ಮೈಸೂರು ಜಂಬೂಸವಾರಿಗೆ ಇರೋ ಮನ್ನಣೆ, ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಗೆ ಯಾಕಿಲ್ಲ? ಹಿರಿಯ ನಟ ದತ್ತಣ್ಣ ಪ್ರಶ್ನೆ

Published : Jan 09, 2026, 05:10 PM IST
Koppal Gavimutt Dattanna

ಸಾರಾಂಶ

ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯು ದಾಖಲೆಯ ದಾಸೋಹದೊಂದಿಗೆ ಈ ವರ್ಷ ಗಮನ ಸೆಳೆದಿದೆ. ಈ ನಡುವೆ, ನಟ ದತ್ತಣ್ಣ ಅವರು ಜಾತ್ರೆಗೆ ಮೈಸೂರು ಜಂಬೂಸವಾರಿಯಂತಹ ಮನ್ನಣೆ ಯಾಕಿಲ್ಲ ಎಂದು ಪ್ರಶ್ನಿಸಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರು (ಜ.9): ಕೊಪ್ಪಳದ ಗವಿಸಿದ್ದೇಶ್ವರ ಮಠದ ಜಾತ್ರೆ ರಾಜ್ಯದ ಪ್ರಮುಖ ಉತ್ಸವಗಳಲ್ಲೊಂದು. ಅಜ್ಜನ ಜಾತ್ರೆ ಎಂದೇ ಜನಮಾನಸದಲ್ಲಿ ಪ್ರಖ್ಯಾತಿ ಪಡೆದಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವವು ಭಕ್ತಿ ಮತ್ತು ಸೇವೆಯ ಸಂಗಮ. ಲಕ್ಷ ಲಕ್ಷ ಭಕ್ತರು ಸೇರುವ ಈ ಜಾತ್ರೆಯಲ್ಲಿ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರನ್ನು ಕಣ್ತುಂಬಿಕೊಳ್ಳುವುದೇ ಜನರಿಗೆ ಆನಂದ. ಈ ವರ್ಷದ ಜಾತ್ರಾ ಮಹೋತ್ಸವ ಜನವರಿ 1 ರಿಂದ ಆರಂಭವಾಗಿ ಎಂಟು ದಿನಗಳ ಕಾಲ ನಿರಂತರವಾಗಿ ನಡೆದಿದೆ.

ಈ ಬಾರಿ ಗವಿ ಮಠದ ದಾಸೋಹದಲ್ಲಿ ದಾಖಲೆ ಪ್ರಮಾಣದ ಆಹಾರ ಸಂಗ್ರಹವಾಗಿದೆ. ಒಟ್ಟು 18 ಲಕ್ಷಕ್ಕೂ ಅಧಿಕ ರೊಟ್ಟಿಗಳು ಸಂಗ್ರಹವಾಗಿದ್ದು, ಇದು ಇತಿಹಾಸದಲ್ಲೇ ಅತ್ಯಧಿಕ ಎನ್ನಲಾಗಿದೆ. ಜೊತೆಗೆ 25 ಕ್ವಿಂಟಾಲ್ ಬೂಂದಿ, 175 ಕ್ವಿಂಟಾಲ್ ಮೈಸೂರು ಪಾಕ್, 62 ಕ್ವಿಂಟಾಲ್ ಶೇಂಗಾ ಹೊಳಿಗೆ, 467 ಕ್ವಿಂಟಾಲ್ ಮಾದಲಿ, 5 ಕ್ವಿಂಟಾಲ್ ಜಿಲೇಬಿ ಹಾಗೂ ಸುಮಾರು 6 ಲಕ್ಷ ಮಿರ್ಚಿ ಸೇರಿದಂತೆ ವಿವಿಧ ಖಾದ್ಯಗಳು ದಾಸೋಹಕ್ಕೆ ಬಂದಿವೆ.

ಇದರ ನಡುವೆ ಗವಿಸಿದ್ದೇಶ್ವರ ಮಠದಲ್ಲಿ ಹಿರಿಯ ನಟ ದತ್ತಣ್ಣ ಅವರ ಮಾತಗಳು ಸಾಕಷ್ಟು ಚರ್ಚೆಗೆ ನಾಂದ ಹಾಡಿವೆ. ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ದತ್ತಣ್ಣ, ಮೈಸೂರು ಜಂಬೂಸವಾರಿಗೆ ಇರೋ ಮನ್ನಣೆ, ಕೊಪ್ಪಳದ ಗವಿ ಸಿದ್ದೇಶ್ವರ ಜಾತ್ರೆಗೆ ಯಾಕಿಲ್ಲ? ಎಂದು ಪ್ರಶ್ನೆ ಮಾಡಿದರು. ಅವರು ಆಡಿದ ಮಾತುಗಳು ಭಕ್ತರ ಯೋಚನಾಲಹರಿಯನ್ನೇ ಬದಲಾಯಿಸಿದೆ. ಲೆಕ್ಕಕ್ಕೆ ಹೋದರೆ, ಮೈಸೂರು ಜಂಬೂಸವಾರಿಗೆ ಸೇರುವಷ್ಟೇ ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಜನರು ಕೊಪ್ಪಳದ ಗವಿಸಿದ್ದೇಶ್ವರ ಮಠದ ಜಾತ್ರೆಗೆ ಸೇರುತ್ತಾರೆ. ಆದರೆ, ಜಂಬೂಸವಾರಿಗೆ ಇದ್ದಷ್ಟು ಅಂತಾರಾಷ್ಟ್ರೀಯ ಮನ್ನಣೆ ಕೊಪ್ಪಳದ ಜಾತ್ರೆಗೆ ಇಲ್ಲ ಅನ್ನೋದು ವಾಸ್ತವ.

ಈ ಬಗ್ಗೆ ಮಾತನಾಡಿರುವ ದತ್ತಣ್ಣ, 'ಜಂಬೂಸವಾರಿ ನೋಡಿದ್ದೇನೆ. ಜಂಬೂಸವಾರಿ ಅಂತಾರಾಷ್ಟ್ರೀಯ ಖ್ಯಾತಿ ಪಡೆದುಕೊಂಡಿದೆ.ಅದಕ್ಕೆ ಯಾವ ರೀತಿಯಲ್ಲೂ ಕಡಿಮೆಯಿಲ್ಲದ ಈ ಜಾತ್ರೆಗೆ ಯಾಕಿನ್ನೂ ಅಂತಾರಾಷ್ಟ್ರೀಯ ಮನ್ನಣೆ ಅಥವಾ ಪ್ರವಾಸೋದ್ಯಮ ಮನ್ನಣೆ ಸಿಕ್ಕಿಲ್ಲ ಅನ್ನೋದು ನನಗೆ ಅರ್ಥವಾಗುತ್ತಿಲ್ಲ. ಇದಕ್ಕೆ ಸಿಗಬೇಕು. ಯಾವುದೋ ಕಾರಣಕ್ಕೆ, ಅಥವಾ ಪ್ರಚಾರದ ಕೊರತೆ ಇದೆ ಅಂತಲೋ ಇದು ಜನರ ಗಮನಕ್ಕೆ ಬರದೇ ಇರಬಹುದು. ಆದರೆ, ಖಚಿತವಾಗಿ ಒಂದು ದಿವಸ ಇದು ಜಂಬೂ ಸವಾರಿಯಷ್ಟೇ ಅಂತಾರಾಷ್ಟ್ರೀಯ ಖ್ಯಾತಿ ಪಡೆದುಕೊಳ್ಳುತ್ತೆ ಅನ್ನೋ ವಿಶ್ವಾಸ ನನಗೆ ಇದೆ. ಇದು ಆಗಲಿ ಎನ್ನುವ ಆಶಯವೂ ಹೌದು' ಎಂದು ಹೇಳಿದ್ದಾರೆ.

ಪರ ವಿರೋಧ ಚರ್ಚೆ!

ಇದಕ್ಕೆ ಕಾಮೆಂಟ್‌ ಮಾಡಿರುವ ಹಲವರು, 'ಕರ್ನಾಟಕವೆಂದರೆ ಬೆಂಗಳೂರು, ಮೈಸೂರು ಅಷ್ಟೇ. ಉತ್ತರ ಕರ್ನಾಟಕ ಯಾವ ಲೆಕ್ಕಕ್ಕೂ ಇಲ್ಲ..' ಎಂದಿದ್ದಾರೆ. 'ಜಾತ್ರೆ ಜನರದ್ದು ಜಂಬೂ ಸವಾರಿ ಸರ್ಕಾರದ್ದು! ಕಲಬುರಗಿಯ ಶರಣ ಬಸವೇಶ್ವರ ದೇವಸ್ಥಾನ ಹಾಗೂ ಕೊಪ್ಪಳ ಗವಿಸಿದ್ದೇಶ್ವರ ಮಠದ ಶಾಲೆ ಕಾಲೇಜುಗಳಿಗೆ ಅನುದಾನ ನೀಡಿ ತೊಂದರೆ ಕೊಡದಿದ್ದರೆ ಸಾಕು ಅದೇ ಮಹಾಉಪಕಾರ' ಎಂದು ಮತ್ತೊಬ್ಬ ಭಕ್ತರು ಬರೆದುಕೊಂಡಿದ್ದಾರೆ.

ಇನ್ನು ದತ್ತಣ್ಣ ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿರುವ ಒಬ್ಬರು, 'ಗುರುಗಳೇ ನಿಮ್ಮಗಳಿಗೆ ಬುದ್ಧಿ ಕಡಿಮೆ ಆನೆಸುತ್ತದೆ ಜಂಬೂಸವಾರಿ ಶುರು ಮಾಡಿದ್ದು ರಾಜರ ಆಡಳಿತದ ಸಮಯದಲ್ಲಿ. ರಾಜರ ಆಡಳಿತ ನಿಂತ ಮೇಲೆ ಇದನ್ನು ಸರ್ಕಾರ ಕೇವಲ ಪ್ರವಾಸಿ ಆಕರ್ಷಣೆ ಸಲುವಾಗಿ ಮಾಡುತ್ತಿದೆ, ಅಂದಿನಿಂದಲೂ ಇದು ಪ್ರಖ್ಯಾತಿ ಹೊಂದಿದೆ, ಇನ್ನು ಗವಿ ಸಿದ್ದಲಿಂಗೇಶ್ವರ ಜಾತ್ರೆ ಇತ್ತೀಚಿನ ದಶಕಗಳಿಂದ ಜನರು ಹೆಚ್ಚಿಗೆ ಸೇರುತ್ತಿದ್ದಾರೆ' ಎಂದಿದ್ದಾರೆ. 'ತಲೆಯಲ್ಲಿ ಸಗಣಿ ಇರುವವರು ಅಷ್ಟೇ ಈ ಮೇಲಿನ ತರ ಮಾತನಾಡುತ್ತಾರೆ. ವಿಜಯನಗರ ಸಾಮ್ರಾಜ್ಯದ ಕಾಲದಿಂದ ನಡೆಯುತ್ತಿದ್ದೆ, ಆಗ ರಾಜಪ್ರಭುತ್ವ, ಈಗ ಪ್ರಜಾಪ್ರಭುತ್ವ ಮುಂದುವರೆಸುತ್ತಿದೆ. ಯಾವುದೋ ಮಠ ಮಾಡುವ ಜಾತ್ರೆಗಳನ್ನೆಲ್ಲ ಅದಕ್ಕೇ ಹೋಲಿಕೆ ಮಾಡುವುದು ಸಮಂಜಸವಲ್ಲ. ಮನ್ನಣೆ ಏನು ಸರ್ಕಾರ ಸೀಲ್ ಹಾಕಿ ಕೊಡೋಕೆ ಆಗುತ್ತಾ' ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿಗೆ ಡೆಲಿವರಿ ಬಾಯ್ ಕೆಲಸಕ್ಕೆ ಬಂದ ಬಿಹಾರ ಕಾರ್ಮಿಕ; ತನ್ನದಲ್ಲದ ತಪ್ಪಿಗೆ ಪೆಟ್ಟುತಿಂದು ವಾಪಸ್ ಹೋದ!
ಹುಬ್ಬಳ್ಳಿ ಮಹಿಳೆ ವಿವಸ್ತ್ರ ಪ್ರಕರಣ ಸಿಐಡಿ ತನಿಖೆಗೆ ಹಸ್ತಾಂತರ: ಗೃಹಸಚಿವ ಪರಮೇಶ್ವರ