇ ಪ್ರಕರಣವನ್ನು ಎರಡು ಸಂಸ್ಥೆಗಳು ತನಿಖೆ ಮಾಡುವುದು ಆಗಬಾರದು. ಇದು ಕಾನೂನಿಗೆ ವಿರುದ್ಧ ಎಂಬುದನ್ನು ಹೈಕೋರ್ಟ್ ಹೇಳಿದೆ. ಬಿಜೆಪಿಯವರು ಲೋಕಾಯುಕ್ತ ತನಿಖೆಯನ್ನೇ ಪ್ರಶ್ನಿಸುತ್ತಿದ್ದಾರೆ. ತನಿಖೆಯಲ್ಲಿ ಸಿಕ್ಕಿದ್ದ ಸಾಕ್ಷ್ಯಾಧಾರಗಳ ಮೇಲೆ ತೀರ್ಮಾನ ಮಾಡಿದ್ದಾರೆ. ಸಾಕ್ಷ್ಯಾ, ಪುರಾವೆಗಳಿಲ್ಲ ಎಂದ ಮೇಲೆ ತೀರ್ಪು ಕೊಟ್ಟಿದ್ದಾರೆ. ಲೋಕಾಯುಕ್ತ ತನಿಖೆಯನ್ನು ಪ್ರಶ್ನಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಬಿಜೆಪಿಯವರು ಯೋಚಿಸಲಿ. ಬಿಜೆಪಿಯವರಿಗೆ ಪರವಾದ ತೀರ್ಪು ಬಂದಾಗ ತನಿಖಾ ಸಂಸ್ಥೆ ಸರಿ ಇರುತ್ತದೆ. ವಿರುದ್ಧವಾದ ತೀರ್ಪು ಬಂದಾಗ ಸರಿ ಇರುವುದಿಲ್ಲ. ಇದೆಂತ ರಾಜಕೀಯ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹಠ ಹಿಡಿದಿಲ್ಲ, ರಿಕ್ವೆಸ್ಟ್ ಅಷ್ಟೇ: ಸತೀಶ್ ಜಾರಕಿಹೊಳಿ
ಮುಡಾ ಪ್ರಕರಣದಲ್ಲಿ ಆರೋಪ ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ತನಿಖೆ ಮಾಡುವಂತೆ ಲೋಕಾಯುಕ್ತಕ್ಕೆ ಸೂಚಿಸಿತ್ತು. ಆ ರೀತಿ ಏನು ಇಲ್ಲ ಎಂಬುದು ತನಿಖೆಯಲ್ಲಿ ಬಂದಿದೆ. ಲೋಕಾಯುಕ್ತ ಸ್ವತಂತ್ರ ಸಂಸ್ಥೆ. ಅದರ ಕೆಲಸ ಕಾರ್ಯಗಳಲ್ಲಿ ಸರ್ಕಾರ ಏನಾದರು ನಿರ್ದೇಶನ ನೀಡುತ್ತದೆಯೇ? ಈ ರೀತಿಯಾಗಿ ನಡೆದುಕೊಳ್ಳುವಂತೆ ಹೇಳಲು ಆಗುತ್ತದೆಯೇ? ಎಂದರು. ಗೃಹಲಕ್ಷ್ಮೀ ಯೋಜನೆಯಲ್ಲಿನ ಸಮಸ್ಯೆಯನ್ನು ಸರಿಪಡಿಸಿಕೊಳ್ಳಲಾಗುವುದು. ಬಿಜೆಪಿಯವರು ಲಕ್ಷಾಂತರ ಕೋಟಿ ರೂ. ಬಿಲ್ ಬಾಕಿ ಉಳಿಸಿ ಹೋಗಿದ್ದರು. ಇದೆಲ್ಲವನ್ನು ನಮ್ಮ ಸರ್ಕಾರ ಪಾವತಿಸಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ