ಕೊರೋನಾ ವೇಳೆ ದುಡ್ಡು ತಿಂದ ಯಾರನ್ನೂ ಬಿಡುವುದಿಲ್ಲ: ಡಿಕೆಶಿ

By Kannadaprabha News  |  First Published Dec 8, 2024, 5:00 AM IST

ಒಪ್ಪಂದದ ವಿಚಾರವಾಗಿ ಯಾರೊಬ್ಬರೂ ಚರ್ಚೆ ಮಾಡಬಾರದು. ಯಾವುದೇ ಸೂತ್ರ ಇಲ್ಲ. ಮುಖ್ಯಮಂತ್ರಿಗಳಿಗೆ ಕೆಲ ಜವಾಬ್ದಾರಿ ವಹಿಸಿದ್ದು ನನಗೆ ಕೆಲ ಜವಾಬ್ದಾರಿ ವಹಿಸಿದ್ದಾರೆ. ಒಪ್ಪಂದ ಸೂತ್ರದ ಬಗ್ಗೆ ಯಾರೂ ಮಾತನಾಡುವ ಅವಶ್ಯಕತೆ ಹಾಗೂ ಸಂದರ್ಭವಿಲ್ಲ. ಸಿಎಂ ಹೇಳಿದ್ದೇ ಅಂತಿಮ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 


ಬೆಂಗಳೂರು(ಡಿ.08): 'ಕೋವಿಡ್ ವೇಳೆ ಜನಸಾಮಾನ್ಯರ ಸಾವಿನ ನಡುವೆಯೂ ಹಿಂದಿನ ಸರ್ಕಾರ ವ್ಯಾಪಕ ಭ್ರಷ್ಟಾಚಾರ ನಡೆಸಿ ನೂರಾರು ಕೋಟಿ ಹಣ ಲೂಟಿ ಮಾಡಿರುವುದು ನ್ಯಾ.ಕುನ್ಹಾ ವರದಿಯಲ್ಲಿ ಬಹಿರಂಗಗೊಂಡಿದೆ. ವರದಿ ಶಿಫಾರಸು ಆಧರಿಸಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು, ಕೊರೋನಾ ಹಣ ತಿಂದ ಯಾರನ್ನೂ ಬಿಡಲ್ಲ" ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 

ಆಕ್ರಮಗಳಲ್ಲಿ ಪಾಲುದಾರರಾಗಿರುವ ಹಲವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಐದು ಮಂದಿ ಮೇಲೆ ಪ್ರಕರಣ ದಾಖಲಾಗುತ್ತದೆಯೋ ಅಥವಾ 50 ಮಂದಿ ಮೇಲೆ ದಾಖಲಾಗುತ್ತದೆಯೋ ಗೊತ್ತಿಲ್ಲ ಹಣ ತಿಂದವರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. 

Tap to resize

Latest Videos

ಕೊರೊನಾ ವೇಳೆ ಮೋದಿ ಬದಲು ಸೋನಿಯಾ, ರಾಹುಲ್ ಇದ್ದಿದ್ರೆ ನಮ್ಮೆಲ್ಲರ ಉಸಿರು ನಿಲ್ತಿತ್ತು : ಛಲವಾದಿ ನಾರಾಯಣಸ್ವಾಮಿ

ನಿವೃತ್ತ ನ್ಯಾ.ಮೈಕಲ್ ಡಿ ಕುನ್ಹಾ ವಿಚಾರಣಾ ಆಯೋಗದ ಶಿಫಾರಸು ಅನುಷ್ಠಾನ ಸಂಬಂಧಿಸಿ ತಮ್ಮ ಅಧ್ಯಕ್ಷತೆಯಲ್ಲಿ ರಚಿಸಿರುವ ಸಚಿವ ಸಂಪುಟ ಉಪಸಮಿತಿ ಸಭೆ ನಡೆಸಿ ಶನಿವಾರ ಮಾತನಾಡಿದ ಅವರು, ಕೋವಿಡ್ ಅಕ್ರಮದಲ್ಲಿ ಕುನ್ಹಾ ಅವರ ಸಮಿತಿ ಶಿಫಾರಸಿನಂತೆ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ತಪ್ಪಿತಸ್ಥರ ಮೇಲೆ ಕಾನೂನು ಚೌಕಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಮತ್ತೊಂದು ಕಡೆ ಇಲಾಖೆ ಅಧಿಕಾರಿಗಳ ವಿರುದ್ದವೂ ವಿಚಾರಣೆ ನಡೆಯಲಿದೆ ಎಂದು ಹೇಳಿದರು. 

ಆರ್‌ಟಿಪಿಸಿಆರ್ ಪರೀಕ್ಷೆಗೆ 648 ಕೋಟಿ ರು.: ಬೆಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ 84 ಲಕ್ಷ ಆರ್ ಟಿ-ಪಿಸಿಆರ್ ಪರೀಕ್ಷೆ ಮಾಡಲಾಗಿದೆ ಎಂದು ಹೇಳಿ 502 ಕೋಟಿ ರು. ಬಿಲ್ ಮಾಡಿದ್ದಾರೆ. 400 ಕೋಟಿ ರು. ಹಣ ಪಾವತಿ ಮಾಡಿದ್ದಾರೆ. 84 ಲಕ್ಷ ಎಂದರೆ ಬೆಂಗಳೂರಿನಲ್ಲಿರುವ ಪ್ರತಿ ಮನೆಯ ಇಬ್ಬರಿಗೆ ಪರೀಕ್ಷೆ ಮಾಡಿರಬೇಕು. ಇನ್ನು ಕಿದ್ವಾಯಿ ಸಂಸ್ಥೆಯೊಂದರಲ್ಲೇ 24 ಲಕ್ಷ ಪರೀಕ್ಷೆ ಮಾಡಲಾಗಿದೆ ಎಂದು ಹೇಳಿದ್ದಾರೆ. 

ತಾಂತ್ರಿಕವಾಗಿ ಸಮರ್ಥವಿಲ್ಲದೆ, ಐಸಿಎಂಆರ್ ಅನುಮತಿ ಇಲ್ಲದೆ ಪರೀಕ್ಷೆ ನಡೆಸಲಾಗಿದೆ. ಈ ಪರೀಕ್ಷೆಗಳಿಗೆ 146 ಕೋಟಿ ರು. ಬಿಲ್ ಮಾಡಲಾಗಿದೆ. 24 ಲಕ್ಷ ಜನರಿಗೆ ಒಂದೇ ಕಡೆ ಪರೀಕ್ಷೆ ಎಂದರೆ ಅಲ್ಲಿ ಎಷ್ಟು ಜನದಟ್ಟಣೆ, ಸರದಿ ಸಾಲು ಇರಬೇಕು? ಇದರಲ್ಲೇ ಇದೆಲ್ಲ ನಕಲಿ ಪರೀಕ್ಷೆ ಎಂಬುದು ತಿಳಿಯುತ್ತದೆ ಎಂದು ಶಿವಕುಮಾ‌ರ್ ತಿಳಿಸಿದರು. 

ಚಾ.ನಗರ ಆಕ್ಸಿಜನ್ ದುರಂತ ತನಿಖೆ: 

ಚಾಮರಾಜ ನಗರ ಆಕ್ಸಿಜನ್ ದುರಂತ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ತಪ್ಪು ನಡೆದಿಲ್ಲ ಎಂದು ಹಿಂದಿನ ಸರ್ಕಾರ ನೀಡಿರುವ ವರದಿಯನ್ನು ನಮ್ಮ ಸರ್ಕಾರ ಒಪ್ಪುವುದಿಲ್ಲ, ಈ ಬಗ್ಗೆ ಸಮಗ್ರ ತನಿಖೆ ನಡೆಯಲಿದೆ. ಹಿಂದಿನ ಆರೋಗ್ಯ ಸಚಿವರು 36 ಮಂದಿ ಸತ್ತಿದ್ದರೂ ಮೂರು ಮಂದಿ ಸಾವಿಗೀಡಾಗಿರುವುದಾಗಿ ಹೇಳಿದ್ದರು. ನಾನು 36 ಮಂದಿ ಮನೆಗಳಿಗೂ ಭೇಟಿ ನೀಡಿದ್ದೇನೆ. . ನನಗೆ ಸತ್ಯ ಸಂಗತಿ ಗೊತ್ತಿದ್ದು, ಇದನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. 

ಕೋವಿಡ್ ವ್ಯವಹಾರದಲ್ಲಿ ವಿಧಾನಸೌಧದಿಂದ ಕೆಳ ಹಂತದವರೆಗೂ ಯಾವ ರೀತಿ ಪ್ರಕ್ರಿಯೆ ನಡೆದಿದೆ ಎಂಬ ಬಗ್ಗೆ ವರದಿಯಲ್ಲಿ ತಿಳಿಸಲಾಗಿದೆ. ಈ ವರದಿಗಳನ್ನು ಪರಿಶೀಲಿಸಿ, ನಮಗೆ ಮಾರ್ಗದರ್ಶನ ನೀಡಲು ನಿವೃತ್ತ ಅಧಿಕಾರಿಗಳನ್ನೊಳಗೊಂಡ ಅಧಿಕಾರಿಗಳ ಮಟ್ಟದ ಸಮಿತಿ ರಚಿಸಲಾಗುವುದು ಎಂದರು. 

ಎಸ್‌ಐಟಿ ರಚನೆ ಪ್ರಕ್ರಿಯೆ ನಡೆಯುತ್ತಿದೆ: ಕುಸ್ಟ್ರಾ ಅವರ ವರದಿ ಆಧಾರದ ಮೇಲೆ ಎಸ್‌ಐಟಿ ರಚನೆಯಾಗಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ, ಎಸ್‌ಐಟಿ ರಚನೆ ಪ್ರಕ್ರಿಯೆ ನಡೆಯುತ್ತಿದೆ. ಎಲ್ಲ ಪುಸ್ತಕವನ್ನು ಒಂದೇ ದಿನ ಓದಿ ಮುಗಿಸಲು ಆಗುವುದಿಲ್ಲ. ಹಂತ ಹಂತವಾಗಿ ಈ ಪ್ರಕರಣವನ್ನು ಪರಿಶೀಲಿಸುತ್ತೇವೆ. ಇದಕ್ಕೆ ಸಮಯಾವಕಾಶ ಬೇಕು. ಕಾನೂನು ತನ್ನ ಕ ಕಾರ್ಯ ನಿರ್ವಹಿಸಲಿದೆ ಎಂದರು. 

ಬಂಡೆ ‘ಪವರ್ ಶೇರಿಂಗ್’ ಬಾಂಬ್, ಕೈ ಪಾಳಯದಲ್ಲಿ ಅಲ್ಲೋಲ ಕಲ್ಲೋಲ!

ಯಾರ ಮೇಲಾದರೂ ಎಫ್‌ಐಆ‌ರ್ ದಾಖಲಿಸುವ ಸೂಚನೆ ನೀಡಲಾಗಿದೆಯೇ ಎಂದು ಕೇಳಿದಾಗ, ಈ ವಿಚಾರವಾಗಿ ಅಧಿಕಾರಿಗಳು ತಮ್ಮ ಕೆಲಸ ಮಾಡಲಿದ್ದಾರೆ. ಅಧಿಕಾರಿಗಳು ವಿಚಾರಣೆ ಮಾಡಿ ಕ್ರಮ ಕೈಗೊಳ್ಳುತ್ತಾರೆ. ಆ ಪ್ರಕ್ರಿಯೆಯಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದಷ್ಟೇ ಹೇಳಿದರು.

ಅಧಿಕಾರ ಹಂಚಿಕೆ ಒಪ್ಪಂದದ ಬಗ್ಗೆ ಚರ್ಚೆ ಬೇಡ 

ಮುಖ್ಯಮಂತ್ರಿಗಳ ಅಧಿಕಾರ ಹಂಚಿಕೆ ಬಗ್ಗೆ ಒಪ್ಪಂದ ಆಗಿರುವುದು ನಿಜ ಎಂಬ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, 'ಒಪ್ಪಂದದ ವಿಚಾರವಾಗಿ ಯಾರೊಬ್ಬರೂ ಚರ್ಚೆ ಮಾಡಬಾರದು. ಯಾವುದೇ ಸೂತ್ರ ಇಲ್ಲ. ಮುಖ್ಯಮಂತ್ರಿಗಳಿಗೆ ಕೆಲ ಜವಾಬ್ದಾರಿ ವಹಿಸಿದ್ದು ನನಗೆ ಕೆಲ ಜವಾಬ್ದಾರಿ ವಹಿಸಿದ್ದಾರೆ. ಒಪ್ಪಂದ ಸೂತ್ರದ ಬಗ್ಗೆ ಯಾರೂ ಮಾತನಾಡುವ ಅವಶ್ಯಕತೆ ಹಾಗೂ ಸಂದರ್ಭವಿಲ್ಲ. ಸಿಎಂ ಹೇಳಿದ್ದೇ ಅಂತಿಮ' ಎಂದರು.

click me!