ಚುನಾವಣಾ ಪ್ರಕ್ರಿಯೆ: ದೇಶದಲ್ಲಿ ಕರ್ನಾಟಕವೇ ಬೆಸ್ಟ್

By Web DeskFirst Published Jan 25, 2019, 8:44 AM IST
Highlights

ಉತ್ತಮವಾಗಿ ಕಾರ್ಯನಿರ್ವಹಿಸಿದ ರಾಜ್ಯ’ ಪ್ರಶಸ್ತಿ| ಭಾರತ ಚುನಾವಣಾ ಆಯೋಗದಿಂದ ಘೋಷಣೆ| ಇಂದು ಪ್ರಶಸ್ತಿ ಪ್ರದಾನ

ಬೆಂಗಳೂರು[ಜ.25]: ಚುನಾವಣಾ ಪ್ರಕ್ರಿಯೆಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ರಾಜ್ಯ ಎಂಬ ಕೀರ್ತಿಗೆ 2018ನೇ ಸಾಲಿನಲ್ಲಿ ಕರ್ನಾಟಕ ರಾಜ್ಯವು ಪಾತ್ರವಾಗಿದ್ದು, ಭಾರತ ಚುನಾವಣಾ ಆಯೋಗವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ರಾಜ್ಯ ಎಂಬ ಪ್ರಶಸ್ತಿಯನ್ನು ಘೋಷಣೆ ಮಾಡಿದೆ.

ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ದೆಹಲಿಯಲ್ಲಿ ಶುಕ್ರವಾರ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ರಾಷ್ಟ್ರೀಯ ಮತದಾರರ ದಿನಾಚರಣೆ ದಿನದಂದು ಪ್ರತಿ ವರ್ಷ ಚುನಾವಣೆಗಾಗಿ ಅತ್ಯುತ್ತಮವಾಗಿ ಕಾರ್ಯರ್ನಿಹಿಸಿದ ಅಧಿಕಾರಿ, ಸಿಬ್ಬಂದಿಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ. ರಾಷ್ಟ್ರ, ರಾಜ್ಯ, ಜಿಲ್ಲಾ ಮಟ್ಟಸೇರಿದಂತೆ ಬೂತ್‌ ಮಟ್ಟದಲ್ಲಿ ಸಹ ಅತ್ಯುತ್ತಮರನ್ನು ಗುರುತಿಸಿ ಸನ್ಮಾನಿಸಲಾಗುತ್ತದೆ.

ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು ಎಂಬುದು ಈ ವರ್ಷದ ಧ್ಯೇಯವಾಗಿದೆ. ತಾಂತ್ರಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಅತ್ಯಂತ ವೇಗವಾಗಿ ಬದಲಾಗುತ್ತಿರುವ ದೇಶದಲ್ಲಿ ಜನಸಾಮಾನ್ಯರಿಗೆ ಮತದಾನ ಕುರಿತು ಜಾಗೃತಿ, ಮತದಾರರ ನೋಂದಣಿ ಹಾಗೂ ಪ್ರತಿಯೊಬ್ಬರು ಸಹ ಪ್ರಜಾಪ್ರಭುತ್ವದ ಹಬ್ಬದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಬೇಕು ಎಂಬುದು ಭಾರತ ಚುನಾವಣಾ ಆಯೋಗದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಕೇಂದ್ರ ಚುನಾವಣಾ ಆಯೋಗವು ಉತ್ತಮವಾಗಿ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಪ್ರಶಸ್ತಿಗೆ ಭಾಜನವಾಗಿದೆ.

ಭಾರತ ಸರ್ಕಾರವು 2011ರಲ್ಲಿ ಮತದಾರರಲ್ಲಿ ಜಾಗೃತಿ ಮತ್ತು ಯುವ ಮತದಾರರ ಹೊಸ ನೋಂದಣಿಯನ್ನು ಹೆಚ್ಚಿಸುವ ಉದ್ದೇಶದಿಂದ ಪ್ರತಿ ವರ್ಷ ಜ.25ರಂದು ರಾಷ್ಟ್ರೀಯ ಮತದಾರರ ದಿನಾಚರಣೆ ಘೋಷಣೆ ಮಾಡಲಾಗಿದೆ. 1950ರ ಜ.25ರಂದು ಭಾರತ ಚುನಾವಣಾ ಆಯೋಗವನ್ನು ಸ್ಥಾಪಿಸಲಾಗಿದೆ. ಈ ದಿನವು ಭಾರತೀಯ ಪ್ರಜಾಪ್ರಭುತ್ವದಲ್ಲಿ ಅತ್ಯಂತ ಪ್ರಮುಖ ದಿನವಾಗಿದೆ. ಕಳೆದ 9 ವರ್ಷಗಳಿಂದ ಪ್ರತಿ ವರ್ಷ ಒಂದೊಂದು ವಿಷಯವನ್ನು ಧ್ಯೇಯವಾಗಿಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ.

ಅಂಗವಿಕಲರನ್ನು ಪ್ರೋತ್ಸಾಹಿಸಲು ವಿಧಾನಸಭೆ ಚುನಾವಣೆ ವೇಳೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಿಂದ ವಿಶೇಷ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಕುರಿತು ಪ್ರಕಟಿಸಿದ ಪುಸ್ತಕದ ಬಗ್ಗೆ ಭಾರತ ಚುನಾವಣಾ ಆಯೋಗವು ಮೆಚ್ಚಗೆ ವ್ಯಕ್ತಪಡಿಸಿದೆ. ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಮತ್ತು ಮುಖ್ಯ ಚುನಾವಣಾ ಆಯುಕ್ತರು ಭಾಗವಹಿಸಲಿದ್ದು, ರಾಜ್ಯಮಟ್ಟದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಮತ್ತು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಮುಖ್ಯ ಚುನಾವಣಾಧಿಕಾರಿಗಳು ಸೇರಿದಂತೆ ತಾಲೂಕು ಮತ್ತು ಬೂತ್‌ ಮಟ್ಟದಲ್ಲಿಯೂ ಸಹ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ.

click me!