ಕೇರಳ ನರ್ಸ್‌ ಗಲ್ಲು ಕನ್ನಡಿಗ ತಪ್ಪಿಸಿದ್ದು ಹೇಗೆ?

Kannadaprabha News   | Kannada Prabha
Published : Jul 26, 2025, 06:24 AM IST
Moula Shariff

ಸಾರಾಂಶ

ಯೆಮನ್‌ ದೇಶದಲ್ಲಿ ಕೇರಳದ ನಿಮಿಷ ಪ್ರಿಯಾ ಎಂಬ ನರ್ಸ್‌ಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಮುಂದೂಡಲಾಗಿದ್ದು, ಈ ಪ್ರಕ್ರಿಯೆಯ ಹಿಂದೆ ಕನ್ನಡಿಗ ಡಾ.ಮೌಲಾ ಷರೀಫ್ ಅವರ ಪ್ರಯತ್ನ, ಸುದೀರ್ಘ ಹೋರಾಟವಿದೆ.

ಉಗಮ ಶ್ರೀನಿವಾಸ್‌

ತುಮಕೂರು : ಯೆಮನ್‌ ದೇಶದಲ್ಲಿ ಕೇರಳದ ನಿಮಿಷ ಪ್ರಿಯಾ ಎಂಬ ನರ್ಸ್‌ಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಮುಂದೂಡಲಾಗಿದ್ದು, ಈ ಪ್ರಕ್ರಿಯೆಯ ಹಿಂದೆ ಕನ್ನಡಿಗ ಡಾ.ಮೌಲಾ ಷರೀಫ್ ಅವರ ಪ್ರಯತ್ನ, ಸುದೀರ್ಘ ಹೋರಾಟವಿದೆ.

ತನ್ನನ್ನು ತಾನು ಸಿದ್ಧಗಂಗಾ ಮಠದ ಹುಡುಗ ಎಂದೇ ಕರೆದುಕೊಳ್ಳಲು ಇಚ್ಛಿಸುವ ಮೌಲಾ ಷರೀಫ್ ಅವರು ಚಿಕ್ಕಬಳ್ಳಾಪುರ ಜಿಲ್ಲೆ ಭಾಗ್ಯನಗರ ತಾಲೂಕಿನ ಜೂಲುಪಾಳ್ಯ ನಿವಾಸಿಯಾಗಿದ್ದು, ಬಸವಾದಿ ಶರಣರ ಬಗ್ಗೆ ವಿಶೇಷ ಅಕ್ಕರೆ ಹೊಂದಿದ್ದಾರೆ. ಹಿಂದೂಸ್ತಾನ್ ಗೋಲ್ಡ್ ಕಂಪನಿ ಮಾಲೀಕರು ಹಾಗೂ ನ್ಯಾಯವಾದಿಗಳೂ ಆಗಿರುವ ಷರೀಫ್‌ ಕಳೆದ 20 ವರ್ಷದಿಂದ ಕೊಲ್ಲಿ ರಾಷ್ಟ್ರಗಳಿಗೆ ಹಲವು ಸಲ ಹೋಗಿ ಬಂದಿದ್ದಾರೆ.

ಸೌದಿ, ದುಬೈ, ಮಸ್ಕತ್, ಕತಾರ್, ಯೆಮನ್‌ ಸೇರಿದಂತೆ ಕೊಲ್ಲಿ ರಾಷ್ಟ್ರಗಳ ವ್ಯಾಪಾರ ವಹಿವಾಟು, ಕಾನೂನಿನ ಬಗ್ಗೆ ಸಮಗ್ರ ಮಾಹಿತಿಯಿದೆ. 2017ರ ಜುಲೈನಲ್ಲಿ ಯೆಮನ್‌‌ ಪ್ರಜೆ ತಲಾಲ್ ಮಹದಿಯನ್ನು ಕೇರಳದ ನರ್ಸ್ ನಿಮಿಷಾ ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ನಿಮಿಷಾಗೆ ಯೆಮನ್‌ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದ್ದ ಸುದ್ದಿಯನ್ನು ಗಮನಿಸುತ್ತಿದ್ದ ಷರೀಫ್‌, ಹೇಗಾದರೂ ಮಾಡಿ ಆಕೆಗೆ ಶಿಕ್ಷೆಯನ್ನು ತಪ್ಪಿಸಬಹುದಾ ಎಂದು ಯೋಚಿಸಿದ್ದರು. ಹಾಗಾಗಿ ತಮ್ಮದೊಂದಿಗೆ ನಿಕಟ ಸಂಪರ್ಕವಿದ್ದ, ಮಾನವೀಯತೆ ಹೊಂದಿದ್ದ ಸುಮಾರು 10 ಮಂದಿ ಶ್ರೀಮಂತ ಯೆಮನ್ ಪ್ರಜೆಗಳ ಸಹಕಾರದೊಂದಿಗೆ ಸಂತ್ರಸ್ತ ಮಹದಿ ಅವರ ಕುಟುಂಬಸ್ಥರನ್ನು ಪತ್ತೆ ಮಾಡಿದ್ದರು.

ಭಾರತೀಯ ನರ್ಸ್‌ಗಳ ಅಗತ್ಯತೆ ಬಗ್ಗೆ ಮನವರಿಕೆ : ಹತ್ಯೆಗೊಳಗಾದ ತಲಾಲ್ ಮಹದಿ ಅವರ ತಂದೆ ಅಬೂಲ್ ಹಾಗೂ ಮಹದಿ ಅವರ ಅಣ್ಣ ಉಮರ್ ಹಾಗೂ ಅವರ 11 ಮಂದಿ ಸಂಬಂಧಿಕರ ಜತೆಗೆ ಷರೀಫ್‌ ಮಾತುಕತೆ ನಡೆಸಿದ್ದಾರೆ. ಪ್ರಮುಖವಾಗಿ ಉಮರ್ ಅವರ ಮನವೊಲಿಸಲು ಅರೇಬಿಕ್ ಭಾಷೆ ಆಯ್ಕೆ ಮಾಡಿಕೊಂಡಿದ್ದ ಷರೀಫ್‌, ಜು.10ಕ್ಕೆ ಖುದ್ದಾಗಿ ಯೆಮನ್‌‌ಗೆ ಹೋಗಿ ಜು.12ಕ್ಕೆ ಉಮರ್ ಜತೆಗೆ ಸುದೀರ್ಘ 2 ಗಂಟೆ ಮಾತನಾಡಿದ್ದು, ಹತ್ಯೆಗೊಳಗಾದ ವ್ಯಕ್ತಿ ಬಗ್ಗೆ ಅನುಕಂಪ ಸೂಚಿಸಿ ಭಾರತೀಯ ನರ್ಸ್‌ಗಳು ಕೊಲ್ಲಿ ರಾಷ್ಟ್ರದಲ್ಲಿ ಸಲ್ಲಿಸುತ್ತಿರುವ ಸೇವೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಅಲ್ಲದೇ ಈಗಾಗಲೇ ಆಕೆ 8 ವರ್ಷದಿಂದ ಜೈಲಿನಲ್ಲಿದ್ದು, ಸಾಕಷ್ಟು ಶಿಕ್ಷೆ ಅನುಭವಿಸಿದ್ದಾರೆ. ಆಕೆಗೆ ಗಲ್ಲು ಶಿಕ್ಷೆ ವಿಧಿಸಿದ ಬಳಿಕ ಭಾರತೀಯ ನರ್ಸ್‌ಗಳು ಕೊಲ್ಲಿ ದೇಶಕ್ಕೆ ಬಾರದಿದ್ದರೆ ಸೂಕ್ತ ಆರೈಕೆ ಸಿಗದೆ ಪ್ರತಿದಿನ 10 ಮಂದಿ ಯೆಮನ್‌ ಪ್ರಜೆಗಳು ಸಾಯುತ್ತಾರೆ ಎಂಬುದನ್ನು ಮನದಟ್ಟು ಮಾಡಿಕೊಟ್ಟಿದ್ದಾರೆ. ಆಗ ಉಮರ್ ಗಲ್ಲು ಶಿಕ್ಷೆ ರದ್ಧತಿಗೆ ಒಪ್ಪಿಗೆ ಸೂಚಿಸಿದ್ದಾರೆ.

ಜು.16ರಂದು ನರ್ಸ್ ನಿಮಿಷಾಗೆ ಗಲ್ಲು ಶಿಕ್ಷೆ ವಿಧಿಸಬೇಕಾಗಿತ್ತು. ಆದರೆ, ಉಮರ್ ಜತೆಗಿನ ಮಾತುಕತೆ ಫಲಪ್ರದವಾದ ಹಿನ್ನೆಲೆಯಲ್ಲಿ ಅಲ್ಲಿನ ಕಾನೂನಿನ ಮುಖ್ಯಸ್ಥರಿಗೆ ಮನವರಿಕೆ ಮಾಡಿಕೊಟ್ಟಿದ್ದರಿಂದ ಗಲ್ಲು ಶಿಕ್ಷೆ ಮುಂದೂಡಲಾಗಿದೆ ಎಂದು ಷರೀಫ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ನಿಮಿಷಾ ಭೇಟಿ ಆಗಿಲ್ಲ: ಷರೀಫ್‌ ಎಲ್ಲವೂ ಅಂದುಕೊಂಡಂತೆ ಆದರೆ ಆಗಸ್ಟ್ ಅಂತ್ಯದಲ್ಲಿ ಕೇರಳದ ನರ್ಸ್ ಜೈಲಿನಿಂದ ಹೊರಬರಬಹುದು. ಈವರೆಗೂ ನರ್ಸ್‌ ನಿಮಿಷಾ ಹಾಗೂ ಯಾವ ಸರ್ಕಾರದ ಪ್ರತಿನಿಧಿಯನ್ನೂ ಭೇಟಿ ಮಾಡಿಲ್ಲ. ಕಾನೂನು ಅರಿತಿದ್ದು, ಕೊಲ್ಲಿ ರಾಷ್ಟ್ರದ ಬಗ್ಗೆ ಸಾಕಷ್ಟು ಮಾಹಿತಿ ಇರುವುದರಿಂದ ಎಲ್ಲಕ್ಕೂ ಮಿಗಿಲಾಗಿ ಭಾರತ ಮೂಲದ ನರ್ಸ್ ಅನ್ನು ಗಲ್ಲು ಶಿಕ್ಷೆಯಿಂದ ಪಾರು ಮಾಡುವ ಉದ್ದೇಶದಿಂದ ಇಂತಹದೊಂದು ಪ್ರಯತ್ನಕ್ಕೆ ಕೈ ಹಾಕಿದ್ದೇನೆ ಎಂದು ಷರೀಫ್‌ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!