ಸನ್ನಡತೆ ಕೈದಿಗಳಿಗೆ ನಾಳೆ ಬಿಡುಗಡೆ ಭಾಗ್ಯವಿಲ್ಲ| ಈ ವರ್ಷವೂ ಪ್ರಕ್ರಿಯೆ ವಿಳಂಬ| ಗಣರಾಜ್ಯೋತ್ಸವ ಸಮೀಪಿಸಿದರೂ ಸಭೆ ನಡೆಸದ ಸರ್ಕಾರ
ಬಳ್ಳಾರಿ[ಜ.25]: ಗಣರಾಜ್ಯೋತ್ಸವ ದಿನದಂದು ಜೈಲಿನಿಂದ ಬಿಡುಗಡೆಗೊಳ್ಳುವ ಆಸೆ ಹೊತ್ತಿದ್ದ ರಾಜ್ಯದ ಕೇಂದ್ರ ಕಾರಾಗೃಹಗಳ ಕೈದಿಗಳಿಗೆ ಈ ಬಾರಿಯೂ ನಿರಾಸೆ ಕಾದಿದೆ. ರಾಜ್ಯ ಸರ್ಕಾರ ಈವರೆಗೆ ಯಾವುದೇ ನಿರ್ಧಾರ ಕೈಗೊಳ್ಳದಿರುವುದರಿಂದ ಸನ್ನಡತೆಯ ಕೈದಿಗಳು ಮತ್ತೆ ಕೆಲವು ತಿಂಗಳು ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.
ಬಳ್ಳಾರಿ ಜೈಲ್‌ನ 15 ಕೈದಿಗಳು ಸೇರಿದಂತೆ ರಾಜ್ಯದ ಬೆಂಗಳೂರು, ಬೆಳಗಾವಿ, ವಿಜಯಪುರ, ಮೈಸೂರು, ಧಾರವಾಡ, ಕಲಬುರಗಿ ಸೇರಿ 7 ಕೇಂದ್ರ ಕಾರಾಗೃಹಗಳ ಒಟ್ಟು 119 ಕೈದಿಗಳ ಬಿಡುಗಡೆಯ ಸಂಬಂಧ ಆಯಾ ಕಾರಾಗೃಹದ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದಾರೆ. ಆದರೆ, ರಾಜ್ಯ ಸರ್ಕಾರ ಈವರೆಗೆ ಸೂಕ್ತ ನಿರ್ಧಾರ ತೆಗೆದುಕೊಂಡಿಲ್ಲ. ಹಿರಿಯ ಅಧಿಕಾರಿಗಳ ಸಭೆಯೂ ನಡೆದಿಲ್ಲ. ಇದರಿಂದ ಬಿಡುಗಡೆ ದಿನಾಂಕ ಕೆಲವು ತಿಂಗಳು ಮುಂದೂಡಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಬಿಡುಗಡೆಗೆ ತಡವೇಕೆ?:
ಪ್ರತಿ ವರ್ಷ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಹಾಗೂ ಜ. 26ರ ಗಣರಾಜ್ಯೋತ್ಸವಕ್ಕೆ ಮುಂಚೆ ಆಯಾ ಕೇಂದ್ರ ಕಾರಾಗೃಹಗಳ ಅಧೀಕ್ಷಕರು ಸನ್ನಡತೆಯ ಕೈದಿಗಳ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸುತ್ತಾರೆ. ಇದನ್ನು ಕಾನೂನು ಇಲಾಖೆ ಕಾರ್ಯದರ್ಶಿ, ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಉನ್ನತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ. ಪರಿಶೀಲನೆ ವೇಳೆ ಕೆಲವರ ಹೆಸರನ್ನು ಕೈ ಬಿಡಲೂಬಹುದು. ಅಧಿಕಾರಿಗಳು ಅಂತಿಮಗೊಳಿಸಿದ ಪಟ್ಟಿಸರ್ಕಾರಕ್ಕೆ ರವಾನೆಯಾಗುತ್ತದೆ. ಇದು ಸಚಿವ ಸಂಪುಟದಲ್ಲಿ ಅನುಮೋದನೆಗೊಂಡು ರಾಜ್ಯಪಾಲರಿಗೆ ಸಲ್ಲಿಕೆಯಾಗುತ್ತದೆ. ರಾಜ್ಯಪಾಲರ ಮುದ್ರೆ ಬಿದ್ದ ಬಳಿಕ ಬಿಡುಗಡೆಯ ಮುಂದಿನ ಕಾರ್ಯಕ್ಕೆ ಚಾಲನೆ ಸಿಗುತ್ತದೆ. ಆದರೆ, ಈವರೆಗೆ ಅಧಿಕಾರಿಗಳ ಸಭೆ ನಡೆದಿಲ್ಲ. ಮುಂದಿನ ಸಭೆಯ ದಿನಾಂಕವೂ ನಿರ್ಧಾರವಾಗಿಲ್ಲ. ಗಣರಾಜ್ಯೋತ್ಸವಕ್ಕೆ ಇನ್ನೊಂದು ದಿನ ಮಾತ್ರ ಬಾಕಿ ಇದೆ. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಜೈಲು ಹಕ್ಕಿಗಳು ಹೊರಬರಲು ಅಡ್ಡಿಯಾದಂತಾಗಿದೆ.
ಕಳೆದ ವರ್ಷವೂ ತಡವಾಗಿತ್ತು
ಕಳೆದ ವರ್ಷ ಕೂಡ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಹಾಗೂ ಜ.26ರ ಗಣರಾಜ್ಯೋತ್ಸವ ದಿನದಂದು ಸನ್ನಡತೆಯ ಕೈದಿಗಳಿಗೆ ಬಿಡುಗಡೆಯ ಭಾಗ್ಯ ದಕ್ಕಿರಲಿಲ್ಲ. ನಾನಾ ಕಾರಣವೊಡ್ಡಿ ಎರಡು ತಿಂಗಳ ಬಳಿಕ ಬಿಡುಗಡೆಗೊಳಿಸಲಾಗಿತ್ತು.
ಬಳ್ಳಾರಿ ಕೇಂದ್ರ ಕಾರಾಗೃಹದಿಂದ ಸನ್ನಡತೆಯ 13 ಪುರುಷರು ಹಾಗೂ ಇಬ್ಬರು ಮಹಿಳಾ ಕೈದಿಗಳ ಹೆಸರನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ಮೇಲಿಂದ ಆದೇಶ ಬರುತ್ತಿದ್ದಂತೆಯೇ ಬಿಡುಗಡೆಯ ಕ್ರಮ ವಹಿಸಲಾಗುವುದು.
-ಡಾ.ರಂಗನಾಥ್, ಅಧೀಕ್ಷಕರು, ಬಳ್ಳಾರಿ ಕೇಂದ್ರ ಕಾರಾಗೃಹ
-ಕೆ.ಎಂ.ಮಂಜುನಾಥ್