ಬಾಕಿ 1.65 ಲಕ್ಷ ಟನ್‌ ರಸಗೊಬ್ಬರ ಪೂರೈಸಿ: ಸಿಎಂ

Sujatha NR   | Kannada Prabha
Published : Jul 26, 2025, 06:11 AM IST
Karnataka CM Siddaramaiah (Photo/ANI)

ಸಾರಾಂಶ

ಕೇಂದ್ರ ಸರ್ಕಾರ ರಾಜ್ಯಕ್ಕೆ ಹಂಚಿಕೆ ಮಾಡಿದ್ದ ರಸಗೊಬ್ಬರವನ್ನು ಪೂರ್ಣ ಪ್ರಮಾಣದಲ್ಲಿ ಪೂರೈಸದ ಹಿನ್ನೆಲೆಯಲ್ಲಿ ತೀವ್ರ ಸಮಸ್ಯೆ ಉಂಟಾಗಿದ್ದು, ಕೂಡಲೇ ಬಾಕಿ ಇರುವ 1.65 ಲಕ್ಷ ಟನ್‌ ಯೂರಿಯಾ ಪೂರೈಸುವಂತೆ ಕೇಂದ್ರ ರಸಗೊಬ್ಬರ ಸಚಿವ ಜೆ.ಪಿ.ನಡ್ಡಾ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ಬೆಂಗಳೂರು : ಕೇಂದ್ರ ಸರ್ಕಾರ ಪ್ರಸಕ್ತ ವರ್ಷದ ಖಾರಿಫ್‌ ಅವಧಿಗೆ ರಾಜ್ಯಕ್ಕೆ ಹಂಚಿಕೆ ಮಾಡಿದ್ದ ರಸಗೊಬ್ಬರವನ್ನು ಪೂರ್ಣ ಪ್ರಮಾಣದಲ್ಲಿ ಪೂರೈಸದ ಹಿನ್ನೆಲೆಯಲ್ಲಿ ತೀವ್ರ ಸಮಸ್ಯೆ ಉಂಟಾಗಿದ್ದು, ಕೂಡಲೇ ಬಾಕಿ ಇರುವ 1.65 ಲಕ್ಷ ಟನ್‌ ಯೂರಿಯಾ ಪೂರೈಸುವಂತೆ ಕೇಂದ್ರ ರಸಗೊಬ್ಬರ ಸಚಿವ ಜೆ.ಪಿ.ನಡ್ಡಾ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ರಾಜ್ಯದಲ್ಲಿ ರಸಗೊಬ್ಬರ ಕೊರತೆಯ ಆತಂಕ ಎದುರಾಗಿದ್ದು, ಹಲವು ಜಿಲ್ಲೆಗಳಲ್ಲಿ ರೈತರಿಗೆ ಸಮಪರ್ಕವಾಗಿ ರಸಗೊಬ್ಬರ ಸಿಗುತ್ತಿಲ್ಲ ಎಂಬ ದೂರುಗಳೂ ಕೇಳಿ ಬರುತ್ತಿವೆ.

ಈ ಹಿನ್ನೆಲೆಯಲ್ಲಿ ಶುಕ್ರವಾರ ಕೇಂದ್ರ ಸಚಿವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ಕೇಂದ್ರ ಸರ್ಕಾರ 2025ನೇ ಖಾರಿಫ್‌ಗೆ 11,17,000 ಟನ್ ಯೂರಿಯಾವನ್ನು ರಾಜ್ಯಕ್ಕೆ ಹಂಚಿಕೆ ಮಾಡಿದೆ. ಅದರಲ್ಲಿ ಇಲ್ಲಿಯವರೆಗೆ ಸರಬರಾಜು ಮಾಡಿರುವುದು ಕೇವಲ 5,16,959 ಟನ್ ಮಾತ್ರ. ಏಪ್ರಿಲ್‌ನಿಂದ ಜುಲೈವರೆಗೆ ರಾಜ್ಯದಲ್ಲಿ 6,80,655 ಟನ್‌ ಯೂರಿಯಾ ಅಗತ್ಯವಿದೆ. ಹೀಗಾಗಿ ಬಾಕಿ ಇರುವ 1.65 ಲಕ್ಷ ಟನ್‌ ಯೂರಿಯಾ ಕೂಡಲೇ ಪೂರೈಕೆ ಮಾಡಲು ಸಂಬಂಧಪಟ್ಟವರಿಗೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.

ಇದೇ ವೇಳೆ ಕೆಲ ರಸಗೊಬ್ಬರ ಕಂಪನಿಗಳು ಕೇಂದ್ರ ಸರ್ಕಾರದ ಹಂಚಿಕೆಯ ಪ್ರಕಾರ ಯೂರಿಯಾ ಪೂರೈಸಲು ಸಾಧ್ಯವಾಗದ ಬಗ್ಗೆ ತಮ್ಮ ಅಸಮರ್ಥತೆ ವ್ಯಕ್ತಪಡಿಸಿವೆ ಎಂದೂ ಮುಖ್ಯಮಂತ್ರಿ ಉಲ್ಲೇಖಿಸಿದ್ದಾರೆ.

ಗೊಬ್ಬರ ಕೊರತೆಗೆ ಕಾರಣಗಳನ್ನೂ ವಿವರಿಸಿರುವ ಸಿದ್ದರಾಮಯ್ಯ ಅವರು, ರಾಜ್ಯಕ್ಕೆ ಮುಂಗಾರು ಈ ವರ್ಷ ಬೇಗ ಬಂದಿದೆ. ಬಿತ್ತನೆ ಚಟುವಟಿಕೆ ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ. ತುಂಗಭದ್ರಾ, ಕಾವೇರಿ, ಕೃಷ್ಣಾ ವ್ಯಾಪ್ತಿಯಲ್ಲಿ ಈ ವರ್ಷ ಬೇಗ ನೀರು ಬಿಡುಗಡೆ ಮಾಡಿರುವುದರಿಂದ ಬೇಗ ಬಿತ್ತನೆ ಕಾರ್ಯ ಶುರುವಾಗಿದೆ. ಮೆಕ್ಕೆಜೋಳ ಅತಿ ಹೆಚ್ಚು ರಸಗೊಬ್ಬರ ಬಳಕೆಯಾಗುವ ಬೆಳೆ. ಈ ಬಾರಿ 2 ಲಕ್ಷ ಹೆಕ್ಟೇರ್‌ನಷ್ಟು ಹೆಚ್ಚು ಪ್ರದೇಶದಲ್ಲಿ ಈ ಬೆಳೆ ಬೆಳೆಯಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ದ್ವಿದಳ ಧಾನ್ಯದ ಬೆಳೆಗಳ ಪ್ರಮಾಣ ಕಡಿಮೆ ಆಗಿದೆ. ಹೀಗಾಗಿ ಯೂರಿಯಾಗೆ ತೀವ್ರ ಬೇಡಿಕೆ ಉಂಟಾಗಿದೆ. ಹೀಗಾಗಿ 1.65 ಲಕ್ಷ ಟನ್‌ ಯೂರಿಯಾ ಪೂರೈಕೆಗೆ ಸಂಬಂಧಿಸಿದವರಿಗೆ ಸೂಚಿಸಬೇಕು. ರಾಜ್ಯಕ್ಕೆ ಹಂಚಿಕೆಯಾಗಿರುವ ರಸಗೊಬ್ಬರವನ್ನು ಪೂರ್ಣ ಪ್ರಮಾಣದಲ್ಲಿ ಪೂರೈಸಬೇಕು ಎಂದು ಸಿದ್ದರಾಮಯ್ಯ ಕೋರಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!